ADVERTISEMENT

ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಯಾವಾಗ? ಡಿಜಿಪಿ ಎಂ.ಎ. ಸಲೀಂ ಸಂದರ್ಶನ

'ಸಂತ್ರಸ್ತ ಕೇಂದ್ರಿತ ತನಿಖಾ ಪದ್ಧತಿ ಅಳವಡಿಕೆ'

ಆದಿತ್ಯ ಕೆ.ಎ
Published 24 ಮೇ 2025, 2:33 IST
Last Updated 24 ಮೇ 2025, 2:33 IST
<div class="paragraphs"><p>ಡಾ.ಎಂ.ಎ. ಸಲೀಂ&nbsp; </p></div>

ಡಾ.ಎಂ.ಎ. ಸಲೀಂ 

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ರಾಜ್ಯದ 43ನೇ ಪೊಲೀಸ್‌ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ) ಡಾ.ಎಂ.ಎ. ಸಲೀಂ ಅವರು ಬುಧವಾರ (ಮೇ 21) ಅಧಿಕಾರ ಸ್ವೀಕರಿಸಿದ್ದಾರೆ. ಸಿಐಡಿಯ ಆರ್ಥಿಕ ಅಪರಾಧ ಹಾಗೂ ವಿಶೇಷ ಘಟಕಗಳ ವಿಭಾಗದ ಪೊಲೀಸ್ ನಿರ್ದೇಶಕರಾಗಿರುವ ಸಲೀಂ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.‌ ಬೆಂಗಳೂರು ಸಮೀಪದ ಚಿಕ್ಕಬಾಣಾವರ ಮೂಲದ ಸಲೀಂ ಅವರು, ರಾಜ್ಯದಲ್ಲಿ ಶಾಂತಿ–ಸೌಹಾರ್ದ, ಸುರಕ್ಷತೆಯ ವಾತಾವರಣ ನಿರ್ಮಿಸಲು ಹಾಗೂ ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಾಯಿಸಲು ಪಣ ತೊಟ್ಟಿದ್ದಾರೆ. ಹೊಸ ಆಲೋಚನೆ, ಯೋಜನೆಗಳ ಕುರಿತು ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ

ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರಾಗಿರುವ ನೀವು, ಇಲಾಖೆಯನ್ನು ಜನಸ್ನೇಹಿಯಾಗಿ ಹೇಗೆ ರೂಪಿಸುತ್ತೀರಿ?

ADVERTISEMENT


ಸಾರ್ವಜನಿಕರ ಸೇವೆಗೆ ಅವಕಾಶ ಸಿಕ್ಕಿದೆ. ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಒತ್ತು ನೀಡಲಾಗುವುದು. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಇದುವರೆಗೂ ಅನುಸರಿಸುತ್ತಿದ್ದ ಪಥವಾದ ‘ಆರೋಪಿ ಕೇಂದ್ರಿತ ವ್ಯವಸ್ಥೆ’ಯನ್ನು ‘ಸಂತ್ರಸ್ತ ಕೇಂದ್ರಿತ ವ್ಯವಸ್ಥೆ’ಯ ಪಥವಾಗಿ ಬದಲಾವಣೆ ಮಾಡಲಾಗುವುದು. ಇಂತಹ ಕ್ರಮದಿಂದ ಅಪರಾಧಿಗಳಿಗೆ ಶಿಕ್ಷೆ ಆಗುವ ಜತೆಗೆ ಸಂತ್ರಸ್ತರಿಗೆ ನ್ಯಾಯ ದೊರೆಯಲಿದೆ. ಸಂತ್ರಸ್ತರಿಗೆ ಸೌಲಭ್ಯಗಳನ್ನೂ ಕಲ್ಪಿಸಲು ಸಾಧ್ಯವಾಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ, ರಾಜಕೀಯ ವೈಷಮ್ಯ ಬಿತ್ತುವ ಕೆಲಸಗಳು ನಡೆಯುತ್ತಿವೆ. ಅದರ ನಿಯಂತ್ರಣ ಹೇಗೆ?

ಅಪರಾಧ ತನಿಖಾ ವಿಭಾಗದಿಂದ (ಸಿಐಡಿ) ಸಾಮಾಜಿಕ ಜಾಲತಾಣಗಳ ನಿಯಂತ್ರಣ ಘಟಕ ಆರಂಭಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲೂ ಈ ಘಟಕಗಳಿವೆ. ಕಿಡಿಗೇಡಿಗಳು ಹಾಕುವ ಪೋಸ್ಟ್‌ಗಳ ಮೇಲೆ ನಿಗಾ ವಹಿಸುವಿಕೆ, ಆರೋಪಿಗಳ ಪತ್ತೆ ಹಚ್ಚುವುದರ ಕುರಿತು ಪೊಲೀಸ್‌ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ದ್ವೇಷ ಮೂಡಿಸುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ–2008 ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುವುದು. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 427 ಪ್ರಕರಣಗಳು ದಾಖಲಾಗಿವೆ.

ಕರಾವಳಿ ಜಿಲ್ಲೆಗಳಲ್ಲಿ ‘ಕೋಮುಗಲಭೆ ನಿಗ್ರಹ ಪಡೆ’ ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅದರ ರಚನೆ ಯಾವಾಗ?

‘ಕೋಮುಗಲಭೆ ನಿಗ್ರಹ ಪಡೆ’ಯ ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಶೀಘ್ರದಲ್ಲೇ ಈ ಪಡೆ ಅಸ್ತಿತ್ವಕ್ಕೆ ಬರಲಿದೆ. ಏನೆಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು, ಅದರ ಕಾರ್ಯನಿರ್ವಹಣೆಯ ಕುರಿತೂ ಚರ್ಚೆಗಳು ನಡೆಯುತ್ತಿವೆ.

ಕೆಲವು ಪೊಲೀಸ್‌ ಸಿಬ್ಬಂದಿಯೂ ಮತೀಯವಾಗಿ ವಿಭಜನೆಗೊಂಡಿದ್ದಾರೆ ಎನ್ನುವ ಟೀಕೆ ಸಾರ್ವಜನಿಕ ವಲಯದಲ್ಲಿದೆ?

ರಾಜ್ಯದ ‌ಯಾವ ಜಿಲ್ಲೆಯಲ್ಲಿ, ಯಾವ ಭಾಗದಲ್ಲಿ ಈ ರೀತಿಯ ಆರೋಪಗಳಿವೆ ಎಂಬುದನ್ನು ಪರಿಶೀಲಿಸಲಾಗುವುದು. ಆ ರೀತಿಯ ಪರಿಸ್ಥಿತಿ ಕಂಡುಬಂದರೆ ಅದರ ಬದಲಾವಣೆಗೆ ಕ್ರಮವಹಿಸಲಾಗುವುದು.

ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಯಾವಾಗ? 

ಸ್ಥಗಿತಗೊಂಡಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ), ಕಾನ್‌ಸ್ಟೆಬಲ್‌ ನೇಮಕಾತಿ ಪ್ರಕ್ರಿಯೆಗೆ ಮರುಚಾಲನೆ ಸಿಕ್ಕಿದೆ. ಒಂದು ಬ್ಯಾಚ್‌ (ಪಿಎಸ್‌ಐ) ತರಬೇತಿಯಲ್ಲಿದೆ. ಇನ್ನೊಂದು ಬ್ಯಾಚ್‌ಗೆ ನೇಮಕಾತಿ ಪತ್ರ ಕೊಡಬೇಕಿದೆ. ಅವರೆಲ್ಲರೂ ಕರ್ತವ್ಯಕ್ಕೆ ಬಂದರೆ ಸಮಸ್ಯೆ ಆಗುವುದಿಲ್ಲ. ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಪೂರ್ಣಗೊಳಿಸಿದೆ. ನ್ಯಾಯಾಲಯದಲ್ಲಿ ವಿಚಾರಣೆಯೂ ಆರಂಭವಾಗಲಿದೆ.

ಡಾ.ಎಂ.ಎ. ಸಲೀಂ 

ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆ ಹೇಗೆ?

ಹಿಂದೆ ನಡೆದಿದ್ದ ಲೋಪಗಳಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದೆ ನಡೆಯುವ ನೇಮಕಾತಿಗಳಲ್ಲಿ ಅಕ್ರಮ ನಡೆಯದಂತೆ ನಿಗಾ ವಹಿಸಲಾಗುವುದು. ಪಾರದರ್ಶಕ ನೇಮಕಾತಿಯ ಕುರಿತು ನೇಮಕಾತಿ ವಿಭಾಗವು ನೀಲನಕ್ಷೆ ಸಿದ್ಧಪಡಿಸಿದೆ.

ತಾವು ಬೆಂಗಳೂರು ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಆಗಿದ್ದ ವೇಳೆ ಸಂಚಾರ ದಟ್ಟಣೆ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆಯಾಗಿತ್ತು. ಮತ್ತೆ ವಿಪರೀತ ದಟ್ಟಣೆಯಿಂದ ಸಮಸ್ಯೆಯಾಗಿದೆಯಲ್ಲ?

ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಹುದ್ದೆಯಿಂದ ನಾನು ತೆರವುಗೊಂಡು ಎರಡು ವರ್ಷ ಕಳೆದಿದೆ. ಸದ್ಯ ಯಾವೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲಿಸುತ್ತೇನೆ. ಸಂಚಾರ ದಟ್ಟಣೆ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಆ ವಿಭಾಗದ ಅಧಿಕಾರಿಗಳ ಜತೆಗೆ ಚರ್ಚಿಸುತ್ತೇನೆ. ಬೆಂಗಳೂರಿನಲ್ಲೇ 1.40 ಕೋಟಿ ವಾಹನಗಳಿವೆ. ರಾತ್ರೋರಾತ್ರಿ ಮೂಲಸೌಕರ್ಯ ಕಲ್ಪಿಸುವುದೂ ಕಷ್ಟ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ‘ನಮ್ಮ ಮೆಟ್ರೊ’ ಹಾಗೂ ಬಿಎಂಟಿಸಿ ಸೇವೆ ಉತ್ತಮವಾಗಿದೆ. ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿದರೆ ಅನುಕೂಲ. ಮೈಸೂರು, ಮಂಗಳೂರಿನಲ್ಲೂ ದಟ್ಟಣೆ ಸಮಸ್ಯೆಯಿದ್ದು, ಸಮಸ್ಯೆ ನಿವಾರಣೆ ಮಾಡಲಾಗುವುದು.

ಪೊಲೀಸ್‌ ಠಾಣೆಗಳಲ್ಲೇ ಸಿವಿಲ್‌ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸುವುದಕ್ಕೆ ತಡೆ ಹಾಕುತ್ತೀರಾ?

ಜಮೀನು ಹಾಗೂ ಹಣಕಾಸಿಗೆ ಸಂಬಂಧಿಸಿದ ಗಲಾಟೆಗಳು ಠಾಣೆಯ ಮೆಟ್ಟಿಲೇರಿದಾಗ ಇಲಾಖೆಯ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಸ್ಪಷ್ಟ ಮಾರ್ಗಸೂಚಿಯಿದೆ. ಮತ್ತೊಮ್ಮೆ ಮಾರ್ಗಸೂಚಿ ಹೊರಡಿಸಲಾಗುವುದು. ನಗರ ಪ್ರದೇಶಗಳಲ್ಲಿ ಈ ರೀತಿಯ ಆರೋಪಗಳು ಹೆಚ್ಚು ಬರುತ್ತಿವೆ. ತಮ್ಮ ವ್ಯಾಪ್ತಿ ಮೀರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ಆಗಲಿದೆ. ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಕರಾವಳಿಯ ಕೋಮು ಸಾಮರಸ್ಯಕ್ಕೆ ಕ್ರಮ ಏನು?
ಉಡುಪಿಯಲ್ಲಿ ನಾನು ಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಸಾಮರಸ್ಯದ ವಾತಾವರಣ ಇತ್ತು. ಸಾಮರಸ್ಯ ಮೂಡಿಸುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಪೊಲೀಸರು ಕೆಲಸ ಮಾಡಬೇಕು. ಆಗ ಪೊಲೀಸರ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಮೂಡಲಿದೆ. ಆಗ ಸಹಜವಾಗಿಯೇ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಉಡುಪಿಯಲ್ಲಿ ಮನೆ ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಮನೆಗಳಲ್ಲಿ ‘ಚಾಕ್‌ ಪೀಸ್‌ ಗುರುತು’ ಕಾರ್ಯಕ್ರಮ ರೂಪಿಸಲಾಗಿತ್ತು. ಅದು ಯಶಸ್ವಿಯೂ ಆಗಿತ್ತು. ಈಗಲೂ ಸಮುದಾಯದ ಸಹಭಾಗಿತ್ವವನ್ನು ಸಾಧಿಸಿ, ಸಾಮರಸ್ಯದ ವಾತಾವರಣ ಮೂಡಿಸಲಾಗುವುದು.

ರಾಜ್ಯದಲ್ಲಿ ರೌಡಿಗಳ ಚಟುವಟಿಕೆ ನಿಯಂತ್ರಣಕ್ಕೆ ಬಂದಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ದಾವಣಗೆರೆ, ಮಂಗಳೂರಿನಲ್ಲಿ ಕೊಲೆ ಪ್ರಕರಣಗಳು ನಡೆದಿವೆ?

ರೌಡಿ ಚಟುವಟಿಕೆಯನ್ನು ಸಮಾಜವೂ ಸಹಿಸುವುದಿಲ್ಲ. ರೌಡಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಆಗಲಿದೆ. ಅದನ್ನು ಬೇರು ಸಹಿತ ಕಿತ್ತು ಹಾಕಲಾಗುವುದು. ಇಲಾಖೆ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ. ಡ್ರಗ್ಸ್‌ ಮಾರಾಟ, ಮಟ್ಕಾ, ಬೆಟ್ಟಿಂಗ್ ದಂಧೆಗೂ ಕಡಿವಾಣ ಹಾಕಲಾಗುವುದು.

ರಾಜ್ಯದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಜನಸಾಮಾನ್ಯರು ನಿತ್ಯ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್‌ ವಂಚಕರ ಪತ್ತೆ ಕಾರ್ಯ ಪೊಲೀಸ್‌ ಇಲಾಖೆಗೆ ಸವಾಲಾಗಿದೆಯೇ? 

ತಂತ್ರಜ್ಞಾನ ಬೆಳೆದಂತೆ ಜನರ ಜೀವನ ಸರಳವಾಗಿದೆ. ಇದನ್ನೇ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ. ಸೈಬರ್‌ ಅಪರಾಧಗಳ ಪತ್ತೆ ಕಾರ್ಯದ ಕುರಿತು 26 ಸಾವಿರ ಪೊಲೀಸರಿಗೆ ತರಬೇತಿ ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೂ ತರಬೇತಿ ಕೊಡಲಾಗಿದೆ. ಇನ್ನೂ 24 ಸಾವಿರ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶವಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುವುದು. ಪ್ರಾಸಿಕ್ಯೂಷನ್ ಎದುರು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿ ವಂಚಕರಿಗೆ ಶಿಕ್ಷೆ ಆಗುವಂತೆ ಮಾಡಲಾಗುವುದು. ಸಾರ್ವಜನಿಕರಲ್ಲೂ ಜಾಗೃತಿ ಬರಬೇಕಿದೆ. ಜನರು ಎರಡು ಬ್ಯಾಂಕ್‌ ಖಾತೆ ಹೊಂದಿದ್ದರೆ ಉತ್ತಮ. ಕಡಿಮೆ ಹಣವಿರುವ ಖಾತೆಯನ್ನು ಆನ್‌ಲೈನ್‌ ವ್ಯವಹಾರಕ್ಕೆ ಬಳಸಿಕೊಳ್ಳಬೇಕು. ಇನ್ನೊಂದು ಖಾತೆಯಲ್ಲಿ ಚೆಕ್‌ಗಳಲ್ಲಿ ವ್ಯವಹಾರ ನಡೆಸಬೇಕು.

ಡಾ.ಎಂ.ಎ. ಸಲೀಂ

ಎಲ್ಲೆಲ್ಲಿ ಕೆಲಸ?
1993ರಲ್ಲಿ ಅಖಿಲ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗಿ ವೃತ್ತಿ ಜೀವನ ಆರಂಭಿಸಿದ್ದರು.‌ ಉಡುಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು ನಗರ ಪೊಲೀಸ್‌ ಕಮಿಷನರ್‌, ಬೆಂಗಳೂರು ನಗರ ವಿಶೇಷ ಪೊಲೀಸ್‌ ಕಮಿಷನರ್‌, ಪೂರ್ವ ವಲಯದ ಪೊಲೀಸ್‌ ಮಹಾನಿರೀಕ್ಷಕ, ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಸೇರಿ ಪೊಲೀಸ್‌ ಇಲಾಖೆಯಲ್ಲಿ 26 ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಪೊಲೀಸ್‌ ಪಡೆಯ ಮುಖ್ಯಸ್ಥರಾಗಿ ಅವರು ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.