ADVERTISEMENT

ವಿದ್ಯುನ್ಮಾನ ಕಂದಕದೊಳಗೆ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 20:00 IST
Last Updated 25 ಜನವರಿ 2019, 20:00 IST
.
.   

ಡಿಜಿಟಲ್ ಡಿವೈಡ್ ಅಥವಾ ವಿದ್ಯುನ್ಮಾನ ಕಂದಕದ ಚರ್ಚೆಗಳೆಲ್ಲವೂ ಬಳಕೆಯ ಅನುಕೂಲಗಳ ವ್ಯಾಪ್ತಿಯನ್ನಷ್ಟೇ ಪರಿಗಣಿಸಿ ನಡೆಯುತ್ತವೆ. ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯ ವೇಗ ಮತ್ತು ನೀತಿ ನಿರೂಪಣೆಯ ನಿಧಾನಗತಿಯ ನಡುವಣ ವ್ಯತ್ಯಾಸದಿಂದಾಗಿ ಉಂಟಾಗುವ ಕಂದಕದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಬ್ರೆಕ್ಸಿಟ್ ಜನಮತಗಣನೆಯನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿ ಪ್ರಭಾವಿಸಿದ ಕೇಂಬ್ರಿಜ್ ಅನಲಿಟಿಕಾ ಹಗರಣವು ಭಾರತದ ಚುನಾವಣಾ ಆಯೋಗದ ಕಣ್ಣು ತೆರೆಸಬೇಕಾಗಿತ್ತು.

ಆದರೆ, ಆಯೋಗವು ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳೆಲ್ಲವೂ ಬಹಳ ನಿರಾಶಾದಾಯಕವಾಗಿವೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ವಿಚಾರಣೆಗೆ ಎತ್ತಿಕೊಂಡಿರುವ ಬಾಂಬೆ ಹೈಕೋರ್ಟ್‌ ‘ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣಗಳಲ್ಲಿ ಹಣ ಪಾವತಿಸಿ ಪಡೆಯುವ ಪ್ರಚಾರವನ್ನು ನಿಯಂತ್ರಿಸಲಾಗದಷ್ಟು ದುರ್ಬಲವಾಗಿಲ್ಲ. ಇವುಗಳ ನಿಯಂತ್ರಣಕ್ಕೆ ಮುಂದಾಗುವುದು ಆಯೋಗದ ಸಾಂವಿಧಾನಿಕ ಜವಾಬ್ದಾರಿ’ ಎಂದು ಹೇಳಿದೆ. ಒಂದರ್ಥದಲ್ಲಿ ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೆಲಮಟ್ಟಿಗೆ ವಿಫಲವಾಗಿದೆ ಎಂದೂ ಇದನ್ನು ಅರ್ಥೈಸಬಹುದು. ಚುನಾವಣಾ ಆಯೋಗದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ನೀತಿ ನಿರೂಪಣೆಯ ನಿಧಾನಗತಿ ಮತ್ತು ತಂತ್ರಜ್ಞಾನದ ವೇಗದ ನಡುವೆ ಆಯೋಗ ಸಿಲುಕಿದೆ. ಇದೇ ಬಗೆಯ ಸಮಸ್ಯೆ ಅನೇಕ ಸಾಂವಿಧಾನಿಕ ಸಂಸ್ಥೆಗಳದ್ದೂ ಹೌದು. ಈ ಬಗೆಯ ವಿದ್ಯುನ್ಮಾನ ಕಂದಕವನ್ನು ಮುಚ್ಚುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸುವ ತುರ್ತು ಎದುರಾಗಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಯನ್ನು ನಡೆಸಬೇಕಾಗಿರುವ ಆಯೋಗವು ತಂತ್ರಜ್ಞಾನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಕಾರ್ಯಸೂಚಿಯೊಂದನ್ನು ತಕ್ಷಣವೇ ರೂಪಿಸಬೇಕಾದ ಅನಿವಾರ್ಯ ಇದೆ.

ADVERTISEMENT

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ವ್ಯಯಿಸಬಹುದಾದ ಮೊತ್ತ ₹ 12 ಸಾವಿರ ಕೋಟಿಯಷ್ಟು ಎಂದು ಅಂದಾಜಿಸಲಾಗಿದೆ. ಇದು, 2014ರ ಚುನಾವಣೆಯಲ್ಲಿ ವ್ಯಯಿಸಲಾದ ಮೊತ್ತದ ಒಂದೂವರೆ ಪಟ್ಟು ಹೆಚ್ಚು. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಯ ತನಕದ ಅಂದಾಜಿನಲ್ಲಿ ಒಳಗೊಂಡಿರುವುದು ಜಾಹೀರಾತಿನ ವೆಚ್ಚ ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಪ್ರಚಾರವು ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.

ಸೋಷಿಯಲ್ ಇನ್‌ಫ್ಲುಯೆನ್ಸರ್ ಎಂದು ಗುರುತಿಸಲಾಗುವ ವ್ಯಕ್ತಿಗಳಿಗೂ ಭಾರಿ ಮೊತ್ತವನ್ನು ಪಾವತಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವಂತೆ ತೋರಿಸಿಕೊಳ್ಳುವ ಇವರು, ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಪ್ರಚಾರ ಮಾಡುತ್ತಾರೆ. ಇದನ್ನು ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ವಿಶ್ವವ್ಯಾಪಿಯಾಗಿ ಸ್ಪಷ್ಟತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಹಿಂಬಾಲಕರು ಅಥವಾ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ವ್ಯಕ್ತಿಗಳು ಮತ್ತು ಮಾಧ್ಯಮ ಸಂಸ್ಥೆಗಳು ನಡೆಸುವ ಈ ಬಗೆಯ ಪ್ರಚಾರವನ್ನು ನಿಯಂತ್ರಿಸುವುದಕ್ಕೆ ಸುಲಭದ ದಾರಿಗಳೇ ಇಲ್ಲ.

ಸದ್ಯದ ಮಟ್ಟಿಗೆ ಗೂಗಲ್ ಮಾತ್ರ ಚುನಾವಣಾ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯೊಂದನ್ನು ಪ್ರಕಟಿಸಿ ಇತರರಿಗೆ ಮಾದರಿಯಾಗಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ಗಳೂ ಸದ್ಯವೇ ತಮ್ಮ ನೀತಿಗಳನ್ನು ಪ್ರಕಟಿಸುವ ಇರಾದೆಯನ್ನು ತೋರ್ಪಡಿಸಿವೆ. ಚುನಾವಣಾ ಆಯೋಗ ಈ ವಿಷಯದಲ್ಲಿನ್ನೂ ಸ್ಪಷ್ಟ ನೀತಿಯೊಂದನ್ನು ಹೊಂದಿರುವಂತೆ ಕಾಣಿಸುತ್ತಿಲ್ಲ. ಸಾಮಾಜಿಕ ಜಾಲತಾಣ ಪ್ರಚಾರ ವೆಚ್ಚವನ್ನು ಅಭ್ಯರ್ಥಿಯ ವೆಚ್ಚ, ಪಕ್ಷದ ವೆಚ್ಚ ಇತ್ಯಾದಿಗಳಲ್ಲಿ ಹೇಗೆ ಪರಿಗಣಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಚುನಾವಣೆಗಳಿಗೆ ಕೆಲವೇ ತಿಂಗಳು ಉಳಿದಿರುವ ಈ ಸಂದರ್ಭದಲ್ಲಿಯೂ ಈ ಅಸ್ಪಷ್ಟತೆ ಮುಂದುವರಿಯುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಈ ವಿಷಯದಲ್ಲಿ ಆಯೋಗ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ತನಗಿರುವ ಸಾಂವಿಧಾನಿಕ ಜವಾಬ್ದಾರಿಯ ಚೌಕಟ್ಟಿನಲ್ಲಿ ಹೊಸ ಕಾಲದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ನಿಯಮಾವಳಿಗಳನ್ನು ರೂಪಿಸಿ ಜನತಂತ್ರವನ್ನು ಸಬಲಗೊಳಿಸಬೇಕು. ಇಲ್ಲವಾದರೆ ಕೇಂಬ್ರಿಜ್‌ ಅನಲಿಟಿಕಾ ಹಗರಣದಂತಹ ಹಗರಣ ಭಾರತದಲ್ಲಿಯೂ ಮರುಕಳಿಸುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.