ADVERTISEMENT

ಬೆಲೆ ಏರಿಕೆಯ ಹೊರೆ ಸಮನ್ವಯದ ಕಸರತ್ತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:27 IST
Last Updated 5 ಜುಲೈ 2018, 20:27 IST
   

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ, ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌, ರಾಜ್ಯದಲ್ಲಿ ಒಟ್ಟಾರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದೆ.

ರೈತರು ಮತ್ತು ಗ್ರಾಮೀಣ ಆರ್ಥಿಕತೆ ಕೇಂದ್ರಿತ ಬಜೆಟ್‌ ಇದಾಗಿದೆ. ಬಹುನಿರೀಕ್ಷಿತ ₹ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ ಘೋಷಿಸಲಾಗಿದೆ. ಬಜೆಟ್‌ ಮೇಲಿನ ಈ ಹೆಚ್ಚುವರಿ ವೆಚ್ಚ ಭರಿಸಲು, ಸಂಪನ್ಮೂಲ ಕ್ರೋಡೀಕರಣದ ಕಾರಣಕ್ಕೆ ಬಳಕೆದಾರರ ಮೇಲೆ ಇಂಧನ, ವಿದ್ಯುತ್‌ ದರ ಹೆಚ್ಚಳದ ಬರೆ ಬೀಳಲಿದೆ. ಡೀಸೆಲ್‌ ದರ ಹೆಚ್ಚಳ ಪರೋಕ್ಷವಾಗಿ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ.

ಜಿಎಸ್‌ಟಿ ವ್ಯವಸ್ಥೆಯಡಿ ಲಭ್ಯ ಇರುವ ಸೀಮಿತ ಅವಕಾಶದಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಕೈಗೊಂಡ ನಿರ್ಧಾರಗಳು ಬಹುತೇಕರಿಗೆ ಅಪ್ರಿಯವಾಗುವುದು ಸಹಜ. ರೈತಾಪಿ ಸಮುದಾಯದ ಸಂಕಷ್ಟ ಪರಿಹರಿಸಲು ಆದ್ಯತೆ ನೀಡುವ ಬದ್ಧತೆ ಕಂಡುಬಂದಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಧ್ಯೆ ಸಮತೋಲನ ಸಾಧಿಸುವ ಶ್ರಮವೂ ಎದ್ದು ಕಾಣುತ್ತದೆ.

ADVERTISEMENT

ಆದರೆ, ರಾಜಕೀಯ ಲಾಭದ ಉದ್ದೇಶದಿಂದ ಜೆಡಿಎಸ್‌ ಪ್ರಾಬಲ್ಯದ ಪ್ರದೇಶಕ್ಕೆ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಆದ್ಯತೆ ನೀಡುವ ಮೂಲಕ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಈ ಬಜೆಟ್‌ ಎಡವಿದೆ. ಇಸ್ರೇಲ್‌ ಮಾದರಿಯ ಕೃಷಿ ಪದ್ಧತಿ ಅಳವಡಿಕೆಗೆ ಪ್ರತ್ಯೇಕವಾಗಿ ₹ 150 ಕೋಟಿ ತೆಗೆದು ಇರಿಸಿರುವುದು ಬಜೆಟ್‌ನ ವೈಶಿಷ್ಟ್ಯ.

ಈ ಉದ್ದೇಶಕ್ಕೆ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಿರುವುದು ಮತ್ತುಚೀನಾದ ಜತೆ ಸಕಾರಾತ್ಮಕ ಸ್ಪರ್ಧೆ ಯೋಜನೆಯಡಿ, ಕೈಗಾರಿಕಾ ರಂಗ ಬಲವರ್ಧಿಸಲು ಕ್ಲಸ್ಟರ್‌ ಕೈಗಾರಿಕಾ ಮಾದರಿ ಜಾರಿಗೆ ತರಲು ಮುಂದಾಗಿರುವುದು ಹೊಸ ಚಿಂತನೆಗಳಾಗಿವೆ.

ರಾಜ್ಯದಲ್ಲಿ ವಿವಿಧ ಸರಕುಗಳ ಬಿಡಿಭಾಗ ತಯಾರಿಕಾ ಘಟಕ ಸ್ಥಾಪಿಸಲು ₹ 14 ಸಾವಿರ ಕೋಟಿ ಮೀಸಲು ಇಟ್ಟಿರುವುದು ಸ್ವಾಗತಾರ್ಹ. ಹಳ್ಳಿಗಳಲ್ಲಿ ಬಿಡಿಭಾಗಗಳ ತಯಾರಿಕೆ, ತಾಲ್ಲೂಕು ಮಟ್ಟದಲ್ಲಿ ಜೋಡಣೆ ಮತ್ತು ಈ ಉತ್ಪನ್ನಗಳಿಗೆ ರಾಜ್ಯದಾದ್ಯಂತ ಮಾರುಕಟ್ಟೆ ವಿಸ್ತರಿಸುವ ಈ ವಿಕೇಂದ್ರೀಕೃತ ಕೈಗಾರೀಕರಣ ಆಲೋಚನೆಯನ್ನು ಸಮರ್ಪಕವಾಗಿ ಜಾರಿಗೆ ತಂದರೆ ರಾಜ್ಯದ ಅರ್ಥ ವ್ಯವಸ್ಥೆಯ ಚಿತ್ರಣ ಬದಲಾಗಬಹುದು.

ರಾಜ್ಯ ಸರ್ಕಾರಿ ಒಡೆತನದಲ್ಲಿ ಇರುವ ಲಾಭದಾಯಕ ಉದ್ದಿಮೆಗಳನ್ನು ಷೇರುಪೇಟೆಗೆ ಕೊಂಡೊಯ್ಯುವ ಪ್ರಯತ್ನವೂ ಇದೆ. ಮೂಲಸೌಕರ್ಯಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕುಟುಂಬ ಕಲ್ಯಾಣ, ಕ್ರೀಡೆ, ಜಲಸಂಪನ್ಮೂಲ ವಲಯಕ್ಕೆ ಆದ್ಯತೆ ನೀಡಲಾಗಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡಿರುವುದು ಜಾಗತಿಕ ಮಟ್ಟದಲ್ಲಿ ‘ಬೆಂಗಳೂರು ಬ್ರ್ಯಾಂಡ್‌’ ಉಳಿಸಿಕೊಳ್ಳಲು ನೆರವಾಗಲಿದೆ.

ಮೆಟ್ರೊದ ಮೂರನೇ ಹಂತ ಪ್ರಕಟಿಸಿರುವುದು ರಾಜಧಾನಿ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲಿದೆ. ಬಂಡವಾಳ ಹೂಡಿಕೆ ಆಕರ್ಷಿಸಲೂ ನೆರವಾಗಲಿದೆ. ಬೆಂಗಳೂರಿನಲ್ಲಿ ವಿದ್ಯುತ್‌ ಚಾಲಿತ ಬಸ್‌, ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ, ಮೆಟ್ರೊ ವಿಸ್ತರಣೆ ಕಾರ್ಯಕ್ರಮಗಳು ಹೊಸ ಕಾಲದ ಅಗತ್ಯಗಳಿಗೆ ಸ್ಪಂದಿಸುವ ಪ್ರಯತ್ನಗಳಾಗಿವೆ.

ಆರ್ಥಿಕ ಶಿಸ್ತಿನ ಎಲ್ಲೆ ಮೀರದಂತೆ ರೈತರ ಸಾಲ ಮನ್ನಾ ಮಾಡುವ ಬದ್ಧತೆಯೂ ಕಂಡು ಬಂದಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅನೇಕ ಯೋಜನೆಗಳನ್ನು ಮುಂದುವರೆಸಿ ‘ಮೈತ್ರಿಧರ್ಮ’ ಪಾಲಿಸಲಾಗಿದೆ. ಆದರೆ, ಮಠ – ಮಂದಿರಗಳನ್ನು ಓಲೈಸುವ ಚಾಳಿಗೆ ಶರಣಾಗಿರುವುದು ಸರಿಯಾದ ನಡೆಯಲ್ಲ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಅರೆಬರೆಯಾಗಿ ಈಡೇರಿಸಿರುವುದು ಸರ್ಕಾರ ನಡೆಸುವವರ ಮಿತಿಗಳನ್ನು ತೋರಿಸುತ್ತದೆ. ಬಜೆಟ್‌ನಲ್ಲಿನ ಕೆಲ ಘೋಷಣೆಗಳನ್ನು ಪರಿಗಣಿಸಿದರೆ ಅಸಮತೋಲನದ ಛಾಯೆ ಢಾಳಾಗಿ ಕಂಡು ಬರುತ್ತಿದೆ. ಸರ್ಕಾರದ ಒಟ್ಟಾರೆ ಬಜೆಟ್‌ ವೆಚ್ಚ ₹ 2.18 ಲಕ್ಷ ಕೋಟಿಗೆ ನಿಗದಿಯಾಗಿದೆ.

ಸಾಲ ಮನ್ನಾದಂತಹ ಜನಪ್ರಿಯ ಯೋಜನೆಯ ಘೋಷಣೆ ಮತ್ತು ಹೆಚ್ಚುವರಿ ತೆರಿಗೆ ಹೊರೆಯ ಹೊರತಾಗಿಯೂ ₹ 4,754 ಕೋಟಿಗಳ ಕೊರತೆ ಬಜೆಟ್‌ ಇದಾಗಿದೆ. ಕುಮಾರಸ್ವಾಮಿ ಅವರು ತಕ್ಕಮಟ್ಟಿಗೆ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಯಶಸ್ವಿಯಾಗಿದ್ದಾರೆ. ಹೊಸ ಸರ್ಕಾರ ಬಜೆಟ್ ಮಂಡಿಸುವ ಬಗ್ಗೆ ಮಿತ್ರ ಪಕ್ಷದಿಂದಲೇ ಕೇಳಿ ಬಂದ ಅಪಸ್ವರಗಳ ಮಧ್ಯೆಯೇ ಬಜೆಟ್‌ ಮಂಡನೆಯಾಗಿದೆ.

ಮಂಡನೆ ನಂತರವೂ ಈ ಅಪಸ್ವರ ಕೊನೆಗೊಂಡಿಲ್ಲ. ಇದು ಬಜೆಟ್‌ ಕಾರ್ಯಕ್ರಮಗಳ ಜಾರಿ ಮೇಲೆ ಕರಿನೆರಳು ಬೀರದಂತೆ ಸರ್ಕಾರ ಮುನ್ನಡೆಸುವ ಜಾಣ್ಮೆಯನ್ನು ಸಮನ್ವಯ ಸಮಿತಿ ತೋರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.