ADVERTISEMENT

ಸಂಪಾದಕೀಯ | ರದ್ದಾದ ಒಪ್ಪಂದ: ರಾಜಕೀಯ ಪ್ರಮಾದ – ತೆರಿಗೆ ಹಣ ಪೋಲು ಮಾಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 19:44 IST
Last Updated 17 ನವೆಂಬರ್ 2022, 19:44 IST
   

ವೈಟ್‌ ಟಾಪಿಂಗ್‌ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದ ಕಾರಣಕ್ಕಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ₹ 38 ಕೋಟಿಯನ್ನು ದಂಡದ ರೂಪದಲ್ಲಿ ಕಕ್ಕುವಂತಹ ಸನ್ನಿವೇಶ ಎದುರಾಗಿದೆ. ತೆರಿಗೆದಾತರು ನೀಡಿದ ಹಣದಿಂದಲೇ ಬಿಬಿಎಂಪಿ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಮುಂದಾಗಿದೆ. ತೆರಿಗೆ ಹಣ ಹೇಗೆ ಪೋಲಾಗುತ್ತದೆ ಎಂಬುದಕ್ಕೆ ಇದೊಂದು ತಕ್ಕ ನಿದರ್ಶನ.

ಅದು, 2019ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭ. ಬಿಬಿಎಂಪಿಯು ₹ 1,154 ಕೋಟಿ ವೆಚ್ಚದಲ್ಲಿ ಬೆಂಗಳೂರಿನ 89 ರಸ್ತೆಗಳಿಗೆ ವೈಟ್‌ ಟಾಪಿಂಗ್‌ ಮಾಡಿಸಲು ನಿರ್ಧರಿಸಿತ್ತು. ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ಯಶಸ್ವಿ ಬಿಡ್ಡುದಾರರಿಗೆ ಬಿಬಿಎಂಪಿಯಿಂದ ಕಾಮಗಾರಿಗಳ ಗುತ್ತಿಗೆ ವಹಿಸಿಕೊಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹೋಗಿ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಗುತ್ತಿಗೆ ಪಡೆದವರ ಪೈಕಿ ನಾಲ್ವರಿಗೆ ಆ ಸಂದರ್ಭದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಯನ್ನೇ ನೀಡಲಿಲ್ಲ.

ಈ ನಾಲ್ವರೂ ಗುತ್ತಿಗೆದಾರರು ಕರಾರಿನಂತೆ ಬ್ಯಾಂಕ್‌ ಗ್ಯಾರಂಟಿ ಮತ್ತು ಭದ್ರತಾ ಠೇವಣಿ ಒದಗಿಸಿದರೂ ಅವರು ಕೈಗೊಳ್ಳಬೇಕಿದ್ದ ಒಟ್ಟು ₹ 320 ಕೋಟಿ ಮೊತ್ತದ ಕಾಮಗಾರಿಗಳನ್ನು ತಡೆಹಿಡಿಯಲಾಯಿತು. ‘ವೈಟ್‌ ಟಾಪಿಂಗ್‌ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಲಾಯಿತು. ಆದರೆ, ವಾಸ್ತವವಾಗಿ ರಾಜಕೀಯ ಕಾರಣಗಳಿಗಾಗಿ ಈ ಗುತ್ತಿಗೆ ಒಪ್ಪಂದಗಳಿಂದ ಹಿಂದೆ ಸರಿಯಲಾಗಿತ್ತು.

ADVERTISEMENT

ಹೌದು, ಒಪ್ಪಂದ ರದ್ದುಗೊಳಿಸುವಾಗ ನೀಡಲಾಗಿದ್ದ ಕಾರಣಗಳೆಲ್ಲವೂ ರಾಜಕೀಯ ಸ್ವರೂಪದ್ದಾಗಿದ್ದವು. ಬಿಜೆಪಿಯೇತರ ಶಾಸಕರ ಕ್ಷೇತ್ರಗಳಲ್ಲಷ್ಟೇ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ದೂರಲಾಗಿತ್ತು. ಅಕ್ರಮಕ್ಕೆ ಸಂಬಂಧಿಸಿದಂತೆ ಮಾಡಲಾದ ಆರೋಪಗಳಲ್ಲಿ ಒಂದನ್ನೂ ಸಾಬೀತು ಮಾಡಲಿಲ್ಲ. ಗುತ್ತಿಗೆ ಒಪ್ಪಂದದಿಂದ ಮಾತ್ರ ಅನಗತ್ಯವಾಗಿ ಹಿಂದೆ ಸರಿಯಲಾಯಿತು. ನಂತರದ ದಿನಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅತೀ ಆತುರದಿಂದ ವೈಟ್‌ ಟಾಪಿಂಗ್‌ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತಂದಿತು. ಈ ಆತುರದ ಹಿಂದಿನ ಮರ್ಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

‘ಕಾಮಗಾರಿಗಳಿಗೆ ರಸ್ತೆಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಪ್ರತಿಸ್ಪರ್ಧಿಗಳ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ’ ಎಂಬ ಆರೋಪ ಆಗಲೂ ಬಲವಾಗಿಯೇ ಕೇಳಿಬಂತು. ‘ಯಾವುದೇಕಾಮಗಾರಿಗೆ ಮೊದಲು ಶೇ 5ರಿಂದ ಶೇ 10ರಷ್ಟು ‘ಕಮಿಷನ್‌’ ಕೊಡಬೇಕಿತ್ತು. ಈಗ ಅದರ ಪ್ರಮಾಣ ಶೇ 40ಕ್ಕೆ ತಲುಪಿದೆ’ ಎಂದು ಕರ್ನಾಟಕ ಗುತ್ತಿಗೆದಾರರ ಸಂಘ ಇದೇ ಅವಧಿಯಲ್ಲಿ ಪ್ರಧಾನಿಯವರೆಗೆದೂರು ಒಯ್ದಿದ್ದು ಇನ್ನೊಂದು ಕಥೆ. ಗುತ್ತಿಗೆ ರದ್ದತಿ ಪ್ರಕರಣದ ಕುರಿತು ನಗರಾಭಿವೃದ್ಧಿ ಇಲಾಖೆಯ ಪ್ರಶ್ನೆಗೆ ಉತ್ತರಿಸಿರುವ ಬಿಬಿಎಂಪಿ, ಒಪ್ಪಂದದಿಂದ ಹಿಂದೆ ಸರಿದ ಕಾರಣ ಕರಾರಿನ ಪ್ರಕಾರ ನಾಲ್ವರು ಗುತ್ತಿಗೆದಾರರಿಗೆ ತಾನು ಹಣ ನೀಡಬೇಕಿದೆ ಎಂಬುದನ್ನು ಒಪ್ಪಿಕೊಂಡಿದೆ.

ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ದೊಡ್ಡ ಮೊತ್ತದ ಹಣವನ್ನು ಉಳಿಸಲಾಯಿತು ಎಂದು ತೋರಿಸಲು ಪಾಲಿಕೆಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಆದರೆ, ರಾಜಕೀಯ ಒತ್ತಡಕ್ಕೆ ಕಟ್ಟುಬಿದ್ದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟ. ಆಗಿರುವ ನಷ್ಟದ ಬಗ್ಗೆ ಯಾವ ಮಾತನ್ನೂ ಆಡುತ್ತಿಲ್ಲ. ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ₹ 38 ಕೋಟಿಯನ್ನು ಕೊಡಲೇಬೇಕಾದಲ್ಲಿ ಆ ನಿರ್ಣಯಕ್ಕೆ ಕಾರಣರಾದ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ ಆ ಮೊತ್ತವನ್ನು ವಸೂಲಿ ಮಾಡಬೇಕೇ ವಿನಾ ಜನರ ತೆರಿಗೆ ಹಣದಿಂದ ಅದನ್ನು ಪಾವತಿಸುವುದಲ್ಲ.

ಗುತ್ತಿಗೆಯಿಂದ ಹಿಂದೆ ಸರಿದಿದ್ದರಿಂದ ಉದ್ಭವಿಸಿರುವ ಈ ಸಮಸ್ಯೆಯು ಸರ್ಕಾರದಲ್ಲಿ ನಿರಂತರತೆಗೆ ಸಂಬಂಧಿಸಿದಂತೆ ಗುರುತರ ಪ್ರಶ್ನೆಗಳನ್ನು ಎತ್ತಿದೆ. ಆಡಳಿತ ವ್ಯವಸ್ಥೆಗೆ ಇರಬೇಕಾದ ಬದ್ಧತೆಯ ಪಾವಿತ್ರ್ಯದ ಕಡೆಗೂ ಬೊಟ್ಟು ಮಾಡಿದೆ. ಸರ್ಕಾರದ ಯಾವುದೇ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದಗಳೆಲ್ಲಸರ್ಕಾರದ ಬದ್ಧತೆಗೆ ಒಳಪಟ್ಟಿರುತ್ತವೆ ಮತ್ತು ಅಂತಹ ಒಪ್ಪಂದಗಳಲ್ಲಿ ಅಕ್ರಮಗಳು ಸಾಬೀತಾಗದ ಹೊರತು, ಸರ್ಕಾರದ ನೇತೃತ್ವ ವಹಿಸುವವರು ಬದಲಾದ ಮೇಲೂ ಆ ಒಪ್ಪಂದಗಳನ್ನು ಗೌರವಿಸಬೇಕು. ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಸುಗಮ ಹಸ್ತಾಂತರ ಪ್ರಕ್ರಿಯೆಯ ಮೂಲತತ್ವಗಳಲ್ಲಿ ಈ ಬದ್ಧತೆಯು ಒಂದಾಗಿದ್ದು, ಅದೇ ಆಡಳಿತ ವ್ಯವಸ್ಥೆಯು ಜನರಿಗೆ ನೀಡುವ ಭರವಸೆಯೂ ಆಗಿದೆ. ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳುವುದು ಹಾಗೂ ಮನಬಂದಂತೆ ಒಪ್ಪಂದಗಳನ್ನು ರದ್ದುಪಡಿಸುವುದರಿಂದ ಆ ಭರವಸೆಯನ್ನು ಸಂಪೂರ್ಣವಾಗಿ ನಿರಾಕರಿಸಿದಂತೆ ಆಗುತ್ತದೆ. ಅಲ್ಲದೆ, ರಾಜ್ಯದಲ್ಲಿ ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳಲೂ ಅದು ದಾರಿ ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.