ADVERTISEMENT

ನುಡಿ ಬೆಳಗು | ಮಣ್ಣಿನಿಂದ ಮಣ್ಣಿನೆಡೆಗೆ ಪಯಣ

ನುಡಿ ಬೆಳಗು -179

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 22 ಏಪ್ರಿಲ್ 2025, 22:30 IST
Last Updated 22 ಏಪ್ರಿಲ್ 2025, 22:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಯಾವುದು ದೇವನನ್ನು ಒಲಿಸುವ ಪರಿ ಎಂದು ಬಸವಣ್ಣನವರು ಚಿಂತನೆ ಮಾಡಿದರು. ದೇವರನ್ನು ಒಲಿಸಿಕೊಳ್ಳಲು ಹಿಮಾಲಯಕ್ಕೆ ಹೋಗಬೇಕೇನು, ಉಪವಾಸಗಳನ್ನು ಮಾಡಬೇಕೇನು, ಮನೆ ವಾಸ್ತು ಪ್ರಕಾರ ಕಟ್ಟಬೇಕೇನು? ಏನೂ ಇಲ್ಲ. ಮನೆಯಲ್ಲಿ ಶಾಂತಿ, ಮನಸ್ಸಿನಲ್ಲಿ ಶಾಂತಿ, ಕೂಡಲಸಂಗಮನ ಕೃಪೆ ಆಗಬೇಕು ಎಂದರೆ ನೀನು ಮಾಡೋದು ಏನೂ ಇಲ್ಲ; ಒಂದಿಷ್ಟು ಬಿಡು ಸಾಕು ಎಂದು ಬಸವಣ್ಣ ಹೇಳ್ತಾರೆ. ಇದು ಹೊಸ ಪರಿಕಲ್ಪನೆ. ಇನ್ನೊಬ್ಬರ ವಸ್ತುಗಳನ್ನು ನೋಡಿ ಆಸೆ ಮಾಡುತ್ತೀಯಲ್ಲ, ಅದನ್ನು ಬಿಡು. ಸುಳ್ಳು ಹೇಳುತ್ತೀಯಲ್ಲ ಅದು ಬಿಡು. ಕಳವು ಮಾಡುತ್ತೀಯಲ್ಲ, ಅದು ಬಿಡು. ನಿನ್ನಷ್ಟಕ್ಕೆ ನೀನೇ ಹೊಗಳಿಕೊಳ್ಳುತ್ತೀಯಲ್ಲ, ಅದನ್ನು ಬಿಡು. ಇನ್ನೊಬ್ಬರಿಗೆ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತೀಯಲ್ಲ, ಅದನ್ನು ಬಿಡು. ಇದು ಕೂಡಲಸಂಗಮನ ಒಲಿಸುವ ಪರಿ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಬಸವಣ್ಣನವರು ಹೇಳುತ್ತಾರೆ. ಇಷ್ಟು ಬಿಟ್ಟರೆ ಸಾಕು ನೀನೇ ದೇವರಾಗುತ್ತಿ ಎನ್ನುತ್ತಾರೆ ಅವರು. ಮನಷ್ಯನ ಜೀವನ ಬಹಳ ಅದ್ಭುತವಾಗಿದ್ದು, ಸಣ್ಣಸಣ್ಣ ವಿಷಯಗಳಿಗೆ, ಸ್ವಾರ್ಥಕ್ಕಾಗಿ ಇದನ್ನು ಹಾಳು ಮಾಡಿಕೊಳ್ಳಬಾರದು.

ಮನುಷ್ಯ ಮೂಲತಃ ಅನ್ವೇಷಕ. ಬಡವನೂ ಅನ್ವೇಷಣೆ ಮಾಡುತ್ತಿದ್ದಾನೆ. ಶ್ರೀಮಂತನೂ ಅನ್ವೇಷಣೆ ಮಾಡುತ್ತಿದ್ದಾನೆ. ಬಡವ ಏನೂ ಇಲ್ಲದ್ದಕ್ಕೆ ಅನ್ವೇಷಣೆ ಮಾಡಿದರೆ, ಶ್ರೀಮಂತ ಎಲ್ಲವೂ ಇದ್ದರೂ ಅನ್ವೇಷಣೆ ಮಾಡುತ್ತಿದ್ದಾನೆ. ಹಾಗಾದರೆ ಮನುಷ್ಯ ಅನ್ವೇಷಣೆ ಮಾಡುತ್ತಿರುವುದು ಯಾತಕ್ಕೆ? ನಮ್ಮ ದಾರ್ಶನಿಕರು ಇದನ್ನು ಗುರುತಿಸಿದರು. ಸಂತಸ, ಸಮಧಾನ, ಸಂತೃಪ್ತಿ ಇವುಗಳ ಹುಡುಗಾಟದಲ್ಲಿದ್ದಾನೆ ಮನುಷ್ಯ. ಇವು ಪುಸ್ತಕದ ಶಬ್ದಗಳಾದವೇ ವಿನಾ ಮನುಷ್ಯನ ಮಸ್ತಕಕ್ಕೆ ಬರಲೇ ಇಲ್ಲ. ಹಾಗಾದರೆ ತಪ್ಪಿದ್ದೆಲ್ಲಿ? ನಮ್ಮ ತಿಳಿವಳಿಕೆಯಲ್ಲಿ, ನಮ್ಮ ಆಲೋಚನೆಯಲ್ಲಿ ತಪ್ಪಿದೆ. ಮನುಷ್ಯ ಎರಡು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವಿಕ ಸತ್ಯ ಮತ್ತು ಸತ್ಯದಂತೆ ತೋರುವ ಸಂಗತಿಯನ್ನು ಅರಿತುಕೊಳ್ಳಬೇಕು. ಮನುಷ್ಯನಿಗೆ ಯಾವುದು ಸತ್ಯ ಎನ್ನುವುದು ಗೊತ್ತಿರಬೇಕು. ತೋರುತ್ತಿರುವುದು ಮಿಥ್ಯೆ ಅನ್ನುವುದೂ ಗೊತ್ತಿರಬೇಕು. ಆದರೆ ಮಿಥ್ಯೆಯೇ ಸತ್ಯ ಎಂದು ಬದುಕುವುದು ಸಲ್ಲ. ಬರುವಾಗಲೂ ಶೂನ್ಯ. ಹೋಗುವಾಗಲೂ ಶೂನ್ಯ. ಜೀವನ ಎಂದರೆ ಶೂನ್ಯ ಸಂಪಾದನೆ ಅಷ್ಟೆ.

ADVERTISEMENT

ಏಕಕೋಶದ ಅಮೀಬಾದಿಂದ ಹಿಡಿದು ಡೈನೋಸಾರ್‌ವರೆಗೆ, ಮಂಗನಿಂದ ಮಾನವನವರೆಗೆ ಸಕಲ ಚರಾಚರ ಜಗತ್ತೇನಿದೆ ಎಲ್ಲವೂ ಮಣ್ಣಿನ ವಿಸ್ತಾರ. ಮಣ್ಣಿನ ವಿಸ್ತಾರವೇ ಜಗತ್ತು. ಜಗತ್ತಿನ ಸಂಕ್ಷಿಪ್ತ ರೂಪವೇ ಮಣ್ಣು. ಮಣ್ಣು, ನೀರು, ಅಗ್ನಿ, ಗಾಳಿ, ಬಯಲು ಇಷ್ಟರಿಂದಲೇ ಜಗತ್ತು ನಿರ್ಮಾಣವಾಗಿದೆ. ನಮ್ಮ ದೇಹ ನಿರ್ಮಾಣ ಆಗಿದ್ದೂ ಇವೇ ಐದರಿಂದ. ನಮ್ಮ ಕೈ ಕಾಲು, ಕಣ್ಣು ಎಲ್ಲವೂ ಮಣ್ಣು. ಜೀವನ ಎಂದರೆ ಮಣ್ಣಿನಿಂದ ಮಣ್ಣಿನೆಡೆಗಿನ ಪಯಣಕ್ಕೆ ಜೀವ ಎಂದು ಕರೆಯುತ್ತಾರೆ. ಮಣ್ಣಿನಿಂದ ಬಂದೆ, ಮಣ್ಣಿಗೇ ಬಂದೆ, ಮಣ್ಣಿನಲ್ಲಿಯೇ ಬೆಳೆದೆ. ಮಣ್ಣಿಗಾಗಿಯೇ ಹೊಡೆದಾಡಿದೆ. ಕೊನೆಗೊಂದು ದಿನ ಮಣ್ಣಿನಲ್ಲಿಯೇ ಮಣ್ಣಾದೆ. ಜೀವನ ಎಂದರೆ ಸಾವಿನೆಡೆಗಿನ ಪಯಣ. ಭೂತಭೂತವ ಕೂಡಿ ಅದ್ಭುತವಾಗಿದೆ ಎಂದರು ಅಲ್ಲಮ ಪ್ರಭುಗಳು. ಇದು ಬರಿ ಕಲ್ಲಲ್ಲ, ಇದು ಮಣ್ಣಲ್ಲ, ಕಲೆಯ ಬಲೆಯು. ಆನಂದಮಯ ಈ ಜಗಹೃದಯ ಎಂದರು ಕವಿಗಳು. ಈ ಜಗತ್ತಿನಲ್ಲಿ ಭಗವಂತ ಆನಂದ ತುಂಬಿಟ್ಟಿದ್ದಾನೆ. ಆದರೆ, ಮನುಷ್ಯನಿಗೆ ಬದುಕಲು ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.