
ಸರ್ಕಾರವನ್ನು ನಾಗರಿಕರಿಗೆ ಉತ್ತರದಾಯಿಯಾಗಿಸುವ ‘ಆರ್‌ಟಿಐ’, ಎರಡು ದಶಕಗಳ ಅವಧಿಯಲ್ಲಿ ದುರ್ಬಲಗೊಂಡಿದೆ. ಅದರ ಬೆನ್ನುಮೂಳೆಯ ಶಕ್ತಿಯನ್ನು ಸರ್ಕಾರವೇ ವ್ಯವಸ್ಥಿತವಾಗಿ ಕಸಿದುಕೊಂಡಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಗೆ ಇಪ್ಪತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲೇ, ಅದು ತನ್ನ ಬಹುತೇಕ ಸಾಮರ್ಥ್ಯವನ್ನು ಕಳೆದುಕೊಂಡಿದೆ ಹಾಗೂ ಅಸ್ತಿತ್ವನಾಶದ ಆತಂಕವನ್ನು ಎದುರಿಸುತ್ತಿದೆ. ನಾಗರಿಕರನ್ನು ಸಬಲೀಕರಣಗೊಳಿಸುವ ಹಾಗೂ ಆಡಳಿತವನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ದೊರೆತ ಶಾಸನಾತ್ಮಕ ಅಧಿಕಾರ ಎನ್ನುವ ಬಣ್ಣನೆಗೊಳಗಾಗಿದ್ದ ಆರ್‌ಟಿಐ, ಇದೀಗ ರಕ್ತ–ಮಾಂಸಗಳಿಲ್ಲದ ಬೆದರುಗೊಂಬೆಯಂತೆ ಕಾಣಿಸುತ್ತಿದೆ. ಸರ್ಕಾರದ ತಿದ್ದುಪಡಿಗಳು, ಕಾಯ್ದೆಯ ಅನುಷ್ಠಾನವನ್ನು ತಡೆಯುವ ಪ್ರಯತ್ನಗಳು, ಚಟುವಟಿಕೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳು ಹಾಗೂ ಸಂಪನ್ಮೂಲಗಳ ನಿರಾಕರಣೆಯಿಂದ ಆರ್‌ಟಿಐ ದುರ್ಬಲಗೊಂಡಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ, ಆಡಳಿತದ ತತ್ತ್ವಗಳಿಗೆ ಹೊಂದಿಕೆ ಆಗುವಂತಹ ಸಾಮರ್ಥ್ಯ ಹೊಂದಿದ್ದ ಈ ಕಾಯ್ದೆ, ಪ್ರಗತಿಪರ ಹಾಗೂ ಪರಿವರ್ತನೆಯ ಆಯಾಮವನ್ನೂ ಒಳಗೊಂಡಿತ್ತು. ಇಂಥ ಮಹತ್ವದ ಕಾಯ್ದೆ ಎರಡು ದಶಕಗಳನ್ನು ಪೂರೈಸಿರುವ ಸಂದರ್ಭ ಪ್ರಜಾಪ್ರಭುತ್ವವಾದಿಗಳ ಸಂಭ್ರಮಾಚರಣೆಗೆ ಕಾರಣವಾಗಬೇಕಿತ್ತು. ಆದರೆ, ಈ ಸನ್ನಿವೇಶ ಅದರ ವೈಫಲ್ಯಗಳ ಅವಲೋಕನ ಹಾಗೂ ಅನಿಶ್ಚಿತ ಭವಿಷ್ಯ ಕುರಿತ ಚರ್ಚೆಯ ಸಂದರ್ಭವಾಗಿ ಬದಲಾಗಿದೆ.
ಅಕ್ಟೋಬರ್ 12, 2005ರಂದು ‘ಮಾಹಿತಿ ಹಕ್ಕು ಕಾಯ್ದೆ’ ಜಾರಿಗೆ ಬಂದಾಗ, ಸರ್ಕಾರವನ್ನು ಜನಸಾಮಾನ್ಯರಿಗೆ ಉತ್ತರದಾಯಿ ಯಾಗಿಸುವ ಅವಕಾಶ ದೊರೆಯಿತೆಂದು ಭಾವಿಸಲಾಗಿತ್ತು. ಆದರೆ, ಎರಡು ದಶಕ ಗಳ ಅವಧಿಯಲ್ಲಿ ಆ ನಿರೀಕ್ಷೆ ಸುಳ್ಳಾಗಿದೆ. ದಯನೀಯ ಸ್ಥಿತಿ ತಲಪಿರುವ ‘ಕೇಂದ್ರ ಮಾಹಿತಿ ಆಯೋಗ’ ಮುಖ್ಯಸ್ಥರಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಹನ್ನೊಂದು ಆಯುಕ್ತರು ಇರಬೇಕಾದ ಸ್ಥಳದಲ್ಲಿ ಕೇವಲ ಇಬ್ಬರಷ್ಟೇ ಉಳಿದುಕೊಂಡಿ ದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದೆ. 2024ರಲ್ಲಿ ರಾಜ್ಯಮಟ್ಟದ ಆರು ಮಾಹಿತಿ ಆಯೋಗಗಳು ಕಾರ್ಯ ನಿರ್ವಹಿಸದೆ ನಿಷ್ಕ್ರಿಯವಾಗಿದ್ದವು. ಕಾನೂನಿನ ಅಡಿಯಲ್ಲಿ ಮಾಹಿತಿ ಕೋರಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುತ್ತಿರುವ ಉದಾಹರಣೆಗಳೂ ಹೆಚ್ಚಾಗುತ್ತಿವೆ. ಉತ್ತರಗಳನ್ನು ನೀಡಲು ಗೊತ್ತುಪಡಿಸಿದ ಗಡುವುಗಳನ್ನು ಉಲ್ಲಂಘಿಸಲಾಗುತ್ತಿದೆ ಹಾಗೂ ಆ ಲೋಪಗಳಿಗೆ ದಂಡನೆಯೂ ಆಗುತ್ತಿಲ್ಲ. ತಪ್ಪು ಉತ್ತರ ನೀಡಿಯೂ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾನೂನಿನಡಿಯಲ್ಲಿ ಮಾಹಿತಿ ಬಯಸುವ ನಾಗರಿಕರ ಮೇಲೆ ದಾಳಿಗಳು ನಡೆಯುತ್ತಿವೆ ಹಾಗೂ ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆಗಳೂ ನಡೆದಿವೆ. ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸ್ವಹಿತಾಸಕ್ತಿ ಹೊಂದಿರುವ ಗುಂಪುಗಳ ದುಷ್ಟಕೂಟ, ಆರ್‌ಟಿಐ ಕಾನೂನನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದೆ. ಈ ದುಷ್ಟಕೂಟಕ್ಕೆ, ಸಾರ್ವಜನಿಕರಿಗೆ ಮಾಹಿತಿ ದೊರೆಯದಿರುವುದು ತನ್ನ ಹಿತಾಸಕ್ತಿಗೆ ಪೂರಕವೆಂದು ಭಾವಿಸಿರುವ ಸರ್ಕಾರಗಳ ಕುಮ್ಮಕ್ಕು ಬಲ ನೀಡುತ್ತಿದೆ.
ಮಾಹಿತಿ ಹಕ್ಕು ಆಯೋಗದ ಕಾರ್ಯ ಚಟುವಟಿಕೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಕೂಡ ಫಲಕಾರಿಯಾಗಿಲ್ಲ. ಅಧಿಕಾರಿಗಳ ನೇಮಕದಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಟೀಕಿಸಿರುವ ಕೋರ್ಟ್, ಕಾಲಕ್ಕೆ ಸರಿಯಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಹೇಳಿದ್ದರೂ, ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಮಾಹಿತಿ ಆಯುಕ್ತರ ವೇತನ ಹಾಗೂ ಸೇವಾ ಷರತ್ತುಗಳನ್ನು ನಿರ್ಣಯಿಸುವ ಅಧಿಕಾರವನ್ನು 2019ರಲ್ಲಿ ಸರ್ಕಾರ ವಹಿಸಿಕೊಂಡ ನಂತರ, ಆಯುಕ್ತರು ನೇರವಾಗಿ ಸರ್ಕಾರದ ಅಧೀನಕ್ಕೆ ಬರುವಂತಾಯಿತು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅವಕಾಶವನ್ನು ಆಯೋಗವು ಕಳೆದುಕೊಂಡ ಮೇಲೆ, ಅದು ಯಾವ ಉದ್ದೇಶಕ್ಕಾಗಿ ರೂಪುಗೊಂಡಿತೋ ಆ ಕಾರ್ಯಸಾಧನೆಯಲ್ಲಿ ಯಶಸ್ವಿಯಾಗುತ್ತದೆಂದು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶಗಳ ಸಂರಕ್ಷಣಾ ಕಾಯ್ದೆಯು, ಗೋಪ್ಯತೆ ಹೆಸರಿನಲ್ಲಿ ಆರ್‌ಟಿಐಗೆ ಅಂಕುಶ ಹಾಕಲಿಕ್ಕಾಗಿಯೇ ರೂಪುಗೊಂಡಂತಿದೆ. ಸರ್ಕಾರಗಳನ್ನು ಅದರ ನೀತಿ ನಿಲುವುಗಳಿಗೆ ಉತ್ತರದಾಯಿಗಳನ್ನಾಗಿಸುವ ಉದ್ದೇಶದ ಆರ್‌ಟಿಐ ಅನ್ನು ಪ್ರಜಾಪ್ರಭುತ್ವ ಬಲಗೊಳಿಸುವ ಕಾರಣಕ್ಕಾಗಿ ರೂಪಿಸಲಾಗಿತ್ತು. ಆದರೆ, ಮಹತ್ತರ ಉದ್ದೇಶದ ಕಾನೂನಿನ ಬೆನ್ನುಮೂಳೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತಿರುವ ಮಾಹಿತಿ ಹಕ್ಕು ಕಾಯ್ದೆಯಿಂದಾಗಿ, ಪ್ರಜಾಪ್ರಭುತ್ವದ ಅಂಗಸಂಸ್ಥೆಗಳು ಮತ್ತು ಅವುಗಳ ಮೂಲಭೂತ ಚಿಂತನೆಗಳಲ್ಲಿ ಪಾರದರ್ಶಕತೆ ಇಲ್ಲವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.