ADVERTISEMENT

ಸಂಪಾದಕೀಯ | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ

ಸಂಪಾದಕೀಯ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
   
ವಿಶ್ವವಿದ್ಯಾಲಯಗಳಲ್ಲಿನ ಬೋಧಕರ ಕೊರತೆಯನ್ನು ಅತಿಥಿ ಸಿಬ್ಬಂದಿ ಮೂಲಕ ನಿಭಾಯಿಸುವುದು ಸರ್ಕಾರ ಮಾಡಿಕೊಂಡಿರುವ ರಾಜಿಯೇ ಹೊರತು, ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಡೆಯಲ್ಲ.

ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಿಬ್ಬಂದಿ ಕೊರತೆಯ ಬಗ್ಗೆ ರಾಜ್ಯಪಾಲ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಥಾವರಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಅಲ್ಲದೆ, ಕುಲಪತಿಗಳ ಸಭೆಯಲ್ಲಿ ಗೆಹಲೋತ್ ಅವರು ಹೆಚ್ಚುವರಿ ಅನುದಾನವನ್ನು ಕೋರಿದ್ದಾರೆ. ಸಿಬ್ಬಂದಿ ಕೊರತೆಯ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಅವರು ‘ಬಹಳ ಸಹಜ’ ಎಂದು ಪರಿಗಣಿಸಲಾಗಿರುವ ಬಿಕ್ಕಟ್ಟೊಂದರ ಕಡೆ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಆದರೆ ನಂತರದಲ್ಲಿ ಆಗಿರುವ ಬೆಳವಣಿಗೆಗಳು, ಸಮಸ್ಯೆಯನ್ನು ಎದುರಿಸುವ ಬದಲು ಸಮಸ್ಯೆಯನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವ ಪ್ರಯತ್ನದಂತೆ ಕಾಣುತ್ತವೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆ ಶೇ 60ರಷ್ಟಿದೆ ಎಂದು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿಯೂ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಳ್ಳಲಾಗಿದೆ ಎಂದು ಅವರು ಸಮರ್ಥನೆ ನೀಡುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ‘ಅತಿಥಿ ಉಪನ್ಯಾಸಕರು’ ಬಹಳ ವಿಶೇಷವಾದ ವಿಷಯವನ್ನು ಬೋಧಿಸುವ ತಜ್ಞರೇನೂ ಅಲ್ಲ. ಅವರು ಇಲ್ಲಿ ತಾತ್ಕಾಲಿಕ ಅವಧಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಕ ಆಗಿರುವವರು. ಮಂಜೂರಾಗಿರುವ ಹುದ್ದೆಗಳು ಖಾಲಿ ಇದ್ದಾಗ, ಆ ಜಾಗಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರು ದಿನವೊಂದರಲ್ಲಿ ಪೂರ್ತಿ ಅವಧಿಗೆ ಕೆಲಸ ಮಾಡುತ್ತಾರೆ, ಇತರ ಬೋಧಕರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ; ಅವರಿಗೆ ಕನಿಷ್ಠ ಉದ್ಯೋಗ ಭದ್ರತೆಯೂ ಇರುವುದಿಲ್ಲ. ಹೀಗಿರುವಾಗ, ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರ ನೇಮಕ ವ್ಯವಸ್ಥೆಯನ್ನು ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಲ್ಲಿನ ವ್ಯವಸ್ಥೆಯ ಜೊತೆ ಹೋಲಿಕೆ ಮಾಡುವುದು ತಪ್ಪುದಾರಿಗೆ ಎಳೆಯುವ ಕೆಲಸ.

ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವ ಅತಿಥಿ ಉಪನ್ಯಾಸಕರು ಬಹಳ ವಿಶಿಷ್ಟವಾದ ಅಕಡೆಮಿಕ್ ಸಾಧನೆ ಮಾಡಿದವರಾಗಿರುತ್ತಾರೆ; ಅವರಲ್ಲಿ ಉದ್ಯಮ ವಲಯದ ಪ್ರಮುಖರು ಹಾಗೂ ನೀತಿ ನಿರೂಪಣಾ ಕ್ಷೇತ್ರದ ಹಿರಿಯರೂ ಇರುತ್ತಾರೆ. ಅವರು ಅತ್ಯುತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ ಸಮೂಹಕ್ಕೆ ಪೂರಕವಾಗಿ ಕೆಲಸ ಮಾಡುತ್ತಾರೆ, ಖಾಲಿ ಇರುವ ಬೋಧಕ ಹುದ್ದೆಗೆ ಪರ್ಯಾಯವಾಗಿ ಅವರ ನೇಮಕ ಆಗಿರುವುದಿಲ್ಲ. ಅಂತಹ ತಜ್ಞರನ್ನು ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಾಲಕಾಲಕ್ಕೆ ಬೋಧನೆಗೆ ಆಹ್ವಾನಿಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆಯೇ? ಕ್ಷೇತ್ರ ತಜ್ಞರನ್ನು ಬೋಧನೆಗೆ ಆಹ್ವಾನಿಸುವ ಉದ್ದೇಶ ಇದೆ ಎಂದಿದ್ದರೂ, ಅದಕ್ಕೆ ಅಗತ್ಯವಿರುವ ಅನುದಾನ ಎಲ್ಲಿದೆ? ದೋಷಪೂರಿತವಾದ ವಿಸ್ತರಣಾ ಕಾರ್ಯಕ್ರಮಗಳು ಸಮಸ್ಯೆಯನ್ನು ತೀವ್ರವಾಗಿಸಿವೆ. ‘ಒಂದು ಜಿಲ್ಲೆ, ಒಂದು ವಿಶ್ವವಿದ್ಯಾಲಯ’ ಕ್ರಮವು ವಿಶ್ವವಿದ್ಯಾಲಯಗಳ ಅಸ್ತಿತ್ವವನ್ನು ಹೆಚ್ಚಿಸಿದ್ದರೂ, ಅದಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಮೂಲಸೌಕರ್ಯ ಸೃಷ್ಟಿಯಾಗಿಲ್ಲ, ಬೋಧಕರ ನೇಮಕ ಆಗಿಲ್ಲ. ಸುಸ್ಥಿರವಾದ ಅಕಡೆಮಿಕ್ ನೀಲನಕ್ಷೆ ಅಥವಾ ಹಣಕಾಸಿನ ಯೋಜನೆ ಇಲ್ಲದೆ ರಚಿಸಲಾಗಿರುವ ಸಂಗೀತ, ಜಾನಪದದಂತಹ ವಿಷಯವಾರು ವಿಶ್ವವಿದ್ಯಾಲಯಗಳು ಸೀಮಿತ ಸಂಪನ್ಮೂಲವನ್ನೇ ಬಳಸಲು ಯತ್ನಿಸುತ್ತಿವೆ. ಸರ್ಕಾರದ ಅನುದಾನ ಪಡೆಯುವ ವಿಶ್ವವಿದ್ಯಾಲಯಗಳು ಖಾಸಗಿ ವಿ.ವಿ.ಗಳ ಮಾದರಿಯಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಹೀಗಾಗಿ, ವಿ.ವಿ.ಗಳು ತಮಗೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲವನ್ನು ತಾವೇ ಕಂಡುಕೊಳ್ಳಬೇಕು ಎಂಬುದು ಸರಿಯಲ್ಲ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಹಣ ಸಂಗ್ರಹಿಸಬಹುದು ಎಂಬ ಸಲಹೆಯನ್ನು ನೀಡುವುದು ಸುಲಭ, ಅನುಷ್ಠಾನ ಕಷ್ಟ. ಬಹುತೇಕ ಕುಲಪತಿಗಳು ಬೋಧನಾ ಅನುಭವ ಮಾತ್ರ ಹೊಂದಿರುತ್ತಾರೆ, ಅವರಿಗೆ ಆಡಳಿತಾತ್ಮಕ ಅನುಭವ ಹೆಚ್ಚಿರುವುದಿಲ್ಲ. ಅವರಿಗೆ ಬೃಹತ್‌ ಗಾತ್ರದ ಕಾರ್ಪೊರೇಟ್ ಕಂಪನಿಗಳ ಜೊತೆ ವ್ಯವಹರಿಸಿದ ಅನುಭವ ಕಡಿಮೆ.

ಸಮಾಧಾನದ ಸಂಗತಿಯೆಂದರೆ, ತಾತ್ಕಾಲಿಕ ಬೋಧಕರನ್ನು ನೆಚ್ಚಿಕೊಳ್ಳುವ ವ್ಯವಸ್ಥೆಯ ವಿರುದ್ಧ ಸುಪ್ರೀಂ ಕೋರ್ಟ್‌ ಜನವರಿಯಲ್ಲಿ ಗಟ್ಟಿ ಸಂದೇಶವೊಂದನ್ನು ರವಾನಿಸಿದೆ. ಒಬ್ಬ ತಾತ್ಕಾಲಿಕ ಶಿಕ್ಷಕನಿಂದ ತೆರವಾದ ಸ್ಥಾನವನ್ನು ಇನ್ನೊಬ್ಬ ತಾತ್ಕಾಲಿಕ ಶಿಕ್ಷಕನ ಮೂಲಕ ನೇಮಕ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅದು ಹೇಳಿದೆ. ಕಾಯಂ ಕೆಲಸಗಳನ್ನು ತಾತ್ಕಾಲಿಕ ಸಿಬ್ಬಂದಿಯ ಮೂಲಕ ಮಾಡಿಸುವುದು ಶೋಷಣೆ ಎಂದೂ ಹೇಳಿದೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ದೀರ್ಘಾವಧಿಯಿಂದ ಖಾಲಿ ಇರುವ ಸ್ಥಾನಗಳನ್ನು ನಾಲ್ಕು ತಿಂಗಳಲ್ಲಿ ಭರ್ತಿ ಮಾಡಬೇಕು ಎಂದು ಹೇಳಿದೆ. ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಗೆ ಹೊಸ ಆಲೋಚನೆಗಳು ಬೇಕಾಗಿವೆ; ಟೊಳ್ಳು ಆವೇಶದ ಸಮರ್ಥನೆಗಳ ಅವಶ್ಯಕತೆ ಇಲ್ಲ. ರಾಜ್ಯದ ವಿಶ್ವವಿದ್ಯಾಲಯಗಳು ಸಮರ್ಥ ಹಾಗೂ ಉದ್ಯಮ ಕೌಶಲಗಳಿಗೆ ಸ್ಪಂದಿಸುವ ಪದವೀಧರರನ್ನು ತಯಾರಿಸಬೇಕು. ತಾತ್ಕಾಲಿಕ ಬೋಧಕ ಸಿಬ್ಬಂದಿಯ ನೇಮಕವನ್ನು ಸಹಜವಾಗಿಸುವುದು, ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನ ಇಲ್ಲದಂತೆ ಮಾಡುವುದು ನೀತಿ ನಿರೂಪಣೆಯಲ್ಲಿನ ಸೋಲು. ವಿಶ್ವವಿದ್ಯಾಲಯಗಳು ಅಂದರೆ ಜ್ಞಾನ ದೇಗುಲವಿದ್ದಂತೆ, ಅವುಗಳನ್ನು ಆ ಬಗೆಯಲ್ಲೇ ಕಾಣಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.