ADVERTISEMENT

ಸಂಪಾದಕೀಯ | ಉತ್ತರಪ್ರದೇಶ: ಅಪರಾಧಿಗಳು‌– ಪೊಲೀಸರ‌ ಸಖ್ಯ. ಕುಸಿದು ಬಿದ್ದ ಆಡಳಿತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 1:43 IST
Last Updated 10 ಜುಲೈ 2020, 1:43 IST
   

ಉತ್ತರಪ್ರದೇಶದ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಬಿಕ್ರೂ ಎಂಬ ಹಳ್ಳಿಯಲ್ಲಿ ಒಬ್ಬ ಡಿವೈಎಸ್‌ಪಿ ಸಹಿತ ಎಂಟು ಪೊಲೀಸರನ್ನು ಗುಂಡಿಕ್ಕಿ ಕೊಂದಿರುವ ಪ್ರಕರಣವು ಆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ. ಈ ಪ್ರಕರಣದ ಪ್ರಮುಖ ಆರೋಪಿ, ಪರಾರಿಯಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶದ ಪೊಲೀಸರು ಉಜ್ಜಯಿನಿಯಲ್ಲಿ ಬಂಧಿಸಿದ್ದಾರೆ. ಈತನ ಬಂಧನಕ್ಕೆ ಒಂದು ವಾರದಿಂದ ಮೂರು ರಾಜ್ಯಗಳ ಪೊಲೀಸರು ಬಲೆ ಬೀಸಿ ವ್ಯಾಪಕ ಹುಡುಕಾಟ ನಡೆಸಿದ್ದರು. ಉಜ್ಜಯಿನಿಯ ಮಹಾಕಾಲ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ವಿಕಾಸ್ ದುಬೆಯ ಗುರುತು ಪತ್ತೆಹಚ್ಚಿದ ಸ್ಥಳೀಯ ವ್ಯಾಪಾರಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಬಂಧನ ಸಾಧ್ಯವಾಗಿದೆ.

ಕಳೆದ ಶುಕ್ರವಾರ ಬಿಕ್ರೂವಿನಲ್ಲಿ ಇದ್ದ ವಿಕಾಸ್‌ ದುಬೆಯನ್ನು ಬಂಧಿಸಲು ಪೊಲೀಸರ ತಂಡ ತೆರಳಿದ್ದಾಗ ಹತ್ಯಾಕಾಂಡ ನಡೆದಿತ್ತು. ಪೊಲೀಸ್‌ ಪಡೆಯಲ್ಲೇ ಇರುವ ಕೆಲವು ಅಧಿಕಾರಿಗಳು ವಿಕಾಸ್‌ಗೆ ದಾಳಿಯ ಮುನ್ಸೂಚನೆ ನೀಡಿದ್ದರೆಂದೂ ಪೊಲೀಸ್‌ ಪಡೆ ಸ್ಥಳಕ್ಕೆ ಬಂದಾಕ್ಷಣ ಮನೆಗಳ ಮೇಲಿನಿಂದ ಗುಂಡಿನ ದಾಳಿ ನಡೆಸಿದ ದುಬೆ ಮತ್ತು ಆತನ ಸಂಗಡಿಗರು ಪೊಲೀಸರ ಹತ್ಯೆ ನಡೆಸಿ ಪರಾರಿಯಾದರೆಂದೂ ತನಿಖೆಯಿಂದ ಗೊತ್ತಾಗಿದೆ. ಈ ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಉತ್ತರಪ್ರದೇಶದಲ್ಲಿ ಕಾನೂನು– ಸುವ್ಯವಸ್ಥೆ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದುಬೆಯ ಬಂಧನಕ್ಕೆ ಸಾರ್ವಜನಿಕರಿಂದ ತೀವ್ರ ಒತ್ತಡ ಉಂಟಾಗಿತ್ತು. ಕೊನೆಗೂ ಮಧ್ಯಪ್ರದೇಶದ ಪೊಲೀಸರ ಕೈಗೆ ಈ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಉತ್ತರಪ್ರದೇಶದಲ್ಲಿ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವಣ ಕರಾಳಮೈತ್ರಿ ಬಹಿರಂಗಕ್ಕೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅಪರಾಧಿ‌ಗಳು ಮತ್ತು ಪೊಲೀಸ್ ಅಧಿಕಾರಿಗಳ ಸಖ್ಯದ ಘಟನೆಗಳು ಬೆಳಕಿಗೆ ಬಂದಿದ್ದವು. ವಿಕಾಸ್‌ ದುಬೆಯ ಈ ಪ್ರಕರಣ ಅಲ್ಲಿನ ಪೊಲೀಸ್‌ ವ್ಯವಸ್ಥೆಯಲ್ಲಿರುವ ಹುಳುಕುಗಳನ್ನು ಮತ್ತೆ ಎತ್ತಿ ತೋರಿಸಿದೆ.

ADVERTISEMENT

ವಿಕಾಸ್‌ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್‌‌ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೊಲೆ, ಕೊಲೆಯತ್ನ, ಹಲ್ಲೆ, ಒತ್ತೆ, ಅಪಹರಣ ಮುಂತಾದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯೊಬ್ಬ ರಾಜಾರೋಷವಾಗಿ ತಿರುಗಾಡುತ್ತಿದ್ದಎನ್ನುವುದನ್ನು ಗಮನಿಸಿದರೆ, ಉತ್ತರಪ್ರದೇಶದಲ್ಲಿ ಆಡಳಿತ ವ್ಯವಸ್ಥೆ ಪೂರ್ತಿ ಕುಸಿದುಬಿದ್ದಿದೆ ಎನ್ನದೇ ನಿರ್ವಾಹವಿಲ್ಲ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಕ್ರಿಮಿನಲ್‌ಗಳಿಗೆ ಮಾಹಿತಿಯನ್ನು ನೀಡಿ ತಮ್ಮವರ ಕೊಲೆಗೆ ಕಾರಣರಾಗುತ್ತಿರುವುದು ಅಲ್ಲಿಯ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಕೆಲವು ಉನ್ನತ ಪೊಲೀಸ್‌ ಅಧಿಕಾರಿಗಳು ಮತ್ತು ಆಡಳಿತಾರೂಢರು ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳ ಮುಖಂಡರ ಜೊತೆಗೆ ದುಬೆಗೆ ಸಂಪರ್ಕ ಇತ್ತು ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ಬಳಿಕ, ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಹಲವು ಎನ್‌ಕೌಂಟರ್‌ಗಳೂ ನಡೆದಿವೆ. ಎನ್‌ಕೌಂಟರ್‌ಗಳ ಹೆಸರಲ್ಲಿ ಅಮಾಯಕರನ್ನು ಕೊಲ್ಲಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಅಪರಾಧಿ‌ಗಳು, ಪೊಲೀಸರು ಮತ್ತು ಅಧಿಕಾರಸ್ಥರ ಮಧ್ಯೆ ಸಖ್ಯ ಇರುವ ಇಂತಹ ಅರಾಜಕ ಸನ್ನಿವೇಶದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದು ಕಷ್ಟ. ಒಂದೆಡೆ ಪೊಲೀಸರಿಗೂ ಇನ್ನೊಂದೆಡೆ ಕ್ರಿಮಿನಲ್‌ಗಳಿಗೂ ಹೆದರಿಕೊಂಡು ಜನರು ಬದುಕುವಂತಹ ಸ್ಥಿತಿ ಉತ್ತರಪ್ರದೇಶದ ಹಲವೆಡೆ ಇದೆ ಎನ್ನುವುದು ಆಘಾತಕಾರಿ ವಿಚಾರ.

ಶಂಕಿತರನ್ನು ಎನ್‌ಕೌಂಟರ್‌ ಹೆಸರಿನಲ್ಲಿ ಪೊಲೀಸರೇ ಕೊಲ್ಲುವುದು ನ್ಯಾಯದಾನ ಪ್ರಕ್ರಿಯೆಯ ಅಣಕ. ಹೀಗೆ ಕೊಲ್ಲುವ ವಿಚಾರದಲ್ಲಿ ಸರ್ಕಾರವು ಪೊಲೀಸರಿಗೆ ಬೆಂಗಾವಲಾಗಿ ನಿಂತರೆ ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಪೊಲೀಸರನ್ನು ಕೊಂದಿರುವ ಆರೋಪ ಹೊತ್ತಿರುವ ದುಬೆಯ ಮನೆಯನ್ನು ಪೊಲೀಸರೇ ಕೆಡವಿ ಹಾಕಿದ್ದಾರೆ ಎಂದು ವರದಿಯಾಗಿದೆ. ಎನ್‌ಕೌಂಟರ್‌ ಹತ್ಯೆ, ಮನೆ ಕೆಡವುವಂತಹ ಕೃತ್ಯಗಳು ಪ್ರತೀಕಾರದ ಕ್ರಮಗಳು. ಪ್ರತೀಕಾರಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ದುಬೆಯಂತಹ ವ್ಯಕ್ತಿಗಳಿಗೆ ಕಾನೂನಿನ ಪ್ರಕಾರವೇ ಕಠಿಣ ಶಿಕ್ಷೆಯಾಗಬೇಕು. ಇದು, ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಇತರರಿಗೂ ಪಾಠವಾಗಬೇಕು. ಹಾಗಾದರೆ ಮಾತ್ರ ವ್ಯವಸ್ಥೆ ಉಳಿಯುತ್ತದೆ, ಜನರು ನೆಮ್ಮದಿಯಿಂದ ಬದುಕುವುದು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.