
ನುಡಿ ಬೆಳಗು
ಕೃಷ್ಣಪ್ಪ ತಾನು ಹದಿಮೂರು ವರ್ಷಗಳ ಹಿಂದೆ ಅಪ್ಪ ಹಾಕಿದ್ದ ಮಾವಿನ ಮರಗಳನ್ನು ಕಡಿಯುತ್ತಿದ್ದ. ಅವನ ಕೈಗಳಿಗೆ ಎಂಥದ್ದೋ ಶಕ್ತಿ-ಮನಸ್ಸಿಗೆ ಏನನ್ನೋ ಮಾಡುವ ಹುಮ್ಮಸ್ಸು. ಅವನಿಗೆ ಈಗ ಹಣ ಮಾಡುವುದಷ್ಟೇ ಬೇಕಿರುವ ವಿಷಯ. ಕಣ್ಣೆದುರಿಗೆ ತನ್ನ ಹಾಗೆ ಇರುವ ರೈತರು ತಕ್ಷಣಕ್ಕೆ ಅಗತ್ಯ ಇರುವುದನ್ನು ಬೆಳೆದು ಹಣ ಮಾಡುತ್ತಿರುವುದು ಕಾಣುತ್ತಿತ್ತು. ಹಾಕಿದ್ದ ಬಂಡವಾಳವನ್ನು ದುಪ್ಪಟ್ಟುಗೊಳಿಸಿ ಮತ್ತಷ್ಟು ದುಡಿವ ಹುಮ್ಮಸ್ಸಿನಿಂದಿದ್ದ.
‘ಮಾವು ನೆರಳಾಗುತ್ತಿದೆಯಲ್ಲೋ ಕೃಷ್ಣಪ್ಪ, ಅದರ ಕೆಳಗೆ ಏನನ್ನು ಬೆಳೀತೀಯ? ಮರದ ಗಬೆಗೆ ಇಟ್ಟ ಎಲ್ಲಾ ಬೆಳೆ ಸೀದುಹೋಗುತ್ತೆ’ ಎಂದವರ ಮಾತಿಗೆ ಹೂಂಗುಡುತ್ತಾ ತೋಳಿನ ಕಸುವಿಗೆ ಹೇಳಿದ್ದು ಒಂದೇ ಮಾತು, ‘ಎಲ್ಲ ಮರಗಳನ್ನು ಕಡಿ’. ಕೈ ಬೊಬ್ಬೆ ಬಂದರೂ ಬಿಡಲಿಲ್ಲ. ಗುರಿಯೊಂದೇ ಎನ್ನುವಂತೆ ಕಡಿದ. ದಾರಿಯಲ್ಲಿ ಹೋಗುವ ಒಬ್ಬ ವಯಸ್ಸಾದವ, ‘ಅಲ್ಲಪ್ಪಾ, ಈ ಮರಗಳು ನಿನಗೇನು ಮಾಡಿದ್ದವು? ಇವನ್ಯಾಕೆ ಕಡಿಯುತ್ತಿರುವೆ’ ಎಂದ. ಅದಕ್ಕವ, ‘ಈ ಮರಗಳು ವರ್ಷಕ್ಕೊಮ್ಮೆ ಫಲ ಕೊಡುತ್ತವೆ. ಸದ್ಯದ ನನ್ನ ಅಗತ್ಯವನ್ನು ನೀಗಿಸಲ್ಲ. ಅದಕ್ಕೆ ಯಾವುದಾದರೂ ತಕ್ಷಣ ದುಡ್ಡು ಬರುವ ಬೆಳೆಯನ್ನು ಇಡುವೆ’ ಎಂದ. ‘ಬೆಳೆದ ಮರಗಳನ್ನು ಕಡಿಯುವುದು ಮೂರ್ಖತನ ಅಷ್ಟು ಬೆಳೆಯಲು ಎಷ್ಟು ಸಮಯ ತೆಗೆದುಕೊಂಡಿವೆ. ಅವುಗಳನ್ನು ಭೂಮಿ ಪ್ರೀತಿಯಿಂದ ಸಲಹಿದೆ. ಆಕಾಶ ಅಕ್ಕರೆಯಿಂದ ಮಳೆ ಎರೆದಿದೆ. ಗಾಳಿ ಅದು ಬೆಳೆಯಲು ಉಸಿರುಕೊಟ್ಟಿದೆ. ನಿನ್ನಪ್ಪ ತನ್ನ ಕನಸ ಕೂಸುಗಳೋ ಎಂಬಂತೆ ಬೆಳೆಸಿದ್ದಾನೆ. ನೀನು ಇವನ್ನು ಅಡ್ಡ ಎನ್ನುತ್ತಿರುವೆ. ಬೇಕಿದ್ದರೆ ರೆಂಬೆಗಳನ್ನು ಕತ್ತರಿಸು ಮರ ಉಳಿಸಿಕೋ. ಎಂದಾದರೂ ಬೆಳೆ ಕೊಟ್ಟೇ ಕೊಡುತ್ತವೆ. ಈಗ ಮಧ್ಯದಲ್ಲಿ ಆಗುವಷ್ಟನ್ನು ಬೆಳಿ’ ಎಂದ ವೃದ್ಧ. ಮಾತು ಗಾಳಿಗೆ ತೂರಿತ್ತು. ಮಾವಿನ ಮರಗಳು ನೆಲಕ್ಕುರುಳಿ ಇಡೀ ತೋಟ ಬಯಲಾಯಿತು. ಅಂದುಕೊಂಡ, ‘ಇನ್ನು ನಾನು ಏನನ್ನು ಬೇಕಾದರೂ ಬೆಳೆಯಬಲ್ಲೆ’.
ಸುತ್ತಮುತ್ತಲ ರೈತರಂತೆ ಕೃಷ್ಣಪ್ಪನೂ ಟೊಮೆಟೊವನ್ನೇ ಬೆಳೆದ. ಹೋದ ಸಲ ಅದರಿಂದಲೇ ಹಣ ಮಾಡಿದವರಿದ್ದರು. ಈ ಸಲ ಎಲ್ಲರೂ ಒಂದನ್ನೇ ಬೆಳೆದದ್ದರಿಂದ ಬೆಲೆ ಇಳಿದುಹೋಯಿತು. ಬೆಳೆದದ್ದು ಹೋಗಲಿ; ಗಿಡದಿಂದ ಕಾಯಿ ಕಿತ್ತ ಕೂಲಿಯೂ ಹುಟ್ಟಲಿಲ್ಲ. ಟೊಮೆಟೊಗಳನ್ನು ಕೇಳುವವರಿಲ್ಲದಾಗಿ ಟನ್ ಗಟ್ಟಲೆ ರಸ್ತೆಗೆ ಸುರಿದು ರೈತರು ಪ್ರತಿಭಟಿಸಿದರು. ಎಲ್ಲರ ಸ್ಥಿತಿಯೂ ಒಂದೇ ಆದ ಮೇಲೆ ಗೋಳು ಹೇಳಿಕೊಳ್ಳುವುದು ಯಾರಲ್ಲಿ? ಆ ವರ್ಷ ಕೃಷ್ಣಪ್ಪನ ದುರದೃಷ್ಟ ಎನ್ನುವಂತೆ ಸುತ್ತಮುತ್ತ ಮಾವು ಬೇರೆ ಕಡೆಗಿಂತ ಅದ್ಭುತವಾಗಿ ಬಂದಿತ್ತು. ಬೆಲೆಯೂ ಏರಿಕೆಯಾಗಿತ್ತು. ಕೃಷ್ಣಪ್ಪ ಅನಾಥನಾದ- ಈಗ ಮಾವಿನ ಮರಗಳನ್ನು ನೆಟ್ಟು ಬೆಳೆಸುವ ಶಕ್ತಿ, ಸಮಯ ಅವನ ಬಳಿಯಿಲ್ಲ. ಅವನು ಮುಂದೆ ಏನನ್ನಾದರೂ ಬೆಳೆಯಬಹುದು. ಹೋದ ಮರ, ಸಮಯ ಎರಡೂ ಬರುವುದಿಲ್ಲ.
ಅಪ್ಪ ಹಾಕಿದ ಮರಕ್ಕೆ ಜೋತುಬೀಳುಬಾರದು, ಅದನ್ನು ಕಾಪಾಡಿಕೊಳ್ಳಬೇಕು ಎನ್ನುವುದೂ ಮುಖ್ಯವೇ. ಇರುವುದು ಉಳಿಸಿಕೊಂಡು, ಅದರ ಜೊತೆ ಏನಾದರೂ ಮಾಡಿ ಸಾಧಿಸುವ ಹಾಗಾದರೆ ಬದುಕು ಸಹನೀಯವಲ್ಲವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.