ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಸೆ. 27ರಂದು ನಡೆದ ರಾಜಕೀಯ ರ್‍ಯಾಲಿಯಲ್ಲಿ ಕನಿಷ್ಠ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜಕೀಯ ರ್‍ಯಾಲಿಯೊಂದರಲ್ಲಿ ಏನೆಲ್ಲ ತಪ್ಪುಗಳು ಆಗಬಹುದೋ ಅವೆಲ್ಲವೂ ಅಲ್ಲಿ ನಡೆದವು. ರ್‍ಯಾಲಿಯನ್ನು ಸೂಕ್ತವಲ್ಲದ ಸಮಯದಲ್ಲಿ ಆಯೋಜಿಸಿದ್ದುದು, ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದುದು, ಜನಸಮೂಹವನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ, ಎಚ್ಚರಿಕೆಯ ಸಂದೇಶಗಳ ಉಪೇಕ್ಷೆ, ಜನರನ್ನು ನಿರ್ವಹಿಸುವಲ್ಲಿನ ವೈಫಲ್ಯ, ಪರಿಸ್ಥಿತಿಯನ್ನು ನಿಭಾಯಿಸಲು ಸ್ವಲ್ಪವೂ ಸಜ್ಜಾಗಿರದೆ ಇದ್ದುದು... ಇವೆಲ್ಲ ಅಲ್ಲಿ ಕಂಡುಬಂದವು. ಮೃತರ ಸಂಖ್ಯೆಯು ಇನ್ನೂ ಹೆಚ್ಚಾಗುವ ಭೀತಿ ಇದೆ. ತಮಿಳಿನ ಜನಪ್ರಿಯ ನಟ ವಿಜಯ್ ಅವರು ತಮ್ಮ ರಾಜಕೀಯ ಪಕ್ಷ ‘ಟಿವಿಕೆ’ (ತಮಿಳಗ ವೆಟ್ರಿ ಕಳಗಂ) ಪರವಾಗಿ ಪ್ರಚಾರ ನಡೆಸಲು ಈ ರ್‍ಯಾಲಿ ಆಯೋಜಿಸಿದ್ದರು. ಅವರ ರ್‍ಯಾಲಿಗಳಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ರಾಜಕೀಯ ಸಮಾವೇಶಗಳು, ಧಾರ್ಮಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದಾಗ, ಆಯೋಜಕರ ಮೈಮರೆವು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ಲೋಪದಿಂದಾಗಿ ಕಾಲ್ತುಳಿತದಂತಹ ದುರ್ಘಟನೆಗಳು ಆಗುತ್ತವೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇಂತಹ ನಿದರ್ಶನಗಳಿಗೆ ಈಗ ಕರೂರು ಜಿಲ್ಲೆಯಲ್ಲಿ ನಡೆದ ದುರಂತವು ಮತ್ತೊಂದು ಸೇರ್ಪಡೆ.
ಟಿವಿಕೆ ಪಕ್ಷದ ರ್‍ಯಾಲಿಯನ್ನು ಆಯೋಜಿಸಿದ್ದ ಸ್ಥಳವು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಲು ಸೂಕ್ತವಾಗಿರಲಿಲ್ಲ, ಅಲ್ಲಿ ಸ್ಥಳಾವಕಾಶ ಕಡಿಮೆ ಇತ್ತು. 10 ಸಾವಿರ ಜನ ಸೇರಲು ಅನುಮತಿ ಇದ್ದ ಸ್ಥಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ನಟ ವಿಜಯ್ ಅವರು ಅಲ್ಲಿಗೆ ತಡವಾಗಿ ಬಂದರು. ಅದು ಕಾಲ್ತುಳಿತ ಸಂಭವಿಸುವುದಕ್ಕೆ ಮುಖ್ಯ ಕಾರಣ. ಏಕೆಂದರೆ, ಅಲ್ಲಿ ಜನರ ಜಮಾವಣೆ ಆಗುತ್ತಲೇ ಇತ್ತು; ನಟನ ಬರುವಿಕೆಗಾಗಿ ಕಾಯುತ್ತಿದ್ದ ಹಲವರು ಸುಸ್ತಾಗಿ ಮೂರ್ಛೆಹೋದರು. ಸೂರ್ಯನ ಝಳ ತೀವ್ರವಾಗಿದ್ದಾಗ ಮಹಿಳೆಯರು ಮತ್ತು ಮಕ್ಕಳು ನೀರು, ಆಹಾರ ಇಲ್ಲದೆ ಬಹಳ ಹೊತ್ತು ಕಾಯುವಂತೆ ಮಾಡುವುದು ಒಂದು ಕ್ರೌರ್ಯ. ನಟನ ವಾಹನ ಸಾಗಲು ಅವಕಾಶ ಮಾಡಿಕೊಡುವ ಉದ್ದೇಶದಿಂದ, ಜನಸಮೂಹವು ದಾರಿಬಿಡುವಂತೆ ಒತ್ತಡ ತಂದಾಗ ಕಾಲ್ತುಳಿತ ಆರಂಭವಾಯಿತು ಎಂದು ವರದಿಗಳು ಹೇಳುತ್ತಿವೆ. ಕಾರ್ಯಕ್ರಮದ ಸ್ಥಳದಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇರಲಿಲ್ಲ. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ಅದಕ್ಕೆ ಕಾರಣ ಎಂದು ಹೇಳಲಾಗಿದೆ. ರಸ್ತೆಗಳು ಕಿರಿದಾಗಿದ್ದ ಪರಿಣಾಮವಾಗಿ ದುರಂತದ ಸ್ಥಳ ತಲುಪಲು ಆ್ಯಂಬುಲೆನ್ಸ್‌ಗಳಿಗೆ ಕಷ್ಟವಾಯಿತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಬೇಕಿರುವ ಎಲ್ಲ ಸೌಲಭ್ಯಗಳು ಸ್ಥಳೀಯ ಆಸ್ಪತ್ರೆಯಲ್ಲಿ ಇರಲಿಲ್ಲ. ದುರ್ಘಟನೆಗೆ ಕಾರಣವಾದ ಇತರ ಹಲವು ಅಂಶಗಳ ಬಗ್ಗೆ ತನಿಖೆ ನಡೆಸಿದ ನಂತರವೇ ಸಮಗ್ರ ಚಿತ್ರಣವೊಂದು ಸಿಗಬಹುದು. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ತಮಿಳುನಾಡು ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆರಂಭಿಸಿದೆ.
ಕಾಲ್ತುಳಿತದ ಪ್ರಾಥಮಿಕ ಜವಾಬ್ದಾರಿಯನ್ನು ಸಾಮಾನ್ಯವಾಗಿ ರ್‍ಯಾಲಿಯ ಆಯೋಜಕರು ಹೊರಬೇಕಾಗುತ್ತದೆ. ನಟ ವಿಜಯ್ ಹಾಗೂ ಅವರ ಪಕ್ಷದ ಪದಾಧಿಕಾರಿಗಳು ಹೊಣೆಯಿಂದ ತಪ್ಪಿಸಿಕೊಳ್ಳಲು ಆಗದು. ವಿಜಯ್ ಅವರ ಪಕ್ಷವು ಈಚೆಗೆ ಆಯೋಜಿಸಿದ್ದ ಕೆಲವು ರ್‍ಯಾಲಿಗಳಲ್ಲಿ ಲೋಪಗಳು ಹಲವಾರು ಇದ್ದವು. ಅವುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳೂ ಇದ್ದವು ಎಂಬ ದೂರುಗಳು ಇದ್ದವು. ಹೆಚ್ಚಿನ ಪ್ರಮಾಣದಲ್ಲಿ ಎಚ್ಚರಿಕೆ ವಹಿಸುವಂತೆ ನ್ಯಾಯಾಲಯವು ಪಕ್ಷಕ್ಕೆ ಹಾಗೂ ಪೊಲೀಸರಿಗೆ ಸೂಚಿಸಿತ್ತು. ದುರದೃಷ್ಟಕರ ಸಂಗತಿಯೆಂದರೆ, ಈ ದುರಂತವನ್ನು ಈಗ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪ ಶುರುವಾಗಿದೆ. ವಿಧ್ವಂಸಕ ಕೃತ್ಯವೂ ಈ ದುರಂತಕ್ಕೆ ಕಾರಣ ಆಗಿರಬಹುದು ಎಂದು ಕೆಲವರು ಊಹೆ ಮಾಡಿದ್ದಾರೆ. ಕಾಲ್ತುಳಿತದಂತಹ ದುರ್ಘಟನೆ ನಡೆಯುವುದಕ್ಕೆ ಹಲವು ಸರಣಿ ಕಾರಣಗಳು ಇರುತ್ತವೆ. ಕರೂರು ಜಿಲ್ಲೆಯಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ ಏನು ಎಂಬುದು ತನಿಖೆಗಳಿಂದ ಸ್ಪಷ್ಟವಾಗುತ್ತದೆ; ಅದಕ್ಕೆ ಹೊಣೆ ಯಾರು ಎಂಬುದು ಗೊತ್ತಾಗುತ್ತದೆ ಎಂಬ ಆಶಾವಾದವನ್ನು ಈಗ ಹೊಂದಬಹುದು. ದೇಶದಲ್ಲಿ ಕಾಲ್ತುಳಿತದ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಅದರೆ ಇಂತಹ ದುರ್ಘಟನೆಗಳಿಂದ ಸರಿಯಾದ ಪಾಠವನ್ನು ವ್ಯವಸ್ಥೆ ಕಲಿಯುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.