ADVERTISEMENT

ಪಟಾಕಿಗೆ ನಿರ್ಬಂಧ: ಕೋರ್ಟ್ ತೀರ್ಪು ಅನುಷ್ಠಾನ ಮುಖ್ಯ

ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂಬ ಬಗ್ಗೆ ಜನಸಾಮಾನ್ಯರಲ್ಲೂ ಜಾಗೃತಿ ಮೂಡಬೇಕು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 20:00 IST
Last Updated 24 ಅಕ್ಟೋಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೀಪಾವಳಿ ಹಬ್ಬದ ದಿನ ದೇಶದಾದ್ಯಂತ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ದೇಶದಾದ್ಯಂತ ಪಟಾಕಿ ತಯಾರಿಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನಂತರ ಪಟಾಕಿ ತಯಾರಿಕೆ ಮತ್ತು ಸಿಡಿಸುವುದನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವುದು ಸಾಧ್ಯವಿಲ್ಲ ಎಂಬಂತಹ ನಿಲುವನ್ನು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ತಾಳಿದೆ. ಪಟಾಕಿಗಳನ್ನು ಸಿಡಿಸಲು ನಿಗದಿತ ಅವಧಿಯನ್ನು ವಿಧಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಈಗಾಗಲೇ ಅನೇಕ ಸಮೀಕ್ಷಾ ವರದಿಗಳು ಬಿಡುಗಡೆಯಾಗಿವೆ. ಇಂತಹ ಸಂದರ್ಭದಲ್ಲಿ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯಗಳಿಗೆ ತಡೆ ಒಡ್ಡಲು ಈ ತೀರ್ಪು ಪ್ರೇರಕ. ರಾಷ್ಟ್ರದ ರಾಜಧಾನಿ ದೆಹಲಿಯಂತೂ ವಿಶ್ವದ 20 ಅತ್ಯಂತ ಹೆಚ್ಚು ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಸೇರಿದೆ. ನೆರೆಯ ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಬೆಳೆ ತ್ಯಾಜ್ಯಗಳ ಸುಡುವಿಕೆಯಿಂದಲೂ ದೆಹಲಿಯ ವಾಯುಮಾಲಿನ್ಯ ಪ್ರಮಾಣ ಮೊದಲೇ ತೀವ್ರವಾಗಿರುತ್ತದೆ. ಇದರ ಜೊತೆಗೆ ದೆಹಲಿಯಲ್ಲಿ ದೀಪಾವಳಿಯ ನಂತರ ವಾಯುಮಾಲಿನ್ಯ ಮಟ್ಟ ಕಳೆದ ವರ್ಷ ಸುರಕ್ಷತೆಯ ಮಿತಿಗಿಂತ 18 ಪಟ್ಟು ಹೆಚ್ಚಾಗಿತ್ತು. ಹಬ್ಬ ಕಳೆದ ಮೇಲೆ ಒಂದು ತಿಂಗಳಿಗೂ ಹೆಚ್ಚು ಕಾಲ ದೆಹಲಿ ನಗರದಲ್ಲಿ ಮಾಲಿನ್ಯ ಮಟ್ಟ ಕಡಿಮೆ ಆಗಿರಲಿಲ್ಲ ಎಂಬಂಥ ವರದಿಗಳಿವೆ. ಹೀಗಾಗಿ, ಈ ಬಾರಿ, ದೆಹಲಿಯಲ್ಲಿ ನಿಗದಿತ ಜಾಗಗಳಲ್ಲಿ ಸಾಮೂಹಿಕವಾಗಿ ಪಟಾಕಿ ಸಿಡಿಸಬೇಕೆಂದು ಕೋರ್ಟ್ ಆದೇಶಿಸಿದೆ. ಇದಕ್ಕಾಗಿ ಜಾಗಗಳನ್ನು ಗುರುತಿಸಬೇಕೆಂದೂ ನಿರ್ದೇಶನ ನೀಡಲಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ಪಟಾಕಿ ಸಿಡಿತಕ್ಕೆ ಸುಪ್ರೀಂ ಕೋರ್ಟ್ ನಿಷೇಧವನ್ನೇ ಹೇರಿತ್ತು. ಹೀಗಿದ್ದೂ ಇದು ನಿರೀಕ್ಷಿತ ಪರಿಣಾಮ ಬೀರಲಿಲ್ಲ. ಬಹುಶಃ ಈ ವೈಫಲ್ಯವನ್ನು ಕೋರ್ಟ್ ಗಮನಕ್ಕೆ ತಂದುಕೊಂಡಂತಿದೆ. ಹೀಗಾಗಿ ಈ ಬಾರಿ ಪೂರ್ಣ ನಿಷೇಧ ಹೇರಿಲ್ಲ. ಕಡಿಮೆ ಮಾಲಿನ್ಯ ಹೊರಸೂಸುವ ಹಾಗೂ ಶಬ್ದಮಾಲಿನ್ಯ ಕಡಿಮೆ ಇರುವ 'ಹಸಿರು ಪಟಾಕಿ'ಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ನಿರ್ಬಂಧ ಹೇರುವ ಹಿಂದೆ ಕೋರ್ಟ್ ವ್ಯಕ್ತಪಡಿಸಿರುವ ಕಾಳಜಿ ಸರಿಯಾದುದು. ಆದರೆ ನ್ಯಾಯಾಂಗದ ಈ ಕಾಳಜಿಯನ್ನು ಜನರು ಅರ್ಥ ಮಾಡಿಕೊಳ್ಳುವರೇ? ತೀರ್ಪಿಗೆ ಬದ್ಧರಾಗುವರೇ ಎಂಬುದು ಪ್ರಶ್ನೆ. ಹಿಂದೂಗಳ ಹಬ್ಬದ ಮೇಲೆ ನಿರ್ಬಂಧವೇಕೆ ಎಂಬ ಪ್ರಶ್ನೆಯನ್ನು ಕಳೆದ ವರ್ಷ ಕೆಲವರು ಎತ್ತಿದ್ದರು. ಪಟಾಕಿ ಸಿಡಿಸುವ ಸಂಭ್ರಮ ಇಲ್ಲದಿದ್ದರೆ ದೀಪಾವಳಿಗೆ ಅರ್ಥವಿಲ್ಲ ಎಂಬ ಭಾವನೆ ವ್ಯಕ್ತಪಡಿಸಲಾಗಿತ್ತು. ಈ ಬಾರಿ, ಹೊಸ ವರ್ಷಾಚರಣೆ ಮತ್ತು ಕ್ರಿಸ್‍ಮಸ್‍ ಹಬ್ಬದ ವೇಳೆಯೂ ಪಟಾಕಿ ಸಿಡಿಸಲು ರಾತ್ರಿ 11.55ರಿಂದ 12.30ರವರೆಗೆ 35 ನಿಮಿಷಗಳ ಅವಧಿಯನ್ನು ಕೋರ್ಟ್ ತೀರ್ಪು ನಿಗದಿಪಡಿಸಿದೆ. ಇದರಿಂದ ಒಂದು ರೀತಿಯ ಸಮತೋಲನ ತಂದಂತಾಗಿದೆ. ಆದರೆ, ಪಟಾಕಿ ಸಿಡಿತದ ನಿಯಂತ್ರಣದ ಉಸ್ತುವಾರಿಯನ್ನು ಹೊರುವವರು ಯಾರು? ಎಂಬುದು ಇಲ್ಲಿ ಮುಖ್ಯ. ಸ್ಥಳೀಯ ಪೊಲೀಸರು ಹೊಣೆ ಹೊತ್ತುಕೊಳ್ಳಬೇಕು ಎಂದು ಕೋರ್ಟ್ ತೀರ್ಪು ಹೇಳಿದೆ. ಆದರೆ ಎಷ್ಟರಮಟ್ಟಿಗೆ ಇದರ ಅನುಷ್ಠಾನ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಹಬ್ಬಕ್ಕೆ ಪಟಾಕಿ ಸಿಡಿಸುವುದು ಸಂಪ್ರದಾಯ ಎಂದು ಹೇಳುತ್ತಾ ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂಬ ಬಗ್ಗೆ ಜನಸಾಮಾನ್ಯರಲ್ಲೂ ಜಾಗೃತಿ ಮೂಡಬೇಕು. ಪಟಾಕಿ ಸಿಡಿಸುವ ವಿಚಾರದಲ್ಲಿ ಸ್ವಯಂ ನಿಯಂತ್ರಣ ಇರುವುದು ಅಗತ್ಯ. ಎಲ್ಲಾ ವಿಚಾರಗಳಿಗೂ ಕೋರ್ಟ್ ನಿರ್ದೇಶನವೇ ಅಗತ್ಯವಾಗುತ್ತಿರುವ ಸ್ಥಿತಿ ಸೃಷ್ಟಿಯಾಗುತ್ತಿರುವುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT