ADVERTISEMENT

ಸಂಪಾದಕೀಯ | ಮಕ್ಕಿ ‘ಜಾಗತಿಕ ಭಯೋತ್ಪಾದಕ’; ಭಾರತಕ್ಕೆ ರಾಜತಾಂತ್ರಿಕ ಜಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 21:56 IST
Last Updated 20 ಜನವರಿ 2023, 21:56 IST
.
.   

ಲಷ್ಕರ್‌–ಎ–ತಯಬಾ ಉಗ್ರಗಾಮಿ ಸಂಘಟನೆಯ ಉಪನಾಯಕ ಅಬ್ದುಲ್ ರೆಹಮಾನ್ ಮಕ್ಕಿ ‘ಜಾಗತಿಕ ಭಯೋತ್ಪಾದಕ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (ಯುಎನ್‌ಎಸ್‌ಸಿ) ಘೋಷಿಸುವಂತೆ ಮಾಡಿ ಭಾರತವು ಬಹುಮುಖ್ಯವಾದ ರಾಜತಾಂತ್ರಿಕ ವಿಜಯವೊಂದನ್ನು ಸಾಧಿಸಿದೆ. 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯಲ್ಲಿ ಮಕ್ಕಿಯ ಕೈವಾಡ ಇತ್ತು. ಅಲ್ಲದೆ, ಭಾರತದ ಮೇಲೆ ನಡೆದ ಇತರ ಹಲವು ಭಯೋತ್ಪಾದಕ ದಾಳಿಗಳಲ್ಲಿಯೂ ಈತನ ಕೈವಾಡ ಇತ್ತು. ಹೀಗಾಗಿ ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ಭಾರತವು ಹಲವು ವರ್ಷಗಳಿಂದ ಒತ್ತಾಯಿಸುತ್ತಿತ್ತು. ಈತನನ್ನು ಭಾರತದಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ.

ಅಮೆರಿಕದಲ್ಲಿ ಕೂಡ ಈತನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದ್ದು, ಆತನ ಪತ್ತೆ ಹಾಗೂ ಆತನಿಗೆ ಶಿಕ್ಷೆ ವಿಧಿಸಲು ನೆರವಾಗುವಂತಹ ಮಾಹಿತಿ ನೀಡಿದವರಿಗೆ 20 ಲಕ್ಷ ಡಾಲರ್ (ಸರಿಸುಮಾರು ₹ 16.23 ಕೋಟಿ) ಬಹುಮಾನವನ್ನು ಘೋಷಿಸಲಾಗಿದೆ. ಪಾಕಿಸ್ತಾನದ ಹಲವು ಪ್ರಜೆಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಕುರಿತು ಭಾರತವು ವಿಶ್ವ ಸಮುದಾಯಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತ ಬಂದಿದೆ, ಅವರನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಬೇಕು ಎಂಬ ಒತ್ತಾಯವನ್ನು ತರುತ್ತ ಬಂದಿದೆ. ಹೀಗಿದ್ದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕುತ್ತಿದೆ. ಈ ಕಾರಣದಿಂದಾಗಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಹಲವರ ಮೇಲೆ ನಿರ್ಬಂಧಗಳನ್ನು ಹೇರುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾದ ನಡೆಗಳ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡುತ್ತಿವೆ. ಚೀನಾ ಹಾಗೂ ಪಾಕಿಸ್ತಾನದ ನಡುವೆ ನಿಕಟ ಬಾಂಧವ್ಯವಿದೆ. ಅಲ್ಲದೆ, ಎರಡೂ ದೇಶಗಳಿಗೆ ಭಾರತವೆಂದರೆ ಅಷ್ಟಕ್ಕಷ್ಟೇ. ಹೀಗಾಗಿ, ಭಯೋತ್ಪಾದನಾ ಚಟುವಟಿಕೆಗಳನ್ನು ದುರ್ಬಲಗೊಳಿಸುವ ಅಂತರರಾಷ್ಟ್ರೀಯ ಸಮುದಾಯದ ಪ್ರಯತ್ನಗಳಿಗೆ ಕೈಜೋಡಿಸುವ ಬದಲು, ಭಾರತ ವಿರೋಧಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುವವರಿಗೆ ನೆರವು ಒದಗಿಸುವ ಪಾಕಿಸ್ತಾನಕ್ಕೆ ಬೆಂಬಲ ನೀಡುವುದನ್ನು ಚೀನಾ ಆಯ್ಕೆ ಮಾಡಿಕೊಂಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಮಕ್ಕಿ ಸೇರಿದಂತೆ ಪಾಕಿಸ್ತಾನದಲ್ಲಿ ನೆಲೆಯಾಗಿರುವ ಐವರು ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾವಗಳಿಗೆ ಚೀನಾ ಅಡೆತಡೆ ಸೃಷ್ಟಿಸಿದೆ.

ADVERTISEMENT

ಜೈಷ್–ಎ–ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಭಾರತ ನಡೆಸುತ್ತಿದ್ದ ಪ್ರಯತ್ನಗಳಿಗೆ ವರ್ಷಗಳಿಂದ ಅಡ್ಡಿ ಉಂಟುಮಾಡುತ್ತಿದ್ದ ಚೀನಾ, 2019ರಲ್ಲಿ ಈ ಪ್ರಯತ್ನಕ್ಕೆ ಬೆಂಬಲ ನೀಡಿತು. ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ತಾನು ಬೆಂಬಲ ನೀಡುವುದಕ್ಕೆ ಪ್ರತಿಯಾಗಿ, ಬಲೂಚ್ ಲಿಬರೇಷನ್ ಆರ್ಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ತನ್ನ ಯತ್ನಕ್ಕೆ ಅಮೆರಿಕದ ಬೆಂಬಲ ಪಡೆಯಲು ಚೀನಾ ಹೀಗೆ ಮಾಡಿತ್ತು ಎನ್ನಲಾಗಿದೆ. ಈಗ ಮಕ್ಕಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕೂಡ ಇಂಥದ್ದೇ ಹೊಂದಾಣಿಕೆಯ ಹೆಜ್ಜೆ ಇರಿಸಿರುವ ಸಾಧ್ಯತೆ ಇದೆ. ಆದರೆ, ಭಯೋತ್ಪಾದನೆಯ ವಿರುದ್ಧದ ಹೋರಾಟದ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಚೀನಾ ತಾಳುತ್ತಿರುವ ನಿಲುವುಗಳು ಯಾವುದೇ ತಾತ್ವಿಕತೆಯನ್ನು ಆಧರಿಸಿಲ್ಲದಿರುವುದು ದುರದೃಷ್ಟಕರ. ಚೀನಾದ ನಡೆಯ ಹಿಂದೆ ಇರುವುದು ದ್ವಂದ್ವ ನಿಲುವು.

ಉಯ್ಗುರ್‌ ಹಾಗೂ ಟಿಬೆಟ್ ಪ್ರಾಂತ್ಯದಲ್ಲಿನ ಜನರ ಪ್ರತಿರೋಧವನ್ನು ತಾನು ಕಠಿಣವಾಗಿ ಹತ್ತಿಕ್ಕುತ್ತಿರುವ ರೀತಿಯನ್ನು ಬೆಂಬಲಿಸಬೇಕು ಎಂದು ಇತರರ ಮೇಲೆ ಒತ್ತಡ ತರುವ ಚೀನಾ, ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುತ್ತಿರುವ ಇತರ ದೇಶಗಳಿಗೆ ತೃಣಮಾತ್ರದ ನೆರವು ನೀಡುತ್ತದೆ. ವಿಶ್ವದ ದೊಡ್ಡ ಶಕ್ತಿಯೊಂದು ಹೀಗೆ ನಡೆದುಕೊಳ್ಳಬಾರದು. ಇದು ಬೇಜವಾಬ್ದಾರಿಯ ನಡೆ.

ಈಗ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವ ಕಾರಣ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆತನಿಗೆ ವಿದೇಶ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಆತ ಶಸ್ತ್ರಾಸ್ತ್ರಗಳನ್ನು ಬಳಸುವುದರ ಮೇಲೆ ನಿರ್ಬಂಧಗಳು ಜಾರಿಯಾಗುತ್ತವೆ. ಲಷ್ಕರ್–ಎ–ತಯಬಾ ಸಂಘಟನೆಯ ಪರವಾಗಿ ನಿಧಿ ಸಂಗ್ರಹಿಸುತ್ತಿದ್ದವ ಮಕ್ಕಿ. ಈತ ಆ ಸಂಘಟನೆಯ ‘ಅಂತರರಾಷ್ಟ್ರೀಯ ಸಂಬಂಧ’ಗಳ ವಿಭಾಗದ ಮುಖ್ಯಸ್ಥನೂ ಹೌದು. ತಾತ್ವಿಕವಾಗಿ ಈಗ ಲಷ್ಕರ್–ಎ–ತಯಬಾ ಸಂಘಟನೆಗೆ ನಿಧಿ ಸಂಗ್ರಹಿಸುವುದಕ್ಕೆ ತೊಂದರೆ ಆಗಲಿದೆ. ಆದರೆ, ವಾಸ್ತವದಲ್ಲಿ ಇದರಿಂದ ಸಂಘಟನೆಗೆ ಹೆಚ್ಚಿನ ಸಮಸ್ಯೆ ಆಗದೆಯೂ ಇರಬಹುದು. ಏಕೆಂದರೆ ಈ ಸಂಘಟನೆಯು ಇಂತಹ ವ್ಯಕ್ತಿಗಳು ಸಂಗ್ರಹಿಸುವ ನಿಧಿಯನ್ನು ನೆಚ್ಚಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಭಾರತ ವಿರೋಧಿ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ನೀಡುವ ನೆರವನ್ನು ನೆಚ್ಚಿಕೊಂಡಿದೆ. ಹೀಗಾಗಿ, ಇತರ ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸಲು ಯತ್ನ ನಡೆಸುವುದರ ಜೊತೆಯಲ್ಲಿಯೇ ಪಾಕಿಸ್ತಾನ ಇಂತಹ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಒತ್ತಡ ತರಲು ಭಾರತವು ಅಂತರರಾಷ್ಟ್ರೀಯ ಸಮುದಾಯದ ಮನವೊಲಿಸಬೇಕು. ಮಕ್ಕಿಯ ಮೇಲೆ ಈಗ ಜಾರಿಯಾಗಿರುವ ನಿರ್ಬಂಧವು ಸರಿಯಾದ ಕ್ರಮ. ಈ ಕ್ರಮವನ್ನು ಭಾರತ ಇನ್ನಷ್ಟು ಮುಂದಕ್ಕೆ ಒಯ್ಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.