ADVERTISEMENT

ಆರ್‌ಬಿಐ ಸ್ವಾಯತ್ತೆ ಉಳಿಸಿತಜ್ಞರ ಮಾತಿಗೆ ಕಿಮ್ಮತ್ತು ಕೊಡಿ

ಆರ್‌ಬಿಐನಂತಹ ಸ್ವಾಯತ್ತ ಸಂಸ್ಥೆಯ ಚುಕ್ಕಾಣಿ ಹಿಡಿದವರ ದಿಟ್ಟ ನಿಲುವುಗಳನ್ನು ಗೌರವಿಸಬೇಕಾದುದು ದೇಶದ ಒಟ್ಟಾರೆ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 6:17 IST
Last Updated 26 ಜೂನ್ 2019, 6:17 IST
.
.   

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅತಿಕಿರಿಯ ವಯಸ್ಸಿನ ಡೆಪ್ಯುಟಿ ಗವರ್ನರ್‌ ಎಂಬ ಹಿರಿಮೆಗೆ ಒಳಗಾದ ವಿರಲ್ ಆಚಾರ್ಯ ತಮ್ಮ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲೇ ರಾಜೀನಾಮೆ ನೀಡಿರುವುದು ದುರದೃಷ್ಟಕರ ಬೆಳವಣಿಗೆ. ಇವರು ರಾಜೀನಾಮೆ ನೀಡಬಹುದು ಎಂದು ಈ ಮೊದಲೇ ವದಂತಿಗಳು ಇದ್ದವು. ಹೀಗಾಗಿ, ಇದೊಂದು ತೀರಾ ಅನಿರೀಕ್ಷಿತ ಬೆಳವಣಿಗೆಯೇನೂ ಅಲ್ಲ.

ಅಮೆರಿಕದಲ್ಲಿ ಬೋಧನಾ ವೃತ್ತಿ ಮುಂದುವರಿಸುವ ಉದ್ದೇಶದಿಂದ ಅವರು ಈ ತೀರ್ಮಾನಕ್ಕೆ ಬಂದಿರಬಹುದು ಎಂಬ ಮಾತಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆಇತ್ತೀಚಿನ ದಿನಗಳಲ್ಲಿ ನಡೆದಿರುವ ಸಂಘರ್ಷವನ್ನು ಹಿನ್ನೆಲೆಯಾಗಿ ಇರಿಸಿಕೊಂಡು ನೋಡಿದಾಗ, ಈ ರಾಜೀನಾಮೆಗೆ ಬೇರೆ ಆಯಾಮಗಳೂ ಇರಬಹುದು ಎನ್ನುವ ಅನುಮಾನ ಮೂಡುತ್ತದೆ. ಅದೇನೆ ಇರಲಿ, ಆರ್‌ಬಿಐನ ಸ್ವಾಯತ್ತೆ ಪ್ರಶ್ನೆ ಈ ಸಂದರ್ಭದಲ್ಲಿ ಮತ್ತೆ ಮುಂಚೂಣಿಗೆ ಬಂದು ನಿಂತಿರುವುದಂತೂ ನಿಜ. ಆರ್‌ಬಿಐ ಬಳಿ ಇರುವ ₹ 9 ಲಕ್ಷ ಕೋಟಿ ಮೊತ್ತದ ಮೀಸಲಿನ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಅದರಲ್ಲಿನ ಸಿಂಹಪಾಲನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುವ ಇರಾದೆ ಹೊಂದಿದೆ.

ಈ ಇರಾದೆಯನ್ನು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸಿದ್ದ ವಿರಲ್‌, ‘ಆರ್‌ಬಿಐಸ್ವಾತಂತ್ರ್ಯವನ್ನು ಸರ್ಕಾರ ಗೌರವಿಸದೇ ಇದ್ದರೆ, ಇಂದಲ್ಲ ನಾಳೆ ಹಣಕಾಸು ಮಾರುಕಟ್ಟೆಯ ಆಕ್ರೋಶಕ್ಕೆ ಗುರಿಯಾಗಬೇಕಾದೀತು’ ಎಂದು ಎಚ್ಚರಿಸಿದ್ದರು. ರಿಸರ್ವ್‌ ಬ್ಯಾಂಕ್‌ನ ಮೀಸಲು ನಿಧಿಯ ಪ್ರಮಾಣ ನಿರ್ಧರಿಸಲು ರಚಿಸಲಾಗಿರುವ ಬಿಮಲ್‌ ಜಲನ್‌ ಸಮಿತಿಯು ಸದ್ಯದಲ್ಲೇ ವರದಿ ಸಲ್ಲಿಸಲಿದೆ. ಮುಂದಿನ ವಾರ ಕೇಂದ್ರದ ಬಜೆಟ್‌ ಮಂಡನೆಯಾಗಲಿದೆ. ಕೇಂದ್ರ ಸರ್ಕಾರದ ಅವಕೃಪೆಗೆ ಒಳಗಾದ ಆರ್ಥಿಕ ಮತ್ತು ಬ್ಯಾಂಕಿಂಗ್‌ ತಜ್ಞರು ವಿವಿಧ ಸಂಸ್ಥೆಗಳಿಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಈ ಬೆಳವಣಿಗೆಗಳ ಬೆಳಕಿನಲ್ಲಿಯೂ ವಿರಲ್‌ ನಿರ್ಧಾರವನ್ನು ಪರಾಮರ್ಶಿಸಬೇಕಾಗಿದೆ.

ADVERTISEMENT

ಹಣಕಾಸು ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ಪರಮೋಚ್ಚ ನಿಯಂತ್ರಣ ಸಂಸ್ಥೆಯಾಗಿರುವ ಆರ್‌ಬಿಐನ ಸ್ವಾತಂತ್ರ್ಯ ಮೊಟಕುಗೊಳಿಸುವ ಸರ್ಕಾರದ ಪ್ರತಿಯೊಂದು ಪ್ರಯತ್ನವನ್ನೂ ವಿರಲ್‌ ಆಚಾರ್ಯ ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸುತ್ತಲೇ ಬಂದಿದ್ದಾರೆ. ಇವರ ನಿರ್ಗಮನದಿಂದ ಅಂತಹ ದನಿಯೊಂದು ಅಡಗಿದಂತಾಗಲಿದೆ. ಆರ್‌ಬಿಐ ಗವರ್ನರ್‌ ಆಗಿದ್ದ ಉರ್ಜಿತ್‌ ಪಟೇಲ್‌, ಅಳೆದು–ತೂಗಿ ಮಾತನಾಡುತ್ತಿದ್ದರು. ಅದಕ್ಕೆ ತದ್ವಿರುದ್ಧ ಎಂಬಂತೆ ವಿರಲ್‌ ತಮ್ಮ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಆರ್‌ಬಿಐನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸರ್ಕಾರದ ಪ್ರಯತ್ನಗಳ ಬಗ್ಗೆ ತಮಗೆ ಅನಿಸಿದ್ದನ್ನು ಯಾರ ಮುಲಾಜಿಗೂ ಒಳಗಾಗದೆ ಹೇಳುತ್ತಿದ್ದರು. ಆರ್ಥಿಕ ವೃದ್ಧಿ ದರ, ಹಣದುಬ್ಬರ, ವರಮಾನ ವೃದ್ಧಿ, ವಸೂಲಾಗದ ಸಾಲ ಮತ್ತಿತರ ವಿವಾದಾತ್ಮಕ ವಿಷಯಗಳ ಬಗ್ಗೆ ಆರ್‌ಬಿಐನ ಸ್ವತಂತ್ರ ನಿಲುವನ್ನು ಅವರು ಎತ್ತಿ ಹಿಡಿದಿದ್ದರು. ಅವರ ಈ ಧೋರಣೆಯೇ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಆರ್‌ಬಿಐನ ಹೆಚ್ಚುವರಿ ಬಂಡವಾಳದ ಕೆಲ ಭಾಗವನ್ನು ಸರ್ಕಾರಕ್ಕೆ ವರ್ಗಾಯಿಸುವ; ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸಾಲ ನೀಡಿಕೆ ಹೆಚ್ಚಿಸುವ; ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳಿಗೆ ವಿಧಿಸಿದ್ದ ಕಡಿವಾಣ ಸಡಿಲಗೊಳಿಸುವ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಬಂಡವಾಳ ನೆರವು ನೀಡುವ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರ ಇಂತಹ ನೇರ ನಡೆ–ನುಡಿ, ಕೇಂದ್ರ ಸರ್ಕಾರಕ್ಕೆ ಅಪಥ್ಯವಾಗಿರಬಹುದು. ಇವೇನೇ ಇರಲಿ, ವ್ಯಕ್ತಿಗಿಂತ ಸಂಸ್ಥೆಗಳೇ ಮುಖ್ಯ. ಆರ್‌ಬಿಐ ಒಂದು ಸ್ವಾಯತ್ತ ಸಂಸ್ಥೆ. ಆ ಸ್ವಾಯತ್ತೆಗೆ ಯಾವುದೇ ರೀತಿಯಿಂದಲೂ ಧಕ್ಕೆ ಬರಬಾರದು. ಅದರ ಚುಕ್ಕಾಣಿ ಹಿಡಿದವರ ದಿಟ್ಟ ನಿಲುವುಗಳನ್ನು ಗೌರವಿಸಬೇಕಾದುದು ದೇಶದ ಒಟ್ಟಾರೆ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.