ಕ್ಯಾನ್ಸರ್‌ಬಾಧಿತ ಮಕ್ಕಳಿಗಾಗಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಮೀಪದಲ್ಲಿ ವಸತಿಸಹಿತ ಶಾಲೆ ಸ್ಥಾಪಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವು ಎಲ್ಲರನ್ನೂ ಒಳಗೊಳ್ಳಬೇಕು ಎಂಬ ದಿಸೆಯಲ್ಲಿ ಇದೊಂದು ಶ್ಲಾಘನೆಗೆ ಅರ್ಹವಾದ ಕ್ರಮ. ರಾಜ್ಯದಲ್ಲಿ ಶಾಲೆಗೆ ಹೋಗುವ ವಯಸ್ಸಿನ 3,500 ಮಕ್ಕಳು ಕ್ಯಾನ್ಸರ್ ಬಾಧಿತರಾಗಿದ್ದಾರೆ. ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ವಸತಿಸಹಿತ ಶಾಲೆಯಲ್ಲಿ ಒಮ್ಮೆಗೆ 1,500 ಮಕ್ಕಳಿಗೆ ಅವಕಾಶ ಇದೆ. ಇಲ್ಲಿ ಉಚಿತ ವಸತಿ, ಪೌಷ್ಟಿಕ ಆಹಾರ, ವಿಶೇಷ ಆರೈಕೆ ಮತ್ತು ಅನಿರ್ಬಂಧಿತ ಕಲಿಕೆಗೆ ಅವಕಾಶ ಇದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ.
ಎಳೆ ವಯಸ್ಸಿನ ಮಕ್ಕಳು ಆರೋಗ್ಯ ಮತ್ತು ಭವಿಷ್ಯ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಸಂದಿಗ್ಧಕ್ಕೆ ಒಳಗಾಗದಂತೆ ಈ ಯೋಜನೆಯು ಖಾತರಿ ನೀಡುತ್ತದೆ. ಈ ಮಾದರಿಯಲ್ಲಿ ಹಲವು ಅನುಕೂಲಗಳು ಇವೆ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತದೆ. ನಿರಂತರ ವೈದ್ಯಕೀಯ ಆರೈಕೆಯ ಜೊತೆಗೆ ವ್ಯವಸ್ಥಿತ ಶಿಕ್ಷಣವನ್ನೂ ಒಂದೇ ಕಡೆಯಲ್ಲಿ ನೀಡುವ ಮೂಲಕ ಕ್ಯಾನ್ಸರ್ ಇರುವ ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸುವುದು ಸಾಧ್ಯವಾಗುತ್ತದೆ. ಈ ಸಮನ್ವಯದಿಂದಾಗಿ ಮಕ್ಕಳ ಜೀವನ ಗುಣಮಟ್ಟವು ಗಮನಾರ್ಹ ಪ್ರಮಾಣದಲ್ಲಿ ಉತ್ತಮಗೊಳ್ಳುತ್ತದೆ. ಕಿದ್ವಾಯಿ ಸಂಸ್ಥೆಯ ಸಮೀಪದಲ್ಲಿಯೇ ಶಾಲೆಯು ಸ್ಥಾಪನೆ ಆಗಲಿರುವುದರಿಂದ ಕ್ಯಾನ್ಸರ್ ತಜ್ಞರು ತಕ್ಷಣವೇ ಲಭ್ಯರಾಗು ತ್ತಾರೆ. ಇದರಿಂದಾಗಿ ಕುಟುಂಬದ ಮೇಲಿನ ಹೊರೆ ತಗ್ಗುತ್ತದೆ. ಇದೂ ಅಲ್ಲದೆ, ತಮ್ಮಂತಹುದೇ ಸವಾಲು ಎದುರಿಸುತ್ತಿರುವ ಸಹವರ್ತಿಗಳ ಜೊತೆಗಿನ ಬದುಕು ಮಕ್ಕಳಲ್ಲಿ ಭಾವನಾತ್ಮಕ ಒಗ್ಗಟ್ಟು, ಪರಸ್ಪರ ಗ್ರಹಿಕೆ ಮತ್ತು ಸಹಪಯಣದ ಭಾವವನ್ನು ಮೂಡಿಸುತ್ತದೆ. ಆಗಾಗ ಆಸ್ಪತ್ರೆಗೆ ಹೋಗುವುದು ಮತ್ತು ಸುದೀರ್ಘ ಅವಧಿಗೆ ಶಾಲೆಯಿಂದ ಹೊರಗೆ ಉಳಿಯುವುದು ತಪ್ಪಿ ಕಲಿಕೆಯು ನಿರಂತರವಾಗುತ್ತದೆ.
ಎಷ್ಟೇ ಸದುದ್ದೇಶ ಇದ್ದರೂ ಪ್ರಸ್ತಾವ ವನ್ನು ಸಮಗ್ರವಾದ ಪರಿಶೀಲನೆಗೆ ಒಳಪಡಿಸಬೇಕು. ವಸತಿ ಶಾಲೆಯಲ್ಲಿ ಇರುವುದರಿಂದ ಮಕ್ಕಳಲ್ಲಿ ಒಬ್ಬಂಟಿ ಭಾವ ಮೂಡಬಹುದು ಎಂಬುದು ತಕ್ಷಣದ ಕಳವಳವಾಗಿದೆ. ವಸತಿಯುತ ಶಾಲೆಯ ಪ್ರತ್ಯೇಕ ವಾತಾವರಣಕ್ಕೆ ಸೀಮಿತವಾಗುವ ಮಕ್ಕಳಿಗೆ ಶಾಲೆಯ ಹೊರಗಿನ ಸಹವರ್ತಿಗಳ ಜೊತೆಗೆ ಸಂವಹನ ಇಲ್ಲವಾಗುತ್ತದೆ. ಇದರಿಂದಾಗಿ ಅವರಿಗೆ ಸಾಮಾಜಿಕ ಒಡನಾಟ ತಪ್ಪಿಹೋಗಬಹುದು. ಕ್ಯಾನ್ಸರ್‌ನ ವೇದನೆಯಿಂದ ಬಳಲುತ್ತಿರುವ ಮಕ್ಕಳು ಕುಟುಂಬದಿಂದಲೂ ಬೇರ್ಪಟ್ಟು ಭಾವನಾತ್ಮಕ ಒತ್ತಡಕ್ಕೆ ಒಳಗಾಗಬಹುದು. ಸಣ್ಣ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಸರ್ಕಾರಿ ವ್ಯವಸ್ಥೆಯಲ್ಲಿನ ಶಿಕ್ಷಣದ ಗುಣಮಟ್ಟವೂ ಕಳವಳದ ವಿಚಾರವೇ ಆಗಿದೆ. ಈ ಬಾರಿ ಸರ್ಕಾರಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ 62.7ರಷ್ಟು ಮಾತ್ರ ಇದೆ. ಹಾಗಾಗಿ, ವಸತಿಯುತ ಶಾಲೆಯೊಂದನ್ನು ಸ್ಥಾಪಿಸುವುದರಿಂದ ಮಾತ್ರ ಹೆಚ್ಚಿನದನ್ನು ಸಾಧಿಸಿದಂತಾಗದು. ಸ್ಪರ್ಧಾತ್ಮಕವಾದ ಶಿಕ್ಷಣಕ್ಕೆ ಈ ಮಕ್ಕಳು ಅರ್ಹರು ಮತ್ತು ಅದು ಅವರಿಗೆ ಸಿಗಲೇಬೇಕು. ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಕ್ಷಮತೆ ಈ ಎರಡರಲ್ಲೂ ಅತ್ಯುತ್ತಮ ಸಾಧನೆ ದಾಖಲಿಸುವ ಮೂಲಕ ಇಂತಹ ಮಾದರಿ ಶಾಲೆಯ ಸ್ಥಾಪನೆಯು ಸಮರ್ಥನೀಯ ಎನಿಸಿಕೊಳ್ಳಬೇಕು. ಇಂತಹ ಕೇಂದ್ರವೊಂದನ್ನು ನಡೆಸಿಕೊಂಡು ಹೋಗಲು ಗಣನೀಯ ಮೊತ್ತದ ನಿಧಿಯೂ ಬೇಕಾಗುತ್ತದೆ. ಹಣಕಾಸಿನ ಕೊರತೆ ಆಗುವುದಿಲ್ಲ ಎಂಬುದನ್ನು ಸರ್ಕಾರ ಖಾತರಿಪಡಿಸಬೇಕು.
ವಸತಿಸಹಿತ ಶಾಲೆಯ ಸ್ಥಾಪನೆ ಉದ್ದೇಶವು ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಹೆಜ್ಜೆ. ಹಾಗಿದ್ದರೂ ಇತರ ಅಂಶಗಳ ಕುರಿತು ಕೂಡ ಸರ್ಕಾರ ಗಮನ ಹರಿಸಬೇಕು. ಆರೋಗ್ಯ ಸೇವೆಗಳ ಅತಿಯಾದ ಕೇಂದ್ರೀಕರಣದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಅತಿಯಾದ ಹೊರೆಯಿಂದ ಬಳಲುತ್ತಿದೆ. ಹಾಗಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರವು ಚಿಂತನೆ ನಡೆಸಬೇಕು. ಇದರಿಂದ ಕ್ಯಾನ್ಸರ್ ಬಾಧಿತರಾದ ಎಲ್ಲ ರೋಗಿಗಳಿಗೂ ನೆರವಾಗುತ್ತದೆ. ಜೊತೆಗೆ, ಮಹತ್ವದ ಚಿಕಿತ್ಸೆಗಳನ್ನು ಪಡೆಯುವಾಗ ಮಕ್ಕಳು ಹೆತ್ತವರ ಜೊತೆಯಲ್ಲಿಯೇ ಇರುವುದು ಸಾಧ್ಯವಾಗುತ್ತದೆ. ಕುಟುಂಬವು ಅನಗತ್ಯವಾಗಿ ತೊಂದರೆ ಎದುರಿಸುವುದು ತಪ್ಪುತ್ತದೆ. ಸರ್ಕಾರವು ಇಂತಹ ಅತ್ಯಗತ್ಯ ಕ್ರಮಗಳನ್ನು ದಕ್ಷವಾಗಿ ಜಾರಿಗೆ ತರುವುದರ ಮೂಲಕ ಕ್ಯಾನ್ಸರ್‌ಬಾಧಿತ ಮಕ್ಕಳ ಭವಿಷ್ಯವನ್ನು ಉಜ್ವಲವೂ, ಆರೋಗ್ಯಪೂರ್ಣವೂ ಆಗಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.