ನುಡಿ ಬೆಳಗು
ಊರ ಗೌಡ ತೀರಿಕೊಂಡ. ಮಗ ಅವನ ತಿಥಿ ಕಾರ್ಯಗಳನ್ನು ಅದ್ದೂರಿಯಾಗಿ ನಡೆಸಿದ. ಎಲ್ಲ ಮುಗಿದ ಮೇಲೆ ಲೆಕ್ಕದವನನ್ನು ಕರೆದು ಅಪ್ಪನ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ‘ನಮ್ಮ ಬಳಿ ಎಷ್ಟು ಸಂಪತ್ತಿದೆ?’ ಎಂದ. ‘ನಾಲ್ಕು ತಲೆಮಾರಿನವರೆಗೆ ಕೂತು ತಿನ್ನುವಷ್ಟು’ ಎಂದ ಅವನು.
ಅವತ್ತಿನಿಂದ ಗೌಡನಿಗೆ ನಾಲ್ಕು ತಲೆಮಾರಿನ ನಂತರ ನನ್ನ ಮನೆತನದವರ ಜೀವನ ಹೇಗೆ ಎಂಬ ಚಿಂತೆ ಶುರುವಾಯಿತು. ಅದರ ಬಗ್ಗೆ ಯೋಚಿಸಿ, ಕೆಲಸ ಮಾಡಿ, ಚಿಂತೆ ಮಾಡಿ ಅವನ ಆರೋಗ್ಯ ಹಾಳಾಗಿಹೋಯಿತು. ಗೌಡನ ಮನೆಯ ಹಿರಿಯ ಕೆಲಸಗಾರನಿಗೆ ಗೌಡ ಈ ಎಳಸುತನದ ಬೇಡದ ಯೋಚನೆಯಿಂದ ತಂದುಕೊಂಡ ಅನಾರೋಗ್ಯದ ಬಗ್ಗೆ ಬೇಜಾರಾಯಿತು. ಸಮಯ ನೋಡಿ ಆತ ಗೌಡನಿಗೆ ‘ನಿಮ್ಮ ಚಿಂತೆ ದೂರವಾಗಬೇಕೆಂದರೆ ಪ್ರತಿ ದಿನ ಅವಶ್ಯಕತೆ ಇರುವ ಒಬ್ಬನಿಗೆ ಏನಾದರೂ ದಾನ ಮಾಡಿ’ ಎಂದು ಒಂದು ಪರಿಹಾರ ಸೂಚಿಸಿದ. ಗೌಡ ಪ್ರತಿ ದಿನ ದಾನ ಕೊಡತೊಡಗಿದ. ಹೀಗೆ ಕೊಡುವಾಗ ಅವನಿಗೆ ಏನೂ ಇಲ್ಲದವರ ಸ್ಥಿತಿಯ ಅರಿವಾಗತೊಡಗಿತು.
ಒಂದು ದಿನ ಗೌಡನಿಂದ ದಾನ ಪಡೆಯಲು ಯಾರೂ ಬರಲೇ ಇಲ್ಲ. ಗೌಡ ಕಾಯ್ದೂ ಕಾಯ್ದೂ ಬೇಸತ್ತ. ಅಷ್ಟರಲ್ಲಿ ದಾರಿಯಲ್ಲಿ ರಸ್ತೆ ಸ್ವಚ್ಛ ಮಾಡುವ ಹೆಂಗಸೊಬ್ಬಳು ಹೋಗುತ್ತಿದ್ದಳು. ಗೌಡನಿಗೆ ಖುಷಿಯಾಯ್ತು. ಆಕೆಯನ್ನು ಕರೆದು ‘ತಗೋ ನಿನಗಿವತ್ತು ಹಣ ಕೊಡುತ್ತೇನೆ’ ಅಂದ. ಆಕೆ, ‘ಸ್ವಲ್ಪ ಇರಿ ಸ್ವಾಮಿ’ ಎಂದವಳು ತನ್ನ ಕೈಚೀಲವನ್ನು ಒಮ್ಮೆ ತೆಗೆದು ಅದೇನೋ ಎಣಿಸಿದವಳು ಗೌಡರ ಕಡೆ ನೋಡಿ ‘ಸ್ವಾಮಿ, ನನಗೆ ಹಣ ಬೇಡ. ಇವತ್ತಿಗೆ ಸಾಕಾಗುವಷ್ಟು ಹಣ ಈಗಾಗಲೇ ನನ್ನ ಬಳಿ ಇದೆ. ಬೇರೆ ಯಾರಾದರೂ ಅಗತ್ಯ ಇರುವವರಿಗೆ ಕೊಟ್ಟುಬಿಡಿ’ ಎಂದಳು.
ಗೌಡನಿಗೆ ಆಶ್ಚರ್ಯವಾಯಿತು. ಇದೇನಿದು! ನಾನು ನೋಡಿದರೆ ನಾಲ್ಕನೇ ತಲೆಮಾರಿನ ಉಣ್ಣುವ ಚಿಂತನೆಯಲ್ಲಿ ಹೈರಾಣಾಗಿದ್ದೇನೆ. ಈಕೆ ನೋಡಿದರೆ ನಾಳೆಯ ಚಿಂತೆಯನ್ನೂ ಮಾಡುತ್ತಿಲ್ಲವಲ್ಲ ಎಂದು ಯೋಚಿಸಿ ‘ಏನಮ್ಮಾ ನಿನಗೆ ನಿನ್ನ ಮಕ್ಕಳ ಭವಿಷ್ಯದ ಮುಂದಾಲೋಚನೆ ಇಲ್ವಾ? ಹಣವಂತಳಾಗುವ, ಬೇಕಾದ್ದನ್ನು ಕೊಳ್ಳುವ, ಬಳಸುವ ಆಸೆಗಳಿಲ್ವಾ?’ ಅಂದ. ಆಕೆ ನಗುತ್ತಾ ‘ನನಗೂ ಖಂಡಿತಾ ಅವೆಲ್ಲಾ ಆಸೆಗಳಿವೆ ಸ್ವಾಮಿ, ಆದರೆ ನನಗಿನ್ನೂ ವಯಸ್ಸಿದೆ, ನನ್ನ ಮಕ್ಕಳು ಚೆನ್ನಾಗಿ ದುಡಿಯುತ್ತಿದ್ದಾರೆ. ಹಾಗಾಗಿ ನಿಮ್ಮ ದಾನ ಬೇಡವೆಂದೆ. ಅಗೋ ಅಲ್ಲಿ ಬರುತ್ತಿದ್ದಾನಲ್ಲ ಮುದುಕ, ಅವನಿಗೆ ನೀವು ಕೊಡಿ. ಅವನೀಗ ಕೆಲಸ ಮಾಡಲು ಅಶಕ್ತ. ನನಗಿಂತ ಅವನಿಗೆ ಇದರ ಅಗತ್ಯವಿದೆ’ ಎಂದು ಮುಂದೆ ಹೋದಳು. ಆಗ ಗೌಡನಿಗೆ ತನ್ನ ಅಹಂ ಮತ್ತು ಆಕೆಯ ಸ್ವಾಭಿಮಾನ, ತನ್ನ ದುರಾಸೆ ಮತ್ತು ಆಕೆಯ ತೃಪ್ತಿ, ಆಕೆಯ ಆರೋಗ್ಯ ಮತ್ತು ತನ್ನ ಅನಾರೋಗ್ಯದ ನಡುವಿನ ಕಾರಣ ಅರ್ಥವಾಯಿತು.
ಹಣ ಮತ್ತು ಸವಲತ್ತುಗಳು ಯಾರಿಗಾದರೂ ಬೇಕೇಬೇಕು. ದೂರದೃಷ್ಟಿಯೂ ಇರಬೇಕು, ನಿಜ. ಆದರೆ ಅದಕ್ಕೆ ನಾವು ತೆರುವ ಬೆಲೆ ಎಂಥದ್ದು ಅನ್ನುವುದೂ ಬಹಳ ಮುಖ್ಯವಾದ ವಿಚಾರ. ಸಹಜವಾದ ಕಾಳಜಿ ಮತ್ತು ಕೆಲಸಗಳು ಅತಿಯಾಸೆ ಅಥವಾ ವ್ಯಸನವಾಗಿ ನಮ್ಮ ನೆಮ್ಮದಿಯನ್ನೇ ಹಾಳುಮಾಡುವಂತಿರಬಾರದು. ನಮ್ಮ ಸುತ್ತಮುತ್ತ ಅನಗತ್ಯ ಆಸ್ತಿ ಸಂಚಯ, ಬೇಡದ ಸಂಗ್ರಹಣೆ, ಕೊಳ್ಳುಬಾಕತನ ಇತ್ಯಾದಿ ದುರಾಸೆಯ ಗುಣಗಳನ್ನೇ ಬದುಕಿನ ದೂರಾಲೋಚನೆ ಎಂಬ ಭ್ರಮೆಯಲ್ಲಿ ಬದುಕುವವರನ್ನೇ ನೋಡುತ್ತಾ ಅವೇ ಇವತ್ತಿನ ಮೌಲ್ಯಗಳು ಎಂದು ನಾವು ಅಂದುಕೊಂಡಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.