ADVERTISEMENT

ಸಂದರ್ಶನ | ಹಿಜಾಬ್: ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ, ಅವಶ್ಯವೂ ಇಲ್ಲ: ಮುಸ್ಕಾನ್

ನಕಲಿ ಖಾತೆ ಮೂಲಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ * ಮಂಡ್ಯದ ಬೀಬಿ ಮುಸ್ಕಾನ್‌ ಖಾನ್‌ ಬೇಸರ

ಎಂ.ಎನ್.ಯೋಗೇಶ್‌
Published 13 ಫೆಬ್ರುವರಿ 2022, 19:28 IST
Last Updated 13 ಫೆಬ್ರುವರಿ 2022, 19:28 IST
ಬೀಬಿ ಮುಸ್ಕಾನ್‌ ಖಾನ್‌
ಬೀಬಿ ಮುಸ್ಕಾನ್‌ ಖಾನ್‌   

ಮಂಡ್ಯ: ‘ಜೈ ಶ್ರೀರಾಮ್‌’ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗಿದ್ದ ನಗರದ ಪಿಇಎಸ್‌ ಪದವಿ ಕಾಲೇಜು ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ದೇಶದ ವಿವಿಧೆಡೆಯಿಂದ ಮುಖಂಡರು, ಪ್ರಮುಖರು ಕೊಂಡಾಡುತ್ತಿದ್ದು,ಮಂಡ್ಯಕ್ಕೆ ಬಂದು ಉಡುಗೊರೆ ನೀಡುತ್ತಿದ್ದಾರೆ. ಹಲವು ಸಂಘಟನೆಗಳು ಹಣ ನೀಡಿವೆ.

ದೇಶ–ವಿದೇಶಗಳ ಸುದ್ದಿವಾಹಿನಿಗಳ ವರದಿಗಾರರೂ ಬರುತ್ತಿದ್ದಾರೆ. ‘ಅಲ್ಲಾಹು ಅಕ್ಬರ್‌’ ಘೋಷಣೆ ಮೇಲಿನ ಚರ್ಚೆಗಳು ನಡೆಯುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಬೀಬಿ ಮುಸ್ಕಾನ್‌ ಖಾನ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಘಟನೆ ನಡೆದು ಆರು ದಿನಗಳಾದರೂ ನಿಮ್ಮ ಕುರಿತು ಚರ್ಚೆಗಳು ಮುಂದುವರಿದಿವೆ, ಈಗ ನಿಮ್ಮ ಮನಸ್ಥಿತಿ ಹೇಗಿದೆ?

ADVERTISEMENT

ಘೋಷಣೆ ಕುರಿತಂತೆ ಪರ–ವಿರೋಧ ಚರ್ಚೆಗೆ ಬೇಸರವಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರದಿಂದ ತುಂಬಾ ನೋವಾಗಿದೆ. ನಾನು ಫೇಸ್‌ಬುಕ್‌, ಟ್ವಿಟರ್‌ ಬಳಸುತ್ತಿಲ್ಲ. ಕೆಲವರು ನಕಲಿ ಖಾತೆ ತೆರೆದು ಸುಳ್ಳು ಹಬ್ಬಿಸುತ್ತಿದ್ದಾರೆ. ನನ್ನ ಭಾವಚಿತ್ರ ಎಡಿಟ್‌ ಮಾಡಿ ಕೆಟ್ಟದಾಗಿ ಬರೆಯುತ್ತಿದ್ದಾರೆ. ಕಾಲೇಜು, ಮನೆ ಬಿಟ್ಟರೆ ನನಗೆ ಬೇರೆ ಪ್ರಪಂಚವಿಲ್ಲ. ನಾನು ಚಳವಳಿಗಾರರ ಜೊತೆ ಸಂಪರ್ಕದಲ್ಲಿದ್ದೆ, ತರಬೇತಿ ಪಡೆದಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ನೇಣು ಹಾಕಿದ್ದಾರೆ ಎಂದೆಲ್ಲಾ ಬರೆದಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ.

*ಹಿಜಾಬ್‌–ಕೇಸರಿ ಶಾಲು ಕುರಿತು ನಡೆಯುತ್ತಿದ್ದ ಬೆಳವಣಿಗೆಗಳು ನಿಮಗೆ ಮೊದಲೇ ಗೊತ್ತಿತ್ತಾ?

ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಉಡುಪಿಯ ಕಾಲೇಜೊಂದರಲ್ಲಿ ಪ್ರವೇಶ ನಿರಾಕರಿಸಿದ್ದಾರೆ ಎಂಬ ಸುದ್ದಿ ತಿಳಿದಿತ್ತು. ಇಂತಹ ಘಟನೆ ಮಂಡ್ಯದಲ್ಲಿ, ಅದೂ ನಮ್ಮ ಕಾಲೇಜಿನಲ್ಲಿ ನಡೆಯುತ್ತದೆ ಎಂದು ಎಣಿಸಿರಲಿಲ್ಲ. ನಾನು ಎಂದಿನಂತೆ ಹಿಜಾಬ್‌, ಬುರ್ಖಾ ಧರಿಸಿ ಕಾಲೇಜಿಗೆ ತೆರಳಿದ್ದೆ.

*ನಿಮ್ಮ ತಂದೆ ಮುಸ್ಲಿಂ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಗೃಹ ಸಚಿವರೇ ಹೇಳಿದ್ದಾರಲ್ಲಾ?

ನನ್ನ ತಂದೆ, ಕುಟುಂಬ ಸದಸ್ಯರು ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ. ರಾಜಕಾರಣದಲ್ಲಿ ಯಾರಿಗೂ ಆಸಕ್ತಿ ಇಲ್ಲ. ನಮ್ಮ ಕುಟುಂಬ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದೆ. ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದೇವೆ. ನಮಗೆ ಕುಟುಂಬಕ್ಕೆ ಯಾವುದೇ ಸಂಘಟನೆಯ ಅವಶ್ಯವಿಲ್ಲ.

*ಮುಂದಿನ ನಿಮ್ಮ ಹಾದಿ?

ಕಾನೂನು ಪದವಿ ಅಧ್ಯಯನ ಮಾಡುವ ಉದ್ದೇಶವಿದೆ. ಮುಂದೆ ಮಹಿಳಾ ಹಕ್ಕುಗಳ ಪರವಾಗಿ ಹೋರಾಟ ಮುಂದುವರಿಸುತ್ತೇನೆ. ವಕೀಲೆಯಾಗಿ ಯಾವುದೇ ಧರ್ಮಭೇದವಿಲ್ಲದೇ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ.

* ‘ಜೈ ಶ್ರೀರಾಮ್‌ ವಿರುದ್ಧ ಅಲ್ಲಾಹು ಅಕ್ಬರ್‌’ ಎಂದೇ ಬಣ್ಣಿಸಲಾಗುತ್ತಿದೆ, ನಿಮ್ಮ ಘೋಷಣೆ ಉದ್ದೇಶವೇನಿತ್ತು?

ಜೈ ಶ್ರೀರಾಮ್‌ ಘೋಷಣೆ ತಪ್ಪು ಎಂದು ನಾನು ಹೇಳುವುದಿಲ್ಲ. ನಾನು ಯಾವ ಉದ್ದೇಶ, ಸಾಧನೆಗೂ ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗಲಿಲ್ಲ. ಕೇಸರಿ ಶಾಲು ಹಾಕಿಕೊಂಡಿದ್ದ ವಿದ್ಯಾರ್ಥಿಗಳು ನನ್ನ ಕಡೆಗೆ ಧಾವಿಸಿ ಬರುವಾಗ ಗಾಬರಿಯಾಯಿತು. ‘ಹಿಜಾಬ್‌, ಬುರ್ಖಾ ತೆಗಿ’ ಎಂಬ ಕೂಗು ಕಿವಿಗೆ ಬಿತ್ತು. ನನ್ನ ಧಿರಿಸು ನನ್ನ ಸ್ವಾಭಿಮಾನ. ನನ್ನ ಸ್ವಯಂ ರಕ್ಷಣೆ, ಸ್ವಾಭಿಮಾನದ ರಕ್ಷಣೆ ಅನಿವಾರ್ಯವಾಗಿತ್ತು. ಆ ಸಂದರ್ಭದಲ್ಲಿ ದೇವರ ನುಡಿಗಳು ತಾನಾಗಿಯೇ ಬಂದವು.

*ದೇಶ-ವಿದೇಶಗಳಿಂದ ಉಡುಗೊರೆ ರೂಪದಲ್ಲಿ ಹಣ ಬರಿದು ಬಂದಿರುವುದು ನಿಜವೇ?

ಉಡುಗೊರೆ ಹಣದಲ್ಲಿ ಆಂಬುಲೆನ್ಸ್ ಕೊಡುಗೆ...

ಬಂದವರೆಲ್ಲರೂ ಉಡುಗೊರೆ ಕೊಡುತ್ತಿದ್ದಾರೆ. ಆದರೆ, ಹಣದ ರೂಪದಲ್ಲಿ ಬಂದಿರುವುದು 6 ಲಕ್ಷ ರೂಪಾಯಿ ಮಾತ್ರ. ಆ ಹಣವೂ ನಮಗೆ ಬೇಡ. ನನ್ನ ಹೆಸರಿನಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ಒಂದು ಆಂಬುಲೆನ್ಸ್ ಕೊಡುಗೆ ನೀಡಲು ನಮ್ಮ ತಂದೆ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.