ADVERTISEMENT

ಸಂಪಾದಕೀಯ | ರಸ್ತೆ ಸುರಕ್ಷತೆ: ರಾಜಿ ಬೇಡ; ಜೀವದೊಂದಿಗೆ ಆಟ ಸಲ್ಲದು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 23:30 IST
Last Updated 31 ಡಿಸೆಂಬರ್ 2025, 23:30 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಡಿಸೆಂಬರ್‌ 25ರಂದು ಸಂಭವಿಸಿದ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿಯಾದ ದುರಂತ ಮತ್ತೊಂದು ಅಪಘಾತದ ಘಟನೆ ಮಾತ್ರವಲ್ಲ; ಅದು, ಸುರಕ್ಷತೆಯನ್ನು ಐಚ್ಛಿಕ ಎಂದಷ್ಟೇ ಭಾವಿಸುವ ಸಾರಿಗೆ ವ್ಯವಸ್ಥೆಯ ನಿರೀಕ್ಷಿತ ಫಲಶ್ರುತಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಸ್ಲೀಪರ್‌ ಬಸ್‌ ಹಾಗೂ ಕಂಟೇನರ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಕೆಲವೇ ನಿಮಿಷಗಳಲ್ಲಿ ಬಸ್‌ ಬೆಂಕಿಗೆ ತುತ್ತಾಗಿತ್ತು. ಆ ದುರ್ಘಟನೆಯಲ್ಲಿ ಏಳು ಜನರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ಕುದಿ ಕುಲುಮೆಯಂತಾದ ಬಸ್‌ ನಿದ್ದೆಯಲ್ಲಿದ್ದವರ ಜೀವಗಳನ್ನು ಬಲಿತೆಗೆದುಕೊಂಡಿತ್ತು. ಹೊತ್ತಿ ಉರಿಯಬಹುದಾದ ತೈಲದ ಕ್ಯಾನ್‌ಗಳನ್ನು ಬಸ್‌ನಲ್ಲಿ ಸಾಗಿಸುತ್ತಿದ್ದು, ಅವುಗಳಿಂದಾಗಿಯೇ ಅಪಘಾತದಿಂದ ಉಂಟಾದ ಬೆಂಕಿಯು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದಷ್ಟೇ, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಬಸ್ ಆಂಧ್ರಪ್ರದೇಶದ ಕರ್ನೂಲ್ ಬಳಿ ಅಪಘಾತಕ್ಕೀಡಾಗಿ ಹೊತ್ತಿಕೊಂಡ ಬೆಂಕಿಯಲ್ಲಿ ಇಪ್ಪತ್ತು ಪ್ರಯಾಣಿಕರು ಸುಟ್ಟುಹೋಗಿದ್ದರು. ಆ ಬಸ್‌ನಲ್ಲಿ ಸಾಗಿಸುತ್ತಿದ್ದ ಸ್ಮಾರ್ಟ್‌ ಫೋನ್‌ಗಳ ಲಿಥಿಯಂ–ಅಯಾನ್‌ ಬ್ಯಾಟರಿಗಳ ಸ್ಫೋಟ ದುರಂತದ ತೀವ್ರತೆಯನ್ನು ಹೆಚ್ಚಿಸಿತು ಎನ್ನಲಾಗಿದೆ. ಆ ದುರಂತದಿಂದ ವ್ಯವಸ್ಥೆ ಯಾವ ಪಾಠವನ್ನೂ ಕಲಿಯಲಿಲ್ಲ ಎನ್ನುವುದಕ್ಕೆ ಹಿರಿಯೂರು ಸಮೀಪ ನಡೆದ ದುರ್ಘಟನೆಯು ಉದಾಹರಣೆಯಂತಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಬಸ್‌ಗಳನ್ನು ವಿನ್ಯಾಸ ಮಾಡಲಾಗಿದೆಯೆ? ಬಸ್‌ಗಳಲ್ಲಿ ಯಾವೆಲ್ಲ ವಸ್ತುಗಳನ್ನು ಸಾಗಿಸಲು ಅನುಮತಿ ನೀಡಲಾಗಿದೆ? ಸಾವುನೋವಿನ ಘಟನೆಗಳ ನಂತರವಷ್ಟೇ ಕಾನೂನು ಉಲ್ಲಂಘನೆಗಳು ಬೆಳಕಿಗೆ ಬರುವುದು ಏಕೆ? ಹೀಗೆ, ಸರ್ಕಾರಕ್ಕೆ ಹಿತಕರವಲ್ಲದ ಪ್ರಶ್ನೆಗಳನ್ನು ಪಟ್ಟಿ ಮಾಡಬಹುದು. ಅಪಘಾತಕ್ಕೀಡಾದ ನಿರ್ದಿಷ್ಟ ಬಸ್‌ ತಪಾಸಣೆಗೆ ಒಳಗಾಗಿತ್ತು ಹಾಗೂ ಆ ತಪಾಸಣೆಯಲ್ಲಿ ಸದೃಢತೆಯ ಪ್ರಮಾಣಪತ್ರ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಅದರ ಎಲ್ಲ ದಾಖಲೆಗಳೂ ಕ್ರಮಬದ್ಧವಾಗಿದ್ದವು ಎನ್ನಲಾಗಿದೆ. ಆದರೆ, ಈ ನಿರ್ದಿಷ್ಟ ಉದಾಹರಣೆ ಇಡೀ ವ್ಯವಸ್ಥೆ ಸಮರ್ಪಕವಾಗಿದೆ ಎನ್ನುವುದಕ್ಕೆ ಸಾಕ್ಷ್ಯವಲ್ಲ. ತುರ್ತು ನಿರ್ಗಮನ ವ್ಯವಸ್ಥೆ ಇಲ್ಲದ, ಬೆಂಕಿ ಹೊತ್ತಿ ಉರಿಯಬಹುದಾದ ಒಳಾಂಗಣ ವ್ಯವಸ್ಥೆ ಹೊಂದಿರುವ ಹಾಗೂ ವಿನ್ಯಾಸದಲ್ಲಿ ನಿಯಮಬದ್ಧವಲ್ಲದ ರೂಪಾಂತರಗಳನ್ನು ಹೊಂದಿರುವ ಕೆಲವು ಸ್ಲೀಪರ್‌ ಬಸ್‌ಗಳ ಸಂಚಾರ ಈಗಲೂ ಮುಂದುವರಿದಿದೆ. ದುರಂತಗಳು ಸಂಭವಿಸಿದಾಗ ಅತಿವೇಗದ ಚಾಲನೆಯನ್ನು ತೆಗಳುವ ಅಥವಾ, ಚಾಲಕರ ನಿರ್ಲಕ್ಷ್ಯವನ್ನು ಎತ್ತಿತೋರಿಸುವಂಥ ಸಿದ್ಧ ಮಾದರಿಯ ಪ್ರತಿಕ್ರಿಯೆಗಳು ಎದುರಾಗುತ್ತವೆ. ಇವೆಲ್ಲವೂ ಸಕಾರಣಗಳೇ ಆದರೂ, ಬಹು ಮುಖ್ಯವಾದ ಸತ್ಯವೊಂದನ್ನು ಮರೆಮಾಚಲಾಗುತ್ತಿದೆ. ಅದು, ಹೆದ್ದಾರಿಯ ವಿನ್ಯಾಸವೇ ತನ್ನಷ್ಟಕ್ಕೆ ನಿಶ್ಶಬ್ದ ಹಂತಕನಂತಿದ್ದು ಅಪಘಾತಗಳಿಗೆ ಪೂರಕವಾಗಿರುವುದು. ಇದಕ್ಕೆ ಬೆಂಗಳೂರು–ಮೈಸೂರು ಹೆದ್ದಾರಿ ಅತ್ಯುತ್ತಮ ಉದಾಹರಣೆ. ಈ ಹೆದ್ದಾರಿ ಬಳಕೆಗೆ ಮುಕ್ತವಾದಾಗಿನಿಂದ 1,500ಕ್ಕೂ ಹೆಚ್ಚು ಅಪಘಾತಗಳು ಹಾಗೂ 200ಕ್ಕೂ ಹೆಚ್ಚು ಸಾವುಗಳನ್ನು ಕಂಡಿದೆ. ಅವೈಜ್ಞಾನಿಕ ಪ್ರವೇಶ ಹಾಗೂ ನಿರ್ಗಮನ ಕೇಂದ್ರಗಳು, ರಸ್ತೆಯಲ್ಲಿ ನೀರು ತುಂಬಿಕೊಳ್ಳುವ ದುಃಸ್ಥಿತಿ, ಹಳ್ಳಿಗಳಿಗೆ ಸುರಕ್ಷಿತ ದಾಟುವಿಕೆ ವ್ಯವಸ್ಥೆ ಇಲ್ಲದಿರುವುದು, ಇವೆಲ್ಲದರಿಂದಾಗಿ ಸಣ್ಣದೊಂದು ಪ್ರಮಾದವೂ ಮಾರಣಾಂತಿಕ ಅಪಾಯವಾಗಿ ಬದಲಾಗುವ ಸಾಧ್ಯತೆಯಿದೆ.

ADVERTISEMENT

ದುರ್ಘಟನೆಗಳನ್ನು ತಡೆಗಟ್ಟಲಿಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಸ್ಪಷ್ಟವಾಗಿವೆ. ಸ್ಲೀಪರ್‌ ಬಸ್‌ಗಳಿಗೆ ಅನ್ವಯಿಸುವ ಕೇಂದ್ರ ಸರ್ಕಾರ ರೂಪಿಸಿರುವ ಬೆಂಕಿ ಪತ್ತೆ ಮತ್ತು ನಿರೋಧಕ ನಿಯಮಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಬೇಕಾಗಿದೆ. ಬಸ್‌ಗಳ ಭೌತಿಕ ಸಾಮರ್ಥ್ಯವನ್ನು ಕಠಿಣ ಪರೀಕ್ಷೆಗಳಿಗೆ ಒಳಪಡಿಸಬೇಕಾಗಿದೆ ಹಾಗೂ ಸಾರ್ವಜನಿಕ ವಾಹನಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಬೇಕಾಗಿದೆ. ಇದೆಲ್ಲದರ ಜೊತೆಗೆ ಅಪಾಯಕಾರಿ ಹಾಗೂ ಅವೈಜ್ಞಾನಿಕವಾದ ಹೆದ್ದಾರಿ ವಲಯಗಳಲ್ಲಿ, ವೇಗಮಿತಿ ಫಲಕಗಳ ಅಳವಡಿಕೆಗಷ್ಟೇ ಸುರಕ್ಷತಾ ಕ್ರಮ ಸೀಮಿತಗೊಳ್ಳದೆ, ರಸ್ತೆಯ ವಿನ್ಯಾಸದ ಪರಿಷ್ಕರಣೆಯ ಬಗ್ಗೆಯೂ ಗಮನಹರಿಸಬೇಕಾಗಿದೆ. ಅವಘಡ ಸಂಭವಿಸಿದಾಗಷ್ಟೇ ಎಚ್ಚತ್ತು ಪ್ರತಿಕ್ರಿಯಿಸುವ ಪ್ರವೃತ್ತಿಯಿಂದ ಸರ್ಕಾರ ಹೊರ ಬರಬೇಕಾಗಿದೆ. ಹಿರಿಯೂರು ಸಮೀಪದ ದುರ್ಘಟನೆಯನ್ನು ಒಂದು ಗಂಭೀರ ಎಚ್ಚರಿಕೆಯನ್ನಾಗಿ ಸರ್ಕಾರ ಪರಿಗಣಿಸಬೇಕು. ಚಲಿಸುವ ಅರಗಿನ ಮನೆಗಳಂತೆ ಕಾಣಿಸುತ್ತಿರುವ ಸ್ಲೀಪರ್‌ ಬಸ್‌ಗಳ ಸುರಕ್ಷತೆ ಯನ್ನು ಖಾತರಿಗೊಳಿಸಲು, ಎಲ್ಲ ಅಗತ್ಯ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.