ADVERTISEMENT

ನುಡಿ ಬೆಳಗು | ಸತ್ಯವೆಂದರೆ ಸರಳತೆ

ದೀಪಾ ಹಿರೇಗುತ್ತಿ
Published 18 ನವೆಂಬರ್ 2025, 0:28 IST
Last Updated 18 ನವೆಂಬರ್ 2025, 0:28 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬಹಳ ಹಿಂದೆ ಒಂದೂರಲ್ಲಿ ಮಡಿಕೆ ಮಾಡುವ ಒಬ್ಬ ಪ್ರಸಿದ್ಧ ಕಲಾವಿದರಿದ್ದರು. ಅವರ ಸೂಕ್ಷ್ಮವಾದ ಕಲೆ ಬಹಳ ಪ್ರಸಿದ್ಧವಾಗಿತ್ತು. ದೂರದ ಊರುಗಳಿಂದಲೂ ಜನರು ಅವರು ಮಾಡುವ ಮಡಿಕೆಗಳನ್ನು, ಹೂದಾನಿಗಳನ್ನು ಕೊಳ್ಳಲು ಬರುತ್ತಿದ್ದರು. ಹೀಗಿರುವಾಗ ಒಮ್ಮೆ ಅವರು ತನಗೆ ಒಬ್ಬ ಸಹಾಯಕ ಬೇಕೆಂದೂ ಈ ಕೆಲಸ ಮಾಡಲು ಇಷ್ಟವಿರುವವರ ಕಲೆಯನ್ನು ಪರೀಕ್ಷಿಸಿ ಸಹಾಯಕನನ್ನಾಗಿ ತೆಗೆದುಕೊಳ್ಳುವುದಾಗಿಯೂ ಹೇಳಿದರು. ಬಹಳ ಮಂದಿ ಪ್ರತಿಭಾವಂತರು ಮಣ್ಣು, ಮಣ್ಣಿನ ಪಾತ್ರೆಗಳನ್ನು ಅಲಂಕರಿಸುವ ವಿವಿಧ ಸಾಧನಗಳು ಮತ್ತು ಬಣ್ಣಗಳನ್ನು ಹಿಡಿದುಕೊಂಡು ಬಂದರು.

ಅವರಲ್ಲಿ ಒಬ್ಬ ವಿದ್ಯಾಧರ. ಆತ ಸರಳವಾದ ಮತ್ತು ಶುಚಿಯಾದ ಬಟ್ಟೆ ತೊಟ್ಟಿದ್ದ. ಅವನ ಕೈಲಿ ಸಾಧಾರಣ ಉಪಕರಣಗಳಿದ್ದವು. ಉಳಿದ ಯುವಕರು ವಿದ್ಯಾಧರನನ್ನು ನೋಡಿ ನಕ್ಕರು. ಇವನು ಇಷ್ಟು ದೊಡ್ಡ ಕಲಾವಿದರ ಸಹಾಯಕನಾಗಲು ಲಾಯಕ್ಕೇ ಇಲ್ಲ ಅಂದುಕೊಂಡು ವ್ಯಂಗ್ಯವಾಡಿದರು.

ADVERTISEMENT

ಕಲಾವಿದರು ಬಂದು ಎಲ್ಲ ಯುವಕರಿಗೂ ಒಂದೇ ಸವಾಲನ್ನಿಟ್ಟರು: ‘ನೀವೆಲ್ಲ ಒಂದೊಂದು ಮಡಿಕೆ ಮಾಡಬೇಕು, ಮತ್ತು ಅದು ಸತ್ಯವನ್ನು ಪ್ರತಿನಿಧಿಸುತ್ತಿರಬೇಕು’. ಸ್ಪರ್ಧೆ ಶುರುವಾಯಿತು. ಹುಡುಗರು ಚಕಚಕನೆ ಮಡಿಕೆ ಮಾಡತೊಡಗಿದರು. ಅದರ ಮೇಲೆ ಹೂವು ಬೆಟ್ಟ ಎಲ್ಲವನ್ನೂ ಕೊರೆದರು. ಬಣ್ಣ ಹಾಕಿದರು. ಬೇಗಬೇಗ ಮುಗಿಸಿ ಸಾಲಾಗಿ ಇಟ್ಟರು. ಆದರೆ ವಿದ್ಯಾಧರನ ಕೆಲಸ ನಿಧಾನವಾಗಿ ಸಾಗಿತ್ತು. ಅವನು ಮಾಡಿದ ಮಡಿಕೆ ಸಾಮಾನ್ಯವಾಗಿತ್ತು. ಅದರ ಮೇಲೆ ಯಾವ ವಿನ್ಯಾಸವೂ ಇರಲಿಲ್ಲ. ಬಣ್ಣವೂ ಇರಲಿಲ್ಲ. ಅಚ್ಚ ಮಣ್ಣಿನ ಬಣ್ಣದ ಮಡಿಕೆ ಸರಳವಾಗಿತ್ತು. ಉಳಿದ ಹುಡುಗರು ಇವನ ಮಡಿಕೆಯ ಕಥೆ ಅಷ್ಟೇ ಎಂದು ನಕ್ಕರು.

ಕಲಾವಿದರು ಬಂದು ಪ್ರತೀ ಮಡಿಕೆಯನ್ನೂ ಪರೀಕ್ಷಿಸಿದರು. ಅಲಂಕಾರ ಮಾಡಿಟ್ಟ ಮಡಿಕೆಗಳು ಬೆರಳಿನಿಂದ ಹೊಡೆದು ಪರೀಕ್ಷಿಸಿದಾಗ ಬಿರುಕು ಬಿಟ್ಟವು, ಕೆಲವು ಒಡೆದೇ ಹೋದವು. ಕೊನೆಯಲ್ಲಿಟ್ಟ ವಿದ್ಯಾಧರನ ಮಡಿಕೆಯನ್ನು ಪರೀಕ್ಷಿಸಿದಾಗ ದೇವಾಲಯದ ಗಂಟೆಯಂತಹ ಆಳವಾದ ಸದ್ದು ಬಂದಿತು, ಮಡಿಕೆ ಬಿರುಕು ಬಿಡಲಿಲ್ಲ.

‘ಈ ಮಡಿಕೆಯ ಏನನ್ನು ಸೂಚಿಸುತ್ತದೆ?’ ಕೇಳಿದರು ಕಲಾವಿದರು.

ವಿದ್ಯಾಧರ ತಲೆಬಾಗಿ ಹೇಳಿದ: ‘ನೀವು ಹೇಳಿದಂತೆ ಇದು ಸತ್ಯವನ್ನು ಸೂಚಿಸುತ್ತದೆ ಗುರುಗಳೇ, ಸತ್ಯಕ್ಕೆ ಯಾವುದೇ ಅಲಂಕಾರ ಬೇಕಿಲ್ಲ. ಆದರೆ ಅದಕ್ಕೆ ಬಲ ಬೇಕು. ಅಪಾರ ತಾಳ್ಮೆ, ಸಾಮರ್ಥ್ಯ ಬೇಕು’.

ಗುರುಗಳು ಮುಗುಳ್ನಕ್ಕು ಹೇಳಿದರು: ‘ಯಾರನ್ನೂ ಅವರ ಬಟ್ಟೆ ಮತ್ತು ಹೊರಗಿನ ನೋಟದಿಂದ ಅಳೆಯಬೇಡಿ. ಚಿನ್ನದ ಮೇಲೆ ದೂಳು ಕೂತರೂ ಅದು ಚಿನ್ನವೇ ಆಗಿರುತ್ತದೆ. ಈ ಹುಡುಗನ ಕೆಲಸ ಪ್ರಾಮಾಣಿಕವಾಗಿದೆ. ಆದರೆ ಅಷ್ಟೇ ಶಕ್ತಿಯುತವಾಗಿದೆ. ಈತ ನನ್ನ ಸಹಾಯಕನಾಗಿ ಆಯ್ಕೆಯಾಗಿದ್ದಾನೆ’.

ಪುಸ್ತಕವನ್ನು ಅದರ ಮುಖಪುಟದಿಂದ ಅಳೆಯಬಾರದೆನ್ನುತ್ತಾರೆ, ನಿಜ. ಆದರೆ ಈಗಿನ ಕಾಲದಲ್ಲಿ ಹೊರಗಿನ ವ್ಯಕ್ತಿತ್ವವನ್ನು ಆಕರ್ಷಕವಾಗಿರಿಸಿಕೊಳ್ಳಲು ನಾವೆಲ್ಲರೂ ಬಹಳ ಪ್ರಯತ್ನಪಡುತ್ತೇವೆ, ತಪ್ಪೇನಲ್ಲ. ಜತೆಗೆ ನಮ್ಮ ಅಂತರಂಗವೂ ಆಕರ್ಷಕವಾಗಿರಬೇಕು. ಓದು, ಒಳ್ಳೆಯ ಆಲೋಚನೆಗಳು, ಕರುಣೆ, ಸಹಾನುಭೂತಿಯಂತಹ ಸ್ವಭಾವಗಳಿಂದ ನಮ್ಮ ಅಂತರಂಗವು ಸುಂದರವಾಗುತ್ತದೆ. ಆಗ ಮಾತ್ರ ನಾವು ಹೊರಗಿನ ವ್ಯಕ್ತಿತ್ವಕ್ಕಷ್ಟೇ ಬೆಲೆ ಕೊಡದೇ, ವ್ಯಕ್ತಿಗಳ ಸಂಪೂರ್ಣ ವ್ಯಕ್ತಿತ್ವಕ್ಕೆ ಮನ್ನಣೆ ನೀಡಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.