ADVERTISEMENT

ಸಂಪಾದಕೀಯ | ಮಸೂದೆಗೆ ಅಂಕಿತ: ರಾಷ್ಟ್ರಪತಿ ಎತ್ತಿರುವ ಪ್ರಶ್ನೆಗಳು ರಾಜಕೀಯಪ್ರೇರಿತ

ಸಂಪಾದಕೀಯ
Published 19 ಮೇ 2025, 0:30 IST
Last Updated 19 ಮೇ 2025, 0:30 IST
   

ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ರಾಜ್ಯಗಳ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿಪಡಿಸಿ ಸುಪ್ರೀಂ ಕೋರ್ಟ್‌ ಏಪ್ರಿಲ್‌ನಲ್ಲಿ ನೀಡಿದ ತೀರ್ಪಿಗೆ ಸಂಬಂಧಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತೀರ್ಪಿಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕೆಲವು ಸ್ಪಷ್ಟನೆ ಬೇಕಾಗಿದೆ ಎಂಬುದು ಇದರಿಂದ ಮೇಲ್ನೋಟಕ್ಕೆ ತಿಳಿಯುತ್ತದೆ. ರಾಜ್ಯಪಾಲರ ಅಧಿಕಾರ, ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರಿಗೆ ಮಸೂದೆಗೆ ಅಂಕಿತ ನೀಡಲು ನ್ಯಾಯಾಲಯ ನೀಡಿದ ಕಾಲಮಿತಿ, ರಾಷ್ಟ್ರಪತಿಯವರ ಅಧಿಕಾರದಂತಹ ಹಲವು ವಿಚಾರಗಳಿಗೆ ಸಂಬಂಧಿಸಿ 14 ಪ್ರಶ್ನೆಗಳನ್ನು ಕೇಳಲಾಗಿದೆ. ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರು 10 ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿರುವುದು ತಪ್ಪು ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಆ ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ದೊರೆತಿದೆ ಎಂದು ಭಾವಿಸಬೇಕು ಎಂದು ಕೋರ್ಟ್ ಹೇಳಿದೆ. ಈ ತೀರ್ಪಿನ ಕುರಿತು ಕೇಂದ್ರ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಆದರೆ, ರಾಷ್ಟ್ರಪತಿಯವರ ‍ಪ್ರಶ್ನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವು ತೀರ್ಪನ್ನು ಒಪ್ಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಶ್ನೆಗಳಿಗೆ ಸಂಬಂಧಿಸಿ ಪ್ರಕ್ರಿಯಾತ್ಮಕ, ಕಾನೂನಾತ್ಮಕ ಮತ್ತು ಇತರ ಅಂಶಗಳು ಎದ್ದು ಕಾಣುತ್ತವೆ. ಆದರೆ, ರಾಷ್ಟ್ರಪತಿ ಎತ್ತಿರುವ ಪ್ರಶ್ನೆಗಳು ಮೂಲಭೂತವಾಗಿ ರಾಜಕೀಯ ನೆಲೆಯವು. ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟ ಅವಧಿಗೆ ತಡೆಹಿಡಿಯುವುದು ಈ ತೀರ್ಪಿನಿಂದಾಗಿ ಅಸಾಧ್ಯವಾಗಿದೆ. ಹಾಗೆಯೇ ರಾಷ್ಟ್ರಪತಿಯವರನ್ನೂ ಈ ವ್ಯಾಪ್ತಿಗೆ ತರಲಾಗಿದೆ. ಈ ರಾಜಕಾರಣಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ರೂಪಿಸಲಾಗಿದೆ, ಇದು ಕೇಂದ್ರ ಸರ್ಕಾರದ ರಾಜಕಾರಣವೂ ಹೌದು. 

ರಾಷ್ಟ್ರಪತಿಯವರ ಪ್ರಶ್ನೆಗಳನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಳ್ಳಬಹುದು. ಆದರೆ, ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯಪಾಲರು ಸ್ವೇಚ್ಛೆಯಿಂದ ವರ್ತಿಸುವುದಕ್ಕೆ ಕಡಿವಾಣ ಹಾಕಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿದೆ. ರಾಜ್ಯಪಾಲರಿಗೆ ಪರಮಾಧಿಕಾರ ಇಲ್ಲ ಎಂದು ನ್ಯಾಯಾಲಯ ಘೋಷಿಸಿದೆ. ರಾಜ್ಯಪಾಲರ ಹುದ್ದೆಗಿಂತ ಚುನಾಯಿತ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಇದೆ ಎಂದೂ ಹೇಳಿದೆ. ರಾಜ್ಯಪಾಲರಿಗೆ ಕಾಲಮಿತಿ ಹೇರಬಹುದು ಎಂಬ ಅಂಶ ಸಂವಿಧಾನದಲ್ಲಿ ಇಲ್ಲ. ಹಾಗಾಗಿ, ಕಾಲಮಿತಿ ಹೇರಬಹುದೇ ಎಂಬುದನ್ನು ನ್ಯಾಯಾಲಯವು ಪರಿಶೀಲನೆಗೆ ಒಳಪಡಿಸಬೇಕು. ರಾಷ್ಟ್ರಪತಿಯವರ ಅಧಿಕಾರಗಳು ಮತ್ತು ಸ್ಥಾನವನ್ನು ತೀರ್ಪು ದುರ್ಬಲಗೊಳಿಸಿದೆಯೇ ಎಂಬುದನ್ನೂ ಪರಿಶೀಲನೆಗೆ ಒಳಪಡಿಸಬೇಕಿದೆ. ಸಂಬಂಧಪಟ್ಟ ಇತರ ಅಂಶಗಳನ್ನು ಕೂಡ ಪರಿಶೀಲಿಸಬೇಕು.

ತೀರ್ಪನ್ನು ಮರುಪ‍ರಿಶೀಲನೆಗೆ ಒಳಪಡಿಸಬೇಕು ಎಂದು ಸರ್ಕಾರವು ನ್ಯಾಯಾಲಯವನ್ನು ಕೋರಿಲ್ಲ. ಬದಲಿಗೆ ಕೋರ್ಟ್‌ ಮುಂದೆ ರಾಷ್ಟ್ರಪತಿಯವರು ಪ್ರಶ್ನೆಗಳನ್ನು ಇರಿಸಿದ್ದಾರೆ. ಮರುಪರಿಶೀಲನೆ ಅರ್ಜಿಯನ್ನು ತೀರ್ಪು ನೀಡಿದ ಪೀಠವೇ ವಿಚಾರಣೆ ನಡೆಸುತ್ತದೆ. ಸಾಮಾನ್ಯವಾಗಿ ತನ್ನ ಹಿಂದಿನ ತೀರ್ಪಿಗೆ ಪೀಠವು ಬದ್ಧವಾಗಿರುತ್ತದೆ. ರಾಷ್ಟ್ರಪತಿಯವರು ಎತ್ತಿರುವ ಪ್ರಶ್ನೆಗಳಿಗೆ ನ್ಯಾಯಾಲಯವು ಪ್ರತಿಕ್ರಿಯೆ ನೀಡಲೇಬೇಕು ಎಂದೇನಿಲ್ಲ. ಬಾಬರಿ ಮಸೀದಿ ವಿವಾದ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಲು ಈ ಹಿಂದೊಮ್ಮೆ ನ್ಯಾಯಾಲಯ ನಿರಾಕರಿಸಿತ್ತು. ನ್ಯಾಯಾಲಯದ ಅಭಿಪ್ರಾಯಕ್ಕೆ ಸರ್ಕಾರ ಅಥವಾ ಸಂಸತ್ತು ಬದ್ಧವಾಗಿರಬೇಕಿಲ್ಲ. ರಾಷ್ಟ್ರಪತಿಯವರು ಎತ್ತಿರುವ ಪ್ರಶ್ನೆಗಳ ಕುರಿತು ನ್ಯಾಯಾಲಯದ ಅಭಿಮತ ಏನೇ ಆಗಿದ್ದರೂ ಅದು ತೀರ್ಪಿನ ಮೇಲೆ ಪರಿಣಾಮ ಬೀರುವುದಿಲ್ಲ. ತೀರ್ಪು ಊರ್ಜಿತವಾಗಿಯೇ ಇರುತ್ತದೆ. ಹಾಗಾಗಿ, ರಾಷ್ಟ್ರಪತಿಯವರ ಪ್ರಶ್ನೆಗಳು ಅಸ್ಪಷ್ಟವಾಗಿಯೇ ಉಳಿಯುತ್ತವೆ ಮತ್ತು ಪ್ರಶ್ನೆಗಳನ್ನು ಎತ್ತಿರುವುದು ರಾಜಕೀಯಪ್ರೇರಿತ ಎಂಬ ಸಂದೇಹಕ್ಕೆ ಪುಷ್ಟಿ ಕೊಡುತ್ತದೆ. ರಾಷ್ಟ್ರಪತಿಯವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಏಪ್ರಿಲ್‌ನ ತೀರ್ಪಿನಲ್ಲಿ ಅಥವಾ ನ್ಯಾಯಾಲಯವು ಈ ಹಿಂದೆ ನೀಡಿದ್ದ ತೀರ್ಪಿನಲ್ಲಿ ಉತ್ತರ ಕೊಡಲಾಗಿದೆ ಎಂಬುದನ್ನೂ ಗಮನಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.