ADVERTISEMENT

ಸಂಪಾದಕೀಯ| ಕಾಡಿನ ಬೆಂಕಿಯಲ್ಲಿ ಮೂಕ ಆಕ್ರಂದನ; ಏನೇನೂ ಸಾಲದು ಸರ್ಕಾರಿ ಸ್ಪಂದನ

ಸಂಪಾದಕೀಯ
Published 16 ಮಾರ್ಚ್ 2023, 1:28 IST
Last Updated 16 ಮಾರ್ಚ್ 2023, 1:28 IST
.ಸಂಪಾದಕೀಯ
.ಸಂಪಾದಕೀಯ    

ಬೇಸಿಗೆ ಬಂತೆಂದರೆ ಅರಣ್ಯಕ್ಕೆ ಬೆಂಕಿಯ ಅಪಾಯವೂ ಬರುತ್ತದಾದರೂ ಈಚಿನ ವರ್ಷಗಳಲ್ಲಿ ಕಾಳ್ಗಿಚ್ಚಿನ ಸಮಸ್ಯೆ ತೀರಾ ಗಂಭೀರ ಸ್ವರೂಪ ಪಡೆಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಅದೆಷ್ಟೊಂದು ದೇಶಗಳಲ್ಲಿ ಬೆಂಕಿಯ ಪ್ರಕರಣಗಳು ವರದಿಯಾಗುತ್ತಿವೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ವಾತಾವರಣ ಒಂದೇ ಅಲ್ಲ, ಭೂಮಿ ಮತ್ತು ಸಮುದ್ರವೂ ಕ್ರಮೇಣ ಬಿಸಿಯಾಗುತ್ತಿವೆ. ಭಾರಿ ಪ್ರಮಾಣದ ಮಳೆ ಸುರಿದಲ್ಲೂ ನೆಲದ ತೇವಾಂಶ ಶೀಘ್ರ ಆವಿರೂಪದಲ್ಲಿ ಹೊರಟುಹೋಗುವುದರಿಂದ ಕಾಡಿನ ತರಗೆಲೆಗಳೂ ಇಂಧನದ ಹಾಸಿಗೆಯಾಗುತ್ತವೆ. ಭಾರತದಲ್ಲಿ ಈ ವರ್ಷ ಫೆಬ್ರುವರಿ ಮೊದಲರ್ಧದಲ್ಲೇ ಕಾಳ್ಗಿಚ್ಚಿನ ದಾಖಲೆಯ 1,156 ಪ್ರಕರಣಗಳು ವರದಿಯಾಗಿದ್ದವು. ಅದರೀಚೆಗೆ ಕರ್ನಾಟಕವೊಂದರಲ್ಲೇ 650ಕ್ಕೂ ಹೆಚ್ಚು ಗಂಭೀರ ಅಗ್ನಿಕಾಂಡಗಳು ವರದಿಯಾಗಿವೆ. 2030ರ ವೇಳೆಗೆ 250 ಕೋಟಿ ಟನ್‌ ಇಂಗಾಲದ ಡೈ ಆಕ್ಸೈಡ್ ಕಮ್ಮಿ ಮಾಡುತ್ತೇವೆಂದು ವಿಶ್ವವೇದಿಕೆಯಲ್ಲಿ ಭಾರತ ನೀಡಿದ ವಚನವೂ ಅಗ್ನಿತರ್ಪಣವಾಗಲಿದೆ. ಅರಣ್ಯ ಸಂಪತ್ತಿನ, ವನ್ಯಜೀವಿಗಳ ಮಾರಣಹೋಮ ಅಷ್ಟೇ ಅಲ್ಲ, ಹಠಾತ್‌ ನೆರೆಹಾವಳಿಯ ಪ್ರಮಾಣವೂ ಹೆಚ್ಚುತ್ತದೆ, ಏಕೆಂದರೆ ನೀರನ್ನು ಹೀರಿಕೊಳ್ಳುವ ಸೂಕ್ಷ್ಮರಂಧ್ರಗಳೆಲ್ಲ ಬೂದಿಯಲ್ಲಿ ಮುಚ್ಚಿಹೋಗುತ್ತವೆ. ಕಾಡಿನ ಬೆಂಕಿಗೆ ಕಾರಣಗಳು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿವೆ: ಅರಣ್ಯ ಅತಿಕ್ರಮಣ, ಕಳ್ಳಕೃಷಿ, ಬೇಟೆಗಾರರ ಹಾವಳಿ, ಕೃಷಿತ್ಯಾಜ್ಯಗಳ ನಿರ್ಲಕ್ಷ್ಯದ ವಿಲೇವಾರಿ ಹಾಗೂ ಮೋಜಿಗೆಂದೇ ಕಡ್ಡಿ ಗೀರುವವರ ಕೃತ್ಯದಿಂದಾಗಿ ಬೆಂಕಿ ಹಬ್ಬುತ್ತದೆ. ಮಂಗನಕಾಯಿಲೆ ಇರುವ ಪ್ರದೇಶಗಳಲ್ಲಿ ರೋಗಕಾರಕ ಉಣ್ಣಿಗಳ ನಾಶಕ್ಕೆಂದೇ ಸ್ಥಳೀಯರು ತರಗೆಲೆಗಳಿಗೆ ಬೆಂಕಿ ಹಚ್ಚುವುದಿದೆ. ಅರಣ್ಯ ಸಿಬ್ಬಂದಿಯ ದರ್ಬಾರ್‌ನಿಂದಾಗಿ ‘ಈ ಕಾಡು ನಮ್ಮದಲ್ಲ’ ಎಂಬ ಭಾವನೆ ಸ್ಥಳೀಯರಲ್ಲಿ ಬೇರೂರಿದೆ. ಪರಿಸರ ಪ್ರಜ್ಞೆ ಬೇರುಮಟ್ಟದಲ್ಲೂ ವ್ಯಾಪಿಸಿದ್ದಿದ್ದರೆ ಸ್ಥಳೀಯರೇ ಅರಣ್ಯರಕ್ಷಣೆಯ ಭದ್ರ ಬೇಲಿಯಾಗಬಹುದಿತ್ತು. ಆದರೆ ಅವರನ್ನು ಬೇಲಿಯಿಂದ ದೂರವೇ ಇಡುವ ಸರ್ಕಾರಿ ಧೋರಣೆಯಿಂದಾಗಿ ಕಾಡಿನ ವಿಪತ್ತು ಹೆಚ್ಚಾಗುತ್ತಿದೆ.

ಕಾಳ್ಗಿಚ್ಚು ಆಗದಂತೆ ನೋಡಿಕೊಳ್ಳುವುದು ಹಾಗೂ ಹಬ್ಬಿದ ಬೆಂಕಿಯನ್ನು ಶೀಘ್ರ ನಿಯಂತ್ರಣಕ್ಕೆ ತರುವುದು- ಎರಡೂ ಕಠಿಣ ಸವಾಲಿನ ಪ್ರಶ್ನೆಗಳೇ ಆಗಿವೆ. ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿ ಸೂಕ್ತ ಸಾಧನಗಳಿಲ್ಲದೆ ಹೋರಾಡಬೇಕಿದೆ. ಫೆಬ್ರುವರಿ 18ರಂದು ಹಾಸನದ ಆನೆಬೀಡಿನಲ್ಲಿ ಬೆಂಕಿ ಆರಿಸಲು ಬರಿಗೈಯಲ್ಲಿ ಹೋಗಿ ಪ್ರಾಣತೆತ್ತ ಸುಂದರೇಶ್‌ ಉದಾಹರಣೆ ನಮ್ಮೆದುರು ಇದೆ. ಅಗ್ನಿಶಾಮಕ ವಾಹನಗಳೂ ರಸ್ತೆ ಇಲ್ಲದಲ್ಲಿ ಹೋಗುವಂತಿಲ್ಲ. ಈಚೆಗೆ ಕೊಚ್ಚಿಯ ಕಸದ ರಾಶಿಗೆ ಬೆಂಕಿಬಿದ್ದು ವಾರಗಟ್ಟಲೆ ಹೊಗೆ ಹೊಮ್ಮುತ್ತಿದ್ದಾಗ ಸಮುದ್ರದಿಂದ ನೀರೆತ್ತಿ ತಂದು ಸುರಿಯಲು ಹೆಲಿಕಾಪ್ಟರ್‌ ಬಳಕೆಯಾಗಿದೆ. ಕಳೆದ ವಾರ ಗೋವಾದಲ್ಲಿ ಐದಾರು ದಿನಗಳ ಕಾಲ ಅರಣ್ಯ ಉರಿಯುತ್ತಿದ್ದಾಗ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ಗಳು ನೆರವಿಗೆ ಬಂದವು. ಭಾರತದಲ್ಲಿ ಕಾಳ್ಗಿಚ್ಚು ನೈಸರ್ಗಿಕ ಪ್ರಕೋಪ ಅಲ್ಲವೆಂದು ಹೇಳಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಷ್ಟು ವರ್ಷ ಕಾಡಿನ ಬೆಂಕಿಯ ನಿಯಂತ್ರಣದಿಂದ ದೂರವೇ ಉಳಿದಿತ್ತು. ಆದರೆ ಹವಾಮಾನ ವೈಪರೀತ್ಯವೂ ಬೆಂಕಿಯ ತೀವ್ರತೆಗೆ ಕಾರಣವೆಂಬುದು ಗೊತ್ತಾದಮೇಲೆ ಈಚೆಗೆ ಅದರ ಧೋರಣೆ ಬದಲಾಗಿದೆ. ನೆರವು ಅಲ್ಲಿಂದಲೂ ಸಿಗಬಹುದು. ಕೃತಕ ಮಳೆ ಸುರಿಸುವ ತಂತ್ರಜ್ಞಾನ ಮುಂದೆಂದಾದರೂ ಕೈಗೆಟುಕಿದರೆ ಬೆಂಕಿ ಬಿದ್ದಲ್ಲಷ್ಟೇ ಮಳೆ ಸುರಿಸಲು ಕೂಡ ಸಾಧ್ಯವಾದೀತು.

ಪ್ರಶ್ನೆ ಅದಲ್ಲ. ಅರಣ್ಯಕ್ಕೆ ಬೆಂಕಿ ಹಚ್ಚುವುದನ್ನು ತಡೆಯುವುದು ಹೇಗೆ? ಈ ದಿಸೆಯಲ್ಲಿ ಅರಣ್ಯ ಇಲಾಖೆಯ ಕೆಲಸ ಏನೇನೂ ಸಾಲದು. ಅಲ್ಲೆಲ್ಲೋ ಬೆಂಕಿಗೆರೆ ಎಳೆದು, ಅಪರೂಪಕ್ಕೆ ಕೆಲವು ಕಡೆ ಚಿಕ್ಕ ಫಲಕಗಳನ್ನು ನಿಲ್ಲಿಸಿದ್ದು, ಜನಜಾಗೃತಿಗೆ ಬೀದಿನಾಟಕ ಮಾಡಿಸಿದ್ದನ್ನು ಬಿಟ್ಟರೆ, ಬೀದಿಗಳೇ ಇಲ್ಲದ ಕಾಡಂಚಿನ ಹಳ್ಳಿಗಳಲ್ಲಿ ಜನರೆಂದರೆ ಕಾಡಿನ ವೈರಿಗಳೆಂದೇ ಈ ಇಲಾಖೆ ಪರಿಗಣಿಸಿದಂತಿದೆ. ಇಲಾಖೆಯ ಜಾಲತಾಣದಲ್ಲಂತೂ ಕಾಳ್ಗಿಚ್ಚಿನ ಕುರಿತ ಯಾವ ಮಾಹಿತಿಯೂ ಇಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ವನಮಿತ್ರರ ಪಡೆಗಳನ್ನು ರಚಿಸಿ, ಅವರಿಗೆ ಪ್ರೋತ್ಸಾಹಕ ನೆರವು ನೀಡಬಹುದಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಅಂಥ ಪಡೆಗಳಿಗೆ ಮಾಹಿತಿ ಸಂವಹನದ ವ್ಯವಸ್ಥೆ ಮಾಡಬಹುದಿತ್ತು. ಅರಣ್ಯ ರಕ್ಷಣೆಯ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ಚಂದದ ಕೈಪಿಡಿ, ಕತೆ-ಕವನ ಲಭಿಸುವಂತೆ ಮಾಡಬಹುದಿತ್ತು. ಸುಂದರೇಶ್‌ ಬಲಿದಾನದ ಕತೆಯನ್ನು ಒಂದೇ ವಾರದಲ್ಲಿ ಜನಜನಿತವಾಗುವಂತೆ ಮಾಡಬಹುದಿತ್ತು. ಅಂಥ ಚುರುಕಿನ, ಸ್ಪಂದನಶೀಲ ಅಧಿಕಾರಿ ವರ್ಗವನ್ನಾಗಲೀ ಜನಪ್ರತಿನಿಧಿಗಳನ್ನಾಗಲೀ ನಾವೆಂದು ನೋಡುತ್ತೇವೊ? ಮೊನ್ನೆ ಮಾರ್ಚ್‌ 3ರ ‘ವಿಶ್ವ ವನ್ಯಜೀವಿ ದಿನ’ ಯಾರಿಗೂ ಗೊತ್ತಾಗದಂತೆ ಸರಿದುಹೋಯಿತು. ಮುಂದಿನ ವಾರ ಸರಣಿಯಲ್ಲಿ ಮಾರ್ಚ್‌ 21ರ ವಿಶ್ವ ಅರಣ್ಯ ದಿನ, 22ರ ವಿಶ್ವ ಜಲದಿನ, 23ರ ವಿಶ್ವ ಪವನವಿಜ್ಞಾನ ದಿನ ಬರುತ್ತಿರುವುದಕ್ಕೆ ಶಾಲಾ ಕ್ಯಾಲೆಂಡರ್‌ಗಳಲ್ಲೂ ಸೂಚನೆ ಇಲ್ಲ. ನಾಳಿನ ಪೀಳಿಗೆ ನಿಸರ್ಗದ ಕಡೆ ಒಲವು ಬೆಳೆಸಿಕೊಳ್ಳುವಂತೆ ಮಾಡುವಲ್ಲಿ ಸಚಿವ, ಶಾಸಕ, ಅಧಿಕಾರಿ ವರ್ಗ ಇದುವರೆಗೆ ದೂರವೇ ಉಳಿದಿದೆ. ಅರಣ್ಯಗಳಿಂದಾಗಿ ದೊರಕುವ ಲಾಭಗಳನ್ನು ಎಲ್ಲರೂ ಅನುಭೋಗಿಸುತ್ತೇವೆ. ಅರಣ್ಯಕ್ಕೆ ಸಂಕಷ್ಟ ಬಂದಾಗ ಕೂಡ ನಾವೆಲ್ಲ ಕೈಜೋಡಿಸಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.