ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ಸು: ಮೇಲ್ಪಂಕ್ತಿ ಹಾಕಿಕೊಟ್ಟ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 1:10 IST
Last Updated 6 ಜುಲೈ 2020, 1:10 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ಸು: ಮೇಲ್ಪಂಕ್ತಿ ಹಾಕಿಕೊಟ್ಟ ಮಕ್ಕಳು
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ಸು: ಮೇಲ್ಪಂಕ್ತಿ ಹಾಕಿಕೊಟ್ಟ ಮಕ್ಕಳು   

ಪರೀಕ್ಷೆಗಳನ್ನು ರದ್ದುಪಡಿಸಬೇಕೆನ್ನುವ ಒತ್ತಡ ಹಾಗೂ ಕೊರೊನಾ ಆತಂಕದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆ ನಡೆಸುವುದು ಸರ್ಕಾರದ ಪಾಲಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಿ ಪರಿಣಮಿಸಿತ್ತು.

ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಕೊರೊನಾ ಪ್ರಕರಣಗಳು ವ್ಯಾಪಕವಾಗಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ನಿರ್ಧಾರಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ನಿರ್ಧಾರವು ವಿದ್ಯಾರ್ಥಿಗಳ ಜೀವಗಳನ್ನು ಅಪಾಯಕ್ಕೆ ಒಡ್ಡಲಿದೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿವ್ಯಕ್ತವಾಗಿತ್ತು. ಸೋಂಕಿನ ಭೀತಿಯಿಂದಾಗಿ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕೆಲವು ಶಿಕ್ಷಣ ತಜ್ಞರು ಹಾಗೂ ಸಂಘಟನೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ನೆರೆಯ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ ದೇಶದ ಹಲವು ರಾಜ್ಯಗಳ ಪರೀಕ್ಷಾ ಮಂಡಳಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದುಪಡಿಸಿದ್ದವು. ಆ ಉದಾಹರಣೆಗಳನ್ನು ಮುಂದಿಟ್ಟು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆ ಇಲ್ಲದೆಯೇ ಎಲ್ಲ ಮಕ್ಕಳಿಗೂ ಉತ್ತೀರ್ಣತೆಯ ಪ್ರಮಾಣಪತ್ರ ನೀಡಬೇಕೆನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಪರೀಕ್ಷೆ ನಡೆಸುವುದು ಯುಕ್ತವಲ್ಲ ಎಂಬ ಕೆಲವು ತಜ್ಞರ ಎಚ್ಚರಿಕೆಯ ನಡುವೆಯೂ ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ದೃಢನಿಶ್ಚಯವನ್ನು ತಳೆದಿತ್ತು.

ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡು, ಸುರಕ್ಷಿತವಾದ ವಾತಾವರಣದಲ್ಲಿ ಪರೀಕ್ಷೆಯನ್ನು ನಡೆಸುವುದಾಗಿ ಹೇಳಿತ್ತು. ತನ್ನ ಮಾತಿಗೆ ತಕ್ಕಂತೆ ಸರ್ಕಾರ ಬಹುದೊಡ್ಡ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇದರ ಮುಂದುವರಿದ ಭಾಗವಾಗಿ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯ ಕೆಲಸಗಳನ್ನೂ ಸುರಕ್ಷಿತವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಬೇಕಾಗಿದೆ. ಈ ಪರೀಕ್ಷಾ ಪ್ರಕ್ರಿಯೆಯ ಸಾಧನೆಯು ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರ ನೆನಪಿನಲ್ಲಿ ಬಹುಕಾಲ ಉಳಿಯುವಂತಹದ್ದು.

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದಕ್ಕಾಗಿ ಸರ್ಕಾರ ನಡೆಸಿದ ಪ್ರಯತ್ನಗಳು, ಆಡಳಿತಯಂತ್ರ ಇಚ್ಛಾಶಕ್ತಿ ಪ್ರದರ್ಶಿಸಿದರೆ ಉದ್ದೇಶಿತ ಕಾರ್ಯಕ್ರಮವೊಂದನ್ನು ಹೇಗೆ ಯಶಸ್ವಿಯಾಗಿ ನಡೆಸಬಹುದು ಎನ್ನುವುದಕ್ಕೆ ಅಪರೂಪದ ಉದಾಹರಣೆ. 7.5 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆಸಿಕೊಂಡು, ಅವರಿಗೆ ಸುರಕ್ಷಿತ ವಾತಾವರಣ ರೂಪಿಸಿಕೊಟ್ಟು ಪರೀಕ್ಷೆ ಬರೆಸುವುದು ಸರ್ಕಾರದ ಪಾಲಿಗೆ ಸುಲಭವಾಗಿರಲಿಲ್ಲ. ಈ ದಿಸೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನಡುವಣ ಸಮನ್ವಯ ಗಮನಾರ್ಹ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ತರಗತಿಗಳಿಂದ ದೀರ್ಘ ಕಾಲ ದೂರವುಳಿದಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ರೇಡಿಯೊ, ದೂರದರ್ಶನ ಹಾಗೂ ಅಂತರ್ಜಾಲ ಮಾಧ್ಯಮಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನಗಳು ನಡೆದವು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಪಾಡಿಕೊಳ್ಳುವ ಕುರಿತು ನಿಗಾ ವಹಿಸಲಾಯಿತು. ಇವೆಲ್ಲ ರಚನಾತ್ಮಕ ಕಾರ್ಯಕ್ರಮಗಳಿಂದಾಗಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಈ ಯಶಸ್ಸು ಶಿಕ್ಷಣ ಕ್ಷೇತ್ರವೂ ಸೇರಿದಂತೆ ಒಟ್ಟಾರೆ ಸಮಾಜದಲ್ಲಿ ಹೊಸ ವಿಶ್ವಾಸವನ್ನು ಮೂಡಿಸುವಂತಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿರುವ ಕೀರ್ತಿಯ ದೊಡ್ಡ ಪಾಲು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲೆಗಳ ಆಡಳಿತ ಸಿಬ್ಬಂದಿಗೆ ಸಲ್ಲಬೇಕು. ಸ್ವಯಂಶಿಸ್ತು ಅಳವಡಿಸಿಕೊಂಡು ಪರೀಕ್ಷೆಗಳನ್ನು ಎದುರಿಸಿದ ಮಕ್ಕಳ ಬದ್ಧತೆ ಮತ್ತು ಧೈರ್ಯ ಸಮಾಜಕ್ಕೆ ಮಾದರಿಯಾದುದು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ದೈನಂದಿನ ಕರ್ತವ್ಯ ನಿರ್ವಹಣೆ ಮಾಡುವುದು ಹೇಗೆ ಎನ್ನುವುದನ್ನು ರಾಜ್ಯದ ಮಕ್ಕಳು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.