ADVERTISEMENT

ನುಡಿ ಬೆಳಗು: ನೋಟದ ಫಲ ಬಾಳು

ವಾಸುದೇವ ನಾಡಿಗ್
Published 5 ಆಗಸ್ಟ್ 2025, 22:09 IST
Last Updated 5 ಆಗಸ್ಟ್ 2025, 22:09 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಆ ಸಾಧಾರಣ ಕುಟುಂಬದಲ್ಲಿ ಮೂವರೇ ಸದಸ್ಯರು. ಮೂವರ ಮಧ್ಯೆ ಒಂದೇ ಒಂದು ಗಾಡಿ. ಅದೂ ಸೆಕೆಂಡ್ ಹ್ಯಾಂಡ್, ಹೇಗೋ ತಗೊಂಡಿದ್ದು. ಮೂವರೂ ಗಾಡಿಯನ್ನು ಚಲಾಯಿಸಬಲ್ಲರು. ಮಗ ಮತ್ತು ತಂದೆಯ ಓಡಾಟ ಹೆಚ್ಚುಕಡಿಮೆ ಬಸ್‌ನಲ್ಲೇ ಆದ್ದರಿಂದ ಗಾಡಿ ಮನೇಲಿ ಇರುತ್ತಿತ್ತು. ತಾಯಿ ಸರಕು, ತರಕಾರಿ ಹೆಚ್ಚು ಭಾರ ಅನಿಸಿದಾಗ ಬಳಸುತ್ತಿದ್ದುದು ಅಷ್ಟೇ. ಅಗತ್ಯವಿದ್ದಾಗ ಮೂವರೂ ಬಳಸುತ್ತಿದ್ದರು. ಸಂಜೆ ಬಂದಾಗ ಸ್ನೇಹಿತರನ್ನು ಕಾಣಲು ಮಗ ಮತ್ತು ದೂರದ ಕೆಲಸ ಇದ್ದಾಗ ತಂದೆ... ಹೀಗೆ ಮೂವರ ಕೈಗೆ ಸಿಕ್ಕ ಗಾಡಿ ಅದು.

ಅಲ್ಲೊಂದು ತಕರಾರಿತ್ತು. ಮೂವರೂ ಗಾಡಿಯನ್ನು ಬಳಸುವಾಗ ಪಕ್ಕದ ಕನ್ನಡಿಯನ್ನು (ಸೈಡ್ ಮಿರರ್) ತಮ್ಮ ಕೂಡುವ ಭಂಗಿ ಮತ್ತು ಎತ್ತರಕ್ಕೆ ತಕ್ಕ ಹಾಗೆ ತಿರುಗಿಸಿಕೊಳ್ಳುತ್ತಿದ್ದರು. ಅದನ್ನು ಆ ಕಡೆ ಈ ಕಡೆ ಸರಿದಾಡಿಸುತ್ತ, ಹಿಂಬದಿಯ ವಾಹನಗಳನ್ನು ಸುಲಭವಾಗಿ ನೋಡುವ ಅನುಕೂಲಕ್ಕೆ ತಕ್ಕ ಹೊಂದಾಣಿಕೆ ಇದು. ಮೂವರೂ ಪ್ರತಿಸಲವೂ ಗೊಣಗುಟ್ಟುತ್ತಲೇ ಮತ್ತೆ ಪಕ್ಕದ ಕನ್ನಡಿಯನ್ನು ಸರಿಪಡಿಸಿಕೊಂಡು ಓಡಿಸುತ್ತಿದ್ದರು. ಕನ್ನಡಿ ಇವರ ತಿರುವಿಗೆ ತಿರುಗಿ ತಿರುಗಿ ಬಳಲಿದ ಹಾಗೆ ಕಾಣುತ್ತಾ ಸಡಿಲವಾಗಿತ್ತು. ‘ಥೋ ಯಾರು ಪ್ರತಿಸಲ ಇದನ್ನು ಹೊಂದಿಸಿಕೊಂಡು ಚಲಾಯಿಸಬೇಕು’ ಅಂತ ನಿರ್ಲಕ್ಷ್ಯ ಮಾಡುವಂತಿಲ್ಲ. ಅದು ಅನಿವಾರ್ಯ. ಇಲ್ಲದೇ ಇದ್ದರೆ ಹಿಂಬದಿಯ ವಾಹನಗಳು ಕಾಣದೆ ಅನಾಹುತ ತಪ್ಪಿದ್ದಲ್ಲ. ಹಾಗಾಗಿಯೇ ಈ ತಾಳ್ಮೆ.

ADVERTISEMENT

ಜೀವನದ ಬಂಡಿಯೂ ಹಾಗೇ ಅಲ್ಲವೇ? ಅವರವರು ಅವರವರ ಅನುಕೂಲಕ್ಕೆ ತಕ್ಕ ಹಾಗೆ ಇದನ್ನು ವ್ಯಾಖ್ಯಾನಿಸುತ್ತಾರೆ, ವಿವರಿಸುತ್ತಾರೆ, ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಸಹಜವೇ. ಸಾವಿರ ಜನ ಸಾವಿರ ತರಹ ಬಾಳುತ್ತಾರೆ. ಯಾರದ್ದು ಮುಖ್ಯ, ಯಾರದ್ದು ಅಮುಖ್ಯ ಅಂತೆಲ್ಲ ಯೋಚಿಸುವ ಹಾಗೇ ಇಲ್ಲ. ಬಾಳಬೇಕು, ಬಾಳನ್ನು ಚಲಾಯಿಸಬೇಕು, ಅವಘಡಗಳನ್ನು ತಪ್ಪಿಸಬೇಕಷ್ಟೇ. ಬಾಳ ವಾಹನದ ಪಕ್ಕದ ಕನ್ನಡಿ ಒಂದೇ. ಆದರೆ, ಅದನ್ನು ಹೊಂದಿಸಿಕೊಳ್ಳುವ ಬಗೆ ಬೇರೆ ಬೇರೆ. ತಲುಪುವ ಗಮ್ಯ ಒಂದೇ. ಅದು ಮತ್ತೊಬ್ಬರಿಗೆ ಉಪದ್ರವಕಾರಿ ಆಗಿರಬಾರದು ಅಷ್ಟೇ. ಸಾವಿರ ಸಲ ಗೊಣಗುಟ್ಟಿದರೂ ಪರವಾಗಿಲ್ಲ, ಸುರಕ್ಷಿತವಾಗಿ ಪ್ರಯಾಣ ಮುಗಿಸಿ ಮನೆ ತಲುಪಿದರೆ ಸಾಕು; ಒಂದೇ ಉದ್ದೇಶದ ಕನ್ನಡಿ; ವ್ಯಕ್ತಿಗಳು ಮೂವರು. ಜೀವನದ ಅಸಂಖ್ಯಾತ ದೃಷ್ಟಿಕೋನ; ಅವರವರ ಎತ್ತರಕ್ಕೆ ತಕ್ಕಂತೆ ಅವರವರ ಬಾಳು ಚಲನೆ. ಪರಸ್ಪರ ಗೌರವಿಸಿ ಬಾಳಬೇಕಾದುದು ಇಲ್ಲಿ ತೀರಾ ಅಪೇಕ್ಷಣೀಯ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.