ನುಡಿ ಬೆಳಗು
ಗಾಂಧೀಜಿಗೆ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ತುಂಬಾ ಶ್ರದ್ಧೆ. ಅವರ ಕೊಠಡಿಯಲ್ಲಿ ಒಂದು ಕಿಟಕಿಯಿತ್ತು. ಅವರು ಕೂತುಕೊಳ್ಳುವ ಸ್ಥಳಕ್ಕೆ ಅದು ಎದುರಾಗಿದ್ದುದರಿಂದ ಗಾಂಧೀಜಿಯ ಮೋರೆಗೆ ನೇರಾಗಿ ಬಿಸಿಲು ಬೀಳುತ್ತಿತ್ತು. ಬಿಸಿಲಿಗೆ ಅಡ್ಡವಾಗಿ ಏನಾದರೂ ಮಾಡಲು ಹೇಳಿದರು. ಆಶ್ರಮದವರಲ್ಲಿ ಯಾರೋ ಒಬ್ಬ ಬಡಗಿಯನ್ನು ಕರೆತಂದು ಅದಕ್ಕೆ ಬಾಗಿಲು ಮಾಡಿಸುವ ಏರ್ಪಾಡು ಮಾಡಿದರು. ಮೊದಲು ಕೇಳಿದಾಗ ಗಾಂಧೀಜೀ ‘ಆಗಲಿ’ ಎನ್ನುತಾರೆ. ನಂತರ ಏನೋ ತಪ್ಪುಮಾಡಿದವರಂತೆ ಅವರಿಗೆ ಅನಿಸಿತು. ಕಡೆಗೆ ಸಂಜೆಯ ಸಭೆಯಲ್ಲಿ ಗಾಂಧಿಜೀ ಹೇಳುತ್ತಾರೆ: ‘ಬಡತನದ ವ್ರತವನ್ನು ತೊಟ್ಟ ನಾವು ಹೀಗೆ ಮಾಡಿದುದು ತಪ್ಪು. ಈ ಬಾಗಿಲಿಗೆ ಎರಡು ರೂಪಾಯಿ ವೆಚ್ಚ ಮಾಡುವ ಬದಲು ಒಂದು ಗಜ ಖಾದಿಬಟ್ಟೆಯ ಪರದೆ ಹಾಕಿದ್ದರೆ ಸಾಕಾಗಿತ್ತು. ಎರಡು ಮೊಳೆ ಹೊಡೆದು ನಾವೇ ಅದನ್ನು ಮಾಡಿಬಿಡಬಹುದಾಗಿತ್ತು. ಬಡತನದ ವ್ರತ ಸುಲಭವಲ್ಲ; ಹೆಜ್ಜೆಹೆಜ್ಜೆಗೂ ಕಣ್ಣಿರಬೇಕು; ಕೃತಿ ಕೃತಿಯನ್ನೂ ತೂಗಬೇಕು'. ಎಂತಹ ವಿವೇಕದ ಮಾತುಗಳಿವು.
ಹಿಂದೆ ನಾವು ಚಿಕ್ಕವರಿರುವಾಗ ನಮ್ಮ ಮನೆಯ ಹಿರಿಯರು ಹೀಗೇ ಹೇಳುತ್ತಿದ್ದರು. ದುಂದುವೆಚ್ಚವನ್ನು ಯಾರೂ ಪ್ರೋತ್ಸಾಹಿಸುತ್ತಿರಲಿಲ್ಲ. ಸಾಕಷ್ಟು ಹೊಲ-ಮನೆ, ತಿನ್ನಲು ಉಡಲು ಸುಭಿಕ್ಷವಾಗಿದ್ದ ಅನುಕೂಲಸ್ಥ ಮನೆಗಳಲ್ಲಿಯೂ ಹಿರಿಯರು ಮನೆಯ ಖರ್ಚು ವೆಚ್ಚಗಳನ್ನು ಹಿಡಿತದಿಂದ ಮಾಡುತ್ತಿದ್ದುದನ್ನು ನೋಡಿಯೇ ಬೆಳೆದಿದ್ದೇವೆ. ಅಪ್ಪ ಕೊಟ್ಟ ನಾಲ್ಕಾಣೆಯನ್ನು ಕೂಡಿಸಿಟ್ಟುಕೊಂಡು ಒಂದು ಪೆನ್ನು ಖರೀದಿಸಿದಾಗ ಸಿಗುತ್ತಿದ್ದ ಆನಂದವೇ ಬೇರೆಯಾಗಿರುತ್ತಿತ್ತು. ನಮ್ಮ ಪಾಕೆಟ್ ಮನಿ ಎಂದರೆ ಐದು ಹತ್ತು ಪೈಸೆ, ಹೆಚ್ಚೆಂದರೆ ನಾಕಾಣೆ ಅಷ್ಟೇ. ಅಂತಹ ಸ್ಥಿತಿ ಈಗಿನ ಮಕ್ಕಳಿಗೂ ಇಲ್ಲ, ದೊಡ್ದವರಿಗೂ ಇಲ್ಲ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ದೇಶದ ಬಹುದೊಡ್ಡ ಯುವವರ್ಗ ನಿರುದ್ಯೋಗದಲ್ಲಿ ನರಳುತ್ತಿದೆ, ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಭರ್ತಿ, ರೈಲು ಮತ್ತು ಇತರ ಸರಕಾರಿ ನೌಕರಿಗಳ ಭರ್ತಿಯಲ್ಲಿ ವಿಳಂಬ ಇಂತಹ ನೂರಾರು ಸಂಕಷ್ಟಗಳ ನಡುವೆಯೂ ಬಹುದೊಡ್ದ ಸಂಖ್ಯೆಯ ಜನರು ದುಂದುವೆಚ್ಚ ಮಾಡುವುದನ್ನು ನೋಡುತ್ತೇವೆ. ನಗರೀಕರಣ, ಗೋಳೀಕರಣಗಳ ಬಳುವಳಿಯಾಗಿ ಬಂದ ಮಾಲ್ ಸಂಸ್ಕೃತಿ ಜನರನ್ನು ಕೊಳ್ಳುಬಾಕರನ್ನಾಗಿ ಮಾಡಿದೆ.
ಬ್ಲಿಂಕಿಟ್, ಝೆಪ್ಟೋ, ಫ್ಲಿಪ್‌ಕಾರ್ಟ್‍ಗಳಲ್ಲಿ ತೆರೆದುಕೊಂಡಿರುವ ಅಂತರ್ಜಾಲದ ದಿನಸಿ ಅಂಗಡಿಗಳು ಬೇಕಿದ್ದನ್ನು ಮನೆಬಾಗಿಲಿಗೇ ತಂದು ತಲುಪಿಸುತ್ತವೆ. ಚೌಕಾಶಿ ಮಾಡಿ ತರುತ್ತಿದ್ದ ತಾಜಾ ತರಕಾರಿಗಳ ಬದಲು ಬಾಡಿ ಬಸವಳಿದ ತರಕಾರಿಗಳು ತಕರಾರಿಲ್ಲದೇ ಫ್ರಿಡ್ಜು ಸೇರುತ್ತವೆ. ಈಗಂತೂ ದಸರೆ, ದೀಪಾವಳಿಯ ಮೆಗಾ ಸೇಲ್, ಆಕರ್ಷಕ ಡಿಸ್ಕೌಂಟ್ ಎಂಬ ಪ್ರಚಾರದ ಸಮ್ಮೋಹನಕ್ಕೆ ಒಳಗಾಗುವ ಜನ ಅಗತ್ಯವಿರಲಿ ಇಲ್ಲದಿರಲಿ ಕಂಡಿದ್ದನ್ನೆಲ್ಲ ಖರೀದಿಸಬೇಕೆನ್ನುತ್ತಾರೆ. ಮನೆಯಲ್ಲಿ ಮನುಷ್ಯರಿಗಿಂತ ಹೆಚ್ಚು ಸಾಮಾನುಗಳೇ ತುಂಬಿರುತ್ತವೆ. ಕಂಡಿದ್ದೆಲ್ಲವೂ ಬೇಕು ಎನ್ನುವ ಕೊಳ್ಳುವಿಕೆಯ ಹುಚ್ಚಿಗೆ ಬಲಿಯಾಗಿರುವ ಜನ ಮಿತವ್ಯಯ ಪದದ ಅರ್ಥವನ್ನೇ ಮರೆತಿದ್ದಾರೆ. ನಾಳೆ ಹೇಗೆ ಬರುತ್ತದೋ ಗೊತ್ತಿಲ್ಲ. ಮಿತವ್ಯಯದಿಂದ ಬಾಳುವುದರಲ್ಲಿಯೇ ಜಾಣತನವಿದೆ, ಅಲ್ಲವೇ ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.