ADVERTISEMENT

ಸಂಪಾದಕೀಯ: ವಕ್ಫ್‌ ಕಾಯ್ದೆಗೆ ಭಾಗಶಃ ತಡೆ; ಕಳವಳಗಳಿಗೆ ಕೋರ್ಟ್‌ ಸ್ಪಂದನ

ಸಂಪಾದಕೀಯ
Published 16 ಸೆಪ್ಟೆಂಬರ್ 2025, 19:30 IST
Last Updated 16 ಸೆಪ್ಟೆಂಬರ್ 2025, 19:30 IST
...
...   

ವಕ್ಫ್‌ (ತಿದ್ದುಪಡಿ) ಕಾಯ್ದೆಯ ಕೆಲವು ವಿವಾದಿತ ಅಂಶಗಳಿಗೆ ತಡೆ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಒಳ್ಳೆಯ ಕೆಲಸ ಮಾಡಿದೆ. ಈ ವಿವಾದಿತ ಅಂಶಗಳು ವಕ್ಫ್‌ ಆಸ್ತಿಗಳ ದುರ್ಬಳಕೆ, ಒತ್ತುವರಿಯನ್ನು ತಡೆಯಲು ನೆರವಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ದೇಶದ ಮುಸ್ಲಿಂ ಸಮುದಾಯವು ಈ ಅಂಶಗಳನ್ನು ತನ್ನ ಧಾರ್ಮಿಕ ಹಕ್ಕಿನ ಉಲ್ಲಂಘನೆಯನ್ನಾಗಿ, ವಕ್ಫ್‌ ಆಸ್ತಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಸರ್ಕಾರ ನಡೆಸಿದ ಪ್ರಯತ್ನವನ್ನಾಗಿ ಕಂಡಿತ್ತು. ಇಡೀ ಕಾಯ್ದೆಗೆ ಕೋರ್ಟ್‌ ತಡೆಯಾಜ್ಞೆ ನೀಡಿಲ್ಲ; ಕಾಯ್ದೆಯ ಕೆಲವು ಅಂಶಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಸಾಂವಿಧಾನಿಕ ಅಥವಾ ಕಾನೂನುಬಾಹಿರ ಎಂಬಂತೆ ಕಾಣುವ ಅಂಶಗಳಿಗೆ ಮಾತ್ರ ನ್ಯಾಯಾಲಯಗಳು ತಡೆ ನೀಡುತ್ತವೆ.

ಆಸ್ತಿಯೊಂದು ವಕ್ಫ್‌ಗೆ ಸೇರಿದ್ದೋ ಅಥವಾ ಅದು ಸರ್ಕಾರಕ್ಕೆ ಸೇರಿದ್ದೋ ಎಂಬುದನ್ನು ಜಿಲ್ಲಾಧಿಕಾರಿಯು ಏಕಪಕ್ಷೀಯವಾಗಿ ತೀರ್ಮಾನಿಸಬಹುದು ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ಈಗ ಅಮಾನತಿನಲ್ಲಿ ಇರಿಸಿದೆ. ತೀರ್ಮಾನವೊಂದಕ್ಕೆ ಬರುವ ಮೊದಲು ಆಸ್ತಿಯನ್ನು ವಕ್ಫ್‌ ಎಂದು ಪರಿಗಣಿಸದೆ ಇರಲು ಅವಕಾಶ ಕಲ್ಪಿಸುವ ಅಂಶಕ್ಕೆ ಕೂಡ ತಡೆ ನೀಡಲಾಗಿದೆ. ಏಕೆಂದರೆ, ವ್ಯಾಜ್ಯವು ಇತ್ಯರ್ಥ ಆಗುವವರೆಗೆ ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ಮೂರನೆಯ ವ್ಯಕ್ತಿಗೆ ಹಕ್ಕು ನೀಡಲು ಅವಕಾಶ ಕಲ್ಪಿಸಲಾಗದು. ಈ ಎಲ್ಲ ಅಂಶಗಳು ಜಾರಿಗೆ ಬಂದಿದ್ದರೆ ಮುಸ್ಲಿಮರು ವಕ್ಫ್ ಆಸ್ತಿ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಆಗುತ್ತಿತ್ತು. ವಕ್ಫ್‌ ಆಸ್ತಿಗಳ ಮೇಲಿನ ನಿಯಂತ್ರಣ ಹಾಗೂ ಮಾಲೀಕತ್ವವು ಆ ಸಮುದಾಯದ ಹಕ್ಕು. ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಮುಸ್ಲಿಮೇತರರಿಗೆ ವಕ್ಫ್‌ ಆಸ್ತಿಯ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲು ಅಧಿಕಾರ ಕೊಟ್ಟಿದ್ದರೆ ಸಮುದಾಯದ ಹಕ್ಕುಗಳು ದುರ್ಬಲಗೊಳ್ಳುತ್ತಿದ್ದವು. ಆಸ್ತಿಯೊಂದನ್ನು ಜಿಲ್ಲಾಧಿಕಾರಿಯು ಸರ್ಕಾರಿ ಆಸ್ತಿ ಎಂದು ಗುರುತಿಸಿದರೆ ಅದು ವಕ್ಫ್‌ ಎಂಬ ಸ್ಥಾನವನ್ನು ಕಳೆದುಕೊಳ್ಳುತ್ತದೆ ಎಂದು ಈಗ ಅಮಾನತಾಗಿರುವ ಅಂಶವೊಂದು ಹೇಳಿತ್ತು.

ಇದು ಕೋರ್ಟ್‌ ಹೇಳಿರುವಂತೆ ಅಧಿಕಾರ ವ್ಯಾಪ್ತಿಯನ್ನು ಪ್ರತ್ಯೇಕಿಸುವ ತತ್ತ್ವದ ಉಲ್ಲಂಘನೆಯಾಗುತ್ತಿತ್ತು. ಆಸ್ತಿಯ ಮಾಲೀಕತ್ವ ಯಾರದ್ದು ಎಂಬುದನ್ನು ನ್ಯಾಯಾಂಗ ಅಥವಾ ಅರೆನ್ಯಾಯಿಕ ಅಧಿಕಾರ ಹೊಂದಿರುವವರು ಮಾತ್ರ ತೀರ್ಮಾನಿಸಲು ಅವಕಾಶ ಇದೆ. ಕೇಂದ್ರ ವಕ್ಫ್‌ ಪರಿಷತ್ತಿನ 22 ಸದಸ್ಯರ ಪೈಕಿ ಮುಸ್ಲಿಮೇತರರ ಸಂಖ್ಯೆಯನ್ನು ಕೋರ್ಟ್‌ ನಾಲ್ಕಕ್ಕೆ ಮಿತಿಗೊಳಿಸಿದೆ. ರಾಜ್ಯ ವಕ್ಫ್‌ ಮಂಡಳಿಗಳ 11 ಸದಸ್ಯರಲ್ಲಿ ಮುಸ್ಲಿಮೇತರರ ಸಂಖ್ಯೆಯನ್ನು ಮೂರಕ್ಕೆ ಮಿತಿಗೊಳಿಸಿದೆ. ನ್ಯಾಯಾಲಯಕ್ಕೆ ವಿವರ ನೀಡಿರುವಂತೆ, ಕೋರ್ಟ್‌ ಒಪ್ಪಿಕೊಂಡಿರುವಂತೆ, ಇತರ ಧರ್ಮಗಳಿಗೆ ಸೇರಿದ ಪ್ರಮುಖ ಸಂಸ್ಥೆಗಳಲ್ಲಿ ಆ ಧರ್ಮಗಳಿಗೆ ಸೇರಿದ ಜನರೇ ಮಹತ್ವದ ಹುದ್ದೆಗಳಲ್ಲಿ ಇರುತ್ತಾರೆ. ವಕ್ಫ್‌ ಹಾಗೂ ಮುಸ್ಲಿಮರಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಇದು ಭಿನ್ನವಾಗಿರಬೇಕು ಎಂದು ಹೇಳಲು ಆಧಾರಗಳಿಲ್ಲ. ಕನಿಷ್ಠ ಐದು ವರ್ಷಗಳಿಂದ ಇಸ್ಲಾಂ ಧರ್ಮ ಅನುಸರಿಸುತ್ತಿರುವ ವ್ಯಕ್ತಿ ಮಾತ್ರ ವಕ್ಫ್‌ಗೆ ದಾನ ಮಾಡಬಹುದು ಎಂಬ ಅಂಶಕ್ಕೆ ಕೂಡ ಕೋರ್ಟ್ ತಡೆ ನೀಡಿದೆ. ರಾಜ್ಯ ಸರ್ಕಾರಗಳು ಈ ವಿಚಾರವಾಗಿ ಸ್ಪಷ್ಟ ನಿಯಮ ರೂಪಿಸುವವರೆಗೆ ಈ ತಡೆಯು ಜಾರಿಯಲ್ಲಿ ಇರುತ್ತದೆ. ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಎಲ್ಲರ ಹಿತವನ್ನು ಕಾಯಲು ಹಾಗೂ ಸಮತೋಲನವೊಂದನ್ನು ಸಾಧಿಸಲು ಈ ಕ್ರಮ ಕೈಗೊಂಡಿರುವುದಾಗಿ ಕೋರ್ಟ್‌ ಹೇಳಿದೆ.

ADVERTISEMENT

ಬಳಕೆಯ ಕಾರಣದಿಂದಾಗಿ ವಕ್ಫ್‌ ಎಂಬ ಪರಿಕಲ್ಪನೆಯನ್ನು, ಅಂದರೆ ಆಸ್ತಿಯೊಂದನ್ನು ಬಹುಕಾಲದಿಂದ ಧಾರ್ಮಿಕ ಅಥವಾ ದತ್ತಿ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದರೆ ಅದನ್ನು ವಕ್ಫ್‌ ಎಂದು ಪರಿಗಣಿಸುವುದನ್ನು ತೆಗೆದುಹಾಕಿದ ಅಂಶಕ್ಕೆ ಕೋರ್ಟ್ ತಡೆ ನೀಡಿಲ್ಲ. ಈ ಅಂಶವು ಮೇಲ್ನೋಟಕ್ಕೆ ಅಸಾಂವಿಧಾನಿಕವಾಗಿ ಕೋರ್ಟ್‌ಗೆ ಕಂಡಿಲ್ಲ. ಕಾಯ್ದೆಯಲ್ಲಿ ತೀರಾ ವಿವಾದಾಸ್ಪದ ಆಗಿದ್ದ ಕೆಲವು ಅಂಶಗಳು ಈಗ ಜಾರಿಗೆ ಬರುವುದಿಲ್ಲ ಎಂದು ಅರ್ಜಿದಾರರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾನೂನಿನ ವಿಚಾರವಾಗಿ ಎತ್ತಿದ್ದ ಕೆಲವು ಗಂಭೀರ ಕಳವಳಗಳಿಗೆ ಸ್ಪಂದಿಸುವ ಕೆಲಸವನ್ನು ಕೋರ್ಟ್ ಮಾಡಿದೆ. ಕಾಯ್ದೆಯ ಕೆಲವು ಅಂಶಗಳನ್ನು ಮುಸ್ಲಿಂ ಸಮುದಾಯದ ಜೊತೆ ಸಮಾಲೋಚನೆ ನಡೆಸದೆಯೇ ರೂಪಿಸಿದ್ದರಿಂದಾಗಿ, ವಿರೋಧ ಪಕ್ಷಗಳ ದೃಷ್ಟಿಕೋನಕ್ಕೆ ಬೆಲೆ ಕೊಡದೆ ಸಂಸತ್ತಿನಲ್ಲಿ ಬಲವಂತದಿಂದ ಅಂಗೀಕಾರ ಪಡೆದಿದ್ದರಿಂದಾಗಿ ಈ ಕಳವಳಗಳು ಮೂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.