ರಾಜ್ಯದ ವಿಶ್ವವಿದ್ಯಾಲಯಗಳು ನಾಯಕತ್ವದ ಕೊರತೆಯಿಂದ ಬಳಲುತ್ತಿವೆ. ಅವುಗಳನ್ನು ಬಲಗೊಳಿಸುವ ಹಾಗೂ ಸೃಜನಶೀಲಗೊಳಿಸುವ ಕೆಲಸ ನಡೆಯದೆ ಹೋದರೆ, ಉನ್ನತ ಶಿಕ್ಷಣ ಕ್ಷೇತ್ರ ತೀವ್ರ ಕುಸಿತ ಕಾಣಲಿದೆ.
***
ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳು ದೊರೆಯುತ್ತಿಲ್ಲ; ಎರಡು ಬಾರಿ ಅರ್ಜಿ ಕರೆದರೂ ಅರ್ಹರು ದೊರೆಯದ ಕಾರಣ ಮತ್ತೊಮ್ಮೆ ಅರ್ಜಿ ಕರೆಯಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ವಿಶ್ವವಿದ್ಯಾಲಯವೊಂದರ ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿ ದೊರೆಯುತ್ತಿಲ್ಲ ಎನ್ನುವ ಸಚಿವರ ಮಾತು, ಉನ್ನತ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳ ಹುಟ್ಟಿಸುವಂತಿದೆ. ಇತ್ತೀಚಿನ ವರ್ಷಗಳಲ್ಲಿನ ಕುಲಪತಿ ಹುದ್ದೆಗಳ ನೇಮಕಾತಿಯನ್ನು ಗಮನಿಸಿದರೆ, ಸಂಗೀತ ವಿಶ್ವವಿದ್ಯಾಲಯದ ನಾಯಕತ್ವಕ್ಕೆ ಎದುರಾಗಿರುವ ಸಮರ್ಥ ಅಭ್ಯರ್ಥಿಗಳ ಕೊರತೆ ಎಲ್ಲ ವಿಶ್ವವಿದ್ಯಾಲಯಗಳ ಸಮಸ್ಯೆಯೂ ಆಗಿರುವಂತೆ ಕಾಣಿಸುತ್ತದೆ. ಐಐಟಿ, ಐಐಎಂಗಳ ಜೊತೆಗೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಮೂಲಕ ‘ಭಾರತದ ಜ್ಞಾನಕೇಂದ್ರ’ ಎಂದು ಪ್ರಸಿದ್ಧವಾಗಿರುವ ಕರ್ನಾಟಕದಲ್ಲಿ, ವಿಶ್ವವಿದ್ಯಾಲಯಗಳನ್ನು ಮುನ್ನಡೆಸಲಿಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ ಎನ್ನುವುದು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದ ಬಗ್ಗೆ ಆತಂಕ ಉಂಟುಮಾಡುವಂತಿದೆ. ಕನಿಷ್ಠ ಹತ್ತು ವರ್ಷಗಳ ಬೋಧನಾ ಅನುಭವದೊಂದಿಗೆ ಗಣನೀಯ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರು ಕುಲಪತಿ ಹುದ್ದೆಗೆ ಅರ್ಹರು ಎಂದು ನಿಯಮ ಹೇಳುತ್ತದೆ. ಆದರೆ, ಈ ಸರಳ ನಿಯಮದ ಹಿಂದಿನ ಕಟು ವಾಸ್ತವ ಅಷ್ಟು ಸರಳವಾಗಿಲ್ಲ. ಕುಲಪತಿ ಸ್ಥಾನಕ್ಕೆ ಸೂಕ್ತ ಅರ್ಹತೆ ಹೊಂದಿರುವವರು ಆ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಹಿಂಜರಿಯುವ ಸ್ಥಿತಿಯಿದೆ. ಆ ಹಿಂಜರಿಕೆಗೆ ಮಹತ್ವಾಕಾಂಕ್ಷೆಯ ಕೊರತೆ ಕಾರಣವಾಗಿರದೆ, ವ್ಯವಸ್ಥೆ ಯಲ್ಲಿನ ಓರೆಕೋರೆಗಳೇ ಕಾರಣವಾಗಿವೆ. ಕುಲಪತಿ ಸ್ಥಾನಕ್ಕೆ ನೇಮಕಗೊಳ್ಳಲು ಜಾತಿ ಸಮೀಕರಣಗಳು, ರಾಜಕೀಯ ಪ್ರಭಾವದ ಜೊತೆಗೆ ಹಣಕಾಸಿನ ಲೆಕ್ಕಾಚಾರವೂ ಮುಖ್ಯ ಪಾತ್ರ ವಹಿಸುತ್ತಿದೆ ಹಾಗೂ ನೇಮಕಾತಿಗಳಲ್ಲಿ
ಪಾರದರ್ಶಕತೆಯ ಪಾತ್ರ ಇಲ್ಲವೇ ಇಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಿಂದ ಅಪೌಷ್ಟಿಕವಾಗಿವೆ. ರಾಜಕೀಯ ಹಸ್ತಕ್ಷೇಪ ಹಾಗೂ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುದ್ದೆಗಳ ಕೊರತೆಯಿಂದಲೂ ವಿವಿಗಳು ದುರ್ಬಲಗೊಂಡಿವೆ. ಶೈಕ್ಷಣಿಕವಾಗಿ ಅತ್ಯುತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವ ವ್ಯಕ್ತಿ, ಅತ್ಯುತ್ತಮ ಶೈಕ್ಷಣಿಕ ಪರಿಸರವನ್ನು ರೂಪಿಸುವುದಕ್ಕಿಂತಲೂ ಹೆಚ್ಚಾಗಿ ಪಠ್ಯೇತರ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಸೀಮಿತಗೊಳ್ಳುವ ಪರಿಸ್ಥಿತಿ ವಿಶ್ವವಿದ್ಯಾಲಯಗಳಲ್ಲಿದೆ. ಸಂಶೋಧನಾ ಚಟುವಟಿಕೆಗಳ ಮೂಲಕ ಜನರ ಗಮನಸೆಳೆಯಬೇಕಾದ ವಿಶ್ವವಿದ್ಯಾಲಯಗಳು, ಹಗರಣಗಳ ಮೂಲಕ ಸುದ್ದಿಯಾಗುತ್ತಿವೆ. ಹಾಗಾಗಿಯೇ, ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ, ಸಂಶೋಧನೆಯ ಅರ್ಹತೆ ಹಾಗೂ ಮಾನ್ಯತೆ ಹೊಂದಿರುವ ರಾಜ್ಯದ ಪ್ರತಿಭಾ ಶಾಲಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತ ಆಗಬೇಕಿದೆ ಇಲ್ಲವೇ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕಾಗಿದೆ. ನಾಯಕತ್ವದ ಕೊರತೆಯನ್ನು ಸೃಜನಶೀಲ ಕಲ್ಪನೆಯೊಂದಿಗೆ ನಿರ್ವಹಿಸಬೇಕಾದ ಸಂದರ್ಭ ಇಂದಿನದು. ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಯನ್ನು ರಾಜ್ಯ ಸರ್ಕಾರ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕಾಗಿದೆ. ಆ ನಿಟ್ಟಿನಲ್ಲಿ ಮುಖ್ಯವಾದುದು ಮತ್ತು ಅತ್ಯಂತ ನಿರ್ಣಾಯಕವಾದುದು, ನೇಮಕಾತಿಗಳಲ್ಲಿ ವಿಶ್ವಾಸಾರ್ಹತೆಯನ್ನು ಮರಳಿ ತರುವುದು. ರಾಜಕೀಯ ಲೆಕ್ಕಾಚಾರ ಅಥವಾ ಯಾವುದೇ ಬಾಹ್ಯ ಒತ್ತಡಗಳಿಗೆ ಆಸ್ಪದವಿಲ್ಲದೆ, ಶೈಕ್ಷಣಿಕ ಅರ್ಹತೆಯಷ್ಟೇ ನೇಮಕಕ್ಕೆ ಮಾನದಂಡ ಆಗಬೇಕು. ಶೈಕ್ಷಣಿಕ ಕೊಡುಗೆ ನೀಡಿರುವ ವಿವಿಧ ಕ್ಷೇತ್ರಗಳ ವೃತ್ತಿಪರರು, ಸಾರ್ವಜನಿಕ ಆಡಳಿತಗಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕುಲಪತಿ ಸ್ಥಾನದ ಅರ್ಹತೆಯ ಚೌಕಟ್ಟಿನೊಳಗೆ ತರುವ ಬಗ್ಗೆ ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಯುಜಿಸಿ) ಈಗಾಗಲೇ ಸೂಚನೆ ನೀಡಿದೆ. ಆದರೆ, ವಿಶ್ವವಿದ್ಯಾಲಯದ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಲಿಕ್ಕೆ ಶೈಕ್ಷಣಿಕ ಅರ್ಹತೆಯೇ ಮುಖ್ಯವಾಗ ಬೇಕಾದುದು ಅಗತ್ಯ. ಮೂಲ ಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಕುಲಪತಿ ಹುದ್ದೆಯೂ ಸೇರಿದಂತೆ ಎಲ್ಲ ನೇಮಕಾತಿಗಳಲ್ಲಿ ಅರ್ಹತೆ ಹಾಗೂ ಪಾರದರ್ಶಕತೆ ಪಾಲನೆಯಾಗದೆ ಹೋದರೆ, ರಾಜ್ಯದ ವಿಶ್ವವಿದ್ಯಾಲಯಗಳ ಗುಣಮಟ್ಟ ಇನ್ನಷ್ಟು ಕುಸಿತ ಕಾಣುತ್ತದೆ ಹಾಗೂ ‘ಭಾರತದ ಜ್ಞಾನಕೇಂದ್ರ’ ಎನ್ನುವ ಹಿರಿಮೆಯನ್ನು ರಾಜ್ಯ ಕಳೆದುಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.