
ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಮೇಲೆ ನಿರ್ಬಂಧಗಳು, ಮಿತಿಗಳು ಇರಬೇಕು ಎಂಬ ವಿಚಾರವಾಗಿ ವಿಶ್ವದಾದ್ಯಂತ ಪರ–ವಿರೋಧ ಚರ್ಚೆಗಳು ಬಹಳ ಜೋರಾಗಿ ನಡೆದಿವೆ. ಈಗ ಆಸ್ಟ್ರೇಲಿಯಾ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಂತಿಲ್ಲ ಎಂದು ಕಾನೂನು ರೂಪಿಸಿದೆ. ಜಗತ್ತಿನಲ್ಲಿ ಈ ಬಗೆಯ ಕಾನೂನು ರೂಪಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ತೊಂದರೆಗೆ ಒಳಗಾಗಬಹುದಾದವರು ಅಂತಹ ಜಾಲತಾಣಗಳನ್ನು ಬಳಸುವುದರ ಮೇಲೆ ನಿಯಂತ್ರಣಗಳನ್ನು ಹೇರುವ ಹಾಗೂ ಅವರ ಖಾಸಗಿತನವನ್ನು ರಕ್ಷಿಸುವ ಉದ್ದೇಶದ ಕಾನೂನುಗಳು ಅಮೆರಿಕ ಹಾಗೂ ಯುರೋಪಿನಲ್ಲಿ ಜಾರಿಯಲ್ಲಿವೆ. ಆದರೆ, ಸಮಗ್ರವಾದ ಕಾನೂನೊಂದನ್ನು ರೂಪಿಸಿರುವುದು ಇದೇ ಮೊದಲು. ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಲು ಸಾಮಾಜಿಕ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶವು ಈ ಕಾನೂನಿಗೆ ಇದೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಸ್ನ್ಯಾಪ್‌ಚಾಟ್‌ನಂತಹ ವೇದಿಕೆಗಳನ್ನು ಬಳಕೆ ಮಾಡುವುದನ್ನು ತಡೆಯುವ ಉದ್ದೇಶವನ್ನು ಕಾನೂನು ಹೊಂದಿದೆ. ಆದರೆ, ಶೈಕ್ಷಣಿಕ ಮಾಹಿತಿಯನ್ನು ಹೊಂದಿರುವ ಯೂಟ್ಯೂಬ್‌ನಂತಹ ವೇದಿಕೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಅಲ್ಲಿ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸುವ ಕ್ರಮಗಳನ್ನು ಅಳವಡಿಸಿ ಕೊಳ್ಳಬೇಕಾ ಗುತ್ತದೆ. ಇಲ್ಲಿ ಲೋಪಗಳು ಕಂಡುಬಂದರೆ ಸಾಮಾಜಿಕ ಜಾಲತಾಣ ಕಂಪನಿಗಳು ಭಾರಿ ದಂಡ ತೆರಬೇಕಾಗುತ್ತದೆ.
ಈ ಕಾನೂನು ಹಲವು ಕಾರಣಗಳಿಂದಾಗಿ ವಿವಾದಾತ್ಮಕವಾಗಿ ಪರಿಣಮಿಸಿದೆ. ವೈಯಕ್ತಿಕ ದತ್ತಾಂಶಗಳನ್ನು ಆಧರಿಸಿ ಬಳಕೆದಾರನ ವಯಸ್ಸನ್ನು ತಾಳೆ ಮಾಡ ಲಾಗುತ್ತದೆ, ಇದರಿಂದಾಗಿ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆ ಆಗಬಹುದು ಎಂಬ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳು ಯುವ
ಮನಸ್ಸುಗಳ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ವಿಭಿನ್ನ ಅನಿಸಿಕೆಗಳಿವೆ. ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಮಕ್ಕಳು ಹಾಗೂ ಹದಿಹರೆಯದವರ ಸಹಜ ಬೆಳವಣಿಗೆಗೆ ಅಡ್ಡಿ ಉಂಟಾಗಬಹುದು; ಆತಂಕ, ಖಿನ್ನತೆ, ಕೀಳರಿಮೆ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಅದು ಸೃಷ್ಟಿಸಬಹುದು ಎಂದು ಹಲವು ತಜ್ಞರು ಅಭಿಪ್ರಾಯಪಡು ತ್ತಾರೆ. ‘ಸಾಮಾಜಿಕ ಜಾಲತಾಣಗಳು ಸರೀಕರಿಂದ ಒತ್ತಡ ಸೃಷ್ಟಿಸುತ್ತವೆ, ಆತಂಕ ಉಂಟುಮಾಡುತ್ತವೆ, ವಂಚನೆ ಎಸಗುವವರಿಗೆ ಅವಕಾಶಗಳನ್ನು ಕಲ್ಪಿಸುತ್ತವೆ. ಅಲ್ಲದೆ, ಆನ್‌ಲೈನ್ ಮೂಲಕ ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವವರಿಗೆ ವೇದಿಕೆಗಳೂ ಆಗಿವೆ’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಅಲ್ಲಿನ ಸಂಸತ್ತಿಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಹೊತ್ತು ಕಳೆಯುವ ಮಕ್ಕಳು ತಮಗೆ ತಾವೇ ಹಾನಿ ಮಾಡಿಕೊಂಡಿರುವ ನಿದರ್ಶನಗಳು ಇವೆ. ಆದರೆ, ಸಾಮಾಜಿಕ ಜಾಲತಾಣಗಳ ಕುರಿತಾದ ನಕಾರಾತ್ಮಕವಾದ ಚಿತ್ರಣವು ತೀರಾ ಅತಿಯಾದ ಪ್ರಮಾಣದಲ್ಲಿದೆ, ವಾಸ್ತವದಲ್ಲಿ ಈ ವೇದಿಕೆಗಳು ಮಕ್ಕಳಿಗೆ ಅನುಕೂಲಗಳನ್ನು ಕಲ್ಪಿಸಿಕೊಡುತ್ತವೆ ಎಂಬ ಅಭಿಪ್ರಾಯ ಕೂಡ ಇದೆ. ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ನಿಯಂತ್ರಣ ವಿಧಿಸುವುದನ್ನು ಪಾಲಕರು ಮತ್ತು ವಯಸ್ಕರು ಬೆಂಬಲಿಸುತ್ತಾರೆ ಎಂಬುದನ್ನು ಸಮೀಕ್ಷೆಗಳು ಹೇಳುತ್ತವೆ.
ಈ ಕಾನೂನಿನ ಅನುಷ್ಠಾನವು ಅಸಾಧ್ಯವೇನೂ ಅಲ್ಲ, ಆದರೆ ಬಹಳ ಕಷ್ಟದ್ದಾಗಿರಲಿದೆ. ನಿಷೇಧ ಹಾಗೂ ನಿರ್ಬಂಧಗಳ ಪರಿಣಾಮವು ಸಾಮಾನ್ಯವಾಗಿ ಉದ್ದೇಶವನ್ನು ಈಡೇರಿಸುವುದಿಲ್ಲ. ಉದ್ದೇಶಕ್ಕೆ ವಿರುದ್ಧವಾದ ಪರಿಣಾಮಗಳೇ ಅಲ್ಲಿ ಕಂಡುಬರುತ್ತವೆ. ಮಕ್ಕಳು ವಯಸ್ಕರಂತೆ ಬಿಂಬಿಸಿಕೊಂಡು ಖಾತೆಗಳನ್ನು ತೆರೆಯುವ ಸಾಧ್ಯತೆ ಇರುತ್ತದೆ. ಈ ಕಾನೂನು ಆಸ್ಟ್ರೇಲಿಯಾದಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ಇತರ ದೇಶಗಳು ಅವಲೋಕಿಸಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹದಿಹರೆಯದ ಅತಿದೊಡ್ಡ ಸಮುದಾಯ ಭಾರತದಲ್ಲಿದೆ. ಭಾರತದಲ್ಲಿ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಗೆ ಕಾನೂನಿನ ಮೂಲಕ ನಿಯಂತ್ರಣ ವಿಧಿಸಬೇಕು ಎಂಬ ಆಗ್ರಹ ಜೋರಾಗಿಯೇ ಇದೆ. ಆದರೆ, ಕಾನೂನಿನ ಮೂಲಕ ನಿಯಂತ್ರಣ ತರುವಲ್ಲಿ ಒಂದು ಸಮಸ್ಯೆ ಇದೆ. ಸಂಪೂರ್ಣ ನಿಷೇಧ ಹಾಗೂ ಬಳಕೆಗೆ ಮುಕ್ತ ಸ್ವಾತಂತ್ರ್ಯದ ನಡುವೆ ಸಮತೋಲನವೊಂದನ್ನು ಕಂಡುಕೊಳ್ಳುವುದು ಬಹಳ ಕಷ್ಟದ ಕೆಲಸ. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿ ಯುತವಾಗಿ ಬಳಕೆ ಮಾಡುವುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ಶಾಲೆಗಳು ಹಾಗೂ ಪಾಲಕರು ಮಹತ್ವದ ಪಾತ್ರ ವಹಿಸಬೇಕು. ಈಗ ಆಸ್ಟ್ರೇಲಿಯಾದ ಅನುಭವದಿಂದ ಒಂದಿಷ್ಟು ಪಾಠಗಳನ್ನು ಕಲಿಯಲು ಇತರ ದೇಶಗಳಿಗೆ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.