ADVERTISEMENT

ಪ್ರಚೋದಕ ಹೇಳಿಕೆಗಳಿಗೆ ತಕ್ಷಣ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 1:21 IST
Last Updated 24 ಡಿಸೆಂಬರ್ 2019, 1:21 IST
   

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶದ ವಿವಿಧೆಡೆ ಪ್ರತಿರೋಧದ ಅಲೆ ಎದ್ದಿದೆ. ಪ್ರತಿಭಟನೆ ಮತ್ತು ಮೆರವಣಿಗೆಗಳಲ್ಲಿ ವಿದ್ಯಾರ್ಥಿ, ಯುವಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಎನ್‌ಆರ್‌ಸಿಯನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದರೆ, ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿ ಹಿಂಸಾಚಾರ, ಲಾಠಿಚಾರ್ಜ್, ಗೋಲಿಬಾರ್‌ ಪ್ರಕರಣಗಳು ವರದಿಯಾಗಿದ್ದು ಹಲವರು ಸಾವನ್ನಪ್ಪಿದ್ದಾರೆ.

ಒಟ್ಟಾರೆ ಸಿಎಎ ಹಾಗೂ ಎನ್‌ಆರ್‌ಸಿಗೆ ಸಂಬಂಧಿಸಿ ದೇಶದ ಜನರಲ್ಲಿ ಗೊಂದಲ ಉಂಟಾಗಿರುವುದು ಎದ್ದುಕಾಣುತ್ತಿದೆ. ಇವುಗಳ ಕುರಿತ ಗೊಂದಲಗಳನ್ನು ಪರಿಹರಿಸುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಕಾಲಿಕ ಹೇಳಿಕೆಯೊಂದನ್ನು ನೀಡಿರುವುದು ಸ್ವಾಗತಾರ್ಹ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಎಎ ಬೆಂಬಲಿಸಿ ಪಕ್ಷ ಏರ್ಪಡಿಸಿದ್ದ ಸಮಾವೇಶದಲ್ಲಿ, ‘ಇದು, ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸಿದ ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ನೀಡುವ ಕಾಯ್ದೆ. ಈ ಕಾಯ್ದೆಯು ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಆದ್ದರಿಂದ ನೆಲದ ಮಕ್ಕಳಾದ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ’ ಎಂದು ಪ್ರಧಾನಿ ಹೇಳಿರುವುದು ನಾಗರಿಕರ, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತ ಮುಸ್ಲಿಮರ ಸಂಶಯಗಳನ್ನು ಪರಿಹರಿಸಲು ಪೂರಕವಾಗಿದೆ. ‘2014ರಲ್ಲಿ ನನ್ನ ಸರ್ಕಾರ ಬಂದ ಬಳಿಕ ಎನ್‌ಆರ್‌ಸಿ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಸರ್ಕಾರದ ಮಟ್ಟದಲ್ಲೂ ಅದು ಇನ್ನಷ್ಟೇ ಚರ್ಚೆಗೆ ಬರಬೇಕಿದೆ’ ಎಂದೂ ಪ್ರಧಾನಿ ಹೇಳಿದ್ದಾರೆ.

ಪ್ರಧಾನಿಯವರೇನೋ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಗೃಹ ಸಚಿವರೂ ಆಗಿರುವ ಅಮಿತ್‌ ಶಾ ಇದಕ್ಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡಿರುವುದು ಏನನ್ನು ಸೂಚಿಸುತ್ತಿದೆ? ‘ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ಬಂದೇ ಬರುತ್ತದೆ’ ಎಂದು ರಾಜ್ಯಸಭೆಯಲ್ಲಿ ಶಾ ಹೇಳಿದ್ದರು. ಜಾರ್ಖಂಡ್‌ನ ಚುನಾವಣಾ ಪ್ರಚಾರ ಸಭೆಯಲ್ಲಿ ಎನ್‌ಆರ್‌ಸಿ ಜಾರಿಗೆ 2024ರ ಗಡುವನ್ನೂ ಅವರು ಪ್ರಕಟಿಸಿದ್ದರು. ಆಡಳಿತಾರೂಢ ಪಕ್ಷದ ಇಬ್ಬರು ಪ್ರಮುಖರ ಭಿನ್ನ ಹೇಳಿಕೆಗಳಲ್ಲಿ ಯಾವುದನ್ನು ನಂಬಬೇಕು ಎಂಬ ಗೊಂದಲ ನಾಗರಿಕರಲ್ಲಿ ಉಂಟಾಗುವುದು ಸಹಜ.

ADVERTISEMENT

ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ನಾಯಕರೇ ಗೊಂದಲಗಳನ್ನು ಹೆಚ್ಚಿಸುತ್ತಿದ್ದಾರೆ.‘ಎನ್‌ಆರ್‌ಸಿ ಜಾರಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ರಾಜ್ಯದಲ್ಲಿ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಈ ಹಿಂದೆ ಹೇಳಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರ ನಿರ್ದೇಶನ ನೀಡಿದ ಬಳಿಕವಷ್ಟೇ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಮಾಡುತ್ತೇವೆ ಎಂದು ಭಾನುವಾರ ಹೇಳಿದ್ದಾರೆ. ಈ ಮಧ್ಯೆ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರಾದ ಸುರೇಶ ಅಂಗಡಿ ಮತ್ತು ಪ್ರಹ್ಲಾದ ಜೋಶಿ ಅವರು ಯೋಜನೆ ಜಾರಿಗೆ ಸಂಬಂಧಿಸಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಬಾರದೇಕೆ? ಬೇರೆ ಧರ್ಮೀಯರಿಗೆ ಒಂದೊಂದು ರಾಷ್ಟ್ರ ಇದೆಯಲ್ಲವೇ, ನಮಗೂ ಒಂದು ದೇಶ ಬೇಕೋ ಬೇಡವೋ’ ಎಂದು ಅಂಗಡಿ ಪ್ರಶ್ನಿಸಿದ್ದಾರೆ. ‘ಜಗತ್ತಿನ ಎಲ್ಲ ದೇಶಗಳ ಮುಸ್ಲಿಮರಿಗೆ ಆಶ್ರಯ ನೀಡಲು ಭಾರತ ಧರ್ಮಛತ್ರ ಅಲ್ಲ’ ಎಂದು ಜೋಶಿ ಹೇಳಿದ್ದಾರೆ.

ಜನರಲ್ಲಿ ಹೊಸ ಕಾಯ್ದೆಯ ಬಗ್ಗೆ ಗೊಂದಲ, ಅನುಮಾನಗಳು ಇರುವ ಸಂದರ್ಭದಲ್ಲಿ ಅಧಿಕಾರಸ್ಥರು, ವಿವರಗಳನ್ನು ಪಾರದರ್ಶಕವಾಗಿ ಜನರ ಮುಂದಿಟ್ಟು ಅವುಗಳನ್ನು ಪರಿಹರಿಸಲುಪ್ರಯತ್ನಿಸಬೇಕು. ಅದರ ಬದಲು, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವಂತಹ ಹೇಳಿಕೆಗಳನ್ನು ನೀಡಿ ಗೊಂದಲ ಮತ್ತು ಉದ್ರೇಕದ ವಾತಾವರಣ ಉಂಟುಮಾಡುವುದು ಎಳ್ಳಷ್ಟೂ ಸರಿಯಲ್ಲ. ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ, ಪ್ರತಿಭಟನಕಾರರನ್ನು ಟೀಕಿಸುವಾಗ ‘ಎದೆ ಸೀಳಿದರೆ ಒಂದೂ ಅಕ್ಷರ ಇಲ್ಲದವರು, ಪಂಕ್ಚರ್‌ ಅಂಗಡಿಯವರು’ ಮುಂತಾದ ಹಗುರ ಶಬ್ದಗಳನ್ನು ಬಳಸಿದ್ದಾರೆ. ಒಂದೆಡೆ ಪ್ರಧಾನಿಯವರು ಸಂಯಮದ ಹೇಳಿಕೆ ನೀಡುತ್ತಿದ್ದರೆ, ಪಕ್ಷದ ಇತರ ನಾಯಕರು ಅದಕ್ಕೆ ತದ್ವಿರುದ್ಧವೆಂಬಂತೆ ಪ್ರಚೋದನಕಾರಿಯಾಗಿ ಮಾತನಾಡುವ ಮೂಲಕ ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆಯೇ ಅಪಪ್ರಚಾರ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಇಂತಹ ಬೇಜವಾಬ್ದಾರಿ ಮತ್ತು ಪಕ್ಷಪಾತದ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತದೆಯೇ ಹೊರತು ಯಾವ ಕಾರ್ಯಸಾಧನೆಯೂ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.