* ಹಂಪಿ ಉತ್ಸವಕ್ಕಾಗಿ ನೀವು ಉಪವಾಸ ಕುಳಿತುಕೊಳ್ಳುವುದಾಗಿ ಹೇಳಿಕೆ ನೀಡಿದ್ದು ಏಕೆ?
ಸರ್ಕಾರವನ್ನು ಎಚ್ಚರಿಸಲು ಉಪವಾಸ ಕೂತ್ಕೊಳ್ಳಲೇಬೇಕು. ಶಾಸಕರ ವಿಲಾಸಕ್ಕೆ, ಮಸಾಜ್‌ಗಳಿಗೆ ಎಪ್ಪತ್ತು ಎಂಬತ್ತು ಲಕ್ಷ ರೂಪಾಯಿ ದುರ್ಬಳಕೆ ಆಗಬಹುದು. ಆದರೆ ಸಾಂಸ್ಕೃತಿಕ ಮಹತ್ವದ ಹಂಪಿ ಉತ್ಸವ ಏಕೆ ನಡೆಯಬಾರದು?
* ಬರಗಾಲ ಇರುವುದರಿಂದ ಉತ್ಸವ ಬೇಡ ಎಂದು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರಲ್ಲ...?
ಒಂದು ವಿಷಯ ನೆನಪಿಡಿ. ಹಣಕಾಸಿಗೆ ಯಾವುದೇ ಬರಗಾಲ ಇಲ್ಲ. ಸರ್ಕಾರಕ್ಕೆ ಸಾಂಸ್ಕೃತಿಕ ಬರಗಾಲ ಬಂದಿದೆ. ಬರಗಾಲವಿದೆ ಎಂದು ಯಾರೂ ಸುಮ್ಮನೆ ಕುಳಿತುಕೊಂಡಿಲ್ಲ. ಹಾಡುವವರು ಎಂದಿನಂತೆ ಹಾಡುತ್ತಿದ್ದಾರೆ.
ಬರೆಯುವವರು ಬರೆಯುತ್ತಿದ್ದಾರೆ. ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಕಲೆಗೆ ಬರಗಾಲ ಬಂದಿಲ್ಲ.
* ಬರಗಾಲದಲ್ಲಿ ಮೈಸೂರು ದಸರಾ ನಡೆದಿತ್ತು. ಹಂಪಿ ಉತ್ಸವ ಬೇಡವೆನ್ನುವುದು ಸರ್ಕಾರದ ತಾರತಮ್ಯ ನೀತಿಯೇ?
ಖಂಡಿತವಾಗಿ. ದಕ್ಷಿಣ ಕರ್ನಾಟಕದ ಎಲ್ಲ ಉತ್ಸವಗಳನ್ನು ಸರ್ಕಾರ ವಿಜೃಂಭಣೆಯಿಂದ ಆಚರಿಸಿದೆ. ಮೈಸೂರು ದಸರಾಗೆ ಪ್ರೇರಣೆಯಾದ ಮಹಾನವಮಿ ದಿಬ್ಬ ಇರುವುದೇ ಹಂಪಿಯಲ್ಲಿ. ಸರ್ಕಾರದ ಈ ನೀತಿಯಿಂದಾಗಿಯೇ ಉತ್ತರ ಕರ್ನಾಟಕ ಭಾಗದ ಪ್ರದೇಶಗಳು ಈಗಲೂ ಅಭಿವೃದ್ಧಿಯಲ್ಲಿ ಹಿಂದುಳಿದಿವೆ.
* ಉತ್ಸವ ನಡೆಸಲು ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರಿಗೆ ಏನು ಹೇಳುವಿರಿ?
ಸರ್ಕಾರ ಅವರಪ್ಪನ ಮನೆಯ ದುಡ್ಡಿನಿಂದ ಉತ್ಸವ ಮಾಡುವುದಿಲ್ಲ. ಅದು ಜನರ ದುಡ್ಡು. ಉತ್ಸವಕ್ಕಾಗಿ ಯಾರೂ ಭಿಕ್ಷೆ ಬೇಡಬೇಕಾಗಿಲ್ಲ. ಕರ್ನಾಟಕದ ಭವ್ಯ ಇತಿಹಾಸ, ಪರಂಪರೆಗೆ ಸಾಕ್ಷಿಯಾದ ಜಿಲ್ಲೆಯ ಏಕೈಕ ಉತ್ಸವಕ್ಕೆ ಬೇಕಾದ ಹಣವನ್ನು ಸರ್ಕಾರವೇ ಖರ್ಚು ಮಾಡಬೇಕು.
* ಎರಡು ದಿನ ಉತ್ಸವ ನಡೆಸುವ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಉತ್ಸವಕ್ಕೆ ಎರಡು ದಿನ ಸಾಕೆ?
ಉತ್ಸವ ಮೂರು ದಿನ ನಡೆಯಲೇಬೇಕು. ಜಿಲ್ಲಾಡಳಿತ ಸ್ವಂತ ನಿರ್ಧಾರ ಕೈಗೊಂಡಿಲ್ಲ. ಉಸ್ತುವಾರಿ ಸಚಿವರ ಪ್ರತಿಧ್ವನಿಯಾಗಿ ಕೆಲಸ ಮಾಡುತ್ತಿದೆ. ಎರಡು ದಿನದಲ್ಲಿ ಯಾವ ಉತ್ಸವ ಮಾಡುತ್ತೀರಿ? ಉತ್ಸವ ಕೇವಲ ಟಿ.ಎ., ಡಿ.ಎ ವಿಚಾರವಲ್ಲ ಎಂಬುದನ್ನು ಮೊದಲು ಸರ್ಕಾರ ತಿಳಿದುಕೊಳ್ಳಬೇಕು.
–ಕೆ.ನರಸಿಂಹಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.