ನುಡಿ ಬೆಳಗು
ಕ್ರೊವೇಶಿಯಾದ ರಾಜಧಾನಿ ಝಾಗ್ರೆಬ್‌ನಲ್ಲಿ ನಿನ್ನೆಯಷ್ಟೇ ಮುಗಿದ ಚೆಸ್ ಪಂದ್ಯಾವಳಿಗೂ ಮುನ್ನ ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಪತ್ರಕರ್ತರೊಬ್ಬರು ಹಾಲಿ ವಿಶ್ವ ಚಾಂಪಿಯನ್ ಭಾರತದ ಡಿ. ಗುಕೇಶ್ ಅವರ ಬಗ್ಗೆ ಕೇಳಿದಾಗ ಆತನೊಬ್ಬ ದುರ್ಬಲ ಆಟಗಾರ ಎಂದರು ಮ್ಯಾಗ್ನಸ್. ತಿಂಗಳ ಹಿಂದಷ್ಟೇ ನಾರ್ವೆ ಚಾಂಪಿಯನ್ ಶಿಪ್‌ನ ಪಂದ್ಯವೊಂದರಲ್ಲಿ ಮ್ಯಾಗ್ನಸ್ ಅವರನ್ನು ಗುಕೇಶ್ ಸೋಲಿಸಿದ್ದರು. ಅಷ್ಟೇ ಅಲ್ಲ, ಗುಕೇಶ್ ಝಾಗ್ರೆಬ್‌ನಲ್ಲಿಯೇ ಮ್ಯಾಗ್ನಸ್ ಅವರನ್ನು ಮತ್ತೊಮ್ಮೆ ಸೋಲಿಸಿದರು. ಅದೂ ಕಪ್ಪು ಕಾಯಿಗಳೊಂದಿಗೆ ಆಟವಾಡಿ. ಮುಂದುವರಿದು, ಅಲ್ಲಿಯೇ ರ್‍ಯಾಪಿಡ್ ಚಾಂಪಿಯನ್‌ಶಿಪ್ ಕೂಡ ಗೆದ್ದರು.
ಈ ಘಟನೆಯಿಂದ ನಾವು ಕಲಿಯಬಹುದಾದ ಸಂಗತಿಗಳು ಎರಡು. ಒಂದು ಮ್ಯಾಗ್ನಸ್ ಅವರ ನಡತೆಯಿಂದ. ವಿದ್ಯೆಗೆ ವಿನಯವೇ ಭೂಷಣ ಅನ್ನುತ್ತಾರೆ. ಮ್ಯಾಗ್ನಸ್ ಪ್ರತಿಭಾವಂತರಿರಬಹುದು, ತಮ್ಮ ಸಾಮರ್ಥ್ಯದ ಬಗ್ಗೆ ಅವರಿಗೆ ಅಪಾರವಾದ ನಂಬಿಕೆ ಇರಬಹುದು. ಆದರೆ, ಬೇರೆ ಆಟಗಾರರನ್ನು ಹಗುರವಾಗಿ ಕಾಣುವ ಅಧಿಕಾರ, ಅದನ್ನು ಬಾಯಿಬಿಟ್ಟು ಹೇಳುವ ಅಹಂಕಾರ ಯಾರೂ ಒಪ್ಪುವಂತಹುದಲ್ಲ. ತಾವಾಡಿದ ಮಾತು ತಮಗೇ ತಿರುಗುಬಾಣವಾಗಿ ಅದೇ ಗುಕೇಶ್‌ರಿಂದ ಪಂದ್ಯವೊಂದರಲ್ಲಿ ಸೋಲಿಸಲ್ಪಟ್ಟರಲ್ಲ. ಯಾವಾಗಲೂ ಬೇರೆಯವರ ಸಾಮರ್ಥ್ಯವನ್ನು ಕಡೆಗಣಿಸುವುದು ಮತ್ತು ತಮ್ಮ ಪ್ರತಿಭೆಯ ಬಗ್ಗೆ ವಿಪರೀತ ಅಹಂಕಾರ ಪಡುವುದು ಒಪ್ಪುವಂತಹುದ್ದಲ್ಲ.
ಇನ್ನು ಗುಕೇಶರ ಗೆಲುವಿನಿಂದ ಸಿಗುವ ಪಾಠ ಬಹು ಮುಖ್ಯವಾದದ್ದು. ಮ್ಯಾಗ್ನಸ್ ಆಡಿದ ಮಾತಿಗೆ ಗುಕೇಶ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಆದರೆ ಮೌನವಾಗಿ ತಮ್ಮ ತಯಾರಿ ಮಾಡುತ್ತಿದ್ದರು. ತೆರೆಯ ಹಿಂದಿನ ಬೆವರು ಹರಿಸುವಿಕೆ ಬೇರೆಯವರಿಗೆ ಕಾಣುವುದಿಲ್ಲ. ಅದರಲ್ಲೂ ಒಂದು ಪ್ರಮುಖ ಚಾಂಪಿಯನ್‌ಶಿಪ್‌ನಲ್ಲಿ ಆಟವಾಡುವಾಗ ಮನಸ್ಸನ್ನು ಕುಗ್ಗಿಸುವ ಈ ರೀತಿಯ ಟೀಕೆಗಳಿಂದ ಪ್ರಚೋದಿತರಾಗದೇ, ತಾಳ್ಮೆ ಕಳೆದುಕೊಳ್ಳದೇ ಆಡುವುದು ಅಷ್ಟು ಸುಲಭವಲ್ಲ. ಕಪ್ಪು ಕಾಯಿಗಳಿದ್ದರೂ ಮ್ಯಾಗ್ನಸ್ ಅವರನ್ನು ಸೋಲಿಸಿ ಗುಕೇಶ್ ಅದ್ಭುತ ಸಾಧನೆ ಮಾಡಿದರು. ಜತೆಗೆ ತಮ್ಮ ವಿಶ್ವಚಾಂಪಿಯನ್ ಪಟ್ಟ ಆಕಸ್ಮಿಕವಲ್ಲ ಅನ್ನುವುದನ್ನೂ ಈ ಮೂಲಕ ಸಾಬೀತುಪಡಿಸಿದರು. ಆಡದೇ ಮಾಡುವವನು ರೂಢಿಯೊಳಗುತ್ತಮನು ಎಂಬ ಹಳೆಯ ಮಾತಿಗೆ ಹೊಸ ಉದಾಹರಣೆಯಾದರು ಗುಕೇಶ್.
ನಮ್ಮ ಬದುಕಿನಲ್ಲಿಯೂ ಅಷ್ಟೇ. ಗೆಲುವುಗಳು ನಮ್ಮನ್ನು ಅಹಂಕಾರಿಯಾಗಿಸಬಾರದು, ಟೀಕೆಗಳು ನಮ್ಮನ್ನು ಕುಗ್ಗಿಸಬಾರದು. ‘ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್’ ಎಂದು ಪಂಪಭಾರತದಲ್ಲಿ ಪಂಪ ಹೇಳುತ್ತಾನೆ. ಅಂದರೆ ಯುದ್ಧದಲ್ಲಿ ಪ್ರತಿಯೊಬ್ಬರ ಸರದಿಯೂ ಬರುತ್ತದೆ ಎಂಬುದು ಇದರರ್ಥ. ಕ್ರೊವೇಶಿಯಾದ ಈ ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ಚಾಂಪಿಯನ್ ಆದರು. ನಾಳೆ ಮತ್ಯಾರೋ ಆಗುತ್ತಾರೆ. ಬದುಕಿನ ಚಕ್ರದಲ್ಲಿ ಏರಿದವನು ಕೆಳಗಿಳಿಯಲೇಬೇಕು, ಕೆಳಗಿರುವವನು ಮೇಲೇರಲೇಬೇಕು. ತಾಳ್ಮೆಯಿಂದ ಇದ್ದು, ಭರವಸೆಯನ್ನು ಕಳೆದುಕೊಳ್ಳದೇ ಕಠಿಣ ಪರಿಶ್ರಮ ಮತ್ತು ದೃಢನಿರ್ಧಾರದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಗುಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.