ADVERTISEMENT

ಸಂಪಾದಕೀಯ| ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಡ್ಡಿ: ಕೇಂದ್ರದ ಕ್ರಮ ಅಸಮಂಜಸ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 23:14 IST
Last Updated 24 ಜನವರಿ 2023, 23:14 IST
Sampadakeeya 25012023_AD_4col_R
Sampadakeeya 25012023_AD_4col_R   

ಬಿಬಿಸಿ ಸಿದ್ಧಪಡಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಯಾವ ಕಾರಣವೂ ಸರಿಯಾಗಿಲ್ಲ, ಸಮಂಜಸವಾಗಿಲ್ಲ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮ– 2021ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ, ಈ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವಂತೆ ಯೂಟ್ಯೂಬ್‌ಗೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವೆಬ್‌ ಕೊಂಡಿಗಳನ್ನು ತಡೆಹಿಡಿಯುವಂತೆ ಟ್ವಿಟರ್‌ಗೆ ಸೂಚನೆ ರವಾನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಸರ್ಕಾರವು ‘ಕಿಸ್ಸಾ ಕುರ್ಸಿ ಕಾ’ ಸಿನಿಮಾ ಮೇಲೆ ನಿಷೇಧ ಹೇರಿದ್ದ ಮಾದರಿಯಲ್ಲಿ ಇದೆ ಈಗಿನ ಕ್ರಮ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಮಂದಿ, ಅವರಲ್ಲಿ ಬಹುತೇಕರು ಮುಸ್ಲಿಮರು, ಹತ್ಯೆಗೀಡಾದರು. ಸಾಕ್ಷ್ಯಚಿತ್ರವು ಈ ಗಲಭೆಯ ಕುರಿತಾಗಿದೆ. ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬ ಆರೋಪ ಎದುರಿಸಿದ್ದಾರೆ. ಬ್ರಿಟನ್ ಸರ್ಕಾರದ ವರದಿ, ಸಂದರ್ಶನ ಹಾಗೂ ತನಿಖೆಯನ್ನು ಆಧರಿಸಿ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಮೋದಿ ಅವರು ಟೀಕೆಗೆ ಗುರಿಯಾದಾಗ ಅವರ ಬೆಂಬಲಿಗರಿಗೆ, ತಮ್ಮ ನಾಯಕನನ್ನು ಸಮರ್ಥಿಸಿಕೊಳ್ಳುವ ಹಾಗೂ ಟೀಕೆಗೆ ಪ್ರತಿಟೀಕೆಯನ್ನು ಮಾಡುವ ಅವಕಾಶ ಇರುತ್ತದೆ. ಈ ಸಾಕ್ಷ್ಯಚಿತ್ರವು ‘ಸುಪ್ರೀಂ ಕೋರ್ಟ್‌ನ ಅಧಿಕಾರ ಹಾಗೂ ವಿಶ್ವಾಸಾರ್ಹತೆಯ ಮೇಲೆ ವಿನಾಕಾರಣವಾಗಿ ಹಾಗೂ ಅಸಮಂಜಸವಾಗಿ ಕಟು ಮಾತುಗಳನ್ನು ಆಡುವ ಯತ್ನ’ ಎಂಬ ಒಂದು ಕಾರಣವನ್ನು ಸಚಿವಾಲಯ ನೀಡಿದೆ ಎಂದು ವರದಿಯಾಗಿದೆ. ತನ್ನೆದುರು ಇದ್ದ ಪ್ರಕರಣಗಳ ವಿಚಾರದಲ್ಲಿ, ಮೋದಿ ಅವರು ದೋಷಿ ಅಲ್ಲ ಎಂದು ಕೋರ್ಟ್‌ ಹೇಳಿದ್ದರೂ, ಇಡೀ ವಿದ್ಯಮಾನದ ಕುರಿತು ಮಾಧ್ಯಮಗಳು ತಮ್ಮದೇ ಆದ ಚಿಕಿತ್ಸಕ ನೋಟವನ್ನು ಹರಿಸುವಂತಿಲ್ಲ ಎನ್ನಲಾಗದು. ಕಾನೂನಿಗೆ ಉತ್ತರದಾಯಿ ಆಗುವುದಕ್ಕೂ, ನೈತಿಕ ಹಾಗೂ ರಾಜಕೀಯ ಉತ್ತರದಾಯಿತ್ವ ತೋರಿಸುವುದಕ್ಕೂ ವ್ಯತ್ಯಾಸವಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಮೋದಿ ಅವರು ವಿಫಲರಾಗಿದ್ದನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ‘ರಾಜಧರ್ಮವನ್ನು ಪಾಲಿಸಬೇಕು’ ಎಂದು ಸಾರ್ವಜನಿಕವಾಗಿ ಹೇಳುವ ಮೂಲಕ ಟೀಕಿಸಿದ್ದರು. ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಲು ವಾಜಪೇಯಿ ಬಯಸಿದ್ದರು ಎಂದು ಕೆಲವು ವರದಿಗಳು ಹೇಳುತ್ತವೆ.

ಸುಪ್ರೀಂ ಕೋರ್ಟ್ ಅನ್ನು ‍ಪ್ರಶ್ನೆ ಮಾಡಿರುವುದು ಆ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವ ತೀರ್ಮಾನಕ್ಕೆ ಒಂದು ಕಾರಣ ಎನ್ನುವುದಾದರೆ, ಸುಪ್ರೀಂ ಕೋರ್ಟ್‌ನ ತೀರ್ಮಾನಗಳ ಬಗ್ಗೆ ‍ಪ್ರಶ್ನೆಗಳನ್ನು ಎತ್ತಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಮಾತುಗಳನ್ನೂ ತಡೆಹಿಡಿಯಬೇಕಾಗುತ್ತದೆ. ಈ ಸಾಕ್ಷ್ಯಚಿತ್ರವು ದೇಶದ ವಿವಿಧ ಸಮುದಾಯಗಳ ನಡುವೆ ಭೇದವನ್ನು ಹರಡುತ್ತದೆ, ದೇಶದ ಸಾರ್ವಭೌಮತ್ವ ಹಾಗೂ ಏಕತೆಯನ್ನು ಹಾಳುಮಾಡುತ್ತದೆ ಎಂಬುದು ಕೂಡ ಸರಿಯಾದ ಕಾರಣ ಅಲ್ಲ. ಆದರೆ ಇಲ್ಲಿ ಎರಡು ಪ್ರಶ್ನೆಗಳು ಮೂಡುತ್ತವೆ. ಬ್ರಿಟಿಷ್ ಸರ್ಕಾರವು ಹಿಂದೊಂದು ಕಾಲಘಟ್ಟದಲ್ಲಿ ತನ್ನ ಆಳ್ವಿಕೆಗೆ ಒಳಪಟ್ಟಿದ್ದ, ಆದರೆ ಈಗ ಸ್ವತಂತ್ರಗೊಂಡಿರುವ ನಾಡೊಂದರಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲು ತಾನು ಸಮರ್ಥ ಎಂದು ಭಾವಿಸಿದ್ದು ಹೇಗೆ? ಅಲ್ಲಿ ಕೆಲವರು ‘ದೋಷಿ’ಗಳು ಎಂದು ತೀರ್ಮಾನಿಸಲು ಅದಕ್ಕೆ ಅಧಿಕಾರ ಬಂದಿದ್ದು ಹೇಗೆ? ಈ ಪ್ರಶ್ನೆಗಳನ್ನು ಕೇಂದ್ರ ಸರ್ಕಾರವು ಬ್ರಿಟಿಷ್ ಸರ್ಕಾರದ ಮುಂದೆ ಇರಿಸಬೇಕು. ಕೇಂದ್ರ ಸರ್ಕಾರ ಈಗ ತಾಳಿರುವ ನಿಲುವನ್ನು ವಿರೋಧ ಪಕ್ಷಗಳೆಲ್ಲ ಟೀಕಿಸಿವೆ. ಕೇಂದ್ರದ ಕ್ರಮವು ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕ್ರಮ. ಅಭಿವ್ಯಕ್ತಿಗೆ ಸ್ವಾತಂತ್ರ್ಯ ಇರುವ ಉದಾರವಾದಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಕ್ರಮಗಳಿಗೆ ಅವಕಾಶ ಇರಬಾರದು. ಮೋದಿ ಅವರನ್ನು ಒಳ್ಳೆಯ ರೀತಿಯಲ್ಲಿ ಚಿತ್ರಿಸಲಾಗಿಲ್ಲ ಎಂಬ ಕಾರಣಕ್ಕಾಗಿಯೇ ಈ ಸಾಕ್ಷ್ಯಚಿತ್ರವನ್ನು ತಡೆಹಿಡಿಯಲಾಗಿದೆ ಎಂಬುದು ಸ್ಪಷ್ಟ. ತಡೆಹಿಡಿಯುವ ತೀರ್ಮಾನದ ಸಮರ್ಥನೆಗಾಗಿ ಇತರ ಕಾರಣಗಳನ್ನು ಹೆಕ್ಕಿಕೊಳ್ಳಲಾಗಿದೆ, ಅಷ್ಟೇ. ಪ್ರಧಾನಿ ಮೋದಿ ಅವರು ತಮ್ಮ ಕುರಿತಾಗಿ ಜನರ ನಡುವೆ ಬಹಳ ದೊಡ್ಡ ಚಿತ್ರಣವೊಂದನ್ನು ರೂಪಿಸಿಕೊಂಡಿದ್ದಾರೆ ಎಂಬುದು ನಿಜ. ಈ ಸಾಕ್ಷ್ಯಚಿತ್ರವನ್ನು ಉಪೇಕ್ಷಿಸಬೇಕಿತ್ತು. ಸಾಕ್ಷ್ಯಚಿತ್ರವನ್ನು ತಡೆಹಿಡಿಯುವ ತೀರ್ಮಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಹೆಸರಿಗೆ ಧಕ್ಕೆ ತರುತ್ತದೆ. ಏಕೆಂದರೆ, ಈಗಿನ ಕ್ರಮದ ಕಾರಣದಿಂದಾಗಿ, ಸಾಕ್ಷ್ಯಚಿತ್ರದಲ್ಲಿ ಏನಿದೆ ಎಂಬುದನ್ನು ನೋಡಲು ಬಯಸುವವರ ಸಂಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT