ಪಚ್ಚೆಯ ಹಸಿರಿನ ದಟ್ಟ ಅರಣ್ಯದ ನಟ್ಟನಡುವಿನಲ್ಲಿ ಹುಲಿಯೊಂದು ವಾಸಿಸುತ್ತಿತ್ತು. ಬೃಹತ್ ಆಕಾರದ ಹುಲಿ ಬಹಳ ಬಲಿಷ್ಠವಾಗಿಯೂ ಇತ್ತು. ಕಾಡಿನ ಎಲ್ಲ ಪ್ರಾಣಿಗಳೂ ಈ ಹುಲಿಗೆ ಹೆದರುತ್ತಿದ್ದವು. ಹುಲಿ ಒಂದು ಸಲ ಗರ್ಜಿಸಿದರೆ ಸಾಕು, ಪ್ರಾಣಿಗಳೆಲ್ಲ ಕಾಲಿಗೆ ಬುದ್ಧಿ ಹೇಳುತ್ತಿದ್ದವು. ಈ ಕಾರಣದಿಂದ ಹುಲಿಗೆ ತನ್ನ ಸಾಮರ್ಥ್ಯದ ಕುರಿತು ಬಹಳ ಅಹಂಕಾರವಿತ್ತು.
ಪ್ರತಿದಿನ ಬೆಳಿಗ್ಗೆ ಆ ಹುಲಿ ಕಾಡಿನ ನಡುವಿನ ಸ್ಫಟಿಕದಂತಹ ಸ್ವಚ್ಛ ನೀರಿನ ಕೊಳವೊಂದರಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಾ, ‘ನನಗಿಂತ ಬಲಿಷ್ಠರಾದವರು ಯಾರಾದರೂ ಇದ್ದಾರೆಯೇ’ ಎಂದು ಕೇಳುತ್ತಿತ್ತು. ‘ಯಾರೂ ಇಲ್ಲ, ಈ ಇಡೀ ಅರಣ್ಯ ನನ್ನದು’ ಎಂದು ತನ್ನ ಪ್ರಶ್ನೆಗೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿತ್ತು. ಈ ಹುಲಿಯ ಗರ್ಜನೆ, ಕೂಗಾಟಕ್ಕೆ ಭಯಪಟ್ಟು ಪ್ರಾಣಿಗಳು ಅದರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಆದರೆ, ಅದೇ ಅರಣ್ಯದಲ್ಲಿ ಒಂದು ಜಿಂಕೆಯಿತ್ತು. ಅದಕ್ಕೆ ಹುಲಿಯ ಈ ಜಂಬದ ಸ್ವಭಾವ ಇಷ್ಟವಾಗುತ್ತಿರಲಿಲ್ಲ. ಆದರೆ ಜಿಂಕೆಯೇನಾದರೂ ಮಾತಾಡಲು ಹೊರಟರೆ, ಅಪ್ಪ ಅಮ್ಮ ಅದರ ಬಾಯಿ ಮುಚ್ಚಿಸುತ್ತಿದ್ದರು.
ಒಮ್ಮೆ ಜಿಂಕೆ ಆ ಕಾಡಿನ ಅಂಚಿನಲ್ಲಿರುವ ಹೊಳೆಯೊಂದರ ದಾರಿಯಲ್ಲಿ ಹಾದುಹೋಗುತ್ತಿತ್ತು. ಮಳೆಯ ವಾತಾವರಣ. ಗಾಳಿ ಬೀಸುತ್ತಿತ್ತು. ಅದೇ ವೇಳೆಗೆ ಹುಲಿಯೂ ಅಲ್ಲಿಗೆ ಬಂದಿತು. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಜಿಂಕೆಯನ್ನು ನೋಡಿ ಹುಲಿಗೆ ಸಿಟ್ಟು ಬಂತು, ‘ಅಲ್ಲ, ನಾನು ಯಾರು ಎಂಬುದು ಗೊತ್ತಿದ್ದರೂ ನಿನ್ನಷ್ಟಕ್ಕೆ ನೀನು ಹೋಗುತ್ತಿದ್ದೀಯಲ್ಲ, ನಾನೆಷ್ಟು ಶಕ್ತಿಶಾಲಿ ಎಂಬುದು ನಿನಗೆ ಗೊತ್ತಿಲ್ಲವೇ?’ ಎಂದಿತು ಹುಲಿ.
‘ಖಂಡಿತ ನೀವು ಶಕ್ತಿಶಾಲಿಯೇ, ಆದರೆ ಶಕ್ತಿಯೇ ಮೇಲು ಎಂಬುದು ತಪ್ಪು. ಜ್ಞಾನವಿಲ್ಲದ ಶಕ್ತಿ ಕೆಲವೊಮ್ಮೆ ವಿಫಲವೂ ಆಗಬಹುದು’ ಎಂದಿತು ಜಿಂಕೆ.
ಹುಲಿಗೆ ಕೋಪವುಕ್ಕಿತು, ‘ಏನು ಮಾತಾಡ್ತಾ ಇದ್ದೀಯಾ. ನಾನು ಯಾರನ್ನು ಬೇಕಾದರೂ ಸೋಲಿಸಬಲ್ಲೆ’ ಎಂದಿತು.
ಅಷ್ಟು ಹೊತ್ತಿಗೆ ಸಣ್ಣ ಗಾಳಿ ಬಿರುಗಾಳಿಯಾಗಿ ಮಾರ್ಪಟ್ಟು ತುಂಬಿ ಹರಿಯುತ್ತಿದ್ದ ಹೊಳೆ ಉಕ್ಕತೊಡಗಿತು. ಗಾಳಿಯ ರಭಸಕ್ಕೆ ಮರಗಳು ತೂರಾಡತೊಡಗಿದವು. ಹುಲಿ ಬೇಗನೆ ಹೊಳೆ ದಾಟಲು ಪ್ರಯತ್ನಿಸಿತು. ಆದರೆ ಪ್ರವಾಹದ ರಭಸಕ್ಕೆ ಈಜಲಾಗದೇ ಹೊಳೆಯಲ್ಲಿ ತೇಲಿಕೊಂಡು ಹೋಗಲಾರಂಭಿಸಿತು. ಜಿಂಕೆ ಅಲ್ಲಿಯೇ ಇದ್ದ ಮರದ ದಿಮ್ಮಿಯೊಂದನ್ನು ಕಷ್ಟಪಟ್ಟು ದೂಡಿಕೊಂಡು ಬಂದು ಕೊಚ್ಚಿಕೊಂಡು ಹೋಗುತ್ತಿದ್ದ ಹುಲಿಗೆ ಹಿಡಿದುಕೊಳ್ಳಲು ಸಹಾಯವಾಗುವಂತೆ ನೀರಿಗೆಸೆಯಿತು. ಅಷ್ಟು ಹೊತ್ತಿಗೆ ಇತರ ಪ್ರಾಣಿಗಳು ಬಂದವು. ದಿಮ್ಮಿಯನ್ನು ನಿಧಾನವಾಗಿ ಎಳೆಯುತ್ತ ಹುಲಿಯನ್ನು ದಡ ಸೇರಿಸಿದವು.
ಅಂತೂ ದಡ ಸೇರಿ ದೀರ್ಘವಾಗಿ ಉಸಿರಾಡಿದ ಹುಲಿ ಜಿಂಕೆಗೆಂದಿತು, ‘ನೀನು ನನ್ನ ಪ್ರಾಣ ಉಳಿಸಿದೆ. ಬರೀ ಶಕ್ತಿ, ಅಧಿಕಾರವೇ ಮುಖ್ಯ ಎಂದು ನಾನು ನಂಬಿದ್ದೆ. ಆದರೆ ನಿನ್ನ ಸಮಯಪ್ರಜ್ಞೆ ನನ್ನ ಬಲಕ್ಕಿಂತ ದೊಡ್ಡದೆಂದು ಅರಿವಾಯಿತು’.
ಆಗ ಜಿಂಕೆ, ‘ಹುಲಿರಾಯಾ, ಪ್ರತೀ ಪ್ರಾಣಿಗೂ ಅದರದ್ದೇ ಆದ ಸಾಮರ್ಥ್ಯವಿರುತ್ತದೆ. ಒಂದು ಇರುವೆಯಿಂದಲೂ ಕಲಿಯುವುದಿದೆ, ಒಂದು ಜೇನು ನೊಣವೂ ಪಾಠ ಕಲಿಸುತ್ತದೆ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ, ಇತರರ ಸಾಮರ್ಥ್ಯದ ಮೇಲೆ ಗೌರವ ಇದ್ದರೆ ಬದುಕು ಅರ್ಥಪೂರ್ಣ’ ಎಂದಿತು.
ಪಾಠ ಕಲಿತ ಹುಲಿ ಅಹಂಕಾರ ಬಿಟ್ಟು ಉಳಿದ ಪ್ರಾಣಿಗಳೊಂದಿಗೆ ಹೊಂದಿಕೊಂಡು ಬದುಕಲಾರಂಭಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.