ADVERTISEMENT

ಸಂಪಾದಕೀಯ | ಸಮೀಪಿಸುತ್ತಿದೆ ಮಳೆಗಾಲ: ಸವಾಲು ಎದುರಿಸಲು ಸಜ್ಜಾಗಲಿ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 19:45 IST
Last Updated 15 ಮೇ 2022, 19:45 IST
ಸಂಪಾದಕೀಯ
ಸಂಪಾದಕೀಯ   

ಮಳೆಗಾಲದಲ್ಲಿ ಬೆಂಗಳೂರಿನ ಜನ ಆತಂಕದಿಂದ ಬದುಕು ಸವೆಸುವಂತಹ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಆದ್ಯ ಕರ್ತವ್ಯ

ಬೆಂಗಳೂರಿನಲ್ಲಿ ಮಳೆಗಾಲದ ಸಮಯದಲ್ಲಿ ಪದೇ ಪದೇ ಪ್ರವಾಹ ಸಂಭವಿಸುವುದು, ತಗ್ಗು ಪ್ರದೇಶ ಗಳಲ್ಲಿನ ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳಲ್ಲಿ ನೀರು ಕಟ್ಟಿಕೊಂಡು ಸಂಚಾರ ದಟ್ಟಣೆ ಉಂಟಾಗು ವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಸಂಗತಿ ಎಂಬಂತಾಗಿಬಿಟ್ಟಿದೆ. ರಾಜಕಾಲುವೆಗಳ ಒತ್ತುವರಿ, ಕೆರೆಗಳಲ್ಲಿ ಹೂಳು ತುಂಬಿರುವುದು ಮಾತ್ರವಲ್ಲದೆ, ತ್ಯಾಜ್ಯನೀರಿನ ನಿರ್ವಹಣೆಗೆ ಸಮರ್ಪಕ ಯೋಜನೆ ರೂಪಿಸದಿರುವುದು ಸಹ ಇಂತಹ ಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಮಳೆ ಬಂದಾಗ ನಗರದಲ್ಲಿ ಪ್ರವಾಹ ಉಂಟಾಗಬಹುದಾದ 210 ಪ್ರದೇಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ಗುರುತಿಸಿವೆ. ಅವುಗಳಲ್ಲಿ 56 ಅತಿ ಸೂಕ್ಷ್ಮ ಪ್ರದೇಶಗಳಿವೆ. ರಾಜಕಾಲುವೆಗಳ ಹೂಳೆತ್ತುವ ಹಾಗೂ ಅಗತ್ಯ ಇರುವ ಕಡೆ ರಾಜಕಾಲುವೆ ಗಳಿಗೆ ತಡೆಗೋಡೆಗಳನ್ನು ಎತ್ತರಿಸುವ ಮೂಲಕ ಪ್ರವಾಹ ಉಂಟಾಗುವ ಪ್ರದೇಶಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದಾಗಿ ಬಿಬಿಎಂಪಿ ಹೇಳಿದೆ. ದಿನವೊಂದಕ್ಕೆ 60 ಮಿಲಿ ಮೀಟರ್‌ಗಿಂತ ಹೆಚ್ಚು ಮಳೆ ಯಾದರೆ, ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುವಂತಹ ಸುಸಜ್ಜಿತ ರಾಜಕಾಲುವೆ ವ್ಯವಸ್ಥೆ ನಗರದಲ್ಲಿ ಇಲ್ಲ. 70 ಮಿಲಿ ಮೀಟರ್‌ಗೂ ಅಧಿಕ ಮಳೆಯಾದರಂತೂ ತಗ್ಗು ಪ್ರದೇಶಗಳ ಮನೆಗಳು ಜಲಾವೃತವಾಗುವುದು ಖಚಿತ ಎಂಬಂತಹ ಸ್ಥಿತಿ ಇದೆ.

ಇನ್ನೇನು ಮಳೆಗಾಲ ಶುರುವಾಗಲಿದೆ. ಆದರೆ, ಮಳೆಗಾಲದ ಸಂಭಾವ್ಯ ಅನಾಹುತ ತಡೆಯಲು ನಡೆದಿ ರುವ ಸಿದ್ಧತೆಗಳನ್ನು ಅವಲೋಕಿಸಿದರೆ, ಈ ವರ್ಷವೂ ಪರಿಸ್ಥಿತಿಯಲ್ಲಿ ಮಹತ್ತರ ಸುಧಾರಣೆಗಳು ಕಾಣಿಸುತ್ತಿಲ್ಲ. ಈ ತಿಂಗಳ ಆರಂಭದಲ್ಲಿ ಸುರಿದ ಮಳೆಗೆ ನಗರದ ಉತ್ತರಹಳ್ಳಿಯ ಕೆಲವು ಬಡಾವಣೆಗಳಲ್ಲಿ ಮನೆಗಳು ಜಲಾವೃತಗೊಂಡಿವೆ. ನಗರದ ಕೇಂದ್ರ ವಾಣಿಜ್ಯ
ಪ್ರದೇಶಗಳಲ್ಲಿ ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳು ಹಾಗೂ ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಸೃಷ್ಟಿ ಯಾದ ಅವಾಂತರಗಳು ಮಳೆಗಾಲದಲ್ಲಿ ಎದುರಾಗ ಬಹುದಾದ ಭೀಕರ ಸನ್ನಿವೇಶದ ಮುನ್ಸೂಚನೆಯನ್ನು ನೀಡಿವೆ. ನಗರದಲ್ಲಿ ಪ್ರವಾಹದಿಂದ ಉಂಟಾಗುವ ಹಾನಿಯನ್ನು ಅಂದಾಜು ಮಾಡುವುದು ಕಷ್ಟ. ಜಕ್ಕೂರಿನಲ್ಲಿರುವ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮೂರು ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಮಹತ್ತರ ವೈಜ್ಞಾನಿಕ ದಾಖಲೆಗಳು ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳು 2021ರ ನವೆಂಬರ್‌ನಲ್ಲಿ ಉಂಟಾದ ಪ್ರವಾಹದಿಂದ ನೀರುಪಾಲಾಗಿ, ಬೆಲೆ ಕಟ್ಟಲಾರದಷ್ಟು ನಷ್ಟ ಉಂಟಾಗಿತ್ತು. ಆ ಸಂದರ್ಭದಲ್ಲಿ, ಪ್ರವಾಹ ತಡೆಯಲು ರಾಜಕಾಲುವೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಭರವಸೆಯನ್ನುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು. 60 ಕಿ.ಮೀ. ಉದ್ದದ ಪ್ರಥಮ ಹಂತದ ರಾಜಕಾಲುವೆಗಳು ಹಾಗೂ97 ಕಿ.ಮೀ. ಉದ್ದದ ದ್ವಿತೀಯ ಹಂತದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಒಟ್ಟು 292 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಬಿಬಿಎಂಪಿ ಸಿದ್ಧಪಡಿಸಿತ್ತು. ಆದರೆ, ₹1,560 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿಗಳು ಈಗಲೂ ಕಾಗದದಲ್ಲೇ ಉಳಿದಿವೆ.

ADVERTISEMENT

ಕಳೆದ ಸಾಲಿನಲ್ಲಿ ಮಳೆಗಾಲಕ್ಕೆ ಮುನ್ನ ರಸ್ತೆಗುಂಡಿಗಳನ್ನು ದುರಸ್ತಿಪಡಿಸದ ಕಾರಣ ನಿವಾಸಿಗಳು ವರ್ಷದುದ್ದಕ್ಕೂ ಸಮಸ್ಯೆ ಎದುರಿಸಬೇಕಾಯಿತು. ರಸ್ತೆಗುಂಡಿಗಳಿಂದಾಗಿ 2021–22ನೇ ಸಾಲಿನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದರು. ಈ ಸಾವುಗಳಿಂದಲೂ ಬಿಬಿಎಂಪಿ ಪಾಠ ಕಲಿತಂತಿಲ್ಲ. ಮುಖ್ಯಮಂತ್ರಿಯವರೇ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ನಗರದ ಅನೇಕ ಕಡೆ ಮುಖ್ಯರಸ್ತೆಗಳ ಗುಂಡಿಗಳನ್ನೇನೋ ಮುಚ್ಚಲಾಗಿದೆ. ಆದರೆ, ವಾರ್ಡ್‌ ಮಟ್ಟದ ರಸ್ತೆಗಳ ಸ್ಥಿತಿ ಮತ್ತೊಂದು ಮಳೆಗಾಲ ಸಮೀಪಿಸಿದರೂ ಸುಧಾರಿಸಿಲ್ಲ ಎಂಬುದು ವಿಪರ್ಯಾಸ. ಒಳ ರಸ್ತೆಗಳಲ್ಲಿ ಈಗಲೂ ಬಾಯ್ದೆರೆದುಕೊಂಡಿರುವ ಗುಂಡಿಗಳು ಮೃತ್ಯುಕೂಪಗಳಂತೆ ಕಾಣಿಸುತ್ತಿವೆ. ಮಳೆ ಬಂದಾಗ ಚರಂಡಿ ಹೂಳೆತ್ತುವುದು, ಅಪಾಯಕಾರಿ ಮರಗಳ ಕೊಂಬೆ ಕತ್ತರಿಸುವುದು, ಮರ ಬಿದ್ದರೆ ತಕ್ಷಣ ಅದನ್ನು ತೆರವುಗೊಳಿಸುವುದಷ್ಟೇ ತನ್ನ ಜವಾಬ್ದಾರಿ ಎಂದು ಬಿಬಿಎಂಪಿ ಭಾವಿಸಿದಂತಿದೆ. ಬಿಬಿಎಂಪಿ ಅಧಿಕಾರಿಗಳು ನಡೆಸುವ ಮಳೆಗಾಲದ ಪೂರ್ವಸಿದ್ಧತೆ ಸಭೆಗಳಲ್ಲಿ ಈ ವಿಚಾರಗಳಷ್ಟೇ ಚರ್ಚೆಯಾಗುತ್ತಿವೆ. ದಶಕದಿಂದ ಈಚೆಗೆ ಪ್ರತೀ ಮಳೆಗಾಲದಲ್ಲಿ ಪ್ರವಾಹಗಳು ಮರುಕಳಿಸಿದರೂ ಅವನ್ನು ಶಾಶ್ವತ ವಾಗಿ ತಡೆಯುವ ಸಮಗ್ರ ಕಾರ್ಯಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತು, ಪ್ರವಾಹ ತಡೆಯಲು ಆಗಬೇಕಾದ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸ ಬೇಕು. ಮುಂಗಾರು ಆರಂಭಕ್ಕೆ ಮೊದಲೇ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು. ರಾಜಕಾಲುವೆಗಳು 630 ಕಡೆ ಒತ್ತುವರಿ ಆಗಿವೆ ಎಂದು ಬಿಬಿಎಂಪಿ ಗುರುತಿಸಿದೆ. ಅವುಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.