ADVERTISEMENT

ಸಂಪಾದಕೀಯ | ಮನೆ ಬಾಗಿಲಿಗೆ ದಾಖಲೆ: ಕಂದಾಯ ಇಲಾಖೆ ಕಚೇರಿಗೆ ಅಲೆದಾಟ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 19:45 IST
Last Updated 13 ಮಾರ್ಚ್ 2022, 19:45 IST
.
.   

ಕಂದಾಯ ದಾಖಲೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಕೆಲವುರೈತರಿಗೆ ಅರಿವು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಳ್ಳುವ ಸರ್ಕಾರಿ ಅಧಿಕಾರಿಗಳು ದಾಖಲೆಗಳನ್ನು ಒದಗಿಸಲು ಸತಾಯಿಸುತ್ತಾರೆ. ಅಗತ್ಯ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗುವಂತಹ ಸ್ಥಿತಿ ರಾಜ್ಯದಲ್ಲಿದೆ. ಇಂತಹ ಅಲೆದಾಟವನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪಹಣಿ ಪತ್ರ, ಅಟ್ಲಾಸ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಇದು ಸ್ವಾಗತಾರ್ಹ. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’, ‘ಮನೆ ಬಾಗಿಲಿಗೆ ಪಿಂಚಣಿ’ಯಂತಹ ಕಾರ್ಯಕ್ರಮಗಳನ್ನು ಈ ಹಿಂದೆಯೇ ಕಂದಾಯ ಇಲಾಖೆ ಆರಂಭಿಸಿತ್ತು. ಇದೀಗ ಜನಸ್ನೇಹಿ ಎನ್ನಬಹುದಾದ ಮತ್ತೊಂದು ಹೆಜ್ಜೆ ಇಟ್ಟಿದೆ. 62.85 ಲಕ್ಷ ರೈತರಿಗೆ ಐದು ಕೋಟಿ ದಾಖಲೆಗಳನ್ನು ಅವರ ಮನೆ ಬಾಗಿಲಿಗೇ ಮುಟ್ಟಿಸುವುದು ಇದರ ಉದ್ದೇಶ.

ಕುಟುಂಬಗಳಿಗೆಸರ್ಕಾರಿ ನೌಕರರೇ ದಾಖಲೆಗಳನ್ನು ತಲುಪಿಸಲಿದ್ದಾರೆ. ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಇಲಾಖೆಯ ಬಗ್ಗೆ ಜನರಿಗೆ ಒಂದಿಷ್ಟು ಭರವಸೆ ಮೂಡುವುದರಲ್ಲಿ ಸಂದೇಹವಿಲ್ಲ. ಆದರೆ, ಇದು ಆರಂಭಶೂರತ್ವ ಆಗಬಾರದು. ಯಾವುದೇ ಲೋಪ ಆಗದಂತೆ ಯೋಜನೆಯನ್ನು ಜಾರಿಗೊಳಿಸುವ ಹೊಣೆ ಇಲಾಖೆಯ ಮೇಲಿದೆ.ಕಂದಾಯ ಇಲಾಖೆ ಈ ಹಿಂದೆ ಕಂದಾಯ ಅದಾಲತ್‌ಗಳನ್ನು ನಡೆಸಿತ್ತು. ಅಧಿಕಾರಿಗಳ ನಿರಾಸಕ್ತಿಯಿಂದ ಈ ಕಾರ್ಯಕ್ರಮ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಪೋಡಿಮುಕ್ತ ಗ್ರಾಮ ಅಭಿಯಾನವು ಬೆಂಗಳೂರಿನಲ್ಲಿ ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿ ನಡೆಯಿತು. ಆದರೆ ಗ್ರಾಮೀಣ ಪ್ರದೇಶದಲ್ಲಿ ಯಶಸ್ಸು ಕಾಣಲಿಲ್ಲ. ಈ ಅಭಿಯಾನವನ್ನು ರಾಜ್ಯದಾದ್ಯಂತ ಸಮರ್ಪಕವಾಗಿ ಜಾರಿಗೊಳಿಸಿದ್ದರೆ ಜನರಿಗೆ ಹೆಚ್ಚಿನ ಅನುಕೂಲ ಆಗುತ್ತಿತ್ತು. ಕಂದಾಯ ಅದಾಲತ್‌, ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ ವೇಗ ತುಂಬಿದರೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ತಕ್ಕಮಟ್ಟಿಗೆ ಪರಿಹಾರ ಆಗಲಿವೆ. ಜನರು ಕಚೇರಿಗಳಿಗೆ ನಿತ್ಯ ಅಲೆದಾಡುವುದು ತಪ್ಪುತ್ತದೆ.

ಜನಕಲ್ಯಾಣದ ಉದ್ದೇಶದಿಂದ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಆರಂಭದಲ್ಲಿ ಈ ಯೋಜನೆಗಳು ಸಾಂಗವಾಗಿ ನಡೆಯುತ್ತವೆ. ಬಳಿಕ ಅವು ಉತ್ಸಾಹ ಕಳೆದುಕೊಳ್ಳುತ್ತವೆ. ಅನುಷ್ಠಾನದ ಮೌಲ್ಯಮಾಪನ ನಡೆಯುವುದಿಲ್ಲ. ಕ್ರಮೇಣ ಇದ್ದೂ ಇಲ್ಲದಂತೆ ಆಗುತ್ತವೆ. ಇದಕ್ಕೆ ಉದಾಹರಣೆ ‘ಸಕಾಲ’ ಯೋಜನೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ 2011ರಲ್ಲಿ ‘ಸಕಾಲ’ ಯೋಜನೆಯನ್ನು ಬಹಳ ಉಮೇದಿನಿಂದ ಜಾರಿಗೆ ತರಲಾಯಿತು. 99 ಇಲಾಖೆಗಳ 1,115 ಸೇವೆಗಳು ಇದರ ವ್ಯಾಪ್ತಿಯಲ್ಲಿವೆ. ಜನನ–ಮರಣ ಪ್ರಮಾಣಪತ್ರವನ್ನು 3ರಿಂದ 7 ದಿನಗಳ ಒಳಗೆ, ಪರೀಕ್ಷೆ ಅಂಕಗಳ ಮರುಎಣಿಕೆ 15 ದಿನಗಳಲ್ಲಿ, ಜಾತಿ ಪ್ರಮಾಣಪತ್ರ 21 ದಿನಗಳ ಒಳಗೆ, ವಾಹನ ಚಾಲನಾ ಪರವಾನಗಿ 30 ದಿನಗಳಲ್ಲಿ ಕೊಡಬೇಕು. ಹೀಗೆ ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ಕಾಲಾವಧಿ ನಿಗದಿ ಮಾಡಲಾಗಿದೆ. ಇದೊಂದು ಕ್ರಾಂತಿಕಾರಕ ಯೋಜನೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಸಕಾಲ ಯೋಜನೆಯಡಿ ಸೇವೆ ಪಡೆಯಲು 4.17 ಲಕ್ಷ ಅರ್ಜಿಗಳು ಅವಧಿ ಮೀರಿ ಈಗ ಬಾಕಿ ಉಳಿದುಕೊಂಡಿವೆ. ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಯೂ ‘ಸಕಾಲ’ದ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಇದೆ.

ADVERTISEMENT

ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿ ವ್ಯಾಪಿಸಿದೆ. ಅಂತಹವುಗಳಲ್ಲಿ ಕಂದಾಯ ಇಲಾಖೆಯೂ ಒಂದು ಎಂಬ ಮಾತು ಇದೆ.ಸಾಮಾನ್ಯ ವ್ಯಕ್ತಿಯೊಬ್ಬ ಕಂದಾಯ ಇಲಾಖೆಯಲ್ಲಿ ಸಣ್ಣಪುಟ್ಟ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೆ ಅಲೆದಾಡಬೇಕಾಗಿದೆ. ಲಂಚ ನೀಡದೆ ಯಾವುದೇ ದಾಖಲೆ ಸಿಗುವುದಿಲ್ಲ ಎಂಬ ಸ್ಥಿತಿ ಇದೆ. ಜನರು ‘ತಬರ’ನಂತೆ ಅಲೆದಾಡಿದರೂ ನಿಷ್ಕರುಣಿ ಅಧಿಕಾರಿಗಳ ಮನ ಕರಗುವುದಿಲ್ಲ. ಅಧಿಕಾರಿಗಳ ಅಸಡ್ಡೆ, ಭ್ರಷ್ಟಾಚಾರ ಹಾಗೂ ದಲ್ಲಾಳಿಗಳ ಹಾವಳಿಯಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಅಂಟಿಕೊಂಡಿದೆ. ದಾಖಲೆಗಳನ್ನು ಪಡೆಯಲು ಜನರು ‍‍‍ಈ ಪರಿ ಪಡಿಪಾಟಲು ಪಡಬೇಕಾದ ಸ್ಥಿತಿ ಏಕೆ ಉಂಟಾಯಿತು ಎಂಬ ಬಗ್ಗೆಯೂ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧಿಕಾರಿಗಳ ಮನೋಭಾವ ಬದಲಾಗದ ಹೊರತು ವ್ಯವಸ್ಥೆಯಲ್ಲಿ ಸುಧಾರಣೆಯಾಗದು. ನೌಕರಶಾಹಿಯ ವಿಳಂಬ ಧೋರಣೆಗೆ ಕಡಿವಾಣ ಹಾಕಿ, ಕಾಲಮಿತಿಯಲ್ಲಿ ಅರ್ಜಿಗಳು ವಿಲೇವಾರಿ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಂತಹ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.