ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನ ಹೊಸ ಸಮಸ್ಯೆಗಳಿಗೆ ಕಾರಣ ಆಗಬಹುದು. ತೀರ್ಪಿನ ತ್ವರಿತ ಪರಿಶೀಲನೆ ಅಗತ್ಯ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳ ಬೀದಿನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ‘ದೆಹಲಿ– ರಾಷ್ಟ್ರ ರಾಜಧಾನಿ ಪ್ರದೇಶ’ದ (ಎನ್‌ಸಿಆರ್) ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ, ಈ ಹಿಂದಿನ ನ್ಯಾಯಾಲಯದ ತೀರ್ಪುಗಳಿಗೆ ಹಾಗೂ ಜಾರಿಯಲ್ಲಿರುವ ಕಾನೂನುಗಳಿಗೆ ವಿರುದ್ಧವಾದುದಾಗಿದೆ. ವಿಭಾಗೀಯ ಪೀಠದ ನಿರ್ದೇಶನದ ಹಿಂದೆ, ಭೂಮಿಯ ಮೇಲೆ ವಾಸಿಸಲು ಮನುಷ್ಯನಿಗಷ್ಟೇ ಹಕ್ಕಿದೆ ಎನ್ನುವ ಮನಃಸ್ಥಿತಿ ಇರುವಂತಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ– 1960 ಹಾಗೂ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು– 2023 (ಎಬಿಸಿ) ರೀತಿಯ ಕಾನೂನುಗಳು, ಪ್ರಾಣಿಗಳು ಮತ್ತು ಸಾಕುಪ್ರಾಣಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಈ ಕಾನೂನುಗಳು ಮನುಷ್ಯರ ಹಿತರಕ್ಷಣೆ ಹಾಗೂ ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಹೇಗೆ ಎನ್ನುವುದರ ಬಗ್ಗೆಯೂ ತಿಳಿಸುತ್ತವೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಆಡಳಿತ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಅಧಿಕಾರಿಗಳ ಹೊಣೆಗಾರಿಕೆಯ ವೈಫಲ್ಯದಿಂದಾಗಿಯೇ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಆಡಳಿತದಲ್ಲಿನ ಲೋಪಕ್ಕಾಗಿ ಬೀದಿನಾಯಿಗಳು ದಂಡ ತೆರುವಂತೆ ಆಗಬಾರದು.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠ ನೀಡಿರುವ ತೀರ್ಪಿನಲ್ಲಿ ಪ್ರಾಣಿಪ್ರಿಯರು ಮತ್ತು ಹೋರಾಟಗಾರರ ಬಗ್ಗೆ ಕಠಿಣ ನುಡಿಗಳನ್ನಾಡಲಾಗಿದೆ. ನಾಯಿ ಕಡಿತದಿಂದ ಸಾವಿಗೀಡಾಗಿರುವ ಮಕ್ಕಳನ್ನು ಜೀವಂತಗೊಳಿಸುವುದು ಸಾಧ್ಯವಿಲ್ಲವಾದ್ದರಿಂದ, ನಾಯಿಗಳನ್ನು ಆಶ್ರಯ ತಾಣಗಳಿಗೆ ತಳ್ಳುವ ಪ್ರಕರಣದಲ್ಲಿ ಪ್ರಾಣಿ ಪ್ರಿಯರ ಭಾವನೆಗಳಿಗೆ ಯಾವುದೇ ಬೆಲೆಯಿಲ್ಲ ಎಂದು ನ್ಯಾಯಪೀಠ ಹೇಳಿದೆ. ಆದರೆ, ಸುಪ್ರೀಂ ಕೋರ್ಟ್‌ನ ಈ ತೀರ್ಮಾನದಲ್ಲಿ ಸಮರ್ಪಕ ತರ್ಕ ಅಥವಾ ಕಾನೂನಿನ ನೆಲೆಗಟ್ಟು ಇರುವಂತಿಲ್ಲ. ತೀರ್ಪು ನೀಡುವ ಮುನ್ನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ಅಭಿಪ್ರಾಯಗಳನ್ನು ನ್ಯಾಯಪೀಠ ಆಲಿಸಿಲ್ಲ. ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ಅವರು ಕೂಡ ಕಠಿಣ ನಿಲುವನ್ನು ತಳೆದುದರಿಂದ, ಆರಂಭದಲ್ಲಿ ದೆಹಲಿಗಷ್ಟೇ ಸೀಮಿತವಾಗಿದ್ದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಅಟ್ಟುವ ಆದೇಶವು, ಇಡೀ ‘ಎನ್‌ಸಿಆರ್’ಗೆ ವಿಸ್ತರಣೆಗೊಂಡಿತು. ಆದರೆ, ನಾಯಿಗಳ ಜನನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ‘ಎಬಿಸಿ’ ಕಾನೂನುಗಳು ಮಾತ್ರವೇ ತರ್ಕಬದ್ಧ, ವೈಜ್ಞಾನಿಕ, ಏಕೈಕ ಪರಿಹಾರವಾಗಿವೆ ಎಂದು ಕೇಂದ್ರ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಲೋಕಸಭೆಗೆ ತಿಳಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಮೊದಲು ‘ಎಬಿಸಿ’ ಕಾನೂನುಗಳನ್ನು ಎತ್ತಿಹಿಡಿದಿದೆ ಹಾಗೂ ನಿರ್ಬಂಧ ಅಥವಾ ಸ್ಥಳಾಂತರದ ಬದಲು ನಾಯಿಗಳಿಗೆ ಆಹಾರ ಒದಗಿಸುವಂತೆ ಹೇಳಿದೆ. ಈಗ ವ್ಯತಿರಿಕ್ತ ನಿಲುವು ತಳೆದಿರುವ ನ್ಯಾಯಪೀಠ, ತನ್ನ ಆದೇಶ ಅನುಷ್ಠಾನಕ್ಕೆ ತರುವಲ್ಲಿ ಎದುರಾಗುವ ಯಾವುದೇ ಪ್ರತಿರೋಧವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವುದಾಗಿ ಎಚ್ಚರಿಸಿದೆ.
ದೆಹಲಿಯ ಬೀದಿಗಳಲ್ಲಿ ಸುಮಾರು 10 ಲಕ್ಷ ನಾಯಿಗಳಿವೆ. ಅವುಗಳಿಗೆ ಆಶ್ರಯ ತಾಣಗಳನ್ನು ಕಲ್ಪಿಸುವುದು ಕೋಟ್ಯಂತರ ರೂಪಾಯಿಗಳ ವೆಚ್ಚಕ್ಕೆ ಕಾರಣವಾಗುತ್ತದೆ. ಆಶ್ರಯ ತಾಣಗಳಿಗಾಗಿ ಜಾಗ, ಕಟ್ಟಡಗಳ ನಿರ್ಮಾಣ, ಸಿಬ್ಬಂದಿಗೆ ಸಂಬಳ ಭರಿಸಬೇಕಾಗುತ್ತದೆ. ಸಂತ್ರಸ್ತರ ಶಿಬಿರಗಳಂತೆ ಈ ಕೇಂದ್ರಗಳನ್ನು ನಡೆಸಬೇಕಾಗುತ್ತದೆ. ಆಶ್ರಯ ಕೇಂದ್ರಗಳಿಗೆ ರವಾನೆಯಾಗುವ ನಾಯಿಗಳಿಂದ ತೆರವಾಗುವ ಬೀದಿಗಳಲ್ಲಿ, ಲಸಿಕೆ ಹಾಗೂ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಪಡದ ಪಕ್ಕದ ರಾಜ್ಯಗಳ ನಾಯಿಗಳು ತುಂಬಿಕೊಳ್ಳಲೂಬಹುದು. ಹೀಗೆ ಬೇರೆ ರಾಜ್ಯಗಳಿಂದ ಬರುವ ನಾಯಿಗಳನ್ನು ಗಡಿಗಳಲ್ಲಿ ತಡೆದು ಆಶ್ರಯ ಕೇಂದ್ರಗಳಿಗೆ ರವಾನಿಸಲು ಸಾಧ್ಯವಿದೆಯೆ? ಲಭ್ಯ ಅಂಕಿ ಅಂಶಗಳ ಪ್ರಕಾರ, ನಾಯಿ ಕಡಿತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ನಿಜ. ಆದರೆ, ನಾಯಿಗಳನ್ನು ಊರಿನಿಂದ ಹೊರಗೆ ದೊಡ್ಡಿಗಳಂಥ ಕೇಂದ್ರಗಳಲ್ಲಿ ಕೂಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಮಾನವೀಯ ಹಾಗೂ ಪ್ರಾಯೋಗಿಕವಲ್ಲದ ಪರಿಹಾರಗಳಿಂದ ಸಮಸ್ಯೆಗಳೇ ಹೆಚ್ಚು. ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಲ್ಲಿ ಇರಿಸುವ ನ್ಯಾಯಪೀಠದ ತೀರ್ಪಿನ ಪರಿಶೀಲನೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಆರ್.ಬಿ. ಗವಾಯಿ ಹೇಳಿದ್ದಾರೆ. ಆ ಪರಿಶೀಲನೆ ತ್ವರಿತಗತಿಯಲ್ಲಿ ನಡೆದು, ಬೀದಿನಾಯಿಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ, ಪ್ರಾಯೋಗಿಕ ಹಾಗೂ ಮಾನವೀಯ ಪರಿಹಾರ ಕಂಡುಕೊಳ್ಳುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.