ADVERTISEMENT

ಸಂಪಾದಕೀಯ: ನೆನಪಿನಲ್ಲಿ ಉಳಿಯುವಂಥ ಸರಣಿ; ಟೆಸ್ಟ್‌ ಕ್ರಿಕೆಟ್‌ಗೆ ಮರಳಿ ಯೌವನ

ಸಂಪಾದಕೀಯ
Published 5 ಆಗಸ್ಟ್ 2025, 21:11 IST
Last Updated 5 ಆಗಸ್ಟ್ 2025, 21:11 IST
.
.   

‘ಟ್ವೆಂಟಿ–20 ಕ್ರಿಕೆಟ್‌ನ ಈ ಯುಗದಲ್ಲಿ ಟೆಸ್ಟ್‌ ಆಟಕ್ಕೆ ಸಂಪೂರ್ಣ ವೃದ್ಧಾಪ್ಯ ಆವರಿಸಿದ್ದು, ಇನ್ನೇನು ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ’ ಎಂಬ ಮಾತು ಇತ್ತೀಚಿನ ವರ್ಷಗಳಲ್ಲಿ ಬಲವಾಗಿ ಕೇಳಿಬರುತ್ತಿತ್ತು. ಒಂದುಕಾಲಕ್ಕೆ ‘ಷೇಕ್ಸ್‌ಪಿಯರ್‌ನ ಕಾವ್ಯದಷ್ಟೇ ಮುದ ನೀಡುವ ದೃಶ್ಯಕಾವ್ಯ’ ಎಂಬ ಬಣ್ಣನೆಗೆ ಒಳಗಾಗಿದ್ದ ಕ್ರಿಕೆಟ್‌ನ ಈ ಮಾದರಿಯು ತಲುಪಿದ್ದ ದೈನೇಸಿ ಸ್ಥಿತಿಗೆ ಈ ಮಾತು ದ್ಯೋತಕವಾಗಿತ್ತು. ಆದರೆ, ಭಾರತ–ಇಂಗ್ಲೆಂಡ್‌ ತಂಡಗಳ ನಡುವೆ ಮೊನ್ನೆಯಷ್ಟೆ ಮುಕ್ತಾಯವಾದ ಆ್ಯಂಡರ್ಸನ್‌–ತೆಂಡೂಲ್ಕರ್ ಸರಣಿಯು ಅಂತಹ ಕೊರಗಿಗೆ ಯಾವುದೇ ಕಾರಣವಿಲ್ಲ ಎಂದು ಸಾಬೀತುಪಡಿಸಿದೆ; ಟೆಸ್ಟ್‌ ಕ್ರಿಕೆಟ್‌ಗೆ ಮರಳಿ ಯೌವನ ಪ್ರಾಪ್ತಿಯಾಗಿದೆ ಎಂಬುದಾಗಿಯೂ ಸಾರಿದೆ. ಕ್ರಿಕೆಟ್‌ ಪಂಡಿತರು ಇದುವರೆಗೆ ವ್ಯಕ್ತಪಡಿಸಿದ್ದ ಹಲವು ಅನಿಸಿಕೆಗಳು ಹುಸಿ ಎಂಬುದನ್ನೂ ಈ ಸರಣಿ ಎತ್ತಿತೋರಿದೆ. ಟೆಸ್ಟ್‌ ಪಂದ್ಯಗಳು ಇನ್ನು ಐದು ದಿನಗಳವರೆಗೆ ನಡೆಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಕೂಡ ಈ ಮಾದರಿಯ ಆಟವನ್ನು ನಾಲ್ಕು ದಿನಗಳಿಗೆ ಮೊಟಕುಗೊಳಿಸಲು ಚಿಂತನೆ ನಡೆಸಿತ್ತು. ಐದು ಪಂದ್ಯಗಳ ಈ ಸರಣಿಯ ಪ್ರತೀ ಪಂದ್ಯವೂ ಐದು ದಿನಗಳವರೆಗೆ ನಡೆದಿದೆ. ಟೆಸ್ಟ್‌ ಪಂದ್ಯ ನೋಡಲು ಜನ ಬರುವುದಿಲ್ಲ ಎಂಬ ವಿಷಯವೂ ಚರ್ಚೆಗೆ ಒಳಗಾಗಿತ್ತು. ಆದರೆ, ಭಾರತ–ಇಂಗ್ಲೆಂಡ್‌ ತಂಡಗಳ ಎಲ್ಲಾ ಪಂದ್ಯಗಳ ಟಿಕೆಟ್‌ಗಳೂ ‘ಸೋಲ್ಡ್‌ ಔಟ್‌’ ಆಗಿ, ಕ್ರೀಡಾಂಗಣಗಳು ಭರ್ತಿ ತುಂಬಿದ್ದವು. ಟೆಸ್ಟ್‌ ಪಂದ್ಯ ರೋಚಕತೆಯಿಂದ ಕೂಡಿರುವುದಿಲ್ಲ ಎಂಬ ವಿಶ್ಲೇಷಣೆ ಜೋರಾಗಿತ್ತು. ಓವಲ್‌ ನಲ್ಲಿ ನಡೆದ ಕೊನೆಯ ಪಂದ್ಯವು ಯಾವುದೇ ಟ್ವೆಂಟಿ–20 ಪಂದ್ಯಕ್ಕೂ ಕಡಿಮೆ ಇಲ್ಲದಂತೆ ರೋಚಕತೆಯಿಂದ ಕೂಡಿತ್ತು. ಈ ಪಾರಂಪರಿಕ ಮಾದರಿಯನ್ನು ಉಳಿಸಿಕೊಳ್ಳಲು ಐಸಿಸಿಯು ಆರು ವರ್ಷಗಳ ಹಿಂದೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಆರಂಭಿಸಿರುವುದು ಫಲ ನೀಡಿರು ವಂತಿದೆ. ಫಲಿತಾಂಶವನ್ನು ಪಡೆಯಲೇ ಬೇಕು ಎಂಬ ಮಹತ್ವಾಕಾಂಕ್ಷೆಯ ಆಟದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದೆ.

ಭಾರತ ತಂಡದ ಸುದೀರ್ಘ ಅವಧಿಯ ಇಂಗ್ಲೆಂಡ್‌ ಪ್ರವಾಸವು 2–2ರ ಸಮಬಲದಿಂದ ಅಂತ್ಯಕಂಡಿದೆ. ಓವಲ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಪಡೆಯು ಆರು ರನ್‌ಗಳ ಅಂತರದ ಮೂಲಕ ಇಂಗ್ಲೆಂಡ್‌ ತಂಡದಿಂದ ಗೆಲುವನ್ನು ಕಸಿದುಕೊಂಡಿರುವುದು ಸ್ಪರ್ಧೆಯ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ. ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿ ಕೆಲವು ಬಾರಿ ಸೋಲಿಸಿದೆ. ಆದರೆ, ಇಂಗ್ಲೆಂಡ್‌ ತಂಡವು ತನ್ನ ನೆಲದಲ್ಲಿ ಭಾರತಕ್ಕೆ ಸದಾ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಇಂಗ್ಲೆಂಡ್‌ ನೆಲದಲ್ಲಿ ಆ ತಂಡದ ವಿರುದ್ಧ ಇದುವರೆಗೆ ಮೂರು ಸರಣಿಗಳಲ್ಲಿ ಮಾತ್ರ ಭಾರತಕ್ಕೆ ಗೆಲುವು ಒಲಿದಿದೆ. ಎರಡು ತಿಂಗಳುಗಳ ಹಿಂದೆ ಗಿಲ್‌ ನೇತೃತ್ವದ ಯುವಪಡೆ ಲಂಡನ್‌ ವಿಮಾನವನ್ನು ಏರಲು ಹೊರಟಾಗ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಆರ್‌. ಅಶ್ವಿನ್‌ ಅವರಿಲ್ಲದ ಅನನುಭವಿ ತಂಡ ಎಂಬ ಹಣೆಪಟ್ಟಿಯನ್ನೂ ಅದು ಹಚ್ಚಿಕೊಂಡಿತ್ತು. ಆದರೆ, ಗಿಲ್‌ ಬಳಗ ಇಂಗ್ಲಿಷ್‌ ನಾಡಿನಲ್ಲಿ ತೇಲುತ್ತಿದ್ದ ಮೋಡಗಳ ಅಡಿಯಲ್ಲಿ ತೋರಿದ ಹೋರಾಟ ಅನನ್ಯವಾದುದು. ಇಂಗ್ಲೆಂಡ್‌ನ ಬಾಜ್‌ಬಾಲ್‌ (ಆಕ್ರಮಣಕಾರಿ ಬ್ಯಾಟಿಂಗ್‌) ಶೈಲಿಯು ಭಾರತದ ಯೋಜನೆಗಳನ್ನು ತಲೆಕೆಳಗು ಮಾಡುವಂತಿತ್ತಾದರೂ ಭಾರತೀಯ ಬೌಲರ್‌ಗಳು ಪುಟಿದೆದ್ದು ಯಶ ಗಳಿಸಿದ ರೀತಿ ಗಮನಾರ್ಹವಾಗಿತ್ತು.

ಟ್ವೆಂಟಿ–20 ಪಂದ್ಯಗಳ ಅಬ್ಬರದಿಂದ, ಅದರಲ್ಲೂ ಐಪಿಎಲ್‌ ಬೇಡುವ ಕಾಲಾವಕಾಶದ ಕಾರಣದಿಂದ, ಕ್ರಿಕೆಟ್‌ ಆಟಗಾರರಿಗೆ ಈಗ ವಿಶ್ರಾಂತಿ ಎನ್ನುವುದೇ ಇಲ್ಲ. ಅದು ಆಟಗಾರರಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಯ ಮೂಲಕ ವ್ಯಕ್ತವಾಗುತ್ತಲೇ ಇದೆ. ಅಗ್ರಮಾನ್ಯ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಸರಣಿಯ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದರು. ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಬೌಲಿಂಗ್‌ ಹೊಣೆ ಹೊತ್ತ ಮೊಹಮ್ಮದ್‌ ಸಿರಾಜ್‌ ಐದೂ ಪಂದ್ಯಗಳಲ್ಲಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು. ಸರಣಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಾಗಿ ಗಿಲ್‌ ಹೊರಹೊಮ್ಮಿದರು. ಕೆ.ಎಲ್‌. ರಾಹುಲ್‌, ಯಶಸ್ವಿ ಜೈಸ್ವಾಲ್‌ ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ಆಲ್‌ರೌಂಡರ್‌ಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ರೂಪಾಂತರದ ಹಾದಿಯಲ್ಲಿರುವ ಭಾರತ ತಂಡ, ಆರಂಭಿಕ ಹಂತದ ಕೆಲವು ಸಮಸ್ಯೆಗಳನ್ನು ಎದುರಿಸಿದರೂ ದೊಡ್ಡಶಕ್ತಿಯಾಗಿ ಹೊರಹೊಮ್ಮುವ ಭರವಸೆ ಮೂಡಿಸಿತು. ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರ ಭರ್ಜರಿ ಆಲ್‌ರೌಂಡ್‌ ಆಟ, ಜೋ ರೂಟ್‌ ಅವರ ಇನಿಂಗ್ಸ್‌ ಕಟ್ಟುವ ರೀತಿ ಕೂಡ ಕ್ರಿಕೆಟ್‌ಪ್ರಿಯರ ಮನಸೂರೆಗೊಂಡಿತು. ಗಾಯದ ಕಾರಣದಿಂದ ಒಂಟಿಕೈಯಲ್ಲಿ ಆಡಲಿಳಿದ ಕ್ರಿಸ್‌ ವೋಕ್ಸ್‌ ಅವರ ಚಿತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.