
ನುಡಿ ಬೆಳಗು
2020ರ ಟೋಕಿಯೋ ಒಲಿಂಪಿಕ್ಸ್. 50 ಮೀಟರ್ ಫ್ರೀಸ್ಟೈಲ್ ಈಜಿನ ಸ್ಪರ್ಧೆಯಲ್ಲಿ ಆ ಈಜುಗಾರ ಪದಕ ಗೆಲ್ಲಲಿಲ್ಲ. ಜೀವಮಾನದಲ್ಲಿ ಇನ್ನು ಈಜುವುದಿಲ್ಲ ಎಂದು ಸೋಲಿನ ಹತಾಶೆಯಿಂದ ತೀರ್ಮಾನಿಸಿದನಾತ. ಕಾರಣ ಆತ ಹದಿನೆಂಟರ ಹರೆಯದಲ್ಲಿಯೇ 2012ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ. ಹದಿನೇಳನೇ ವಯಸ್ಸಿನಲ್ಲಿ ವಿಶ್ವ ಜ್ಯೂನಿಯರ್ ಚಾಂಪಿಯನ್ ಶಿಪ್‌ನಲ್ಲಿ ಬಂಗಾರ ಗೆದ್ದಿದ್ದ. ಕಾಮನ್‌ವೆಲ್ತ್ ಆಟಗಳೂ ಸೇರಿದಂತೆ ಬೇರೆ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಕೊಳ್ಳೆ ಹೊಡೆಯುತ್ತಿದ್ದ ಆತನಿಗೆ ಒಲಿಂಪಿಕ್ಸ್ ಪದಕ ಯಾಕೋ ದಕ್ಕುತ್ತಿರಲಿಲ್ಲ. 2012, 2016 ಕೊನೆಗೆ 2020 ಈ ಮೂರೂ ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದರೂ ಅದೆಷ್ಟು ಶ್ರಮ ಪಟ್ಟರೂ ಒಲಿಯದ ಒಂದೇ ಒಂದು ಪದಕ ಅವನನ್ನು ನಿರಾಸೆಗೊಳಿಸಿತ್ತು. ಎಂಟು ವರ್ಷ ಪ್ರಯತ್ನಿಸಿ ಸುಸ್ತಾಗಿದ್ದನಾತ. ಆಧುನಿಕ ಭಾಷೆಯಲ್ಲಿ ಅದನ್ನು ಬರ್ನ್ ಔಟ್ ಆಗುವುದೆನ್ನುತ್ತಾರೆ. ತಮ್ಮಿಂದ ಆಗುವುದಕ್ಕಿಂತ ಹೆಚ್ಚು ಅತಿಯಾದ ಕೆಲಸ ಮಾಡಿದರೆ ಉಂಟಾಗುವ ಕುಸಿದು ಬೀಳುವಂತಹ ಸ್ಥಿತಿಯದು.
ಆದರೆ ಯಾವಾಗಲೂ ಈಜುತ್ತಿದ್ದವರಿಗೆ ದೈಹಿಕವಾಗಿ ಚಟುವಟಿಕೆಯಿಂದಿರಲೇಬೇಕಿತ್ತು. ಹಾಗಾಗಿ ಕೊನೆಯ ಪ್ರಯತ್ನವೆಂದು 2024ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತೀರ್ಮಾನಿಸಿದ. ಹೀಗಾಗಿ ಬಂಡೆಗಳನ್ನು ಏರುವುದು, ಸೈಕ್ಲಿಂಗ್, ಓಟ, ಹೀಗೆ ತನ್ನ ಮಾಮೂಲಿ ತರಬೇತಿಯ ವಿಧಾನವನ್ನೇ ಬದಲಾಯಿಸಿಕೊಂಡ. ಅಂದರೆ 50 ಮೀಟರ್ ಫ್ರೀಸ್ಟೈಲ್ ಮುಗಿಸುವ ಸಮಯಕ್ಕೇ ಮುಗಿಸುವ ಇತರ ಕ್ರೀಡೆಗಳಲ್ಲಿ ತರಬೇತಿ ಪಡೆದ. ಉಳಿದವರು ತಮಾಷೆ ಮಾಡಿದರು. ಇದ್ಯಾವ ಸೀಮೆ ತರಬೇತಿ ಮಾರಾಯ ಎಂದು ನಕ್ಕರು. ಸಾಮಾನ್ಯವಾಗಿ ನಾವೆಲ್ಲ ಸಾಂಪ್ರದಾಯಿಕವಾಗಿ ಯೋಚನೆ ಮಾಡುತ್ತಿರುತ್ತೇವೆ. ಅಂದರೆ ಈಜಿನಲ್ಲಿ ಗೆಲ್ಲುವುದೆಂದರೆ ಎಲ್ಲರಿಗಿಂತ ವೇಗವಾಗಿ ಈಜಬೇಕು, ಓಡುವುದೆಂದರೆ ಕೂಡ ಅಷ್ಟೇ. ಇನ್ನು ಓದುವುದೆಂದರೆ ಎಲ್ಲರಿಗಿಂತ ಜಾಸ್ತಿ ಓದಬೇಕು. ಆದರೆ ಆ ಯುವಕ ಬೇರೆ ಥರ ಯೋಚಿಸಿದ.
ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ವೇಗವಾಗಿ ಈಜುವುದನ್ನು ಮಾತ್ರ ಮಾಡುತ್ತಿದ್ದವನು ದೇಹ ಮನಸ್ಸು ಎಲ್ಲವನ್ನೂ ವಿಭಿನ್ನ ವ್ಯಾಯಾಮಗಳ ಮೂಲಕ ಹುರಿಗೊಳಿಸಿದ. ವಿಶೇಷವೆಂದರೆ ಅವನ ಈಜಿನ ಸಮಯವೂ ಸುಧಾರಿಸುತ್ತ ಬಂತು. ಮೂರೂ ಒಲಿಂಪಿಕ್ಸ್‌ಗಳಲ್ಲಿ ಬರಿಗೈಲಿ ವಾಪಾಸಾಗುತ್ತಿದ್ದ ಯುವಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಜುಕೊಳಕ್ಕಿಳಿದು ಮೇಲೇಳುವಾಗ ಚಿನ್ನದ ಪದಕ ವಿಜೇತನಾಗಿದ್ದ. ಈ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಆಸ್ಟ್ರೇಲಿಯಾ ಕ್ರೀಡಾಪಟು ಎಂಬ ದಾಖಲೆ ಮಾಡಿದ ಆ ಈಜುಗಾರ ಕ್ಯಾಮರೂನ್ ಮೆಕ್‌ಎವಾಯ್. ವೇಗದ ಪ್ರೊಫೆಸರ್ ಎಂದು ಕರೆಯಿಸಿಕೊಳ್ಳುವ ಇವರು ಭೌತವಿಜ್ಞಾನದಲ್ಲಿ ಅತೀವ ಆಸಕ್ತಿ ಇರುವ ಪದವೀಧರರೂ ಹೌದು.
ಇವರ ಉದಾಹರಣೆಯಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಸಾಧಿಸಬೇಕೆಂಬ ಛಲವಿದ್ದವರು ಒಂದು ದಾರಿ ಗುರಿ ತಲುಪಿಸದೇ ಇದ್ದಾಗ ಮತ್ತೊಂದು ದಾರಿ ಹುಡುಕುತ್ತಾರೆ. ಪರಿಚಿತ ದಾರಿಗಳಿಂದ ಅಪರಿಚಿತ ದಾರಿಗಳಿಗೆ ಹೊರಳಿಕೊಳ್ಳುವ ಸಾಹಸ ಮಾಡುತ್ತಾರೆ. ಅದಕ್ಕಾಗಿ ವರ್ಷವರ್ಷ ಶ್ರಮಿಸುತ್ತಾರೆ. ಏಕಾಗ್ರತೆಯಿಂದ ಗುರಿಯತ್ತ ಸಾಗುತ್ತಿರುತ್ತಾರೆ. ಇವರು ಮಾತ್ರವಲ್ಲ ರಾತ್ರಿ ಬೆಳಗಾಗುವುದರೊಳಗೆ ಯಶಸ್ವಿಯಾಗಿ ಜಗತ್ಪ್ರಸಿದ್ಧರಾದ ಅದೆಷ್ಟೋ ಮಂದಿ ಸಾಧಕರ ಹಿಂದೆ ಯಾರಿಗೂ ಕಾಣದ ತರಬೇತಿ ಮತ್ತು ಪರಿಶ್ರಮದ ಸಾವಿರಾರು ಹಗಲು ರಾತ್ರಿಗಳಿರುತ್ತವೆ. ಸೋಲೊಪ್ಪದ ಮನಸ್ಸಿರುತ್ತದೆ, ಬಿದ್ದರೂ ಎದ್ದು ಮುನ್ನಡೆವ ಛಲವಿರುತ್ತದೆ.
ಹೊಸ ವರ್ಷದಲ್ಲಿ ಈ ರೀತಿಯ ಸಾಧಕರನ್ನು ಸ್ಫೂರ್ತಿಯಾಗಿಸಿಕೊಳ್ಳಬಹುದು. ಅವರ ಪ್ರಯತ್ನಶೀಲ ಸ್ವಭಾವವನ್ನೂ ನಮ್ಮದಾಗಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.