ADVERTISEMENT

ನುಡಿ ಬೆಳಗು | ಜೀವನ ಬದಲಿಸಿದ ಹಕ್ಕಿಗಳ ಸಂಗಾತ

ಕಲೀಮ್ ಉಲ್ಲಾ
Published 29 ಮೇ 2024, 0:13 IST
Last Updated 29 ಮೇ 2024, 0:13 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಡಾರ್ಜಲಿಂಗ್ ಚಿತ್ರ ಪ್ರವಾಸದಲ್ಲಿ ಸಿಕ್ಕ ಇವನು ಮೊದಲಿಗೆ ರೌಡಿಸಂನಲ್ಲೇ ತನ್ನ ಜೀವನ ಕಳೆದವನು. ಮುಖದ ಮೇಲಿನ ಗಾಯಗಳು ಆರಿದ್ದರೂ ಗುರುತು ಹೋಗಿಲ್ಲ. ಸಣಕಲು ಕಡ್ಡಿಯಂತಿರುವ ಇವನು ಗಲಾಟೆ ದೊಂಬಿ ಮಾಡಿರಲು ಸಾಧ್ಯವೇ ಎಂದು ಅನುಮಾನ ಮೂಡುವಂತಿದ್ದ. ರಂತೂ ಸಾಹು ಎಂಬ ಗೆಳೆಯನೊಬ್ಬ ಇವನಿಗೆ ಸಿಕ್ಕು ಪಕ್ಷಿ ತೋರುಗೆಯ ಕೆಲಸ ಕಲಿಸಿದ್ದ. ಪೋಟೋಗ್ರಫಿಗೆ ಬರುವ ಜನರಿಗೆ ಕಾಡಿನ ಪಕ್ಷಿಗಳನ್ನು ಪರಿಚಯಿಸುತ್ತಾ ಇವನು ನಮ್ರವಾಗಿ ಬದಲಾದ. ಮೊದಲಿನ ಮಾರಾಮಾರಿ ಮರೆತು ವನ್ಯಲೋಕದ ಸೊಬಗಿನೊಳಗೆ ಬೆರೆತು ಹೋದ. 

‘ಎಂಥ ಕೆಟ್ಟ ಜೀವನ ಆರಿಸಿಕೊಂಡಿದ್ದೆ. ಎಲ್ಲರೂ ಹೆದರಿ ನನ್ನ ಗೌರವಿಸುವ ನಾಟಕ ಆಡುತ್ತಿದ್ದರೇ ಹೊರತು ಯಾರೂ ಪ್ರೀತಿಸುತ್ತಿರಲಿಲ್ಲ. ಮನೆಯೊಳಗೂ ಮರ್ಯಾದೆ ಇರಲಿಲ್ಲ. ಈಗ ನೋಡಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಎಲ್ಲರೂ ಇಷ್ಟಪಡುತ್ತಾರೆ. ನಮ್ಮೂರಿನ ಜನರಿಗೆ ಶನಿಯಂತೆ ಕಾಡುತ್ತಿದ್ದೆ. ಆಗವರು ಶಾಪ ಹಾಕುತ್ತಿದ್ದರು. ಈಗ ಎಲ್ಲಾ ನಗುನಗುತ್ತಾ ಮಾತಾಡಿಸುತ್ತಾರೆ. ಎಲ್ಲರ ಬಳಿ ಕ್ಷಮೆ ಕೇಳಿದ್ದೇನೆ. ಈ ಹಕ್ಕಿಗಳು ನೋಡಿ ತಮಗೆಷ್ಟು ಬೇಕೋ ಅಷ್ಟು ಊಟ, ಅಷ್ಟೇ ಮನೆ ಕಟ್ಟಿಕೊಳ್ಳುತ್ತವೆ. ದುರಾಸೆಯಿಲ್ಲದೆ ಬದುಕುತ್ತವೆ. ದುಡಿಮೆ ಜೊತೆಗೆ ಹೊಸ ಜೀವನ ಕಲಿಸಿರುವ ಹಕ್ಕಿಗಳ ಋಣ ನನ್ನ ಮೇಲಿದೆ’ ಎಂದ.

ADVERTISEMENT

ಇದೇ ಪಯಣದಲ್ಲಿ‌ ಮಹಾನಂದ ಬಳಿ ಸಿಕ್ಕ ಮತ್ತೊಬ್ಬ ಸ್ಥಳೀಯ ಹುಡುಗ. ಇವನೂ ಈಗ ನ್ಯಾಚುರಲಿಸ್ಟ್‌ ಆಗಿ ಬದಲಾಗಿದ್ದಾನೆ. ಮೊದಲಿಗೆ ಹಕ್ಕಿಗಳನ್ನು ಕೊಲ್ಲವುದೇ ಇವನ ಹವ್ಯಾಸವಾಗಿತ್ತು. ಗೆಳೆಯರ ಜೊತೆ ಶರತ್ತು ಕಟ್ಟಿಕೊಂಡು ವಿದೇಶಗಳಿಂದ ಬರುವ ಅಪರೂಪದ ಪಕ್ಷಿಗಳನ್ನು ಚಾಟಿಬಿಲ್ಲಿನಲ್ಲಿ ಹೊಡೆದು ಉರುಳಿಸುತ್ತಿದ್ದ. ‘ತಿನ್ನಲು ಹಕ್ಕಿಗಳನ್ನು ಕೊಲ್ಲುತ್ತಿದ್ದೆಯಾ’ ಎಂದು ಕೇಳಿದೆ. ‘ಇಲ್ಲ, ಸುಮ್ಮನೆ ಶೋಕಿಗಾಗಿ. ಈ ಕಾಡಿನಲ್ಲಿ ನಮಗೆ ಯಾವುದೇ ಮನರಂಜನೆಗಳಿಲ್ಲ. ಮಾಡಲು ಹೆಚ್ಚು ಕೆಲಸಗಳಿಲ್ಲ. ಬೇಕಾರ್‌ ಸಮಯದಲ್ಲಿ ಈ ಕೆಲಸ ಮಾಡುತ್ತಿದ್ದೆವು. ಹಂಟರ್‌ ಆಗಿದ್ದ ನನಗೆ ಸಾಹು ಅಣ್ಣ ಪಕ್ಷಿಗಳನ್ನು ತೋರಿಸುವ ಕೆಲಸ ಕಲಿಸಿದ. ಅವತ್ತಿನಿಂದ ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬರುವ ನಿಮ್ಮಂಥವರಿಗೆ ಪಕ್ಷಿಗಳ ತೋರಿಸುತ್ತೇನೆ. ಇದರಿಂದ ಒಳ್ಳೆಯ ಕಮಾಯಿ ಕೂಡ ಆಗುತ್ತಿದೆ. ನೋಡಿ ಹೊಸ ಗಾಡಿ ಕೂಡ ಖರೀದಿಸಿದ್ದೇನೆ. ಇಲ್ಲೇ ಹುಟ್ಟಿ ಬೆಳೆದ ನನಗೆ ಪಕ್ಷಿಗಳ ಇರುವಿಕೆ, ಅವುಗಳ ಚಲನವಲನ, ಜೀವನ ವಿಧಾನ ಎಲ್ಲವೂ ಗೊತ್ತು. ಕೂಗು ಕೇಳಿ ಇಂತಹದ್ದೇ ಹಕ್ಕಿ ಎಂದು ಹೇಳುತ್ತೇನೆ. ಆಗ ತಿಳಿವಳಿಕೆಯಿಲ್ಲದೆ ಸಾಯಿಸಿದ ಈ ದೇವರ ಮರಿಗಳು ನನ್ನನ್ನು ಕ್ಷಮಿಸುವವರೆಗೂ ನಾನು ಅವುಗಳ ರಕ್ಷಣೆ ಮಾಡುತ್ತಲೇ ಇರುತ್ತೇನೆ’ ಎಂದ. 

ಬದುಕಿನಲ್ಲಿ ಹೀಗೆ ನೆಲೆ ತಪ್ಪಿದ ಅದೆಷ್ಟೋ ಜನರನ್ನು ಸರಿ ದಾರಿಗೆ ತಂದು ಮಾನವೀಯತೆಯ ಪಾಠವನ್ನು ಮಾತರಿಯದ ಪಕ್ಷಿಗಳು ಕಲಿಸಿವೆ. ವಾಲ್ಮೀಕಿ ಮಹರ್ಷಿಗಳ ಮನಸ್ಸು ಕರಗಿಸಿ ಅವರಿಂದ ಮಹಾಕಾವ್ಯ ಬರೆಸಿದ್ದೂ ಕೂಡ ಪಕ್ಷಿಗಳೇ ಅಲ್ಲವೇ? ಕಣ್ಣಿಗೆ ಕಾಣದ ಇಂತಹ ನೂರಾರು ಸೂಕ್ಷ್ಮ ಸಂಗತಿಗಳು ನಿಸರ್ಗದಲ್ಲಿ ಸಾಕಷ್ಟಿವೆ. ಕಣ್ತೆರೆದು ನೋಡುವ ಸಂದರ್ಭಗಳು ಸಿಗಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.