ADVERTISEMENT

ಸಂಪಾದಕೀಯ: ಆರ್‌ಬಿಐನಿಂದ ರೆಪೊ ದರ ಹೆಚ್ಚಳ ಅನಿವಾರ್ಯವಾಗಿತ್ತು, ತಡವಾಯಿತು

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:30 IST
Last Updated 5 ಮೇ 2022, 19:30 IST
Editorial
Editorial   

ಚಿಲ್ಲರೆ ಹಣದುಬ್ಬರ ಪ್ರಮಾಣವು ದೇಶದಲ್ಲಿ ಜನವರಿಯ ನಂತರದಲ್ಲಿ ಮಿತಿಯನ್ನು ಮೀರಿ ನಿಂತಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಹಣದುಬ್ಬರವು ಕಡಿಮೆ ಆಗಿಯೇ ಇಲ್ಲ. ಅದು ಪ್ರತಿ ತಿಂಗಳೂ ಅಷ್ಟಿಷ್ಟು ಜಾಸ್ತಿ ಆಗುತ್ತಿದೆ. ಮಿತಿಯನ್ನು ಮೀರಿರುವ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ತಾನು ಬ್ಯಾಂಕ್‌ಗಳಿಗೆ ಸಾಲ ನೀಡುವುದಕ್ಕೆ ವಿಧಿಸುವ ಬಡ್ಡಿ ದರವನ್ನು (ರೆ‍ಪೊ ದರವನ್ನು) ಶೇಕಡ 0.40ರಷ್ಟು ಹೆಚ್ಚಳ ಮಾಡಿದೆ. ಈ ಹೆಚ್ಚಳವು ಈಗಿನ ಸಂದರ್ಭದಲ್ಲಿ ‘ಸ್ವಾಗತಾರ್ಹ’ ಎಂದು ಹೇಳುವುದಕ್ಕಿಂತ, ‘ಇದು ಅನಿವಾರ್ಯವಾಗಿತ್ತು’ ಎಂದೇ ಹೇಳಬೇಕಾಗುತ್ತದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟವಾದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವು ಶೇ 6ಕ್ಕಿಂತ ಕಡಿಮೆ ಇದ್ದಾಗ, ಉಳಿತಾಯಕ್ಕೆ ಹೆಚ್ಚಿನ ಅರ್ಥ ಇಲ್ಲ. ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಆರ್‌ಬಿಐ ಈ ವಾಸ್ತವವನ್ನು ಒಪ್ಪಿಕೊಂಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮಾತಿನಲ್ಲಿ ಇದು ವ್ಯಕ್ತವಾಗಿದೆ. ‘ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಉಳಿದುಕೊಂಡರೆ ಉಳಿತಾಯಕ್ಕೆ, ಹೂಡಿಕೆಗಳಿಗೆ, ಸ್ಪರ್ಧಾತ್ಮಕತೆಗೆ ಧಕ್ಕೆಯಾಗುತ್ತದೆ’ ಎಂದು ದಾಸ್ ಹೇಳಿದ್ದಾರೆ. ಹಣದುಬ್ಬರವು ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ, ಬಡ ವರ್ಗದ ಜನರ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂದೂ ಅವರು ಹೇಳಿದ್ದಾರೆ. ಅವರ ಮಾತಿನಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಆದರೆ, ಹಣದುಬ್ಬರದ ಅಪಾಯವನ್ನು ಆರ್‌ಬಿಐ ದೀರ್ಘ ಅವಧಿಗೆ ನಿರ್ಲಕ್ಷಿಸಿತೇ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು.

ರೆಪೊ ದರವನ್ನು ತೀರ್ಮಾನಿಸುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಜೂನ್‌ನಲ್ಲಿ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಬಹುತೇಕ ಅರ್ಥಶಾಸ್ತ್ರಜ್ಞರಲ್ಲಿ ಇತ್ತು. ಆ ಸೂಚನೆಯು ಏಪ್ರಿಲ್‌ನಲ್ಲಿ ನಡೆದ ಎಂಪಿಸಿ ಸಭೆಯ ನಂತರ ಸಿಕ್ಕಿತ್ತು ಸಹ. ಆದರೆ, ಅದು ಮಧ್ಯಂತರದಲ್ಲಿಯೇ ದರ ಹೆಚ್ಚಳ ಮಾಡಿರುವುದು ಅನಿರೀಕ್ಷಿತ. ಹೀಗಾಗಿಯೇ, ರೆಪೊ ದರ ಹೆಚ್ಚಳದ ಸುದ್ದಿಯನ್ನು ಕೇಳಿದ ನಂತರದಲ್ಲಿ ಬಂಡವಾಳ ಮಾರುಕಟ್ಟೆ ಸೂಚ್ಯಂಕಗಳು ಪತನ ಕಂಡವು. ಹೂಡಿಕೆದಾರರ ಸಂಪತ್ತು ₹ 6.27 ಲಕ್ಷ ಕೋಟಿಯಷ್ಟು ಕರಗಿತು. ಬಡ್ಡಿ ದರ ಹೆಚ್ಚಳವು ಬಂಡವಾಳ ಮಾರುಕಟ್ಟೆಗಳ ‍ಪಾಲಿಗೆ ತೀರಾ ಒಳ್ಳೆಯ ಸುದ್ದಿಯಂತೂ ಅಲ್ಲ. ಈಗ ಅಮೆರಿಕದ ಫೆಡರಲ್ ರಿಸರ್ವ್‌ ಸಹ ಬಡ್ಡಿ ದರವನ್ನು ಶೇ 0.50ರಷ್ಟು ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ದೇಶದ ಬಂಡವಾಳ ಮಾರುಕಟ್ಟೆಗಳಿಂದ ಇನ್ನಷ್ಟು ಹಣ ಹೊರಹೋಗುವ ಸಾಧ್ಯತೆಗಳು ಇವೆ. ಬಡ್ಡಿ ದರ ಹೆಚ್ಚಳದ ಪರಿಣಾಮವಾಗಿ, ರಿಯಲ್ ಎಸ್ಟೇಟ್ ಮತ್ತು ವಾಹನ ಉದ್ಯಮ ಹಿನ್ನಡೆ ಕಾಣಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಸಾಲದ ಮೇಲಿನ ಬಡ್ಡಿ ಹೆಚ್ಚಳದಿಂದಾಗಿ ಕಾರ್ಪೊರೇಟ್ ವಲಯದ ವೆಚ್ಚಗಳಲ್ಲಿ ಏರಿಕೆ ಆಗಬಹುದು. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ವಲಯದ ಉದ್ದಿಮೆಗಳಿಗೆ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ. ಈ ವಲಯದ ಉದ್ದಿಮೆಗಳು ತಮ್ಮ ಬಂಡವಾಳದ ಅಗತ್ಯಗಳಿಗೆ ಬ್ಯಾಂಕ್‌ ಮೊರೆ ಹೋಗುವುದು ಸಹಜ. ಅವು ಈಗ ಹೆಚ್ಚಿನ ಮೊತ್ತವನ್ನು ಬಡ್ಡಿ ಪಾವತಿಗೆ ಮೀಸಲಿಡಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ವ್ಯವಸ್ಥೆಯು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕು.

ಈಗಿನ ರೆ‍ಪೊ ದರ ಹೆಚ್ಚಳದ ಪರಿಣಾಮವಾಗಿ ಹಣದುಬ್ಬರ ದರವು ತಕ್ಷಣಕ್ಕೆ ಕಡಿಮೆ ಆಗುವ ಸಾಧ್ಯತೆಯೇನೂ ಇಲ್ಲ. ಏಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರವು ಮಾರ್ಚ್‌ ತಿಂಗಳ ಮಟ್ಟಕ್ಕಿಂತ ಹೆಚ್ಚಾಗಿರುವ ಅಂದಾಜು ಇದೆ. ಈಗ ಕಂಡುಬಂದಿರುವ ಹಣದುಬ್ಬರ ಹೆಚ್ಚಳಕ್ಕೆ ಕಾರಣ ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಎಂಬ ಅಭಿಪ್ರಾಯ ಇದೆ. ಹೀಗಾಗಿ, ಉಕ್ರೇನ್–ರಷ್ಯಾ ಯುದ್ಧ ಕೊನೆಗೊಳ್ಳದೆ, ಕಚ್ಚಾ ತೈಲದ ಬೆಲೆಯು ಕಡಿಮೆ ಆಗದೆ ಈಗಿನ ಹಣದುಬ್ಬರ ಪ್ರಮಾಣವನ್ನು ರೆಪೊ ದರ ಏರಿಕೆ ಮಾತ್ರದಿಂದ ಎಷ್ಟರಮಟ್ಟಿಗೆ ನಿಯಂತ್ರಿಸಬಹುದು ಎಂಬುದು ಅಂದಾಜಿಗೆ ನಿಲುಕುವುದು ಕಷ್ಟ. ಹಣದುಬ್ಬರ ನಿಯಂತ್ರಣದ ಹೊಣೆ ಇರುವುದು ಆರ್‌ಬಿಐ ಮೇಲೆ ಎನ್ನುವುದು ಹೌದಾದರೂ ಸರ್ಕಾರಗಳ ನೆರವು ಇಲ್ಲದೆ ಅದನ್ನು ನಿಭಾಯಿಸುವುದು ಆಗದ ಕೆಲಸ. ಹಣದುಬ್ಬರಕ್ಕೆ ಕಾರಣವಾಗಿರುವ ತೈಲೋತ್ಪನ್ನಗಳ ಬೆಲೆ ಇಳಿಸಲು, ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಲು ಸರ್ಕಾರಗಳು ತ್ವರಿತವಾಗಿ ಕ್ರಮ ಕೈಗೊಳ್ಳದೆ ಇದ್ದರೆ, ಆರ್‌ಬಿಐ ಕ್ರಮದಿಂದ ಹೆಚ್ಚಿನ ಪ್ರಯೋಜನ ಆಗದಿರಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.