ADVERTISEMENT

ಉಪಚುನಾವಣೆ ಫಲಿತಾಂಶ ಮತದಾರರು ನೀಡಿದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:26 IST
Last Updated 7 ನವೆಂಬರ್ 2018, 20:26 IST
ಉಪಚುನಾವಣೆ ಫಲಿತಾಂಶ
ಉಪಚುನಾವಣೆ ಫಲಿತಾಂಶ   

ರಾಜ್ಯದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶದಿಂದ ರಾಜಕೀಯ ಪಕ್ಷಗಳು ಕಲಿತುಕೊಳ್ಳಬೇಕಾದ ಪಾಠಗಳು ಬಹಳಷ್ಟಿವೆ. ಈ ಐದು ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವೊಂದನ್ನು ಬಿಟ್ಟು ಉಳಿದ ನಾಲ್ಕೂ ಕ್ಷೇತ್ರಗಳನ್ನು ಆಳುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಗೆದ್ದುಕೊಂಡಿದೆ.

ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದರೆ, ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದರೂ ಅದಕ್ಕಾಗಿ ಪಕ್ಷದ ವರಿಷ್ಠ ಬಿ.ಎಸ್‌.ಯಡಿಯೂರಪ್ಪನವರು ಸಾಕಷ್ಟು ಬೆವರು ಹರಿಸಬೇಕಾಗಿ ಬಂತು. ಅಲ್ಲಿ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಲಾಗದೆ ಕೊನೇಕ್ಷಣದಲ್ಲಿ ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು.

ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಬಿಜೆಪಿ ಗಳಿಸಿದ ಪ್ರತಿಯೊಂದು ಮತಕ್ಕೂ ತೀವ್ರ ಪ್ರತಿಸ್ಪರ್ಧೆಯನ್ನೇ ನೀಡಿದ್ದಾರೆ. ಕಳೆದ 14 ವರ್ಷಗಳಿಂದ ಪಕ್ಷವು ರಾಜಕೀಯ ಪಾರಮ್ಯ ಮೆರೆದಿದ್ದ ಬಳ್ಳಾರಿಯ ಸೋಲಂತೂ ಬಿಜೆಪಿಗೆ ಬಲವಾದ ಹೊಡೆತವನ್ನೇ ನೀಡಿದೆ. ಆಳುವ ಪಕ್ಷದ ಆಡಳಿತ ಯಂತ್ರದ ದುರುಪಯೋಗವೇ ತಮ್ಮ ಅಭ್ಯರ್ಥಿ ಸೋಲಿಗೆ ಕಾರಣ ಎಂದು ಬಿಜೆಪಿ ಸಬೂಬು ನೀಡಿದ್ದರೂ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯಿಂದ ತನ್ನ ಅಸ್ತಿತ್ವ ಅಲುಗಾಡುತ್ತಿದೆ ಎನ್ನುವ ಸತ್ಯವನ್ನು ಬಿಜೆಪಿ ಮರೆತುಬಿಡುವಂತಿಲ್ಲ.

ADVERTISEMENT

ಈ ಮಿನಿ ಮತ ಸಮರದ ಫಲಿತಾಂಶವು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿ ಎಂದು ಪರಿಗಣಿಸುವುದು ಅವಸರದ ನಿರ್ಧಾರ ಎನ್ನಿಸಬಹುದು. ಆದರೆ ಬಿಜೆಪಿಗೆ ಮತದಾರರು ನೀಡಿರುವ ಸ್ಪಷ್ಟ ಎಚ್ಚರಿಕೆಯಿದು ಎನ್ನುವುದಂತೂ ನಿಜ.

ವಿಧಾನಸಭಾ ಚುನಾವಣೆಯ ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದನ್ನು ಬಿಜೆಪಿ ನಾಯಕರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಾಸಕರನ್ನು ಆಮಿಷಗಳ ಮೂಲಕ ಸೆಳೆದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪದೇ ಪದೇ ಯತ್ನಿಸುತ್ತಿರುವ ಬಿಜೆಪಿಯ ತಂತ್ರಗಾರಿಕೆಗೆ ತನ್ನ ಸಮ್ಮತಿಯಿಲ್ಲ ಎನ್ನುವುದನ್ನು ಮತದಾರ ಈ ಫಲಿತಾಂಶದ ಮೂಲಕ ಸ್ಪಷ್ಟವಾಗಿಯೇ ಹೇಳಿದ್ದಾನೆ. ಈ ಗೋಡೆ ಮೇಲಿನ ಬರಹವನ್ನು ಓದಿ, ತನ್ನ ರಾಜಕೀಯ ನಡತೆಯನ್ನು ತಿದ್ದಿಕೊಳ್ಳದಿದ್ದರೆ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಮುಖಭಂಗ ಅನುಭವಿಸುವ ಸಾಧ್ಯತೆ ಇದೆ.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಅದರಷ್ಟಕ್ಕೆ ಕೆಲಸ ಮಾಡಲು ಬಿಟ್ಟು, ರಚನಾತ್ಮಕ ವಿರೋಧಪಕ್ಷವಾಗಿ ಬಿಜೆಪಿ ಇನ್ನಾದರೂ ಕಾರ್ಯನಿರ್ವಹಿಸಲಿ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಆಂತರಿಕ ವೈರುಧ್ಯಗಳ ಲಾಭ ಪಡೆಯುವುದು ತಪ್ಪಲ್ಲ. ಆದರೆ ವಾಮಮಾರ್ಗದ ಮೂಲಕ ಸರ್ಕಾರ ಬೀಳಿಸಲು ಯತ್ನಿಸುವುದು ಖಂಡಿತಾ ಸರಿಯಲ್ಲ. ಆಳುವ ಪಕ್ಷಕ್ಕಿಂತ ತಾನು ಹೇಗೆ ಭಿನ್ನ ಎನ್ನುವುದನ್ನು ಮತದಾರರಿಗೆ ತಿಳಿಸಿಕೊಡಲು ಬಿಜೆಪಿಗೆ ಹಲವು ನೇರ ಮಾರ್ಗಗಳಿವೆ. ಆ ಮಾರ್ಗಗಳನ್ನು ಅನುಸರಿಸಿದರೆ ಪಕ್ಷಕ್ಕೂ ಕ್ಷೇಮ, ಪ್ರಜಾಪ್ರಭುತ್ವದ ವ್ಯವಸ್ಥೆಗೂ ಒಳ್ಳೆಯದು.

ಉಪಚುನಾವಣೆಯ ಫಲಿತಾಂಶದಿಂದ ಮೈತ್ರಿ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್ ಕೂಡಾ ಕೆಲವು ಪಾಠಗಳನ್ನು ಕಲಿತುಕೊಳ್ಳಬೇಕಿದೆ. ಮೈತ್ರಿ ಸರ್ಕಾರವನ್ನು ಯಾವುದೇ ಗೊಂದಲಗಳಿಲ್ಲದೆ, ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿ ನಡೆಸಿಕೊಂಡು ಹೋದರೆ, ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಆಶೀರ್ವಾದ ನೀಡಬಹುದು. ಸಂಪುಟ ಪುನರ್‌ರಚನೆಯನ್ನು ಪದೇ ಪದೇ ಮುಂದೂಡುವುದು, ಬಹಿರಂಗವಾಗಿ ಪರಸ್ಪರ ದೋಷಾರೋಪ ನಡೆಸುವುದು, ಮುಖಂಡರು ಸಾರ್ವಜನಿಕವಾಗಿ ಕಣ್ಣೀರು ಹಾಕುವುದು ಮುಂತಾದವು ಸರ್ಕಾರದ ಕಾರ್ಯವೈಖರಿಯಲ್ಲಿ ಗೊಂದಲಗಳನ್ನು ಹೆಚ್ಚಿಸಬಹುದೇ ಹೊರತು, ರಾಜಕೀಯ ಲಾಭವನ್ನೇನೂ ತಂದುಕೊಡುವುದಿಲ್ಲ ಎನ್ನುವುದನ್ನು ಜೆಡಿಎಸ್‌– ಕಾಂಗ್ರೆಸ್ ಮುಖಂಡರು ಶೀಘ್ರ ಅರಿತುಕೊಳ್ಳಲಿ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಹಿಂಜರಿತ ಮುಂತಾಗಿ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಪರಿಹಾರಕ್ಕೆ ಸಮರ್ಥ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಇನ್ನಾದರೂ ಆದ್ಯತೆ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.