ADVERTISEMENT

ನುಡಿ ಬೆಳಗು: ದೌರ್ಬಲ್ಯ

ಪಿ. ಚಂದ್ರಿಕಾ
Published 22 ಏಪ್ರಿಲ್ 2024, 20:08 IST
Last Updated 22 ಏಪ್ರಿಲ್ 2024, 20:08 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದೋಣಿ ನಡೆಸುವವನ ಹತ್ತಿರ ಹುಡುಗನೊಬ್ಬ, ‘ನನ್ನ ಗುರುವನ್ನು ಆಚೆಯ ದಡಕ್ಕೆ ತಲುಪಿಸಬೇಕು ಬರುವೆಯಾ?’ ಎಂದು ಕೇಳಿದ. ದೋಣಿ ನಡೆಸುವವ ಕುಶಾಲಿಗೆಂಬಂತೆ, ‘ನಿನ್ನ ಗುರುವೇ ನನ್ನ ಬಂದು ಕೇಳಬಹುದಿತ್ತಲ್ಲ’ ಎಂದ. ಹುಡುಗ ‘ಅವರು ಸರ್ವಶಕ್ತರು, ಪರಮಜ್ಞಾನಿಗಳು ಇಂಥ ಸಣ್ಣಪುಟ್ಟ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ’ ಎಂದ ಅಹಂಕಾರದಿಂದ. ಈಗ ದೋಣಿಯವನಿಗೆ ತಮಾಷೆ ಎನ್ನಿಸಿ, ‘ಹಾಗಾದರೆ ಅವರಿಗೆ ನನ್ನಂಥ ಅಲ್ಪಜ್ಞಾನಿಯ ದೋಣಿಯ ಆಸರೆ ಯಾಕೆ ಬೇಕು?’ ಹುಡುಗ ಕೋಪದಿಂದ, ‘ಅಯ್ಯಾ ನನ್ನ ಗುರುಗಳನ್ನು ಏನೆಂದು ತಿಳಿದಿದ್ದೀಯೇ? ಹಿಮಾಲಯದಲ್ಲಿ ತಪಸ್ಸು ಮಾಡಿ ಸಾಧನೆ ಮಾಡಿದ್ದಾರೆ. ಅಂಥ ಗುರುವಿನ ಬಗ್ಗೆ ನೀನು ಹೀಗೆಲ್ಲಾ ಮಾತನಾಡುವುದಾ?’ ಎಂದ. ‘ಹೌದೇ ಹಾಗಿದ್ದರೆ ಈ ಚಿಕ್ಕ ನದಿಯನ್ನು ದಾಟುವುದು ಅವರಿಗೆ ಕಷ್ಟದ ಕೆಲಸವಲ್ಲ’ ಎಂದ ದೋಣಿಯವ. ಹುಡುಗನಿಗೆ ಕೋಪಬಂದು, ‘ಅಯ್ಯಾ ನೀನು ಕರೆದೊಯ್ಯದಿದ್ದರೆ ಬೇಡ ನನ್ನ ಗುರು ಬಂದು ನಿನ್ನ ಬೇಡಲಾರರು’ ಎಂದು ಹುಡುಗ ಗುರುವಿನ ಬಳಿಗೆ ಬಂದ. ‘ಗುರುಗಳೇ ನಿಮಗಂತೂ ಈಜು ಬರುತ್ತದೆ, ನನಗೆ ಸ್ವಲ್ಪ ಮಟ್ಟಿಗೆ ಈಜು ಬರುತ್ತದೆ. ಆ ದೋಣಿಯವ ದುರಹಂಕಾರ ತೋರುತ್ತಿದ್ದಾನೆ. ಆಚೆ ದಡಕ್ಕೆ ಹೋಗೋಣ ಬನ್ನಿ’ ಎಂದ.

ಗುರು ‘ನಾನೆಂದೂ ನೀರಿಗಿಳಿದು ಈಜಿಲ್ಲ. ನಾನು ದೋಣಿಯವನನ್ನು ಆಶ್ರಯಿಸಲೇ ಬೇಕು’ ಎಂದರು. ಹುಡುಗನಿಗೆ ಅಚ್ಚರಿ, ‘ನನಗೆ ಈಜುಬಾರದ ಕಾರಣ ದೋಣಿಯವನನ್ನು ಕೇಳುವಂತೆ ಗುರು ಹೇಳುತ್ತಿದ್ದಾರೆ ಎಂದುಕೊಂಡಿದ್ದ. ಆದರೆ ತಮಗೇ ಬರುವುದಿಲ್ಲವಾ?’ ಎನ್ನಿಸಿ ಖೇದವೆನ್ನಿಸಿತು. ದೋಣಿಯವನೊಂದಿಗೆ ಹೇಗೆಲ್ಲ ಮಾತನಾಡಿದೆ ಮತ್ತೆ ಅವನನ್ನು ಕೇಳುವುದು ಬೇಡವೆನ್ನಿಸಿ, ‘ಗುರುಗಳೇ ಬನ್ನಿ ನನ್ನನ್ನು ಹಿಡಿದುಕೊಳ್ಳಿ ಈಜದಿದ್ದರೂ ನಡೆದೂ ಹೋಗಬಹುದು ನದಿಯಲ್ಲಿ ನೀರೂ ಕಡಿಮೆ ನದಿಯೂ ಸಣ್ಣದು’ ಎನ್ನುತ್ತಾನೆ. ಗಿಡದ ಬೇರನ್ನು ಹಿಡಿದು ನೀರಿಗಿಳಿದ ಗುರು ಭಯಗೊಂಡವನಂತೆ ಕಂಡ. ಪರಮಶಕ್ತನಾಗಿದ್ದ ಗುರು ಈಗ ಹುಡುಗನ ಕಣ್ಣಿಗೆ ಅತ್ಯಂತ ದುರ್ಬಲನಂತೆ ಕಂಡ. ನದಿ ದಾಟಲೇಬೇಕು ಬೇರೆ ದಾರಿಯಿಲ್ಲ.

ADVERTISEMENT

ಮತ್ತೆ ದೋಣಿಯವನ ಬಳಿಗೆ ಬಂದು ಅತ್ಯಂತ ಕೆಳಧ್ವನಿಯಲ್ಲಿ, ‘ಅಯ್ಯಾ ನನ್ನ ಗುರು ಮಹಾಜ್ಞಾನಿ ಆದರೆ ಅವರಿಗೆ ಈಜು ಬರುವುದಿಲ್ಲ. ದಯಮಾಡಿ ಅವರನ್ನು ಆ ದಡಕ್ಕೆ ದಾಟಿಸು’ ಎಂದ. ‘ಅವರು ಹಾಗೆಂದು ಎಂದಾದರೂ ನಿನ್ನ ಬಳಿ ಹೇಳಿದ್ದರೇ?’ ಎಂದ ದೋಣಿಯವ. ‘ಇಲ್ಲ ನಾನೇ ಅವರ ಬಗ್ಗೆ ಅತಿಯಾದ ಹೆಮ್ಮೆಯಲ್ಲಿ ಈ ಮಾತನ್ನು ಹೇಳಿದ್ದು. ಈಜೂ ಬಾರದಷ್ಟು ದುರ್ಬಲ ಎಂದು ಗೊತ್ತಿರಲಿಲ್ಲ’ ಎಂದ ಹುಡುಗ ಮತ್ತಷ್ಟು ಕುಗ್ಗಿ.

ಅವನ ಸ್ಥಿತಿಯನ್ನು ನೋಡಿ ದೋಣಿಯವನು ‘ನದಿಯೊಂದನ್ನು ದಾಟಲಿಲ್ಲವೆಂದ ತಕ್ಷಣ ಗುರುವನ್ನು ದುರ್ಬಲ ಎಂದುಕೊಳ್ಳಬೇಡ. ಎಲ್ಲರಿಗೂ ಎಲ್ಲವೂ ಬರಬೇಕೆಂದೇನೂ ಇಲ್ಲ. ನಿನಗೆ ಅವರ ಬಗ್ಗೆ ಇರುವ ಹೆಮ್ಮೆ ಅವರು ಹೇಳಿದ್ದನ್ನು ಅತ್ಯಂತ ವಿನಯಪೂರ್ವಕವಾಗಿ ಕಲಿಯುವಂತೆ ಮಾಡಿತು. ನಿನ್ನ ಗುರು ನನ್ನ ಕೇಳುವುದು ಬೇಡ, ನಾನು ದಾಟಿಸುತ್ತೇನೆ. ನಾವು ನಂಬಿದವರಲ್ಲಿ ಮಾತ್ರವಲ್ಲ ಎಲ್ಲರಲ್ಲೂ ಒಂದೊಂದು ಶಕ್ತಿ ಇರುತ್ತದೆ ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ ಎಂದು ಹೇಳಲಿಕ್ಕೆ ನಿನ್ನ ಜೊತೆ ಇಷ್ಟು ಮಾತನಾಡಿದೆ’ ಎಂದು ಆದರಪೂರ್ವಕವಾಗಿ ಗುರುವನ್ನು ತಾನೇ ಸ್ವತಃ ದೋಣಿಗೆ ಹತ್ತಿಸಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.