
ನುಡಿ ಬೆಳಗು
ಮರಳುಗಾಡಿನಲ್ಲಿ ಗುರು ಶಿಷ್ಯರು ನಡೆಯುತ್ತಿದ್ದರು. ಇಬ್ಬರಿಗೂ ಬಾಯಾರಿಕೆ. ಶಿಷ್ಯ ಹೇಳಿದ, ‘ನೀರು ಸಿಕ್ಕಿಬಿಟ್ಟರೆ ಸಾಕು ಎನ್ನಿಸುತ್ತಿದೆ’ ಎಂದು. ಆಗ ಗುರು ಹೇಳಿದ, ‘ಮುಂದೆ ಸಿಗಬಹುದು’. ಶಿಷ್ಯ ಆತಂಕದಿಂದ, ‘ಮುಂದಿನದಿರಲಿ ಈಗ ನೀರು ಸಿಗದಿದ್ದರೆ ಜೀವ ಹೋಗಬಹುದಲ್ಲವೆ?’ ಎಂದ. ಗುರು, ‘ನೀನು ಬೇಕೆಂದು ಬಯಸುತ್ತ ಹೋದರೆ ನೀರಡಿಕೆ ಜಾಸ್ತಿಯಾಗುತ್ತದೆ. ಗೊತ್ತು ಇದು ಕಷ್ಟದ ಕಾಲ, ಮನಸ್ಸನ್ನು ದೇವರೆಡೆಗೆ ತಿರುಗಿಸು. ಅವನ ದಯೆಯಿದ್ದರೆ ಮುಂದೆ ಎಲ್ಲವೂ ಸರಿಯಾಗುತ್ತದೆ’ ಎಂದ.
ಹೀಗೆ ಇಬ್ಬರೂ ಮುಂದೆ ನಡೆಯುತ್ತಿರುವಾಗ ಒಂದು ದೊಡ್ಡ ಕಳ್ಳರ ಗುಂಪು ಎದುರಿಗೆ ಬಂದಿತು. ಅವರ ಬಗಲಲ್ಲಿ ಚರ್ಮದ ಚೀಲಗಳಲ್ಲಿ ನೀರು ತುಂಬಿತ್ತು. ಶಿಷ್ಯ ಓಡಿ ಹೋಗಿ ಅವರನ್ನು ಕೇಳಿದ, ‘ನೀವು ನೀರು ಕೊಡದೆ ಹೋದರೆ ನನ್ನ ಜೀವ ಹೋಗುತ್ತದೆ ದೊಡ್ಡ ಮನಸ್ಸು ಮಾಡಿ’ ಎಂದು. ಆ ಕಳ್ಳರ ನಾಯಕ, ‘ಪ್ರತಿಫಲ ಇಲ್ಲದೆ ನಾವು ಏನನ್ನೂ ಮಾಡಲಾರೆವು. ನಿಮ್ಮ ಬಳಿ ಏನಿದೆ ಎಲ್ಲವನ್ನೂ ಕೊಟ್ಟುಬಿಡಿ’ ಎಂದ. ಆಗ ಶಿಷ್ಯ, ‘ನಾವು ಭಿಕ್ಷೆ ಬೇಡಿ ಊಟ ಮಾಡುವವರು ನಿಮಗೆ ಕೊಡುವಂಥದ್ದು ನಮ್ಮಲ್ಲಿ ಏನಿರುತ್ತದೆ?’ ಎಂದ. ಕಳ್ಳ ನಗುತ್ತಾ, ‘ಇದೆ, ನೀರು ಕೊಡುವೆ. ನಿನ್ನ ಪ್ರಾಣವನ್ನು ಕೊಡುವೆಯಾ?’ ಎಂದ. ಬೆಚ್ಚಿಬಿದ್ದ ಶಿಷ್ಯ, ‘ನೀರಿನಷ್ಟೇ ಮುಖ್ಯ ನನ್ನ ಪ್ರಾಣ. ಪ್ರಾಣದಿಂದಿದ್ದರೆ ನೀರನ್ನು ಹುಡುಕಬಹುದು’ ಎಂದ. ಆದರೆ ಗುರು ಅವರೆದುರು ಬೊಗಸೆಯೊಡ್ಡಿ, ‘ನನ್ನ ಜೀವವನ್ನು ಕೊಡುವೆ, ನೀರನ್ನು ಕೊಡಿ’ ಎಂದು ಬೇಡಿದ. ಆಗ ಶಿಷ್ಯನೆಂದ, ‘ಗುರುವೇ ನೀರು ಕುಡಿದಾಕ್ಷಣ ಜೀವ ತೆಗೆಯುತ್ತಾರೆ. ಯೋಚಿಸಿ ಮುಂದೆ ನೀರು ಸಿಗಬಹುದಲ್ಲವಾ?’ ಎಂದು. ಆಗ ಗುರುವೆಂದ, ‘ಈಗ ನೀರು ಮುಖ್ಯ, ಜೀವ ಅಲ್ಲ’.
ಕಳ್ಳ ಅಚ್ಚರಿಯಿಂದ ಗುರುವಿಗೆ, ‘ಸಾವಿಗೂ ನೀನು ಹೆದರುವುದಿಲ್ಲವಾ’ ಎಂದು ಪ್ರಶ್ನಿಸಿದ. ‘ಹೇಗಾದರೂ ಸಾವು ನಿಶ್ಚಿತ ಎಂದಾದ ಮೇಲೆ ನೀರು ಕುಡಿದು ತೃಪ್ತಿಯಾಗಿ ಸಾಯುವೆ. ಮೊದಲು ನೀರು ಕೊಡು ನಂತರ ನಿನಗೆ ಹೇಗೆ ಇಷ್ಟವೋ ಹಾಗೆ ಮಾಡು’ ಎಂದ. ಕಳ್ಳನ ಮನಸ್ಸು ಕರಗುತ್ತದೆ ಅವನು, ‘ನಿನ್ನ ಜೀವ ತೆಗೆದುಕೊಂಡು ನಾನೇನು ಮಾಡಬಲ್ಲೆ? ಸುಮ್ಮನೆ ಪರೀಕ್ಷೆ ಮಾಡಲು ಹೇಳಿದೆ. ತಗೋ ಮುಂದೆ ಎಲ್ಲಾದರೂ ಸಿಕ್ಕೆ ಸಿಗುತ್ತದೆ ತುಂಬಿಸಿಕೊಳ್ಳುವೆ’ ಎಂದು ಒಂದು ಚೀಲದಲ್ಲಿದ್ದ ನೀರನ್ನು ಕುಡಿಯಲು ಕೊಟ್ಟು ಹೊರಟು ಹೋಗುತ್ತಾನೆ. ಅತ್ಯಂತ ಕರುಣೆಯಿಂದ ಗುರು, ಶಿಷ್ಯನಿಗೆ ಮೊದಲು ನೀರನ್ನು ಕೊಟ್ಟ. ಅವನ ವಿವೇಕದಿಂದ ಇಬ್ಬರ ಜೀವವೂ ಉಳಿಯಿತು.
ಭಾವುಕನಾದ ಶಿಷ್ಯನಿಗೆ ಗುರು ಹೇಳಿದ, ‘ಒಂದು ಹೆಜ್ಜೆ ಮುಂದೆ ಇಡದೆ ಯಾವ ಅವಕಾಶವೂ ಬಾಗಿಲು ತೆರೆಯುವುದಿಲ್ಲ. ಕಷ್ಟದ ಹೊತ್ತಿನಲ್ಲಿ ವಿವೇಕ ಕೆಲಸ ಮಾಡಬೇಕು. ಅತಿ ಬುದ್ಧಿವಂತಿಕೆ, ಮುಂದಾಲೋಚನೆ ಯಾವುದೂ ಅಲ್ಲ... ದೇವರ ಕರುಣೆಯ ಕಣ್ಣು ನಮ್ಮ ಮೇಲೆ ಇರುತ್ತದೆ. ಅಲ್ಪ ಪ್ರಯತ್ನವೂ ನಮ್ಮ ಗುರಿಯನ್ನು ಸಾಧಿಸುತ್ತದೆ. ಪ್ರಯತ್ನವಿಲ್ಲದೆ ಸುಮ್ಮನೆ ನೋಡುಗರಾಗಿ ಹೊರಗೇ ಉಳಿದುಬಿಟ್ಟರೆ ಏನೂ ಸಂಭವಿಸುವುದಿಲ್ಲ' ಎಂದ. ಪ್ರಯತ್ನ ಮಾಡಬೇಕು ಅದು ಮಾತ್ರವೇ ನಮ್ಮನ್ನು ಕಷ್ಟದ ದೊಡ್ಡ ಸುಳಿಯಿಂದ ಕಾಪಾಡಿ ದಡಕ್ಕೆ ಮುಟ್ಟಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.