
ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್ ಬಳಿ ಸೀಬರ್ಡ್ ಸ್ಲೀಪರ್ ಬಸ್ ಹಾಗೂ ಕಂಟೇನರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಏಳು ಮಂದಿ ಸಾವಿಗೀಡಾಗಿರುವ ದುರ್ಘಟನೆ ಗಾಬರಿ ಹುಟ್ಟಿಸುವಂತಿದೆ. ಈ ಘಟನೆ, ರಾತ್ರಿ ಪ್ರಯಾಣ ಹಾಗೂ ಸ್ಲೀಪರ್ ಬಸ್‌ಗಳ ಸುರಕ್ಷತೆಯ ಬಗೆಗಿನ ಆತಂಕವನ್ನು ಹೆಚ್ಚಿಸುವಂತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿರುವ ಕಂಟೇನರ್, ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯಲ್ಲಿ ಬಸ್‌ನಲ್ಲಿದ್ದ ಮೂವತ್ತು ಪ್ರಯಾಣಿಕರಲ್ಲಿ ಐವರು ಸಾವಿಗೀಡಾಗಿದ್ದಾರೆ. ಕ್ರಿಸ್‌ಮಸ್ ರಜೆ ಕಳೆಯಲು ಗೋಕರ್ಣಕ್ಕೆ ಹೋಗುತ್ತಿದ್ದ ಮೂವರು ತರುಣಿಯರು ಹಾಗೂ ತಾಯಿ–ಮಗಳು ಬೆಂಕಿಯಲ್ಲಿ ಗುರುತು ಸಿಗದ ಮಟ್ಟಿಗೆ ಸುಟ್ಟು ಕರಕಲಾಗಿದ್ದಾರೆ. ಕಂಟೇನರ್ ಅಪ್ಪಚ್ಚಿಯಾಗಿ ಅದರ ಚಾಲಕ ಕುಳಿತಲ್ಲೇ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿದ್ದ ಬಸ್ ಚಾಲಕ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ಕಂಟೇನರ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಡಿಕ್ಕಿಯಿಂದ ಹೊತ್ತಿಕೊಂಡ ಬೆಂಕಿಯಿಂದ ಸಾವು–ನೋವು ಸಂಭವಿಸಿರುವುದರ ಹಿನ್ನೆಲೆಯಲ್ಲಿ, ಬಸ್‌ನಲ್ಲಿದ್ದ ಸುರಕ್ಷತಾ ಕ್ರಮಗಳ ಕೊರತೆಯನ್ನೂ ಅವಘಡಕ್ಕೆ ಕಾರಣವನ್ನಾಗಿ ನೋಡಬೇಕಾಗಿದೆ.
ಸ್ಲೀಪರ್ ಬಸ್‌ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಹಾಗಾಗಿ, ಪ್ರಸಕ್ತ ದುರ್ಘಟನೆಯು ಸ್ಲೀಪರ್ ಬಸ್‌ಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚಿಂತನೆಯ ಅಗತ್ಯವನ್ನು ಸೂಚಿಸುವಂತಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಬಸ್ ಆಂಧ್ರಪ್ರದೇಶದ ಕರ್ನೂಲ್ ಬಳಿ ಅಪಘಾತಕ್ಕೀಡಾಗಿ ಹೊತ್ತಿಕೊಂಡ ಬೆಂಕಿಗೆ ಇಪ್ಪತ್ತು ಜನರು ಆಹುತಿಯಾದ ದುರ್ಘಟನೆ ಕಳೆದ ಅಕ್ಟೋಬರ್‌ನಲ್ಲಿ ನಡೆದಿತ್ತು. ಅದೇ ತಿಂಗಳಲ್ಲಿ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಉಂಟಾದ ಬೆಂಕಿಯಲ್ಲಿ ಸ್ಲೀಪರ್ ಬಸ್‌ನಲ್ಲಿದ್ದ ಇಪ್ಪತ್ತಾರು ಪ್ರಯಾಣಿಕರು ಸಾವಿಗೀಡಾಗಿದ್ದರು. ಸ್ಲೀಪರ್ ಬಸ್‌ಗಳಿಗೆ ಸಂಬಂಧಿಸಿದ ಈ ಸರಣಿ ಅಪಘಾತಗಳು ಹಾಗೂ ಅವುಗಳಿಂದ ಉಂಟಾದ ಸಾವು ನೋವು ಸಾರ್ವಜನಿಕರನ್ನು ತಲ್ಲಣಗೊಳಿಸುವಂತಿದೆ. ಈ ದುರ್ಘಟನೆಗಳಿಗೆ, ಸುರಕ್ಷತಾ ಕ್ರಮಗಳು ಬಸ್‌ಗಳಲ್ಲಿ ಸರಿಯಾಗಿ ಪಾಲನೆಯಾಗದಿರುವುದೇ ಕಾರಣ ಎನ್ನಲಾಗಿದೆ. ಸ್ಲೀಪರ್ ಬಸ್
ಗಳಲ್ಲಿ ಅಗ್ನಿಶಾಮಕ ಉಪಕರಣಗಳ ಕೊರತೆ ಹಾಗೂ ತುರ್ತು ನಿರ್ಗಮನ ದ್ವಾರಗಳ ಅಸಮರ್ಪಕ ವಿನ್ಯಾಸ ಎದ್ದುಕಾಣಿಸುತ್ತಿದೆ. ಸ್ಲೀಪರ್ ಬಸ್‌ಗಳ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಕೇಂದ್ರ ಸರ್ಕಾರದ ಎಐಎಸ್–119 (ಸ್ಲೀಪರ್ ಕೋಚ್‌ಗಳಿಗೆ ವಿಶೇಷ ಮಾನದಂಡಗಳು) ಮತ್ತು ಎಐಎಸ್–052 (ಬಸ್ ಬಾಡಿ ಕೋಡ್) ನಿಯಮಗಳು ಅನ್ವಯವಾಗುತ್ತವೆ. ಈ ನಿಯಮಗಳು ಖಾಸಗಿ ಬಸ್‌ಗಳಲ್ಲಿ ಸರಿಯಾಗಿ ಪಾಲನೆ ಆಗಿವೆಯೋ ಇಲ್ಲವೋ ಎನ್ನುವುದರ ಪರಿಶೀಲನೆ ಸರಿಯಾಗಿ ನಡೆಯದಿರುವುದು ದುರಂತ ಸಂಭವಿಸಿದಾಗಷ್ಟೇ ಚರ್ಚೆಗೆ ಬರುತ್ತದೆ.
ರಾಜ್ಯದಲ್ಲಿ 2021ರಿಂದ 2025ರ ಅವಧಿಯಲ್ಲಿ ಒಟ್ಟು 55,753 ನಾಗರಿಕರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನೆಯ ಗುಣಮಟ್ಟದ ಬಗ್ಗೆ ಕಳವಳ ಹುಟ್ಟಿಸುವಂತಿದೆ. ಅಪಘಾತಗಳ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎನ್ನುವುದಕ್ಕೂ ಅಪಘಾತಗಳಿಂದ ಸಂಭವಿಸಿದ ಸಾವಿನ ಸಂಖ್ಯೆ ನಿದರ್ಶನದಂತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿವೈಡರ್‌ಗಳ ಸರಿಯಾದ ನಿರ್ಮಾಣ ಮತ್ತು ನಿರ್ವಹಣೆಯ ಕೊರತೆಯೂ ದುರಂತಗಳಿಗೆ ಕಾರಣವಾಗಿದೆ. ಅತಿವೇಗದ ಜೊತೆಗೆ, ಚಾಲಕರ ಮೇಲಿನ ಕರ್ತವ್ಯದ ಅತಿಯಾದ ಒತ್ತಡವೂ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಭಾರೀ ದುರಂತ ಸಂಭವಿಸಿದಾಗ ಸಂಚಾರ ಸುರಕ್ಷತಾ ಕ್ರಮ ಹಾಗೂ ವಾಹನಗಳ ಗುಣಮಟ್ಟದ ಬಗ್ಗೆ ಕಾಳಜಿ ವ್ಯಕ್ತವಾಗುತ್ತದೆ. ಪ್ರಸ್ತುತ, ಹಿರಿಯೂರು ಬಳಿ ಸಂಭವಿಸಿರುವ ದುರ್ಘಟನೆ ಸ್ಲೀಪರ್ ಬಸ್‌ಗಳ ಸುರಕ್ಷತೆಯ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಾರಣವಾಗಬೇಕು. ಸ್ಲೀಪರ್ ಬಸ್‌ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಖಾತರಿಗೊಳಿಸುವ ನಿಟ್ಟಿನಲ್ಲಿ, ಮುಖ್ಯವಾಗಿ ಅಗ್ನಿನಿರೋಧಕ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸುವ ಬಗ್ಗೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ಬಸ್‌ಗಳ ನಿಯಮಿತ ಪರಿಶೀಲನೆಯೂ ಕಡ್ಡಾಯವಾಗಿ ನಡೆಯಬೇಕು. ವ್ಯವಸ್ಥೆಯ ಲೋಪದಿಂದಾಗಿ ಅಪಘಾತಗಳು ಸಂಭವಿಸುವುದು ಹಾಗೂ ಜೀವಹಾನಿ ಆಗುವುದು ನಾಗರಿಕ ವ್ಯವಸ್ಥೆಗೆ ಒಪ್ಪುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.