ADVERTISEMENT

ಸಂಪಾದಕೀಯ: ಏಷ್ಯನ್ ಕ್ರೀಡಾಕೂಟ ಮುಂದೂಡಿಕೆ- ಹೆಚ್ಚುವರಿ ಸಾಧನೆಗೆ ಬಲ ತುಂಬಲಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 23:15 IST
Last Updated 9 ಮೇ 2022, 23:15 IST
   

ಏಷ್ಯನ್ ಗೇಮ್ಸ್ ಎಂದರೆ ಭಾರತದ ಕ್ರೀಡಾರಂಗದ ಪಾಲಿಗೆ ಬೊಗಸೆ ತುಂಬ ಪದಕಗಳನ್ನು ಜಯಿಸುವ ವೇದಿಕೆ. ಒಲಿಂಪಿಕ್ ಕ್ರೀಡೆಗಳಿಗೆ ಅರ್ಹತೆ ಗಿಟ್ಟಿಸುವ ಚಿಮ್ಮುಹಲಗೆ. ವಿಶ್ವ ಕ್ರೀಡೆಯ ಅಗ್ರಮಾನ್ಯ ದೇಶಗಳಾದ ಚೀನಾ, ಜಪಾನ್, ಕೊರಿಯಾ ಅಥ್ಲೀಟ್‌ಗಳೊಂದಿಗೆ ಪೈಪೋಟಿ ನಡೆಸುವ ಪರೀಕ್ಷಾ ಕಣವೂ ಹೌದು. ಆದ್ದರಿಂದ ಈ ಕೂಟವನ್ನು ಕೇಂದ್ರೀಕೃತವಾಗಿರಿಸಿಕೊಂಡೇ ಭಾರತದ ಕ್ರೀಡಾಪಟುಗಳ ಅಭ್ಯಾಸ, ಚಟುವಟಿಕೆಗಳು ನಡೆಯುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಇದೇ ಸೆಪ್ಟೆಂಬರ್‌ 10ರಿಂದ 25ರವರೆಗೆ ಚೀನಾದ ಹ್ಯಾಂಗ್‌ಜೋನಲ್ಲಿ ನಡೆಯಬೇಕಿದ್ದ 19ನೇ ಏಷ್ಯನ್ ಕೂಟವನ್ನು ಮುಂದೂಡಲಾಗಿದೆ. ಹ್ಯಾಂಗ್‌ಜೋನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಶಾಂಘೈನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ಘೋಷಿಸಲಾಗಿದೆ. ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ 2023ರವರೆಗೆ ಈ ಕ್ರೀಡಾಕೂಟವನ್ನು ಮುಂದೂಡಿರುವುದಾಗಿ ಏಷ್ಯನ್ ಒಲಿಂಪಿಕ್ ಸಮಿತಿ (ಎಒಸಿ) ಪ್ರಕಟಿಸಿದೆ. ಈ ನಿರ್ಧಾರಕ್ಕೆ ಕ್ರೀಡಾಕ್ಷೇತ್ರದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಈ ವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಕೂಡ ಆಯೋಜನೆಗೊಂಡಿವೆ. ಒಂದೇ ವರ್ಷದಲ್ಲಿ ಮೂರು ಪ್ರಮುಖ ಸ್ಪರ್ಧೆಗಳಲ್ಲಿ ಸಮಾನ ಸಾಮರ್ಥ್ಯ ಪ್ರದರ್ಶನ ನೀಡುವುದು ಎಲ್ಲರಿಗೂ ಕಷ್ಟವಾಗುತ್ತಿತ್ತು. ಇದರಿಂದಾಗಿ ಬಹಳಷ್ಟು ಕ್ರೀಡಾಪಟುಗಳಿಗೆ ಹೊಸ ದಾಖಲೆಗಳನ್ನು ಬರೆಯುವ ಅವಕಾಶ ಕೈತಪ್ಪುವ ಸಾಧ್ಯತೆ ಇತ್ತು. ಅಲ್ಲದೆ ಗಾಯಗಳಾಗುವ ಅಪಾಯವೂ ಇತ್ತು. ಅದಕ್ಕಾಗಿಯೇ ಭಾರತವೂ ಸೇರಿದಂತೆ ಕೆಲವು ರಾಷ್ಟ್ರಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಗದಿಯಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಉದಯೋನ್ಮುಖ ಆಟಗಾರರು ಹೆಚ್ಚು ಇರುವ ಹಾಕಿ ತಂಡಗಳನ್ನು ಕಣಕ್ಕಿಳಿಸುವ ಸಿದ್ಧತೆಯಲ್ಲಿದ್ದವು.

ಏಷ್ಯಾ ಕೂಟಕ್ಕೆ ತಮ್ಮ ಪ್ರಧಾನ ಆಟಗಾರರ ಬಳಗವನ್ನು ಕಳಿಸಲು ಯೋಜಿಸಿದ್ದವು. ಇದೀಗ ಬರ್ಮಿಂಗ್‌ಹ್ಯಾಮ್‌ಗೆ ಬಲಿಷ್ಠ ತಂಡಗಳನ್ನೇ ಕಳಿಸುವತ್ತ ಚಿತ್ತ ಹರಿಸಿವೆ. ಏಷ್ಯನ್ ಕ್ರೀಡಾಕೂಟ ಒಂದು ವರ್ಷ ಮುಂದೆ ಹೋಗಿರುವುದು ಹಲವು ಕ್ರೀಡಾಪಟುಗಳು, ಕೋಚ್‌ಗಳಿಗೆ ಸಂತಸ ತಂದಿದೆ. ಕೋವಿಡ್ ಕಾರಣದಿಂದಾಗಿ 2020ರ ಟೋಕಿಯೊ ಒಲಿಂಪಿಕ್ ಕೂಟವನ್ನೂ ಮುಂದೂಡಿ 2021ರಲ್ಲಿ ನಡೆಸಲಾಗಿತ್ತು. ಅದರಲ್ಲಿ ಭಾರತವು ಉತ್ತಮ ಸಾಧನೆ ಮಾಡಿತ್ತು. ಆದ್ದರಿಂದ ಹೆಚ್ಚುವರಿಯಾಗಿ ಸಿಗುವ ಅವಧಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ವಿಶ್ವಾಸ ಕ್ರೀಡಾವಲಯದಲ್ಲಿದೆ. ಭಾರತವು ಏಷ್ಯನ್ ಕ್ರೀಡಾಕೂಟದಲ್ಲಿ ಉತ್ತಮ ದಾಖಲೆ ಹೊಂದಿದೆ. ಅಗ್ರ ಹತ್ತರಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಇದುವರೆಗೆ ಒಟ್ಟು 672 ಪದಕಗಳನ್ನು ಗೆದ್ದಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಕೂಟದಲ್ಲಿ 16 ಚಿನ್ನ ಸೇರಿದಂತೆ ಒಟ್ಟು 70 ಪದಕಗಳನ್ನು ಭಾರತ ಜಯಿಸಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಪದಕಗಳನ್ನು ಗಳಿಸುವ ಹುಮ್ಮಸ್ಸಿನಲ್ಲಿದೆ.

ADVERTISEMENT

ಆದರೆ ಟ್ರ್ಯಾಕ್‌ ಮತ್ತು ಫೀಲ್ಡ್‌ ಸೇರಿದಂತೆ ವೈಯಕ್ತಿಕ ವಿಭಾಗಗಳಲ್ಲಿ ಸ್ಪರ್ಧಿಸುವ ಬಹುತೇಕ ಅಥ್ಲೀಟ್‌ಗಳಲ್ಲಿ ಮುಂದೂಡಿಕೆಯ ಬಗ್ಗೆ ಬೇಸರವಿದೆ. ಈ ವರ್ಷ ನಿಗದಿಯಂತೆ ಕೂಟ ನಡೆದು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿದ್ದರೆ, ತಯಾರಿ ಮಾಡಿಕೊಳ್ಳಲು ಎರಡು ವರ್ಷಗಳ ಅವಧಿ ಸಿಗುತ್ತಿತ್ತು. ಒಂದೊಮ್ಮೆ ಇಲ್ಲಿ ಅರ್ಹತೆ ಸಿಗದಿದ್ದರೂ ಮುಂದಿನ ಹಂತಗಳಲ್ಲಿ ನಡೆಯುವ ಒಲಿಂಪಿಕ್ ಅರ್ಹತೆ ಸುತ್ತುಗಳ ಕೂಟಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಲಭಿಸುತ್ತಿತ್ತು. ಆದರೆ 2023ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಅರ್ಹತಾ ಸುತ್ತುಗಳು ನಡೆಯುವುದರಿಂದ ಒತ್ತಡ ಹೆಚ್ಚಲಿದೆ. ಅಲ್ಲದೆ ಅಥ್ಲೀಟ್‌ಗಳ ವಯಸ್ಸು ಕೂಡ ಒಂದು ವರ್ಷ ಹೆಚ್ಚಾಗುವುದು. ಇದು ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು. ತಾಲೀಮು ಸಂದರ್ಭದ ಗಾಯಗಳು ಮತ್ತು ಮನೋಬಲವನ್ನು ನಿರ್ವಹಣೆ ಮಾಡುವುದು ಕೂಡ ದೊಡ್ಡ ಸವಾಲಾಗಲಿದೆ ಎಂದು ಭಾರತ ಒಲಿಂಪಿಕ್ ಸಮಿತಿಯ ಪದಾಧಿಕಾರಿಗಳೇ ಹೇಳಿದ್ದಾರೆ. ಅಲ್ಲದೆ ಇದು ಆರ್ಥಿಕ ಹೊರೆಗೂ ಕಾರಣವಾಗಲಿದೆ.

ಕೋವಿಡ್ ಕಾಲಘಟ್ಟದಲ್ಲಿ ಇಂತಹ ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಎರಡೂವರೆ ವರ್ಷಗಳಿಂದ ಇಂತಹ ಪರಿಸ್ಥಿತಿಯಲ್ಲಿಯೇ ಟೋಕಿಯೊ ಒಲಿಂಪಿಕ್ಸ್, ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್, ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗಳು ನಡೆದಿವೆ. ಜೀವ ಸುರಕ್ಷತಾ ವಲಯ (ಬಯೋಬಬಲ್) ನಿಯಮಗಳ ಒತ್ತಡದ ನಡುವೆಯೂ ಯುವ ಕ್ರೀಡಾಪಟುಗಳಿಂದ ಉತ್ತಮ ಸಾಧನೆಗಳು ಒಡಮೂಡಿವೆ. ಈ ಮುಂದೂಡಿಕೆಯಿಂದ ಚೀನಾ ಕೂಡ ಆರ್ಥಿಕ ಹೊರೆಯನ್ನು ಅನುಭ ವಿಸಲಿದೆ. 40 ಕ್ರೀಡೆಗಳ ಆಯೋಜನೆಗಾಗಿ ನಿರ್ಮಿಸಲಾಗಿರುವ 56 ಕ್ರೀಡಾಕೇಂದ್ರಗಳನ್ನು ಮತ್ತೊಂದು ವರ್ಷ ಉತ್ತಮವಾಗಿ ನಿರ್ವಹಣೆ ಮಾಡುವುದು ಪ್ರಮುಖ ಹೊಣೆಯಾಗಿದೆ.

ಆದರೆ, ಬೇರೆ ಬೇರೆ ದೇಶ ಗಳ ಸುಮಾರು 12 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಬಂದು ಸೇರುವ ಕ್ರೀಡಾಕೂಟವು ಕೋವಿಡ್‌ ಪಿಡುಗಿಗೆ ಗುರಿಯಾದರೆ ವಿಶ್ವಮಟ್ಟದಲ್ಲಿ ಅನುಭವಿಸಬೇಕಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಚೀನಾ ಈ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಈ ಅನಿವಾರ್ಯ ಪರಿಸ್ಥಿತಿಯು ನೀಡಲಿರುವ ಹೆಚ್ಚುವರಿ ಸಮಯವನ್ನು ಫಲಪ್ರದಗೊಳಿಸಿಕೊಳ್ಳುವ ಸವಾಲು ಕ್ರೀಡಾವಲಯದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.