ADVERTISEMENT

ಸಂಪಾದಕೀಯ | ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2025, 0:28 IST
Last Updated 4 ನವೆಂಬರ್ 2025, 0:28 IST
<div class="paragraphs"><p>.ಸಂಪಾದಕೀಯ</p></div>

.ಸಂಪಾದಕೀಯ

   

ಹರ್ಮನ್‌ಪ್ರೀತ್ ಕೌರ್‌ ಬಳಗವು ‘ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್’ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವುದು ಭಾರತೀಯ ಕ್ರೀಡಾಕ್ಷೇತ್ರದ ಕ್ಷಿತಿಜದಲ್ಲೊಂದು ಚಾರಿತ್ರಿಕ ಸಾಧನೆ. ಈ ವಿಶ್ವಕಪ್ ಜಯದ ಮೂಲಕ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಸುವರ್ಣಯುಗವೊಂದು ಆರಂಭವಾದಂತಾಗಿದೆ. ಸುಮಾರು ಐದು ದಶಕಗಳಿಂದ ಕ್ರಿಕೆಟ್‌ಪ್ರಿಯರು ಕಾಣುತ್ತಾ ಬಂದಿದ್ದ ಕನಸು ಸಹ ಸಾಕಾರಗೊಂಡಿದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷರಿಗೆ ದೊರೆಯುವ ಅವಕಾಶ ಹಾಗೂ ಬೆಂಬಲ ಮಹಿಳೆಯರಿಗೆ ದೊರೆಯುವುದು ಕಷ್ಟ. ಕ್ರಿಕೆಟ್ ಆಟಗಾರ್ತಿಯರೂ ಇಂತಹ ಸಾಮಾಜಿಕ ಅಡೆತಡೆಗಳನ್ನು ಅನುಭವಿಸುತ್ತ, ಮೀರುತ್ತ ಬೆಳೆದಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ಪುರುಷ ಆಟಗಾರರಿಗೆ ಸಿಗುತ್ತಿದ್ದ ಮಾನ್ಯತೆ, ಜನಪ್ರಿಯತೆಗೆ ಸಮಾನವಾದ ಗೌರವಾದರಗಳನ್ನು ಪಡೆಯಲು ಹೋರಾಟವನ್ನೂ ನಡೆಸಿದ್ದಾರೆ. ಶಾಂತಾ ರಂಗಸ್ವಾಮಿ, ಕಲ್ಪನಾ, ಡಯಾನಾ ಯಡುಲ್ಜಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಇನ್ನೂ ಕೆಲವು ಆಟಗಾರ್ತಿಯರು ತೋರಿದ ದಿಟ್ಟತನದ ಫಲವಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಬೇರುಗಳು ಗಟ್ಟಿಯಾಗಿ ಬೆಳೆದಿವೆ. ಅವರೆಲ್ಲರೂ ಕಟ್ಟಿದ ಸಾಧನೆಯ ‘ಸೌಧ’ದ ಮೇಲೆ ಇದೀಗ ಹರ್ಮನ್‌ಪ್ರೀತ್ ಬಳಗವು ವಿಶ್ವಕಪ್ ಕಳಸವನ್ನಿಟ್ಟಿದೆ. 2005 ಮತ್ತು 2017ರ ವಿಶ್ವಕಪ್ ಫೈನಲ್‌ಗಳಲ್ಲಿ ಭಾರತ ತಂಡವು ಮುಗ್ಗರಿಸಿತ್ತು. ಈ ಸಲ ಹಾಗಾಗಲಿಲ್ಲ. ಇದೇ ಮೊದಲ ಸಲ ಫೈನಲ್‌ಗೆ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡದ ಸವಾಲನ್ನು ಭಾರತ ಮೀರಿ ನಿಂತಿತು. ಮಹಿಳಾ ಏಕದಿನ ವಿಶ್ವಕಪ್ ಜಯಿಸಿದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಸಾಲಿಗೆ ಸೇರಿತು. 1983ರಲ್ಲಿ ವಿಶ್ವಕಪ್ ವಿಜಯದ ನಂತರ ಭಾರತದ ಪುರುಷರ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿತ್ತು. ಇದೀಗ ಹರ್ಮನ್ ಬಳಗದ ವಿಜಯವೂ ಮಹಿಳಾ ಕ್ರಿಕೆಟ್‌ನಲ್ಲಿ ಅಂತಹದ್ದೇ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳ ಹಿನ್ನೆಲೆಯಿಂದ ಬಂದ ಆಟಗಾರ್ತಿಯರು ಸಂಘಟಿತರಾಗಿ ಆಡಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು. ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ, ಸ್ನೇಹ ರಾಣಾ ಹಾಗೂ ಅಮನ್ಜೋತ್ ಕೌರ್ ಅವರು ಟೂರ್ನಿಯುದ್ದಕ್ಕೂ ತೋರಿದ ದಿಟ್ಟ ಆಟ ಅಮೋಘವಾದದ್ದು. ದೀಪ್ತಿ ಅವರಂತೂ ಫೈನಲ್‌ನಲ್ಲಿ ಅರ್ಧಶತಕ ಮತ್ತು ಐದು ವಿಕೆಟ್ ಪಡೆಯುವ ಮೂಲಕ ಗೆಲುವು ಕೈಜಾರದಂತೆ ನೋಡಿಕೊಂಡರು. 22 ವರ್ಷದ ಶಫಾಲಿ ವರ್ಮಾ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಜಿಮಿಮಾ ರಾಡ್ರಿಗಸ್ ಶತಕ ಮತ್ತು ಹರ್ಮನ್‌ಪ್ರೀತ್ ಅರ್ಧಶತಕ ಕೂಡ ಬಹುಕಾಲ ನೆನಪಿನಲ್ಲಿ ಉಳಿಯಲಿವೆ. ಸ್ಮೃತಿ ಮಂದಾನ, ರಿಚಾ ಘೋಷ್, ಕ್ರಾಂತಿ ಗೌಡ್ ಅವರ ಕಾಣಿಕೆಯೂ ಮಹತ್ವದ್ದು. ತಂಡವನ್ನು ಒಗ್ಗೂಡಿಸಿ ಮುನ್ನಡೆಸಿದ ಶ್ರೇಯ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರಿಗೆ ಸಲ್ಲಲೇಬೇಕು. ದೇಶಿ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ಅಮೋಲ್ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಇವತ್ತು ಮಹಿಳಾ ಕ್ರಿಕೆಟ್‌ ತಂಡವು ಚಾರಿತ್ರಿಕ ಸಾಧನೆ ಮಾಡಲು ಅವರ ಮಾರ್ಗದರ್ಶನ ಕಾರಣವಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಹಿಳೆಯರಿಗೂ ಸಮಾನ ವೇತನ, ಗುತ್ತಿಗೆ ಅವಕಾಶಗಳನ್ನು ನೀಡಿದೆ. ದೇಶಿ ಕ್ರಿಕೆಟ್‌ನಲ್ಲಿಯೂ ಕೆಲವು ಸುಧಾರಣೆಗಳನ್ನು ಮಾಡಿದೆ. ಮೂರು ವರ್ಷಗಳಿಂದ ಮಹಿಳಾ ಪ್ರೀಮಿಯರ್ ಲೀಗ್ ಆಯೋಜಿಸುತ್ತಿದೆ. ಇದೆಲ್ಲದರ ಫಲವಾಗಿ ಮಹಿಳಾ ಕ್ರಿಕೆಟಿಗರೂ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ತರಬೇತಿ ಸೌಲಭ್ಯ ಮತ್ತು ವೃತ್ತಿಪರತೆ ಹೆಚ್ಚಿದಂತೆ ಕ್ರಿಕೆಟ್ ಆಟದತ್ತ ಆಕರ್ಷಿತರಾಗುತ್ತಿರುವ ಬಾಲಕಿಯರ ಸಂಖ್ಯೆಯೂ ಹೆಚ್ಚುತ್ತಿದೆ.

ADVERTISEMENT

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಅವಿಸ್ಮರಣೀಯ ಸಾಧನೆಗಳು ಮೂಡಿಬಂದವು. ಟೂರ್ನಿಯುದ್ದಕ್ಕೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತೋರಿದ ವೃತ್ತಿಪರತೆ ಮತ್ತು ಕೆಚ್ಚೆದೆಯ ಹೋರಾಟ ಇತರ ತಂಡಗಳಿಗೂ ಮಾದರಿ ಆಗಬಲ್ಲಂಥವು. ಕೆಲವು ಕಹಿ ಘಟನೆಗಳಿಗೂ ಟೂರ್ನಿ ಸಾಕ್ಷಿಯಾಯಿತು. ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಹರ್ಮನ್‌ ಬಳಗವು ಹಸ್ತಲಾಘವ ಮಾಡಲು ನಿರಾಕರಿಸಿದ್ದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆಯಾಗಿತ್ತು. ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿಯರಿಗೆ ದುಷ್ಕರ್ಮಿಗಳು ನೀಡಿದ ಲೈಂಗಿಕ ಕಿರುಕುಳ ಕೂಡ ಒಂದು ಕಪ್ಪುಚುಕ್ಕೆ. ಇಂತಹ ದೌರ್ಜನ್ಯಗಳಿಗೆ ಸೊಪ್ಪು ಹಾಕದೆ, ಸಮಾಜದ ಇತರ ಅಡೆತಡೆಗಳಿಗೆ ಎದೆಗುಂದದೆ ಪುರುಷರಿಗೆ ಸರಿಸಮಾನರಾಗಿ ನಿಲ್ಲುವ ಶಕ್ತಿ ನಾರಿಯರಿಗೆ ಇದೆ ಎಂಬುದನ್ನು ವಿಶ್ವಕಪ್‌ನ ಯಶಸ್ಸು ತೋರಿಸಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.