
ಮಹಿಳೆಯರನ್ನು ವೋಟ್ ಬ್ಯಾಂಕ್‌ಗಳಾಗಿ ರೂಪಿಸಿಕೊಳ್ಳಲು ಸ್ಪರ್ಧೆ ನಡೆಸುತ್ತಿರುವ ರಾಜಕೀಯ ಪಕ್ಷಗಳು, ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ವಿಷಯದಲ್ಲಿ ಎಡಬಿಡಂಗಿ ಧೋರಣೆ ಅನುಸರಿಸುತ್ತಿವೆ. ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಆ ಕಳವಳವನ್ನು ಕೇಂದ್ರ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯ ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬಂದು ಎರಡು ವರ್ಷವಾಗಿದ್ದರೂ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಜನಗಣತಿಯ ನಂತರ ನಡೆಯುವ ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ಅನುಷ್ಠಾನಗೊಳ್ಳಬೇಕು ಎನ್ನುವ ನಿಬಂಧನೆಯ ಕಾರಣದಿಂದಾಗಿ, ಮುಂದಿನ ಕೆಲವು ವರ್ಷಗಳವರೆಗೆ ಮಹಿಳಾ ಮೀಸಲಾತಿ ಕಾಯ್ದೆ ಕಾಗದದ ಮೇಲಷ್ಟೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. 2027ರಲ್ಲಿ ಜನಗಣತಿ ಪೂರ್ಣಗೊಳ್ಳಲಿದೆ. ಆದರೆ, ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಿದ್ಧತೆಗಳು ಇನ್ನಷ್ಟೇ ಆರಂಭಗೊಳ್ಳಬೇಕಾದ ಕಾರಣದಿಂದಾಗಿ, 2029ರ ಲೋಕಸಭಾ ಚುನಾವಣೆಯ ವೇಳೆಗಾದರೂ ಕಾಯ್ದೆ ಅನುಷ್ಠಾನಗೊಳ್ಳಬಹುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕೆಂಬ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಮಾಧವನ್ ಅವರೊಂದಿಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಕಾಯ್ದೆ ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಸೂಕ್ತವಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ 48ರಷ್ಟು ಮಹಿಳೆಯರಿದ್ದು, ಅವರು ದೇಶದ ಅತಿದೊಡ್ಡ ಅಲ್ಪಸಂಖ್ಯಾತರಾಗಿದ್ದಾರೆ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗಳಲ್ಲಿ ಮೂರನೇ ಒಂದು ಭಾಗದಷ್ಟು ಉಮೇದುವಾರಿಕೆಯನ್ನು ಮಹಿಳೆಯರಿಗೆ ನೀಡುತ್ತಿಲ್ಲವೇಕೆ ಎನ್ನುವ ಅವರ ಪ್ರಶ್ನೆ ರಾಜಕೀಯ ಪಕ್ಷಗಳ ಆತ್ಮಾವಲೋಕನಕ್ಕೆ ಒತ್ತಾಯಿಸುವಂತಿದೆ. ಮಹಿಳಾ ಪ್ರಾತಿನಿಧ್ಯದ ಬಗ್ಗೆ ರಾಜಕೀಯ ಪಕ್ಷಗಳ ಕಾಳಜಿ ಪ್ರಾಮಾಣಿಕವಾಗಿದ್ದಲ್ಲಿ, ಅವು ಕಾನೂನಿನ ಅನುಷ್ಠಾನಕ್ಕೆ ಕಾಯುವ ಅಗತ್ಯವಿಲ್ಲ; ಕಾನೂನು ಕಟ್ಟುಪಾಡುಗಳ ಹಂಗಿಲ್ಲದೆಯೇ ತಮ್ಮ ಬದ್ಧತೆಯನ್ನು ಕಾರ್ಯರೂಪದಲ್ಲಿ ಪ್ರದರ್ಶಿಸುವ ಅವಕಾಶ ಪಕ್ಷಗಳಿಗಿದ್ದೇ ಇದೆ. ಆದರೆ, ರಾಜಕೀಯ ಪಕ್ಷಗಳಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಮಹಿಳಾ ಪ್ರಾತಿನಿಧ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಶಾಸನಸಭೆಗಳು ಮಾತ್ರವಲ್ಲದೆ, ಬೇರೆ ಕ್ಷೇತ್ರಗಳಲ್ಲೂ ಮಹಿಳೆಯರ ಪ್ರಾತಿನಿಧ್ಯ ಸಮರ್ಪಕವಾಗಿಲ್ಲ. ಸುಪ್ರೀಂ ಕೋರ್ಟ್‌ನ ಈವರೆಗಿನ ನ್ಯಾಯಮೂರ್ತಿಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಬರೀ 11 (ಶೇ 4ರಷ್ಟು) ಹಾಗೂ ಪ್ರಸ್ತುತ ಇರುವ 34 ನ್ಯಾಯಮೂರ್ತಿಗಳಲ್ಲಿ ಓರ್ವ ಮಹಿಳೆಯಷ್ಟೇ ಇದ್ದಾರೆ. ಲೋಕಸಭೆ– ರಾಜ್ಯಸಭೆಯಲ್ಲಿ ಕ್ರಮವಾಗಿ ಶೇ 14 ಮತ್ತು ಶೇ 17ರಷ್ಟು ಮಹಿಳಾ ಸದಸ್ಯರಿದ್ದಾರೆ. ಈ ಸರಾಸರಿ ವಿಶ್ವಮಟ್ಟದಲ್ಲಿ ಶೇ 27ರಷ್ಟಿದೆ. ಸಂಸತ್‌ನಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ, ತೃಣಮೂಲ ಕಾಂಗ್ರೆಸ್ ಮತ್ತು ಬಿಜು ಜನತಾದಳದಂತಹ ಕೆಲವು ಪಕ್ಷಗಳು ಉಳಿದ ಪಕ್ಷಗಳಿಗಿಂತಲೂ ಹೋಲಿಕೆಯಲ್ಲಿ ಉತ್ತಮವಾಗಿದ್ದರೂ, ವಿಧಾನಸಭೆಗಳಲ್ಲಿನ ಪ್ರಾತಿನಿಧ್ಯ ಕಳಪೆಯಾಗಿದೆ.
ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಾತಿನಿಧ್ಯ ಕಲ್ಪಿಸಿವೆ. 77ನೇ ತಿದ್ದುಪಡಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಉದ್ಯೋಗದಲ್ಲಿನ ಬಡ್ತಿಗೂ ಮೀಸಲಾತಿಯನ್ನು ವಿಸ್ತರಿಸಿದೆ.103ನೇ ತಿದ್ದುಪಡಿ, ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸಿದೆ. ಈ ಸವಲತ್ತುಗಳನ್ನು ಜನಗಣತಿಯ ದತ್ತಾಂಶಗಳಿಗೆ ಕಾಯದೆಯೇ ಜಾರಿಗೊಳಿಸಿರುವುದನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಾಂವಿಧಾನಿಕ ತಿದ್ದುಪಡಿಯನ್ನು ಅನಿರ್ದಿಷ್ಟ ಅವಧಿಯವರೆಗೆ ಜಾರಿಗೊಳಿಸದೆ ಉಳಿಸುವುದು ಸರಿಯಲ್ಲ ಹಾಗೂ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಅಂಗೀಕಾರ ಪಡೆದಿರುವುದು ಕಾಯ್ದೆ ಜಾರಿಗೊಳ್ಳಬೇಕಾದ ತುರ್ತನ್ನು ಸೂಚಿಸುತ್ತದೆ ಎನ್ನುವುದನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳು ಕೂಡ, ಮಹಿಳಾ ಪ್ರಾತಿನಿಧ್ಯ ಕಾಯ್ದೆ ವಿಳಂಬವಿಲ್ಲದೆ ಜಾರಿಯಾಗಬೇಕಾದ ಅಗತ್ಯವನ್ನು ಸೂಚಿಸುವಂತಿವೆ. ಮಹಿಳಾ ಮೀಸಲಾತಿ ವಿಳಂಬವನ್ನು ಪ್ರಶ್ನಿಸಿರುವ ಅರ್ಜಿಯು, ಪ್ರಗತಿಪರ ಕಾಯ್ದೆಯೊಂದನ್ನು ಜಾರಿಗೊಳಿಸುವ ಇಚ್ಛಾಶಕ್ತಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಸೋಗಲಾಡಿತನ ಹಾಗೂ ದ್ವಂದ್ವವನ್ನು ಬಯಲುಮಾಡುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.