ADVERTISEMENT

ಸಂಪಾದಕೀಯ | ರಾಜಧಾನಿಯ ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿ ಎಂದು?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 23:15 IST
Last Updated 20 ಅಕ್ಟೋಬರ್ 2022, 23:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರಿನ ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿಯೇ ಇಲ್ಲವೆಂದು ತೋರುತ್ತದೆ. ಗುಂಡಿಗಳ ಕಾರಣದಿಂದ ಹಲವು ಸಾವುಗಳು ಸಂಭವಿಸಿದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಣ್ಣು ತೆರೆದಿಲ್ಲ. ಹೈಕೋರ್ಟ್‌ ಪದೇ ಪದೇ ಕಿವಿ ಹಿಂಡಿದರೂ ಬಿಬಿಎಂಪಿ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ. ಸಾರ್ವಜನಿಕರ ಅತ್ಯಂತ ಮೂಲಭೂತ ಅಗತ್ಯ ಎನಿಸಿದ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಲಾಗಾಯ್ತಿನಿಂದಲೂ ಅದಕ್ಕೆ ಸಾಧ್ಯವಾಗಿಲ್ಲ.

ಬೆಂಗಳೂರಿನ ರಾಜಾಜಿನಗರದ ಬಳಿ ಮೂರು ದಿನಗಳ ಹಿಂದೆ ರಸ್ತೆಗುಂಡಿಯ ಕಾರಣದಿಂದ ಸಂಭವಿಸಿದ ಅಪಘಾತದಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ರಾಜಧಾನಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಸಂಭವಿಸಿದ ಐದನೇ ಸಾವು ಇದು. ಆದರೆ, ಬಿಬಿಎಂಪಿ ಮಾತ್ರ ಯಥಾಪ್ರಕಾರ ಕುಂಭಕರ್ಣನ ನಿದ್ರೆಗೆ ಜಾರಿದೆ.

‘ಈ ವರ್ಷ ಸುಮಾರು 22 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ’ ಎಂಬ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರ ಹೇಳಿಕೆ ಅರ್ಥ ಕಳೆದುಕೊಂಡಿದೆ. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗುಂಡಿಗಳನ್ನು ಮುಚ್ಚಿದ್ದರೆ ನಗರದಲ್ಲಿ ಬಹುತೇಕ ರಸ್ತೆಗಳು ಸುಸ್ಥಿತಿಯಲ್ಲಿ ಇರಬೇಕಿತ್ತು. ಮೆಜೆಸ್ಟಿಕ್‌ನಿಂದ ನೀವು ಯಾವ ದಿಕ್ಕಿನತ್ತ ಹೊರಟರೂ ಗುಂಡಿಮಯ ರಸ್ತೆಗಳೇ ನಿಮ್ಮನ್ನು ಸ್ವಾಗತಿಸುತ್ತವೆ. ವಾಸ್ತವ ಹೀಗಿರುವಾಗ, ಇನ್ನು 1,500 ಗುಂಡಿಗಳನ್ನು ಮಾತ್ರ ಮುಚ್ಚಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿರುವುದು ಆತ್ಮವಂಚನೆಯಲ್ಲದೆ ಬೇರೇನಲ್ಲ. ರಸ್ತೆ ಗುಂಡಿಗಳ ಸಂಖ್ಯೆಯು ಅಧಿಕಾರಿಗಳು ಹೇಳಿದ ಸಂಖ್ಯೆಗಿಂತ ಅನೇಕ ಪಟ್ಟು ಹೆಚ್ಚು ಇದೆ ಎಂಬುದು ದಿನನಿತ್ಯ ನಗರದಲ್ಲಿ ಅಡ್ಡಾಡುವ ಪ್ರತಿಯೊಬ್ಬ ವಾಹನ ಸವಾರನಿಗೂ ಗೊತ್ತಿರುವ ಸಂಗತಿ. ಈ ವರ್ಷ ಮಳೆ ಹೆಚ್ಚಿಗೆ ಸುರಿದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ADVERTISEMENT

ಆದರೆ, ಬಿಬಿಎಂಪಿಯು ತನ್ನ ಎಲ್ಲ ವೈಫಲ್ಯಕ್ಕೂ ಮಳೆಯ ನೆಪವನ್ನು ಮುಂದೆಮಾಡಿ ನುಣುಚಿಕೊಳ್ಳುವಂತಿಲ್ಲ.

ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಐದು ವರ್ಷಗಳಲ್ಲಿ ₹ 20,060 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಮಂಡಲ ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 13,974 ಕಿಲೊಮೀಟರ್‌ ಉದ್ದದ ರಸ್ತೆ ಜಾಲ ಇದೆ. ಅಂದರೆ, ಪ್ರತೀ ಕಿಲೊಮೀಟರ್‌ ರಸ್ತೆಗೆ ಐದು ವರ್ಷಗಳಲ್ಲಿ ತಲಾ ₹ 1.44 ಕೋಟಿ ವ್ಯಯಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗಳು ನಡೆದ ಮೇಲೆ ಎಲ್ಲ ರಸ್ತೆಗಳು ಸುಸ್ಥಿತಿಯಲ್ಲಿ ಇರಬೇಕಿತ್ತು. ಆದರೆ, ವಾಸ್ತವ ಚಿತ್ರಣ ಬೇರೆಯೇ ಇದೆ. ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಆಡಳಿತ ವೈಫಲ್ಯ ಮತ್ತು ಅಕ್ರಮಗಳ ಕಥೆಗಳನ್ನು ಹೇಳುತ್ತಿವೆ. ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದವರು, ಮೂರು ವರ್ಷಗಳವರೆಗೆ ಆ ರಸ್ತೆಯ ನಿರ್ವಹಣೆ ಹೊಣೆಯನ್ನೂ ನೋಡಿಕೊಳ್ಳಬೇಕು ಎಂಬ ನಿಯಮವಿದೆ.

ಗುತ್ತಿಗೆದಾರರಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಜವಾಬ್ದಾರಿ. ರಸ್ತೆಗಳ ಇಂದಿನ ದುಃಸ್ಥಿತಿಗೆ ಇವರಿಬ್ಬರ ನಡುವಿನ ಅನೈತಿಕ ಮೈತ್ರಿಯೇ ಕಾರಣ. ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ಅವುಗಳನ್ನು ತಕ್ಷಣ ಮುಚ್ಚಿಸುವ ಉದ್ದೇಶದಿಂದಲೇ ಬಿಬಿಎಂಪಿಯು ಬೆಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ಬಿಸಿ ಡಾಂಬರು– ಜಲ್ಲಿ ಮಿಶ್ರಣ ಘಟಕವನ್ನು ಸ್ಥಾಪಿಸಿದೆ. ಆದರೆ, ಉದ್ದೇಶ ಮಾತ್ರ ಈಡೇರಿಲ್ಲ. ರಸ್ತೆಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸುವಂತೆ ನೋಡಿಕೊಳ್ಳುವಲ್ಲಿಯೂ ಬಿಬಿಎಂಪಿ ಸೋತಿದೆ. ಗುಂಡಿ ಮುಚ್ಚುವ ಕೆಲಸ ಬಿಬಿಎಂಪಿ ಕಡೆಯಿಂದಲೂ ಆಗುತ್ತಿಲ್ಲ.

‘ರಸ್ತೆ ಗುಂಡಿಗಳನ್ನು ಮುಚ್ಚಿಸುವ ಹೊಣೆ ಹೊತ್ತ ಬಿಬಿಎಂಪಿಯ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಅಟ್ಟುವಂತೆ ಆದೇಶಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಈ ವರ್ಷದ ಆರಂಭದಲ್ಲಿ ಎಚ್ಚರಿಕೆ ನೀಡಿತ್ತು.ಆ ಬಳಿಕವೂ ಬಿಬಿಎಂಪಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಗುಂಡಿಗಳೇ ಸಾಕ್ಷಿ. ಹದಗೆಟ್ಟ ರಸ್ತೆಗಳ ಕಾರಣದಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ, ಅಪಘಾತಗಳು ಹೆಚ್ಚುತ್ತಿವೆ.

ಬೆಂಗಳೂರಿಗರ ಅಮೂಲ್ಯ ಸಮಯ ವ್ಯರ್ಥವಾಗಿ ರಸ್ತೆಗಳಲ್ಲೇ ಕಳೆದುಹೋಗುತ್ತಿದೆ. ರಸ್ತೆಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಕೊನೆಯಾಗಬೇಕು. ‘ತೇಪೆ ಹಚ್ಚುವುದೇ ನಿಮ್ಮ ಕೆಲಸವಲ್ಲ. ಗುಂಡಿಗಳೇ ಬೀಳದಂತೆ ಗುಣಮಟ್ಟದ ರಸ್ತೆಗಳನ್ನು ನಗರದಲ್ಲಿ ನಿರ್ಮಿಸಬೇಕು’ ಎಂದೂ ಹೈಕೋರ್ಟ್‌ ಹೇಳಿತ್ತು. ಈ ಮಾತಿನ ಅರ್ಥ ಅರಿಯಲಾರದ ಸ್ಥಿತಿಗೆ ಬಿಬಿಎಂಪಿ ಬಂದಿರಲಿಕ್ಕಿಲ್ಲ. ರಸ್ತೆಗಳ ದುಃಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಬಿಬಿಎಂಪಿಯಿಂದ ಇನ್ನಾದರೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.