ADVERTISEMENT

ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

ಸಂಪಾದಕೀಯ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
   
ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು, ದುರ್ಬಲ ವರ್ಗಕ್ಕೆ ಆಡಳಿತ ವ್ಯವಸ್ಥೆಯು ನ್ಯಾಯ ಹಾಗೂ ಸಹಾನುಭೂತಿ ನಿರಾಕರಿಸುತ್ತಿರುವುದರ ಸಂಕೇತ.

ಬೆಂಗಳೂರು ಮಹಾನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ನಡೆಯುತ್ತಿರುವ ಕಾರ್ಯವು ಆಡಳಿತ ವ್ಯವಸ್ಥೆ ಕುಸಿದುಬಿದ್ದಿರುವುದನ್ನು, ಕಾನೂನಿನ ಬಗ್ಗೆ ಗೌರವ ಇಲ್ಲದಿರುವುದನ್ನು ಹಾಗೂ ಮನುಷ್ಯರಾದವರಿಗೆ ಇರಬೇಕಿದ್ದ ಕನಿಷ್ಠ ಸೂಕ್ಷ್ಮಗಳೂ ಇಲ್ಲದಿರುವುದನ್ನು ತೋರಿಸುತ್ತಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತ ವ್ಯವಸ್ಥೆಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಂಬ ಹೊಸ ಆಡಳಿತ ವ್ಯವಸ್ಥೆಯಾಗಿ ಬದಲಾವಣೆ ಕಂಡ ನಂತರ, ನಗರದ ಆಡಳಿತಕ್ಕೆ ಸಂಬಂಧಿಸಿದ ಸಹಜ ಚಟುವಟಿಕೆ ಎಂಬಂತೆ ಇದನ್ನು ಬಿಂಬಿಸಲಾಗುತ್ತಿದೆ. ಆದರೆ ಇದು ವಾಸ್ತವದಲ್ಲಿ ಕಾನೂನಿನ ಮೂಲಕ ನೀಡಲಾಗಿರುವ ರಕ್ಷಣೆಗಳು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇಲ್ಲಿ ಆಡಳಿತಾತ್ಮಕ ಕ್ರಮವೊಂದು ಬಿಕ್ಕಟ್ಟಾಗಿ ಪರಿಣಮಿಸಿದೆ.

ಅಧಿಕಾರಿಶಾಹಿ ವ್ಯವಸ್ಥೆಯ ಜಡತ್ವಕ್ಕೆ ನಗರದ ಅತ್ಯಂತ ದುರ್ಬಲವಾದ ಜನವರ್ಗವು ಬೆಲೆ ತೆರುತ್ತಿದೆ. ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಹಾಗೂ ಉಳಿಸಲಾದ ಕಾನೂನಿನ ನಿರ್ವಾತವೊಂದು ಈ ಸಮಸ್ಯೆಯ ಹೃದಯಭಾಗದಲ್ಲಿದೆ. ಆಡಳಿತದ ವ್ಯವಸ್ಥೆಯಲ್ಲಿನ ಬದಲಾವಣೆಯ ಕಾರಣದಿಂದಾಗಿ ಹೊಸ ಗುರುತಿನ ಚೀಟಿ ವಿತರಿಸುವುದನ್ನು ನಿಲ್ಲಿಸಲಾಗಿದೆ. ಹಳೆಯ ಬಿಬಿಎಂಪಿ ವಿತರಣೆ ಮಾಡಿದ್ದ ಗುರುತಿನ ಚೀಟಿಗಳನ್ನು ಅಮಾನ್ಯ ಎಂದು ಘೋಷಿಸಲಾಗಿದೆ. ಇದರಿಂದಾಗಿ ಈ ಜನವರ್ಗದ ಉಳಿವು ಸಂಕಷ್ಟಕ್ಕೆ ಸಿಲುಕಿದೆ. ಬೀದಿಬದಿ ವ್ಯಾಪಾರಿಗಳು ಈಗ ತಮ್ಮ ಬಹುತೇಕ ಸಮಯವು ಪೊಲೀಸರ ಭಯದಲ್ಲಿಯೇ, ಎತ್ತಂಗಡಿಯ ಭೀತಿಯಲ್ಲಿಯೇ ಕಳೆದುಹೋಗುತ್ತಿದೆ ಎಂದು ಹೇಳುತ್ತಿದ್ದಾರೆ.

ಪಾದಚಾರಿ ಮಾರ್ಗಗಳಲ್ಲಿ ನಡೆಸುವ ವ್ಯಾಪಾರ ಚಟುವಟಿಕೆಗಳಿಗೆ ನಿಯಂತ್ರಣ ಇಲ್ಲದಿದ್ದರೆ ಸಂಚಾರ ದಟ್ಟಣೆ ಉಂಟಾಗುತ್ತದೆ, ಜನರಿಗೆ ತೊಂದರೆ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವ್ಯಾಪಾರಕ್ಕೆಂದೇ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡದ ಕಾರಣದಿಂದಾಗಿ ಈ ರೀತಿ ಆಗುತ್ತಿದೆ. ಜಿಬಿಎ ಅಧಿಕಾರಿಗಳ ಅದಕ್ಷತೆಗೆ ಜನರನ್ನು ಶಿಕ್ಷಿಸುವುದು ನ್ಯಾಯಸಮ್ಮತವಲ್ಲ. ಅಧಿಕಾರಿಗಳು ನಡೆಸಿದ ಸಮೀಕ್ಷೆಯೊಂದು 27 ಸಾವಿರ ವ್ಯಾಪಾರಿಗಳನ್ನು ಮಾತ್ರ ಗುರುತಿಸಿದೆ. ವ್ಯಾಪಾರಿಗಳ ಸಂಘಟನೆಗಳು ಇಂತಹ ವ್ಯಾಪಾರಿಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು ಎಂದು ಹೇಳಿವೆ.

ADVERTISEMENT

ಇಲ್ಲಿನ ವ್ಯತ್ಯಾಸವು ಅನ್ಯಾಯದ ಪ್ರಮಾಣವನ್ನು ತೋರಿಸುತ್ತಿದೆ. ಕಡಿಮೆ ಸಂಖ್ಯೆಯನ್ನು ಆಧಾರವಾಗಿ ಇರಿಸಿಕೊಂಡು ಜಿಬಿಎ ಅಧಿಕಾರಿಗಳು ವಲಯಗಳನ್ನು ರೂಪಿಸಿದರೆ, 70 ಸಾವಿರಕ್ಕೂ ಹೆಚ್ಚಿನವರು ಅಕ್ರಮ ವ್ಯಾಪಾರಿಗಳು ಎಂದಾಗುತ್ತದೆ. ಅವರು ಶಾಶ್ವತವಾಗಿ ತಮ್ಮ ನೆಲೆ ಕಳೆದುಕೊಳ್ಳುತ್ತಾರೆ. ಮಹಿಳಾ ವ್ಯಾಪಾರಿಗಳಿಗೆ ಅದೊಂದೇ ಏಕೈಕ ಜೀವನೋಪಾಯ ಆಗಿರುತ್ತದೆಯಾದ ಕಾರಣಕ್ಕೆ, ಅವರು ನೆಲೆ ಕಳೆದುಕೊಂಡಾಗ ಅನುಭವಿಸುವ ಸಂಕಷ್ಟ ತೀವ್ರವಾಗಿರುತ್ತದೆ. ಒಮ್ಮೆ ಅವರನ್ನು ಎತ್ತಂಗಡಿ ಮಾಡಿದರೆ ಹಲವು ದಿನಗಳ ದುಡಿಮೆ ಇಲ್ಲವಾಗುತ್ತದೆ. ಹೀಗಿದ್ದರೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಹಿಳಾ ಆಯೋಗ ಮೌನವಾಗಿ ಕುಳಿತಿವೆ. ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲು ಸಂಬಂಧಪಟ್ಟವರು ವಿಫಲರಾಗಿದ್ದಾರೆ.

ಸಮಗ್ರವಾದ ಸಮೀಕ್ಷೆಯೊಂದು ಪೂರ್ಣಗೊಳ್ಳುವವರೆಗೆ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವಂತೆ ಇಲ್ಲ ಎಂದು ‘ಬೀದಿಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರದ ನಿಯಂತ್ರಣ) ಕಾಯ್ದೆ - 2014’ ಹೇಳುತ್ತದೆ. ಸಂವಿಧಾನದ ವಿಧಿ 19(1)(ಜಿ) ಅಡಿಯಲ್ಲಿ ಬೀದಿಬದಿ ವ್ಯಾಪಾರವು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಬೀದಿಬದಿ ವ್ಯಾಪಾರಿಗಳು ಒತ್ತುವರಿದಾರರಲ್ಲ, ಅವರು ನಗರದ ಆಸ್ತಿ ಎಂದು ಹೇಳಿದೆ. ಹೀಗಾಗಿ, ಕಾನೂನಿನ ಪ್ರಕ್ರಿಯೆ ಪಾಲನೆ ಮಾಡದೆ ಅಥವಾ ಸರಿಯಾದ ರೀತಿಯಲ್ಲಿ ಪುನರ್ವಸತಿ ಕಲ್ಪಿಸದೆ ಅವರನ್ನು ಎತ್ತಂಗಡಿ ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ. ರಸ್ತೆಗಳ ಎರಡೂ ಕಡೆಗಳಲ್ಲಿ ಕಾನೂನು ಪಾರಮ್ಯ ಸಾಧಿಸಬೇಕು; ಅಲ್ಲಿ ಅಕ್ರಮ ಹಾಗೂ ಸಂಕಷ್ಟಕ್ಕೆ ಆಸ್ಪದ ನೀಡಬಾರದು. ಜಿಬಿಎ ಅಧಿಕಾರಿಗಳು ಈ ವ್ಯಾಪಾರಿಗಳ ತೆರವು ಕಾರ್ಯವನ್ನು ತಕ್ಷಣವೇ ನಿಲ್ಲಿಸಬೇಕು.

ಹೊಸ ಗುರುತಿನ ಚೀಟಿ ವಿತರಣೆ ಮಾಡುವವರೆಗೆ ಈಗಾಗಲೇ ನೀಡಿರುವ ಗುರುತಿನ ಚೀಟಿಗಳನ್ನು ಮಾನ್ಯ ಮಾಡಬೇಕು. ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು. ಕಾನೂನುಬದ್ಧವಾದ ವ್ಯಾಪಾರ ವಲಯಗಳನ್ನು ಗುರುತಿಸಿ ಅಧಿಸೂಚನೆಯಲ್ಲಿ ಪ್ರಕಟಿಸಬೇಕು. ಪ್ರಗತಿಯ ಹಾದಿಯಲ್ಲಿ ದಾಪುಗಾಲಿಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಮಹಾನಗರವೊಂದು, ತನ್ನ ಆರ್ಥಿಕತೆಗೆ ನೆರವಾಗುತ್ತಿರುವ ದುರ್ಬಲ ವರ್ಗವೊಂದಕ್ಕೆ ನ್ಯಾಯ ಮತ್ತು ಸಹಾನುಭೂತಿಯನ್ನು ನಿರಾಕರಿಸುವುದು ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.