
ನುಡಿ ಬೆಳಗು
ಖ್ಯಾತ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಬಹಳ ಕಷ್ಟದಿಂದ ಎತ್ತರಕ್ಕೇರಿದವರು. ಕುಡಿತದ ದಾಸನಾದ ತಂದೆ, ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದ ತಾಯಿ, ಮುರುಕು ಮನೆ, ಅರೆಹೊಟ್ಟೆ, ಬದುಕು ಕಷ್ಟವಿತ್ತು, ಭವಿಷ್ಯ ಅಸ್ಪಷ್ಟವಾಗಿತ್ತು. ಬಹುತೇಕರ ಪ್ರಕಾರ ಈ ಪರಿಸ್ಥಿತಿ ಮೇಲೇಳಲಾಗದ ಪ್ರಪಾತ. ಆದರೆ ರೊನಾಲ್ಡೋ ತಮ್ಮ ಭವಿಷ್ಯದ ಶಿಲ್ಪಿ ತಾವೇ ಆಗುವ ದೃಢ ನಿರ್ಧಾರ ಕೈಗೊಂಡರು. ತಮ್ಮ ಭವಿಷ್ಯ ಇರುವುದು ಫುಟ್‌ಬಾಲ್‌ನಲ್ಲಿಯೇ ಎಂಬುದು ಅವರಿಗೆ ಸ್ಪಷ್ಟವಾಗಿತ್ತು. ಫುಟ್‌ಬಾಲ್ ಅಭ್ಯಾಸ ನಡೆಸಿ ಹಸಿವಾದಾಗ ತಿನ್ನಲು ಹಣವಿಲ್ಲದೇ ಹೊಟೇಲಿನ ಹಿಂಭಾಗಕ್ಕೆ ಹೋಗಿ ಉಳಿದ ಆಹಾರ ಕೊಡುವಂತೆ ರೊನಾಲ್ಡೋ ಕೇಳಿದ್ದೂ ಇದೆ. ಇಂತಹ ರೊನಾಲ್ಡೋ ಈಗ ಜಗತ್ತಿನ ನಂಬರ್ ಒನ್ ಫುಟ್‌ಬಾಲ್ ಆಟಗಾರ. ಬಯಸಿದ್ದೆಲ್ಲ ಪಡೆಯುವ ಅವಕಾಶವಿರುವವರು.
ಇತ್ತೀಚೆಗೆ ರೊನಾಲ್ಡೋ ಲಿಸ್ಬನ್‌ನಲ್ಲಿ ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ತೋರಿಸಲೆಂದು ಮಗನನ್ನು ಕರೆದುಕೊಂಡು ಹೋಗಿದ್ದರು. ‘ಅಪ್ಪಾ ನಿಜವಾಗಿಯೂ ನೀನು ಇಲ್ಲಿದ್ದೆಯಾ’ ಎಂದು ಅಚ್ಚರಿಯಿಂದ ಕೇಳಿದ ಮಗ. ಅದಕ್ಕೇ ರೊನಾಲ್ಡೋ ಹೇಳುತ್ತಾರೆ: ‘ಈಗಿನ ಮಕ್ಕಳು ಎಲ್ಲವೂ ಬಹಳ ಸುಲಭವಾಗಿ ಸಿಗುತ್ತವೆ ಎಂದು ತಿಳಿದಿದ್ದಾರೆ. ಅತ್ಯುತ್ತಮ ಬದುಕು, ಮನೆ, ಕಾರು ಎಲ್ಲವೂ ಆಕಾಶದಿಂದ ಉದುರುತ್ತವೆಂದೂ ಭ್ರಮಿಸುತ್ತಾರೆ. ಇವೆಲ್ಲ ಸುಮ್ಮನೇ ಸಿಗುವುದಿಲ್ಲ. ಕೇವಲ ಪ್ರತಿಭೆಯಿಂದಲೂ ಸಿಗುವುದಿಲ್ಲ. ಎಡೆಬಿಡದೇ ಪ್ರಯತ್ನಿಸುವುದರಿಂದ ಮಾತ್ರವೇ ಸಿಗಲು ಸಾಧ್ಯ. ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ನನ್ನ ಮಕ್ಕಳಿಗೆ ಮಾತ್ರವಲ್ಲ ನಾನು ಭೇಟಿಯಾಗುವ ಯುವಕರಿಗೆಲ್ಲ ಹೇಳಲಿಚ್ಛಿಸುತ್ತೇನೆ.’
ತಮಗಿಲ್ಲದಿದ್ದರೂ ಮಕ್ಕಳಿಗಾದರೂ ಎಲ್ಲ ಸೌಲಭ್ಯ ಸಿಗಲಿ ಎಂದು ಪಾಲಕರು ಮಾಡುವ ಪ್ರಾಮಾಣಿಕ ಪ್ರಯತ್ನಗಳೇ ಇಂದು ಮಕ್ಕಳ ಪಾಲಿಗೆ ಶಾಪವಾಗುತ್ತಿವೆ. ದುಡ್ಡು ಮೊಬೈಲ್‌ನಲ್ಲೋ ಎಟಿಎಮ್‌ನಲ್ಲೋ ಇದೆ ಎಂಬುದವರಿಗೆ ಗೊತ್ತೇ ಹೊರತು ಅದಕ್ಕೆ ತಂದೆತಾಯಿ ಎಷ್ಟು ಕಷ್ಟಪಟ್ಟು ದುಡಿಯಬೇಕು ಎಂಬ ಅರಿವಿರುವುದಿಲ್ಲ. ಪಾಲಕರೂ ಅಷ್ಟೇ, ಒಂದು ಪೆನ್ಸಿಲ್ ಕೇಳಿದರೆ ಒಂದು ಬಾಕ್ಸ್ ಪೆನ್ಸಿಲ್, ಒಂದು ಪೆನ್ನು ಕೇಳಿದರೆ ನಾಲ್ಕು ಪೆನ್ನು ಕೊಡಿಸಿ ಹಣದ ಮೌಲ್ಯವನ್ನು ಇಳಿಸಿಬಿಟ್ಟಿದ್ದಾರೆ.
ಹಾಗಾಗಿ ತಮ್ಮ ವಸ್ತುಗಳನ್ನು ಕಾಳಜಿಯಿಂದ ಇಟ್ಟುಕೊಂಡು ಉಪಯೋಗಿಸುವ ಬದಲು ಕಳೆದರೆ ಹೊಸದು ಕೊಂಡರಾಯಿತು ಎನ್ನುವ ಯೋಚನೆ ಈಗಿನ ಮಕ್ಕಳಿಗೆ. ಮಕ್ಕಳು ಆಕಾಶ ಮುಟ್ಟಬೇಕೆನ್ನುವ ಕನಸು ಸಹಜವೇ, ಆದರೆ ಬೇರುಗಳನ್ನು ಮರೆತರೆ ಬದುಕಿಲ್ಲವೆಂಬ ವಾಸ್ತವವನ್ನು, ಮುನ್ನುಗ್ಗುವ ಧಾವಂತದಲ್ಲಿ ಹಿಂದಿರುಗಿ ನೋಡುವ ಅಗತ್ಯವನ್ನು ಜತೆಗೆ ಹಣದ ಮೌಲ್ಯವನ್ನು ಹಿರಿಯರೂ ನೆನಪಿಟ್ಟುಕೊಂಡು ಮಕ್ಕಳಿಗೂ ಕಲಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.