ADVERTISEMENT

ಸಂಪಾದಕೀಯ | ಹೆಚ್ಚುತ್ತಿರುವ ನಿರುದ್ಯೋಗದ ಝಳ: ಸರ್ಕಾರಿ ಹುದ್ದೆಗಳು ಭರ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 23:47 IST
Last Updated 9 ಅಕ್ಟೋಬರ್ 2025, 23:47 IST
ಸಂಪಾದಕೀಯ
ಸಂಪಾದಕೀಯ   

ಕೆಲವು ವರ್ಷಗಳಿಂದ ಸರ್ಕಾರಿ ಉದ್ಯೋಗಗಳ ನೇರ ನೇಮಕಾತಿ ಪ್ರಕ್ರಿಯೆ ರಾಜ್ಯದಲ್ಲಿ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ, ನಿರುದ್ಯೋಗಿ ಯುವಜನರು ರಾಜ್ಯದ ವಿವಿಧ ಭಾಗಗಳಲ್ಲಿ ಬೀದಿಗೆ ಇಳಿಯುತ್ತಿದ್ದಾರೆ. ಧಾರವಾಡದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಇತ್ತೀಚೆಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ, ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಗಳನ್ನು ರಾಜ್ಯದ ಎಲ್ಲ ಭಾಗಗಳ ನಿರುದ್ಯೋಗಿ ಯುವಜನರ ತವಕ–ತಲ್ಲಣ ಹಾಗೂ ಒಡಲೊಳಗಿನ ಬೆಂಕಿಯ ರೂಪದಲ್ಲಿ ಸರ್ಕಾರ ಗಮನಿಸಬೇಕಾಗಿದೆ. ದುರದೃಷ್ಟಕರ ಸಂಗತಿಯೆಂದರೆ, ನೇರ ನೇಮಕಾತಿ ಕೊನೆಯದಾಗಿ ನಡೆದದ್ದು ಯಾವಾಗ ಎನ್ನುವುದೇ ಸರ್ಕಾರಕ್ಕೆ ಮರೆತುಹೋದಂತಿದೆ ಅಥವಾ ಯುವಜನರಿಗೆ ಉದ್ಯೋಗ ಒದಗಿಸುವುದು ತನ್ನ ಜವಾಬ್ದಾರಿ ಎನ್ನುವುದನ್ನು ಸರ್ಕಾರ ಮರೆತಿರುವಂತಿದೆ. ವಯೋನಿವೃತ್ತಿಯೂ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಇತ್ತೀಚಿನ ವರ್ಷಗಳಲ್ಲಿ ಯಾವ ಸರ್ಕಾರವೂ ಮುತುವರ್ಜಿ ತೋರಿಸಿಲ್ಲ. ದಿನಗೂಲಿ, ಗುತ್ತಿಗೆ, ಅರೆಕಾಲಿಕ ಉದ್ಯೋಗಗಳ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರಗಳು ಮುಂದೂಡುತ್ತಲೇ ಬರುತ್ತಿವೆ. ಶಿಕ್ಷಣ ಕ್ಷೇತ್ರದಲ್ಲೂ, ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಅತಿಥಿ ಬೋಧಕರ ಮೂಲಕವೇ ಶೈಕ್ಷಣಿಕ ವರ್ಷಗಳನ್ನು ನಿಭಾಯಿಸುವ ಕಸರತ್ತನ್ನು ಸರ್ಕಾರ ಹಲವು ವರ್ಷಗಳಿಂದ ಮಾಡುತ್ತಿದೆ. ಈ ಮೂಲಕ, ಅತಿಥಿ ಶಿಕ್ಷಕರ ಶೋಷಣೆಯ ಜೊತೆಗೆ ಮಕ್ಕಳಿಗೂ ಅನ್ಯಾಯ ಮಾಡಲಾಗುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334, ಕೃಷಿ ಇಲಾಖೆ ಯಲ್ಲಿ 6,773 ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ 18,500 ಹುದ್ದೆಗಳು ಸೇರಿದಂತೆ 43 ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ತೆರವಾದ ಹುದ್ದೆಗಳಿಗೆ ಆಯಾ ವರ್ಷವೇ ನೇಮಕಾತಿ ನಡೆಸಿದರೆ, ಅರ್ಹ ನಿರುದ್ಯೋಗಿಗಳಿಗೆ ಕೆಲಸ ದೊರೆತಂತಾಗುತ್ತದೆ, ಆಡಳಿತ ಯಂತ್ರದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಆದರೆ, ವಿವಿಧ ಕಾರಣಗಳನ್ನೊಡ್ಡಿ ನೇಮಕಾತಿ ಪ್ರಕ್ರಿಯೆಯನ್ನು ಮುಂದೂ ಡುವುದು ಸಾಮಾನ್ಯ ಎನ್ನುವಂತಾಗಿದೆ. ನೇಮಕಾತಿ ಪ್ರಕ್ರಿಯೆ ಮುಂದೆ ಹೋದಂತೆಲ್ಲ ಅರ್ಹ ಅಭ್ಯರ್ಥಿಗಳು ವಯೋಮಿತಿ ದಾಟಿ, ಸರ್ಕಾರಿ ಉದ್ಯೋಗಕ್ಕೆ ಅನರ್ಹರಾಗುತ್ತಾರೆ. ಶಿಕ್ಷಕ, ಪೊಲೀಸ್‌ ಹುದ್ದೆ ಸೇರಿದಂತೆ ಸರ್ಕಾರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ನಿರೀಕ್ಷೆಯಿಂದ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ವಯಸ್ಸಿನೊಂದಿಗೆ ಕನಸುಗಳೂ ಜಾರಿಹೋಗುತ್ತಿರುವ ಆತಂಕ ಎದುರಿಸುತ್ತಿದ್ದಾರೆ. ಮಕ್ಕಳ ನೌಕರಿಯ ಮೂಲಕ ನೆಮ್ಮದಿಯ ಬದುಕಿಗೆ ಹಂಬಲಿಸುವ ಕುಟುಂಬಗಳು ಕೂಡ ಅತಂತ್ರ ಪರಿಸ್ಥಿತಿಯಲ್ಲಿ ಇರುವಂತಾಗಿದೆ.

ಸರ್ಕಾರಿ ವಲಯದ ಜೊತೆಗೆ ಖಾಸಗಿ ವಲಯದಲ್ಲೂ ವ್ಯಾಪಕ ಉದ್ಯೋಗ ಸೃಷ್ಟಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ವಲಯಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಹೊಣೆಗಾರಿಕೆ. ರಸ್ತೆ ಗುಂಡಿ, ಸಂಚಾರ ದಟ್ಟಣೆ ಸಮಸ್ಯೆಯಂಥ ವಿಷಯಗಳು ಪ್ರಸ್ತಾಪವಾದಾಗಲೆಲ್ಲ ಕರ್ನಾಟಕದ ಉದ್ಯಮಿಗಳನ್ನು ಸೆಳೆಯಲು ನೆರೆಯ ರಾಜ್ಯಗಳು ತುದಿಗಾಲಲ್ಲಿ ನಿಂತಿರುತ್ತವೆ. ಉದ್ಯಮಿಗಳನ್ನು ಸೆಳೆಯಲು ರಾಜ್ಯಗಳು ಸ್ಪರ್ಧೆ ನಡೆಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕಕ್ಕೆ ಇರುವ ವರ್ಚಸ್ಸನ್ನು ಬಳಸಿಕೊಂಡು ಹೆಚ್ಚಿನ ಉದ್ಯಮ–ಉದ್ಯೋಗಗಳು ರೂಪುಗೊಳ್ಳುವುದಕ್ಕೆ ಅಗತ್ಯವಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಬದುಕು ಕೊಂಚ ಸಹನೀಯಗೊಂಡಿದೆ ಎನ್ನುವುದು ನಿಜ. ಆದರೆ, ಉದ್ಯೋಗ ಸೃಷ್ಟಿಯ ಮೂಲಕವಷ್ಟೇ ಕುಟುಂಬಗಳ ಸಬಲೀಕರಣಕ್ಕೆ ಸ್ಥಿರತೆ ದೊರೆಯುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು. ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಿರುದ್ಯೋಗಿಗಳ ಧ್ವನಿ ಆಗಬೇಕಾಗಿದ್ದ ವಿರೋಧ ಪಕ್ಷಗಳು ಧಾರ್ಮಿಕ ಚಟುವಟಿಕೆಗಳಲ್ಲಿ ಬಿಡುವು ಕಳೆದುಕೊಂಡು ತಮ್ಮ ಹೊಣೆಗಾರಿಕೆಯನ್ನೇ ನಿರ್ಲಕ್ಷಿಸಿವೆ. ಹಾಗಾಗಿ, ಉದ್ಯೋಗದ ಹಕ್ಕನ್ನು ಮಂಡಿಸಲು ಬೀದಿಗಿಳಿಯುವುದರ ಹೊರತು ಯುವಜನರಿಗೆ ಬೇರೆ ದಾರಿ ಉಳಿದಿಲ್ಲ. ಯುವಜನರ ಹತಾಶೆ ಆಕ್ರೋಶವಾಗಿ ಬದಲಾಗುವುದಕ್ಕೆ ಅವಕಾಶ ಕಲ್ಪಿಸದೆ, ಸರ್ಕಾರಿ ಹುದ್ದೆಗಳನ್ನು ತುಂಬಲು ಸರ್ಕಾರ ತಕ್ಷಣ ಮುಂದಾಗಬೇಕು ಹಾಗೂ ನಿರ್ದಿಷ್ಟ ಕಾಲಮಿತಿಗೆ ಅನುಗುಣವಾಗಿ ವಯೋಮಿತಿಯನ್ನು ಹೆಚ್ಚಿಸಬೇಕು. ನಿರುದ್ಯೋಗ ನಿವಾರಣೆ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರ ಉದ್ಯೋಗ ಮೇಳಗಳನ್ನು ನಡೆಸುತ್ತಿದೆ. ಅವುಗಳ ಫಲಶ್ರುತಿಯ ಬಗ್ಗೆ ಪರಾಮರ್ಶೆಯೂ ನಡೆಯಬೇಕಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.