ADVERTISEMENT

ಸಂದರ್ಶನ | ಒಳಮೀಸಲಿನಿಂದ ಒಡಕಲ್ಲ, ಒಮ್ಮತ ಮೂಡಲಿದೆ: ನ್ಯಾ. ನಾಗಮೋಹನದಾಸ್‌

ಸುಬ್ರಹ್ಮಣ್ಯ ವಿ.ಎಸ್‌.
Published 3 ಮೇ 2025, 0:54 IST
Last Updated 3 ಮೇ 2025, 0:54 IST
   

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮಧ್ಯೆ ಒಳಮೀಸಲಾತಿ ಹಂಚಿಕೆಗೆ ನಿಖರ ದತ್ತಾಂಶ ಸಂಗ್ರಹಿಸಿ, ಆಯಾ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಇದೇ ಸೋಮವಾರದಿಂದ (ಮೇ 5) ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಗಣತಿ ನಡೆಯಲಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಸಮುದಾಯಗಳ ಮಧ್ಯೆ ಮೀಸಲಾತಿಯ ಮರು ಹಂಚಿಕೆಗೆ ದಿಕ್ಸೂಚಿಯಾಗಲಿರುವ ಈ ಸಮೀಕ್ಷೆಯ ಕುರಿತು ‘ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ’ಕ್ಕೆ ಅಧ್ಯಯನ ನಡೆಸಿ, ವರದಿ ಸಲ್ಲಿಸಲು ನೇಮಕಗೊಂಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆಗೆ ಪೂರಕವಾದ ಸಮೀಕ್ಷೆಗೆ ಏನೆಲ್ಲಾ ಸಿದ್ಧತೆಗಳು ನಡೆದಿವೆ?

ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳನ್ನು ಮಾರ್ಚ್‌ 27ರಂದು ನಡೆದ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದ ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿಯ ಎಲ್ಲ ಕುಟುಂಬಗಳ ಸಮೀಕ್ಷೆಗೆ ಆದೇಶ ಹೊರಡಿಸಿತ್ತು. ಆ ಬಳಿಕ ಸರಣಿ ಸಭೆಗಳನ್ನು ನಡೆಸಿದ್ದೇವೆ. ವಿಷಯ ತಜ್ಞರ ಜೊತೆ ಸಮಾಲೋಚಿಸಿ 46 ‍ಪ್ರಶ್ನೆಗಳು ಮತ್ತು ಉಪ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದೆ. ಮೊಬೈಲ್‌ ಆ್ಯಪ್‌ ತಯಾರಿಸಿ, ತಾಂತ್ರಿಕ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಸದ್ಯ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಮನೆ ಮನೆ ಗಣತಿ ಮೂಲಕ ಮಾಹಿತಿ ಸಂಗ್ರಹಿಸಿ, ದಾಖಲಿಸುವುದಷ್ಟೇ ಬಾಕಿ ಉಳಿದಿದೆ.

ADVERTISEMENT

ಗಣತಿಗೆ ಎಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ?

ರಾಜ್ಯದಾದ್ಯಂತ 58,932 ಗಣತಿದಾರರನ್ನು ನಿಯೋಜಿಸಲಾಗಿದೆ. ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗಣತಿದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಹತ್ತು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟು 5,894 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಸಮೀಕ್ಷೆಯು ಪ್ರತಿ ಕುಟುಂಬವನ್ನೂ ಒಳಗೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ?

ಪ್ರತಿ ಗಣತಿದಾರರಿಗೆ 100ರಿಂದ 120 ಮನೆಗಳನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲ ಮನೆಗಳಿಗೂ ಗಣತಿದಾರರು ಭೇಟಿ ನೀಡಲೇಬೇಕು. ಆ ಕುಟುಂಬದವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆಯೆ ಎಂಬ ಪ್ರಶ್ನೆಯನ್ನು ಕೇಳಬೇಕು. ಹೌದು ಎಂದಾದಲ್ಲಿ ಆ ಕುಟುಂಬದ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ಮೂಲಕ ದಾಖಲು ಮಾಡಿಕೊಳ್ಳಬೇಕು. ಒಟ್ಟು 23–24 ಲಕ್ಷ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸಮೀಕ್ಷೆಯ ವಿಧಾನ ಹೇಗಿರಲಿದೆ?

ಗಣತಿದಾರರು ಮನೆಗೆ ಬಂದಾಗ ಆ ಕುಟುಂಬದ ಸದಸ್ಯರ ಜಾತಿ ಪ್ರಮಾಣಪತ್ರ, ಪಡಿತರ ಚೀಟಿ ಮತ್ತು ಆಧಾರ್‌ ಸಂಖ್ಯೆಗಳನ್ನು ನೀಡಬೇಕಾಗುತ್ತದೆ. ಮೂರೂ ದಾಖಲೆಗಳನ್ನು ಒದಗಿಸಿದರೆ ಉತ್ತಮ. ಮೂರರ ಪೈಕಿ ಒಂದು ದಾಖಲೆ ಒದಗಿಸುವುದಕ್ಕೂ ಅವಕಾಶವಿದೆ. ಪ್ರಶ್ನಾವಳಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ಬಳಿಕ ಕುಟುಂಬದ ಸದಸ್ಯರೊಬ್ಬರ ಸಹಿ ಪಡೆಯಲಾಗುತ್ತದೆ. ಅವರ ಭಾವಚಿತ್ರವನ್ನು ಸೆರೆಹಿಡಿದು ಅಪ್‌ಲೋಡ್‌ ಮಾಡಿ, ಲಾಕ್‌ ಮಾಡಲಾಗುತ್ತದೆ.

ಹಿಂದುಳಿದಿರುವಿಕೆಯನ್ನು ಗುರುತಿಸಲು ಈ ಗಣತಿಯಲ್ಲಿ ಬಳಸುವ ಪ್ರಮುಖ ಮಾನದಂಡಗಳು ಯಾವುವು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಜಾತಿಗಳ ಮಧ್ಯೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರವೇ ನಾವು ಕೆಲಸ ಮಾಡಬೇಕು. ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿಧ್ಯದಲ್ಲಿ ಹಿಂದುಳಿದಿರುವಿಕೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸುವುದೇ ಗಣತಿಯ ಮುಖ್ಯ ಉದ್ದೇಶ. ಅದರ ಜೊತೆಯಲ್ಲೇ ಭೂ ಒಡೆತನ, ವಸತಿ ವ್ಯವಸ್ಥೆ, ಕಸುಬು, ವರಮಾನ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಕೆಲವು ಅಂಶಗಳ ಕುರಿತು ಹೆಚ್ಚುವರಿ ಮಾಹಿತಿಯನ್ನೂ ಸಂಗ್ರಹಿಸಲಾಗುವುದು.

ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಮರುಪರಿಶೀಲಿಸಲು ಅವಕಾಶ ಇದೆಯೆ?

ಒಂದು ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆ ಕುಟುಂಬದ ಸದಸ್ಯರಷ್ಟೇ ಮೊಬೈಲ್‌ ಆ್ಯಪ್‌ ಮೂಲ ಮರುಪರಿಶೀಲಿಸಲು ಅವಕಾಶ ನೀಡಲಾಗುವುದು. ದಾಖಲಿಸಲಾದ ಮಾಹಿತಿಯಲ್ಲಿ ತಪ್ಪುಗಳಿರುವುದು ಕಂಡುಬಂದಲ್ಲಿ ಆ ಕುಟುಂಬದವರು ತಕರಾರು ಸಲ್ಲಿಸಬಹುದು. ಆಯೋಗದ ಹಂತದಲ್ಲೇ ತಕರಾರುಗಳನ್ನು ಪರಿಶೀಲಿಸಿ, ವಿಲೇವಾರಿ ಮಾಡಲಾಗುತ್ತದೆ. ಸಂಗ್ರಹಿಸುವ ಮಾಹಿತಿಯಲ್ಲಿ ಕಿಂಚಿತ್ತೂ ದೋಷ ಇರಬಾರದು ಎಂಬ ಎಚ್ಚರಿಕೆಯಿಂದ ಈ ವ್ಯವಸ್ಥೆಯನ್ನು ಆಯೋಗ ರೂಪಿಸಿದೆ.

ಗಣತಿಗೆ ಸರ್ಕಾರದ ಸಹಕಾರ ಹೇಗಿದೆ?

ಸರ್ಕಾರ ಎಲ್ಲ ಹಂತಗಳಲ್ಲಿ ಸಂಪೂರ್ಣವಾದ ಸಹಕಾರ ನೀಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯನ್ನು ನೋಡಲ್‌ ಇಲಾಖೆಯನ್ನಾಗಿ ನೇಮಿಸಲಾಗಿದೆ. ಗಣತಿಗೆ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಬೇಕೆಂಬ ಕೋರಿಕೆಗೆ ತಕ್ಷಣ ಸಮ್ಮತಿ ಸಿಕ್ಕಿದೆ. ಇ–ಆಡಳಿತ ಇಲಾಖೆಯು ನಿರೀಕ್ಷೆಗೆ ಮೀರಿದ ರೀತಿಯಲ್ಲಿ ಆಯೋಗಕ್ಕೆ ಸಹಕರಿಸುತ್ತಿದೆ. ಗಣತಿಗೆ ಸಂಬಂಧಿಸಿದ ಯಾವ ಕೆಲಸಕ್ಕೂ ತೊಡಕಾಗಿಲ್ಲ.

ಆಯೋಗಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಒದಗಿಸಿದೆಯೆ?

ಹಣಕಾಸಿನ ವಿಷಯವನ್ನು ನಾವು ಸೀಮಿತ ಪ್ರಮಾಣದಲ್ಲಷ್ಟೇ ನಿರ್ವಹಣೆ ಮಾಡುತ್ತಿದ್ದೇವೆ. ಆಯೋಗದ ದೈನಂದಿನ ಕೆಲಸಗಳ ವೆಚ್ಚಕ್ಕೆ ಮಾತ್ರ ನೇರ ಅನುದಾನ ಪಡೆಯಲಾಗುತ್ತಿದೆ. ಗಣತಿಗೆ ಸಂಬಂಧಿಸಿದ ವೆಚ್ಚಗಳನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕವೇ ಮಾಡಲಾಗುತ್ತಿದೆ. ಗಣತಿಗೆ ಆಗುವ ವೆಚ್ಚಕ್ಕೆ ಅನುಗುಣವಾಗಿ ಇಲಾಖೆಯೇ ಅನುದಾನ ಪಡೆದುಕೊಂಡು, ಬಳಕೆ ಮಾಡಲಿದೆ.

ಒಳ ಮೀಸಲು ಹಂಚಿಕೆಯ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಎಷ್ಟು ಸಮಯ ಬೇಕಾಗಬಹುದು?

ಯಾವ ದಿನಾಂಕದಂದು ವರದಿ ಸಲ್ಲಿಸಲಾಗುವುದು ಎಂದು ಈಗಲೇ ಹೇಳುವುದು ಕಷ್ಟ. ಆದರೆ, ವಿಳಂಬಕ್ಕೆ ಅವಕಾಶ ಇಲ್ಲದಂತೆ ವರದಿ ಸಲ್ಲಿಸುತ್ತೇವೆ. ಗಣತಿಯಲ್ಲಿ ಸಂಗ್ರಹಿಸುವ ದತ್ತಾಂಶವನ್ನು ವಿಶ್ಲೇಷಿಸಿ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿನ ಹಿಂದುಳಿದಿರುವಿಕೆಯನ್ನು ಗುರುತಿಸಬೇಕಾಗುತ್ತದೆ. ಆ ಬಳಿಕವೇ ನಾವು ಶಿಫಾರಸು ನೀಡಲು ಸಾಧ್ಯ.

ದತ್ತಾಂಶ ವಿಶ್ಲೇಷಣೆ ಹೇಗೆ ನಡೆಯಲಿದೆ?

ದತ್ತಾಂಶಗಳನ್ನು ನಾನೇ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಈ ಪ್ರಕ್ರಿಯೆ ಅತ್ಯಂತ ವೈಜ್ಞಾನಿಕವಾಗಿ ನಡೆಯಬೇಕು. ಕುಲಶಾಸ್ತ್ರೀಯ ಅಧ್ಯಯನ ತಜ್ಞರು, ಸಮಾಜ ಶಾಸ್ತ್ರಜ್ಞರು ಸೇರಿದಂತೆ ತಜ್ಞರ ಸಮಿತಿಯೊಂದನ್ನು ದತ್ತಾಂಶಗಳ ವಿಶ್ಲೇಷಣೆಗಾಗಿ ರಚಿಸಲಾಗುವುದು. ತಜ್ಞರ ತಂಡ ನೀಡುವ ವರದಿಯ ಆಧಾರದಲ್ಲಿ ವಿವಿಧ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲಾಗುವುದು.

ಸಮೀಕ್ಷೆಯ ಭಾಗವಾಗಿ ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆಯೆ?

ದ್ವಿತೀಯ ಮೂಲದ ಮಾಹಿತಿ ಸಂಗ್ರಹಿಸುವ ಕೆಲಸವನ್ನೂ ಆಯೋಗವು ಈಗಾಗಲೇ ಆರಂಭಿಸಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಪತ್ರ ಬರೆದಿದ್ದು, ಹಾಲಿ ಮತ್ತು ಹಿಂದಿನ ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದವರ ಮಾಹಿತಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲಿನ ಪರಿಶಿಷ್ಟರ ವಿವರವನ್ನು ಜಾತಿ, ಉಪ ಜಾತಿಗಳ ವಿವರಗಳೊಂದಿಗೆ ಒದಗಿಸುವಂತೆ ಕೋರಲಾಗಿದೆ. ರಾಜ್ಯ ಸರ್ಕಾರದ 43 ಇಲಾಖೆಗಳು, ನಿಗಮ, ಮಂಡಳಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಗುಂಪಿನ ನೌಕರರಲ್ಲಿರುವ ಪರಿಶಿಷ್ಟ ಜಾತಿಯವರ ವಿವರ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.